- ಕೆಲಸದ ಅವಧಿಯನ್ನು 8 ಗಂಟೆಯಿಂದ 12 ಗಂಟೆಗೆ ಹೆಚ್ಚಿಸಿರುವ ಕ್ರಮ ಹಿಂಪಡೆಯಲು ಆಗ್ರಹ
- ಜು. 10 : ಹಮಾಲಿ ಕಾರ್ಮಿಕರಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹಕ್ಕೊತ್ತಾಯ ಸಮಾವೇಶ
‘ಅನ್ನಭಾಗ್ಯ’ ಯೋಜನೆ ರಾಜ್ಯದಲ್ಲಿ ಜಾರಿಗೆ ಬಂದು ಜುಲೈ 10ಕ್ಕೆ ಹತ್ತು ವರ್ಷ ತುಂಬುತ್ತಿದೆ. ಯಶಸ್ಸಿಗೆ ಕಾರಣರಾದ ಹಮಾಲಿ ಕಾರ್ಮಿಕರು ಯಾರ ಕಣ್ಣಿಗೂ ಬೀಳಲಿಲ್ಲ ಏಕೆ ಎಂದು ಕರ್ನಾಟಕ ಶ್ರಮಿಕ ಶಕ್ತಿ ಸಂಘಟನೆ ಪ್ರಶ್ನಿಸಿದೆ.
ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ವರದರಾಜೇಂದ್ರ, “ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ 2013ರಲ್ಲಿ ಅಧಿಕಾರದಲ್ಲಿದ್ದಾಗ ಪಡಿತರ ವಿತರಣೆಯ ವ್ಯವಸ್ಥೆಗೆ ಅನ್ನಭಾಗ್ಯ ಯೋಜನೆಯೆಂದು ಹೆಸರಿಟ್ಟು, ಫ್ರೀಡಂ ಪಾರ್ಕಿನಲ್ಲಿ ಚಾಲನೆ ನೀಡಿದ್ದರು. ಆ ಮೂಲಕ ಸಮಗ್ರ ನೀತಿ ಜಾರಿ ಮಾಡಿ, ಬಡವರ ಬದುಕಿಗೆ ಬಹುದೊಡ್ಡ ಆಸರೆ ಕಲ್ಪಿಸಿದ್ದರಯ. ಈ ಮಧ್ಯೆ ಅನ್ನಭಾಗ್ಯ ಯೋಜನೆ ಸಾಕಷ್ಟು ವಿವಾದದ ವಿಚಾರವೂ ಆಗಿದೆ. ಈ ಯೋಜನೆಯ ಯಶಸ್ಸಿಗೆ ಲೋಡಿಂಗ್ ಕಾರ್ಮಿಕರು ಎಲೆಮರೆಯ ಕಾಯಿಯಂತೆ ಹಗಲಿರುಳು ದುಡಿದಿದ್ದಾರೆ. ಆದರೆ ಇದು ಯಾರ ಕಣ್ಣಿಗೂ ಬೀಳದೇ ಹೋಗಿರುವ ವಿಚಾರ ಇದು” ಎಂದು ಬೇಸರಿಸಿದರು.
‘ಕಾರ್ಮಿಕರ ಕೆಲಸದ ಅವಧಿಯನ್ನು 8 ಗಂಟೆಯಿಂದ 12 ಗಂಟೆಗೆ ಹೆಚ್ಚಿಸಿರುವ ಕೇಂದ್ರ ಸರ್ಕಾರದ ಅದೇಶವನ್ನು ಈ ಕೂಡಲೇ ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿರುವ ಅವರು, “ಅನ್ನಭಾಗ್ಯ ಯೋಜನೆ ಜಾರಿ ಅಡಿ ಕೆಲಸ ಮಾಡುವ ಹಮಾಲಿ ಕಾರ್ಮಿಕರಿಗೆ ಯಾವುದೇ ಸರ್ಕಾರದ ಅಧಿಕಾರಿಗಳು, ಗುತ್ತಿಗೆದಾರರು ಕಿರುಕುಳ ನೀಡಿ ಕೆಲಸದಿಂದ ಕಿತ್ತುಹಾಕುವುದನ್ನು ತಪ್ಪಿಸಲು ಕೆಲಸದ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು.
ಮಹಾರಾಷ್ಟ್ರ ಮಾದರಿಯಲ್ಲಿ ಹಮಾಲಿ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆ ಮಾಡಬೇಕು. ಅನ್ನಭಾಗ್ಯ ಜಾರಿ ಮಾಡುವ ಹಮಾಲಿ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ನಿಯಮಾನುಗುಣವಾಗಿ ಪ್ರತಿವರ್ಷ ಕೂಲಿದರ ಹೆಚ್ಚಿಸಲು ಸಮಗ್ರ ನಿಯಮ ರೂಪಿಸಬೇಕು” ಎಂದು ಇದೇ ವೇಳೆ ವರದರಾಜೇಂದ್ರ ತಿಳಿಸಿದರು.
“ಸಮಾನ ಕೆಲಸಕ್ಕೆ ಸಮಾನ ವೇತನ ನೀತಿಯನ್ನು ಜಾರಿಗೆ ತರಬೇಕು. ಎಲ್ಲ ಗುತ್ತಿಗೆ, ಅಸಂಘಟಿತ ಹಾಗೂ ಅಭದ್ರಿತ ಕಾರ್ಮಿಕರಿಗೂ ಕನಿಷ್ಟ 30 ಸಾವಿರ ವೇತನ ಹಾಗೂ ಉದ್ಯೋಗ ಭದ್ರತೆಯನ್ನು ಖಾತ್ರಿಗೊಳಿಸಿ ನೀತಿ ರೂಪಿಸಬೇಕು. ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಿಗೆ ನಗದು ಹಣ ನೀಡುವುದನ್ನು ನಿಲ್ಲಿಸಿ ಆಹಾರ ಧಾನ್ಯಗಳನ್ನೇ ನೀಡಬೇಕು. ಅನ್ನಭಾಗ್ಯ ಹಮಾಲಿ ಕಾರ್ಮಿಕರಿಗೆ ಆಹಾರ ನಿಗಮದ ಮೂಲಕ ಸರ್ಕಾರವೇ ನೇರ ಸಂಬಳ ಪಾವತಿ ಮಾಡಲು ಮುಂದಾಗಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? 14ನೇ ಆಯವ್ಯಯ ಮಂಡಿಸುವ ಮೂಲಕ ಚರಿತ್ರಾರ್ಹ ದಾಖಲೆ ನಿರ್ಮಿಸಲಿರುವ ಸಿಎಂ ಸಿದ್ದರಾಮಯ್ಯ
ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹಕ್ಕೊತ್ತಾಯ ಸಮಾವೇಶ
ನಿರ್ದಿಷ್ಟ ಪ್ರಮಾಣದ ಕೂಲಿ ಕೆಲಸದ ಭದ್ರತೆ ಕಾರ್ಮಿಕರಿಗೆ ಇಲ್ಲವಾಗಿದೆ. ಈ ಕಾರ್ಮಿಕರ ಬವಣೆಯನ್ನು ಯಾರೂ ಕೇಳಿಸಿಕೊಂಡಿಲ್ಲ. ನಮ್ಮ ದನಿಯನ್ನು ಕೇಳಿಸಲಿಕ್ಕಾಗಿಯೇ ಈ ಜುಲೈ 10ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಲೋಡಿಂಗ್ ಮತ್ತು ಅನ್ಲೋಡಿಂಗ್ ಕಾರ್ಮಿಕರ ದಶಮಾನೋತ್ಸವ ಸಮಾವೇಶವನ್ನು ಆಯೋಜಿಸಲಾಗುತ್ತಿದೆ. ಅಂದು ನಮ್ಮ ಹಕ್ಕೊತ್ತಾಯಗಳನ್ನು ಸರ್ಕಾರಕ್ಕೆ, ಮಂದಿಸಲಾಗುತ್ತಿದೆ. ರಾಜ್ಯದ ನಾನಾ ಮೂಲೆಗಳಿಂದ ಕಾರ್ಮಿಕ ಬಂಧುಗಳು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಎಲ್ಲ ಹಕ್ಕೊತ್ತಾಯಗಳನ್ನು ಸರ್ಕಾರಕ್ಕೆ ಮಂಡಿಸಲು, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಬಿಡಬ್ಲ್ಯೂಎಸ್‌ಎಸ್‌ಬಿ ಗುತ್ತಿಗೆ ಕಾರ್ಮಿಕರು, ಅನ್ನಭಾಗ್ಯ ಹಮಾಲಿ ಕಾರ್ಮಿಕರು, ಮೆಟ್ರೋ ಕಾರ್ಮಿಕರು, ವಾಣಿಜ್ಯ ತೆರಿಗೆ ಕಾರ್ಮಿಕರು, ಬಿಬಿಎಂಪಿ ಪೌರ ಕಾರ್ಮಿಕರು, ರೇಸ್ ಕೋರ್ಸ್ ಕಾರ್ಮಿಕರು, ಆರೋಗ್ಯ ಸಾರಿಗೆ ಮುಂತಾದ ಇಲಾಖೆಗಳ ಕಾರ್ಮಿಕರೂ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ವರದರಾಜೇಂದ್ರ ತಿಳಿಸಿದರು.
ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಹಿರಿಯ ಕಾರ್ಮಿಕ ಮುಖಂಡ, ಹಿರಿಯ ಹೈಕೋರ್ಟ್ ವಕೀಲ ಎಸ್.ಬಾಲನ್, ಪ್ರೊ. ಬಾಬು ಮಾಥ್ಯೂ, ಡಾ.ಹೆಚ್ ವಿ ವಾಸು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಡಬ್ಲ್ಯೂಎಸ್‌ಎಸ್‌ಬಿ ಗುತ್ತಿಗೆ ಕಾರ್ಮಿಕ ಸಂಘದ ಅಧ್ಯಕ್ಷ ಆದಿನಾರಾಯಣ್, ರವಿ ಮೋಹನ್, ಬಿಬಿಎಂಪಿ ಪೌರ ಕಾರ್ಮಿಕ ಸಂಘದ ಚನ್ನಮ್ಮ ಉಪಸ್ಥಿತರಿದ್ದರು.