ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸಲು ಸಾಧ್ಯವೇ? ಕೋರ್ಟು-ಕಾನೂನು ಏನು ಹೇಳುತ್ತದೆ?

Date:

Advertisements
ಪಂಚಮಸಾಲಿಗಳು ಕೇಳುತ್ತಿರುವುದು 2(ಎ) ಪ್ರವರ್ಗಕ್ಕೆ ನಮ್ಮನ್ನು ಸೇರಿಸಿ, ನಮಗೆ ಅನುಕೂಲವಾಗುತ್ತದೆ ಎಂದು. ಆದರೆ ಈಗಾಗಲೇ 2(ಎ)ನಲ್ಲಿರುವ 101 ಹಿಂದುಳಿದ ಜಾತಿಗಳಿಗೆ ಇದರಿಂದ ತೊಂದರೆಯಾಗುವುದಿಲ್ಲವೇ? 

ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಕೆಲ ಭಾಗಗಳಲ್ಲಿ ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಉಳ್ಳ ವ್ಯವಸಾಯ ಆಧಾರಿತ ಬಲಿಷ್ಠ ಪಂಗಡ- ಲಿಂಗಾಯತ ಪಂಚಮಸಾಲಿ ಪಂಗಡ. ಕರ್ನಾಟಕದಲ್ಲಿ ಲಿಂಗಾಯತ ಪಂಚಮಸಾಲಿ ಜನಾಂಗವನ್ನು ಪಂಚಪೀಠ ಮತ್ತು ಮಲೆನಾಡಿನ ಲಿಂಗಾಯತ ಗೌಡರು ಎಂದು ಕೂಡ ಕರೆಯುತ್ತಾರೆ. ಸಮಾಜ ಸುಧಾರಕ ಬಸವಣ್ಣ ಹುಟ್ಟುಹಾಕಿದ ಲಿಂಗಾಯತ ಧರ್ಮದ ಮೊದಲ ಅನುಯಾಯಿಗಳು ಪಂಚಮಸಾಲಿಗಳು ಎಂಬ ವಾದವೂ ಇದೆ. 16-18ನೇ ಶತಮಾನದಲ್ಲಿ ಈ ಪಂಚಮಸಾಲಿ ಮನೆತನದ ಕಿತ್ತೂರ ರಾಣಿ ಚೆನ್ನಮ್ಮ ಭಾರತದ ಮೊದಲ ಸ್ವಾತಂತ್ರ್ಯ ಕಹಳೆ ಊದಿ ಬ್ರಿಟಿಷರ ವಿರುದ್ಧ ಯುದ್ಧ ಮಾಡಿ ಗೆದ್ದ ವೀರ ಮಹಿಳೆ ಎನ್ನುತ್ತಾರೆ ಇತಿಹಾಸ ತಜ್ಞರು. 

ರಾಜ್ಯದ ಬಹುಸಂಖ್ಯಾತರಾದ ಲಿಂಗಾಯತ ಸಮುದಾಯದಲ್ಲಿ 100ಕ್ಕೂ ಹೆಚ್ಚು ಒಳಪಂಗಡಗಳಿವೆ. ಅದರಲ್ಲಿ ಅತಿ ಹೆಚ್ಚು ಸಂಖ್ಯಾಬಲ ಹೊಂದಿರುವುದು ಪಂಚಮಸಾಲಿ ಸಮುದಾಯ ಎಂಬ ಅಭಿಪ್ರಾಯವಿದೆ. ಹಾಗೆಯೇ ಅತಿ ಹೆಚ್ಚು ಭೂಮಿ ಹೊಂದಿರುವ ಈ ಸಮುದಾಯ ರಾಜ್ಯದ 15 ಜಿಲ್ಲೆಗಳಲ್ಲಿ ಹರಿದು ಹಂಚಿಹೋಗಿದ್ದು, ಮುಂಬೈ-ಕರ್ನಾಟಕ ಭಾಗದಲ್ಲಿ ಹೆಚ್ಚಿನ ಸಂಖ್ಯೆ(ಅಂದಾಜು 50 ಲಕ್ಷ)ಯಲ್ಲಿದ್ದಾರೆಂಬ ಮಾಹಿತಿ ಇದೆ.

ಕೃಷಿಯನ್ನೇ ಮುಖ್ಯ ಕಸುಬನ್ನಾಗಿ ಅವಲಂಬಿಸಿರುವ ಈ ಸಮುದಾಯ ಈಗ, ಬದಲಾದ ಕಾಲಘಟ್ಟದಲ್ಲಿ ಸಮಸ್ಯೆಗಳ ಸುಳಿಗೆ ಸಿಲುಕಿದೆ. ಕಷ್ಟಗಳನ್ನು ಎದುರಿಸುತ್ತಿದೆ. ಹಾಗೆಯೇ ಪಂಚಮಸಾಲಿ ಸಮುದಾಯದ ಜನಸಂಖ್ಯೆ ಹೆಚ್ಚಾದಂತೆಲ್ಲ, ಕೃಷಿ ಕುಟುಂಬಗಳು ಮೈಕ್ರೋ ಕುಟುಂಬಗಳಾಗುತ್ತ, ಅವುಗಳ ಒಡೆತನದಲ್ಲಿದ್ದ ಭೂಮಿ ವಿಂಗಡಣೆಯಾಗುತ್ತ ಸಾಗಿದೆ. ಅದರ ಫಲವಾಗಿ ಭೂಮಿ ಹಂಚಿಕೆ ಅತ್ಯಲ್ಪವಾಗಿ, ಉತ್ಪಾದನೆ ಕುಂಠಿತಗೊಂಡಿದೆ, ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಬಡವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೊಸ ತಲೆಮಾರು ಕೃಷಿ ಬಿಟ್ಟು ದೂರದ ನಗರಗಳಿಗೆ ವಲಸೆ ಹೋಗುತ್ತಿದೆ. ಭವಿಷ್ಯದ ಬದುಕಿಗಾಗಿ ಶಿಕ್ಷಣ, ನೌಕರಿಯತ್ತ ನೋಡುತ್ತಿದೆ. ಆದರೆ, ಮೀಸಲಾತಿಯಿಂದಾಗಿ ಉದ್ಯೋಗ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಪಂಚಮಸಾಲಿ ಯುವಕ, ಯುವತಿಯರಿಗೆ ಅನ್ಯಾಯ ಆಗುತ್ತಿದೆ ಹಾಗೂ ಅವರು ಅವಕಾಶದಿಂದ ವಂಚಿತರಾಗುತ್ತಿದ್ದಾರೆ.

Advertisements

ಸುಮಾರು ಮೂವತ್ತನಾಲ್ಕು ವೀರಶೈವ ಲಿಂಗಾಯತ ಒಳಪಂಗಡಗಳು ಈಗಾಗಲೇ 2(ಎ) ಮೀಸಲಾತಿ ಹಕ್ಕನ್ನು ಅನುಭವಿಸುತ್ತಿವೆ. ಆದರೆ ಕೃಷಿಯನ್ನೇ ಮೂಲ ಕಸುಬನ್ನಾಗಿ ಮಾಡುತ್ತಾ ಬಂದಿರುವ ಪಂಚಮಸಾಲಿಗಳಿಗೆ ಮೀಸಲಾತಿ ಸೌಲಭ್ಯ ಇಲ್ಲ. ಇದರಿಂದ ನಮ್ಮ ಮಕ್ಕಳ ಭವಿಷ್ಯಕ್ಕೆ ಅಡ್ಡಿ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಮೀಸಲಾತಿ ನೀಡಬೇಕು ಎಂಬುದು ಪಂಚಮಸಾಲಿ ಹೋರಾಟಗಾರರ ವಾದವಾಗಿದೆ.

ಇದನ್ನು ಓದಿದ್ದೀರಾ?: ಈ ದಿನ ವಿಶೇಷ | ಅನ್ನವನ್ನು ಅಪಮಾನಿಸಬೇಡಿ; ದುಷ್ಟ ಯಜಮಾನಿಕೆ ಕೊನೆಯಾಗಲಿ

ಹಾಗಾಗಿ, ಲಿಂಗಾಯತರ ಉಪ ಜಾತಿಯಾದ ಪಂಚಮಸಾಲಿಯನ್ನು ಪ್ರವರ್ಗ-3(ಬಿ)ಯಿಂದ ಪ್ರವರ್ಗ-2(ಎ)ಗೆ ಸೇರಿಸಲು, ಆ ಸಮುದಾಯದವರು ಕುಲಗುರುಗಳಾದ ಬಸವ ಜಯ ಮೃತ್ಯುಂಜಯ ಸ್ವಾಮಿಯವರ ನೇತೃತ್ವದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ತೀವ್ರ ರೀತಿಯ ಹೋರಾಟ, ಪಾದಯಾತ್ರೆ, ಆಮರಣಾಂತ ಉಪವಾಸ, ಧರಣಿಗಳನ್ನು ಹಮ್ಮಿಕೊಂಡು ಬರುತ್ತಿದ್ದಾರೆ. ಸರ್ಕಾರಗಳಿಗೆ ಮನವಿಗಳನ್ನು ಮಾಡುತ್ತಲೂ ಇದ್ದಾರೆ.

ಕಾಲಕಾಲಕ್ಕೆ ಮನವಿ ಸ್ವೀಕರಿಸಿದ, ಅದರಲ್ಲೂ ಲಿಂಗಾಯತ ಸಮುದಾಯದಿಂದ ಬಂದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿಯವರು ಪಂಚಮಸಾಲಿ ಸಮುದಾಯಕ್ಕೆ ಆಶ್ವಾಸನೆ, ಭರವಸೆ ಕೊಡುತ್ತಲೇ ಬರುತ್ತಿದ್ದಾರೆ.

ಆದರೆ ಈ ಎಲ್ಲಾ ಸರ್ಕಾರಗಳು ಕೇವಲ ಭರವಸೆ ನೀಡಿವೆಯೇ ಹೊರತು, ಬೇಡಿಕೆ ಈಡೇರಿಸಿಲ್ಲಎಂಬುದು ಪಂಚಮಸಾಲಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿ ಇನ್ನೂ ಒಂದು ಮುಖ್ಯ ವಿಚಾರವೆಂದರೆ, ಪಂಚಮಸಾಲಿಗಳು ಕೇಳುತ್ತಿರುವುದು 2(ಎ) ಪ್ರವರ್ಗಕ್ಕೆ ನಮ್ಮನ್ನು ಸೇರಿಸಿ, ನಮಗೆ ಅನುಕೂಲವಾಗುತ್ತದೆ ಎಂದು. ಆದರೆ ಈಗಾಗಲೇ 2(ಎ)ನಲ್ಲಿರುವ 101 ಹಿಂದುಳಿದ ಜಾತಿಗಳಿಗೆ ಇದರಿಂದ ತೊಂದರೆಯಾಗುವುದಿಲ್ಲವೇ? 2(ಎ)ನಲ್ಲಿರುವ ಹಿಂದುಳಿದ ಜಾತಿಗಳಲ್ಲಿ, ಸುಮಾರು ಶೇ.6 ರಷ್ಟಿರುವ ಕುರುಬರದು ಅತಿ ದೊಡ್ಡ ಸಮುದಾಯ. ಅವರನ್ನು ಬಿಟ್ಟರೆ ಈಡಿಗ ಸಮುದಾಯವಿದೆ. 2(ಎ)ನಲ್ಲಿ ಈ ಎರಡು ಸಮುದಾಯಗಳೇ ಹೆಚ್ಚು ಮೀಸಲಾತಿ ಸೌಲಭ್ಯವನ್ನು ಪಡೆಯುತ್ತಿರುವುದು. ಈಗ ಪಂಚಮಸಾಲಿ ಸಮುದಾಯ 2(ಎ)ಗೆ ಸೇರ್ಪಡೆ ಮಾಡಿ ಎಂದು ಕೂಗೆಬ್ಬಿಸಿದ ನಂತರ, ಈ ಪ್ರವರ್ಗದಲ್ಲಿರುವ ಕುರುಬರು 2(ಎ)ಯಿಂದ ಎಸ್‌ಟಿ(ಪರಿಶಿಷ್ಟ ಪಂಗಡ)ಗೆ ಸೇರ್ಪಡೆ ಮಾಡಿ ಎಂಬ ಹೋರಾಟಕ್ಕಿಳಿದಿದ್ದಾರೆ.

ಇದೆಲ್ಲವನ್ನು ಅಳೆದು ಸುರಿದ ಬಸವರಾಜ ಬೊಮ್ಮಾಯಿಯವರು, ತಮ್ಮ ಬಿಜೆಪಿ ಸರ್ಕಾರದಿಂದಲಾದರೂ ಪಂಚಮಸಾಲಿ ಸಮುದಾಯಕ್ಕೆ ನ್ಯಾಯ ಒದಗಿಸಬೇಕೆಂಬ ಗಟ್ಟಿ ನಿರ್ಧಾರಕ್ಕೆ ಬಂದರು. ಆದರೆ ಆ ನಿರ್ಧಾರ ನ್ಯಾಯಸಮ್ಮತವಾಗಿರದೆ, ಚುನಾವಣೆಗಾಗಿ ಆಡಿದ ನಾಟಕವಾಗಿತ್ತು. ಆ ಪ್ರಹಸನದ ಪ್ರಕಾರ ಪ್ರವರ್ಗ-3(ಎ)ಯನ್ನು ಪ್ರವರ್ಗ -2ಸಿ ಎಂದು, ಹಾಗೆಯೇ ಪ್ರವರ್ಗ -3(ಬಿ)ಯನ್ನು ಪ್ರವರ್ಗ ಡಿ ಎಂದು, ವರ್ಗ ಬದಲಾಯಿಸಿದ್ದೇ ಅಲ್ಲದೆ, ಪ್ರವರ್ಗ-2(ಬಿ)ಯಲ್ಲಿದ್ದ ಮುಸ್ಲಿಂ ಸಮುದಾಯವನ್ನು ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಿಂದಲೇ ಕೈಬಿಟ್ಟಿತು.

ಪಂಚಮಸಾಲಿ2

ಅಷ್ಟೇ ಅಲ್ಲ, ಪಂಚಮಸಾಲಿ ಸಮುದಾಯವನ್ನು 2(ಎ)ಗೆ ಸೇರಿಸಲಿಲ್ಲ. ಬದಲಾಗಿ, ಅಲ್ಪಸಂಖ್ಯಾತ ಮುಸ್ಲಿಮರಿಗೆ ನೀಡಿದ್ದ ಶೇ.4 ರಷ್ಟು ಮೀಸಲಾತಿಯನ್ನು ರದ್ದುಪಡಿಸಿ, 3ಎ ಹಾಗೂ 3ಬಿಗೆ ತಲಾ ಶೇ.2ರಂತೆ ಮೀಸಲಾತಿ ಹಂಚಿಕೆ ಮಾಡಿತು. ಮೇಲ್ನೋಟಕ್ಕೇ ಅತ್ಯಂತ ತರಾತುರಿಯ ಮತ್ತು ಬೇಜವಾಬ್ದಾರಿ ನಿರ್ಣಯವೆಂದು ಸ್ಪಷ್ಟವಾಗುವ ಬೊಮ್ಮಾಯಿ ಸರ್ಕಾರದ ಈ ತೀರ್ಮಾನ, ಹಲವಾರು ಪ್ರಮುಖ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡಿರಲಿಲ್ಲ.

ಬಿಜೆಪಿಯ ಬೊಮ್ಮಾಯಿ ಸರ್ಕಾರ ಮಾಡಿದ ಈ ಯಡವಟ್ಟನ್ನು ಮುಸ್ಲಿಂ ಸಮುದಾಯ ಆಕ್ಷೇಪಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿತು. ಈ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಸರ್ಕಾರವನ್ನು ಪ್ರಶ್ನಿಸಿದಾಗ, ಬೊಮ್ಮಾಯಿ ಸರ್ಕಾರ ಶಪಥ ಪತ್ರವನ್ನು ಸಲ್ಲಿಸಿತು. ಮುಸ್ಲಿಂ ಸಮುದಾಯ ಪ್ರವರ್ಗ-2ಬಿಯಲ್ಲೇ- ಯಥಾಸ್ಥಿತಿ ಮುಂದುವರಿಸಿಕೊಂಡು ಹೋಗುವುದಾಗಿ ಅಫಿಡವಿಡ್ ಸಲ್ಲಿಸಿತು. ಇದರ ಆಧಾರದ ಮೇಲೆ ಸರ್ವೋಚ್ಚ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಆದೇಶವನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ.

ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪವರ್ಗ 2(ಎ)ಗೆ ಯಾವುದೇ ಸಮುದಾಯ/ವರ್ಗಗಳನ್ನು ಸೇರ್ಪಡೆಗೊಳಿಸಬಾರದೆಂದು ಪಿಐಎಲ್ ರಾಘವೇಂದ್ರ v/s ಸ್ಟೇಟ್ ಆಫ್ ಕರ್ನಾಟಕ ಮತ್ತು ಇತರರು ಪ್ರಕರಣವು ನ್ಯಾಯಾಲಯದಲ್ಲಿ ದಾಖಲಾಗಿರುತ್ತದೆ. ಸದರಿ ಪ್ರಕರಣದಲ್ಲಿ ಅರ್ಜಿದಾರರು ರಾಜ್ಯದ ಹಿಂದುಳಿದ ವರ್ಗದ ಮೀಸಲಾತಿ ಪಟ್ಟಿಯ ಪ್ರವರ್ಗ 2(ಎ)ಗೆ ಯಾವುದೇ ಜಾತಿಗಳನ್ನು ಸೇರಿಸಬಾರದೆಂದು ಆದೇಶಿಸುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶದ ಪ್ರವರ್ಗ-1ಎಗೆ ಮೀಸಲಾತಿ ಪ್ರಮಾಣ ಬದಲಾವಣೆ ಮತ್ತು ಯಾವುದೇ ಸಮುದಾಯಗಳನ್ನು ಪ್ರವರ್ಗ-2ಎಗೆ ಸೇರಿಸುವುದು ಅಥವಾ ಕೈ ಬಿಡುವುದನ್ನು ಉಚ್ಚ ನ್ಯಾಯಾಲಯದ ಮುಂದಿನ ಅನುಮತಿ ಇಲ್ಲದೆ ಜಾರಿಗೊಳಿಸುವುದಿಲ್ಲವೆಂದು ಅಫಿಡವಿಟ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಅದರಂತೆ ಪ್ರಕರಣವು ಉಚ್ಚ ನ್ಯಾಯಾಲಯದಲ್ಲಿ ಬಾಕಿ ಇದೆ.

ಈ ಸರ್ವೋಚ್ಚ ನ್ಯಾಯಾಲಯದ ಪ್ರತಿಯನ್ನೇ, ಸದನದ ಮುಂದೆ ಮಂಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿರುವುದು. ಆದರೆ, ಪಂಚಮಸಾಲಿ ಸಮುದಾಯ, ಹಿಂದಿನ ಬೊಮ್ಮಾಯಿ ಸರ್ಕಾರದಿಂದಾದ ಯಡವಟ್ಟನ್ನು ಅರಿಯದೆ, ಸುಪ್ರೀಂ ಕೋರ್ಟಿನ ಆದೇಶದ ಸತ್ಯಾಸತ್ಯತೆಯನ್ನು ತಿಳಿಯದೆ, ಆಳುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೆದ್ದಿದೆ. ಸಿಡಿದೆದ್ದ ಪಂಚಮಸಾಲಿ ಸಮುದಾಯವನ್ನು, ಆ ಸಮುದಾಯದ ರಾಜಕಾರಣಿಗಳು ಮತ್ತು ಸ್ವಾಮೀಜಿಗಳು, ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಲು ಹವಣಿಸುತ್ತಿದ್ದಾರೆ. ಇದರಿಂದ ಅಮಾಯಕರು ಬೀದಿಗಿಳಿದು ಬಡಿದಾಡುವಂತೆ, ಸಾವು-ನೋವುಗಳಿಗೆ ಈಡಾಗುವಂತೆ ಆಗಿದೆ.

ಇದನ್ನು ಓದಿದ್ದೀರಾ?: ಎಸ್.ಎಂ ಕೃಷ್ಣ: ನಾಡು ಕಂಡ ವರ್ಣರಂಜಿತ ರಾಜಕಾರಣಿಯ ಯುಗಾಂತ್ಯ

ಅಸಲಿಗೆ, ಹಿಂದುಳಿದ ಜಾತಿಗಳ ಮತ್ತು ಪರಿಶಿಷ್ಟ ಜಾತಿ-ವರ್ಗಗಳ ಒಟ್ಟು ಮೀಸಲಾತಿ ಶೇ. 50ರ ಮೇಲ್ಮಿತಿಯನ್ನು ದಾಟಬಾರದೆಂದು ಸುಪ್ರೀಂ ಕೋರ್ಟು ಶಿಲಾಶಾಸನವನ್ನೇ ವಿಧಿಸಿದೆ. ಈ ನಡುವೆ, ರಾಜ್ಯ ಸರ್ಕಾರಗಳು ಹಿಂದುಳಿದ ಜಾತಿಗಳ ಮೀಸಲಾತಿ ಪ್ರಮಾಣವನ್ನು ಶೇ. 50ರ ಮೇಲ್ಮಿತಿಯನ್ನು ಮೀರಿ ಹೆಚ್ಚಿಸಿದಾಗಲೆಲ್ಲಾ ಸುಪ್ರೀಂ ಕೋರ್ಟು ಅದನ್ನು ರದ್ದುಗೊಳಿಸಿದೆ.

ಸರ್ವೋಚ್ಚ ನ್ಯಾಯಾಲಯ ಕೆ. ಕೃಷ್ಣಮೂರ್ತಿ ಪ್ರಕರಣದಲ್ಲಿ ಎರಡು ಷರತ್ತನ್ನು ವಿಧಿಸಿತ್ತು. ಅದರಂತೆ ಶೇ. 50ರಷ್ಟಕ್ಕೆ ಮೀಸಲಾತಿಯನ್ನು ಇಳಿಸಬೇಕು ಮತ್ತು ತ್ರಿಸ್ತರ(triple test) ಪರೀಕ್ಷೆಗೂ ಒಳಪಡಿಸಬೇಕು ಎಂದು. ಆದರೆ ಈತನಕವೂ ಸರ್ಕಾರಗಳು ಕುಂಟು ನೆಪಗಳನ್ನು ಹೇಳುತ್ತಾ ನ್ಯಾಯಾಲಯದಿಂದ ತಪ್ಪಿಸಿಕೊಂಡು ಬರುತ್ತಿವೆ.

ವಸ್ತುಸ್ಥಿತಿ ಹೀಗಿರುವಾಗ, ಪಂಚಮಸಾಲಿ ಸಮುದಾಯಕ್ಕೆ ಸೇರಿದ ರಾಜಕಾರಣಿಗಳು ಮತ್ತು ಸ್ವಾಮೀಜಿಗಳು ಸಮುದಾಯದ ಅಮಾಯಕರನ್ನು ಬೀದಿಗಿಳಿಸಿರುವುದು ಎಷ್ಟು ಸರಿ?

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

2 COMMENTS

  1. ಪಂಚಮಸಾಲಿ ಎಂದು ಪ್ರತ್ಯೇಕವಾಗಿ ಗುರುತಿಸಿಕೊಳ್ಳುವುದನ್ನೇ ಒಪ್ಪಿಕೊಳ್ಳಲು ಸಿದ್ಧರಿಲ್ಲದ ಜನನಾಯಕರು ಇದ್ದಾರೆ- ಲಿಂಗಾಯತ ಸಮುದಾಯದಲ್ಲಿ. ಹೀಗಾಗಿ ಕೃಷಿಯನ್ನೇ ಅವಲಂಬಿಸಿದ ಆ ಅಮಾಯಕ/ಹುಂಬರಿಗೆ ಅದು ಗೊತ್ತಾಗುತ್ತಿಲ್ಲ. ನಿಮ್ಮ ವಿಶ್ಲೇಷಣೆ ಬಹುತೇಕ ವಸ್ತುನಿಷ್ಠವಾಗಿದೆ.

    • ಈದಿನ ವೆಬ್ ತಾಣಕ್ಕೆ ಭೇಟಿ ನೀಡಿ, ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಸರ್

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

Download Eedina App Android / iOS

X