- ರಾಜ್ಯ ಸರ್ಕಾರವನ್ನು ಲೇವಡಿ ಮಾಡಿದ ಮಾಜಿ ಸಿಎಂ ಕುಮಾರಸ್ವಾಮಿ
- ಖಾಸಗಿ ಹೋಟೆಲ್ನಲ್ಲಿ ಸುರ್ಜೇವಾಲ ಸಭೆ ಉಲ್ಲೇಖಿಸಿ ಟ್ವೀಟ್
ರಾಜ್ಯದಲ್ಲಿ ನಡೆಯುತ್ತಿರುವುದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೋ ಅಥವಾ ದೆಹಲಿಯ ಜನಪಥ ರಸ್ತೆಯ 10ನೇ ನಂಬರಿನ ಹಂಗಿನ ಸರ್ಕಾರವೋ? ಮೊದಲು ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಖಾಸಗಿ ಹೋಟೆಲ್ನಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಡಿಸಿಎಂಸಹಿತ ಅಧಿಕಾರಿಗಳ ಸಭೆ ನಡೆಸುತ್ತಿರುವ ಫೋಟೋ ಉಲ್ಲೇಖಿಸಿ ಸರಣಿ ಟ್ವೀಟ್ ಮಾಡಿದ್ದಾರೆ.
“ರಾಜ್ಯದಲ್ಲಿ ನಡೆಯುತ್ತಿರುವುದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೋ ಅಥವಾ ದೆಹಲಿಯ ಜನಪಥ ರಸ್ತೆಯ 10ನೇ ನಂಬರಿನ ಹಂಗಿನ ಸರ್ಕಾರವೋ? ಕನ್ನಡಿಗರು ಮತ ಹಾಕಿದ್ದು ಕೈ ಸರ್ಕಾರಕ್ಕಾ? ಅಥವಾ ಕೈಗೊಂಬೆ ಸರ್ಕಾರಕ್ಕಾ?” ಎಂದಿರುವ ಅವರು, “ಪಾಪ.. ಜನರ ವೋಟು ಹಂಗಿನ ಸರ್ಕಾರದ ಪಾಲಾಗಿದೆ. ಸರ್ಕಾರಕ್ಕೆ ತಿಂಗಳು ತುಂಬುವ ಮೊದಲೇ ಅದು ಸಾಬೀತಾಗಿದೆ” ಎಂದು ಲೇವಡಿ ಮಾಡಿದ್ದಾರೆ.
“ಸರಕಾರದ ಅಧಿಕೃತ ಸಭೆಗಳನ್ನು ಹೈಕಮಾಂಡಿನ ನಿಲಯದ ಕಲಾವಿದರೇ ನಡೆಸುವ ಕರ್ಮ ಕರ್ನಾಟಕದ್ದು! ನಾನು ಟ್ಯಾಗ್ ಮಾಡಿರುವ ಫೋಟೋ ಆ ದೈನೇಸಿ ಸ್ಥಿತಿಗೆ ಸಾಕ್ಷಿ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ ರಂದೀಪ್ ಸುರ್ಜೆವಾಲ ಅವರಿಗೆ ಸರಕಾರದ ಸಭೆಗಳನ್ನು ನಡೆಸುವ ಜವಾಬ್ದಾರಿ, ಅವಕಾಶ ಕೊಟ್ಟವರು ಯಾರು?” ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?:ಹೂಡಿಕೆ ಮಾಡುವುದಾದರೆ ರಾಜ್ಯದಲ್ಲಿ ಅಂಬಾನಿ-ಅದಾನಿಗಳಿಗೂ ಅವಕಾಶ: ಎಂ ಬಿ ಪಾಟೀಲ್
“ಸಭೆಯಲ್ಲಿ ಹಿರಿಯ ಸಚಿವರಿದ್ದಾರೆ! ಹಿರಿಯ ಐಎಎಸ್ ಅಧಿಕಾರಿಗಳೂ ಹಾಜರಿದ್ದಾರೆ!! ಅಲ್ಲಿಗೆ ಇದು ಅಧಿಕೃತ ಸಭೆಯೇ ಆಯಿತು. ಆದರೆ, ಅಲ್ಲಿ ಸುರ್ಜೆವಾಲ ಸೆಂಟರ್ ಸೀಟಿನಲ್ಲಿದ್ದಾರೆ! ಸಚಿವರು ಸೈಡು ಕುರ್ಚಿಗಳ ಪಾಲಾಗಿದ್ದಾರೆ!! ಇದೇನು ವಿಚಿತ್ರ? ಮಾನ್ಯ ಮುಖ್ಯಮಂತ್ರಿಗಳೇ ಉತ್ತರಿಸಬೇಕು” ಎಂದು ಕುಮಾರಸ್ವಾಮಿ ಕುಟುಕಿದ್ದಾರೆ.