ನಿಖಿಲ್ ಕುಮಾರಸ್ವಾಮಿ-ಭರತ್ ಬೊಮ್ಮಾಯಿ ಸೋಲು ಕುಟುಂಬ ರಾಜಕಾರಣಕ್ಕಾದ ಹಿನ್ನಡೆಯೇ?

Date:

Advertisements
ಶಿಗ್ಗಾಂವಿಯಿಂದ ಪಠಾಣ್, ಚನ್ನಪಟ್ಟಣದಿಂದ ಯೋಗೇಶ್ವರ್ ಗೆಲ್ಲುವ ಮೂಲಕ, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾದ ಕುಟುಂಬ ರಾಜಕಾರಣಕ್ಕೆ ಈಗ ಹಿನ್ನಡೆಯಾಗಿದೆ. ಆದರೆ, ಈ ಹಿನ್ನಡೆ ತಾತ್ಕಾಲಿಕ. ಮತ್ತೆ ಮುನ್ನೆಲೆಗೆ ಬರುವುದು ನಿಶ್ಚಿತ. ಹಾಗಾಗಿ, ಸಂಭ್ರಮ ಸದ್ಯಕ್ಕಷ್ಟೇ.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿಯವರಿಗೆ ಇದು ಮೂರನೇ ಸೋಲು. ಮೊದಲು ಮಂಡ್ಯ, ನಂತರ ರಾಮನಗರ, ಈಗ ಚನ್ನಪಟ್ಟಣ. ಈ ಸೋಲಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರ ಪುತ್ರವ್ಯಾಮೋಹ, ಅತಿಯಾಸೆ ಮತ್ತು ಹಠವೇ ಪ್ರಮುಖ ಕಾರಣ ಎಂದು ದಳದ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.

ಏಕೆಂದರೆ, ಚನ್ನಪಟ್ಟಣದ ಜನ ಕುಮಾರಸ್ವಾಮಿಯವರನ್ನು ಗೆಲ್ಲಿಸಿದ್ದರು. ಅದನ್ನು ಬಿಟ್ಟು ಅವರು ಮಂಡ್ಯದತ್ತ ತೆರಳಿದರು. ಮಂಡ್ಯದಲ್ಲಿ ಗೆದ್ದು ಕೇಂದ್ರದಲ್ಲಿ ಸಚಿವರೂ ಆದರು. ಆದರೆ ತಮ್ಮನ್ನು ಗೆಲ್ಲಿಸಿ ಬೆಳೆಸಿದ ಚನ್ನಪಟ್ಟಣದ ಜನತೆಯನ್ನು ಮರೆತರು. ಜೆಡಿಎಸ್ ಕಾರ್ಯಕರ್ತರನ್ನು ಕಡೆಗಣಿಸಿದರು. ಅಷ್ಟೇ ಅಲ್ಲ, ಉಪಚುನಾವಣೆ ಎದುರಾದಾಗ ಕಾರ್ಯಕರ್ತರನ್ನು ಕಣಕ್ಕಿಳಿಸಬಹುದಿತ್ತು; ಸ್ಥಳೀಯ ನಾಯಕರನ್ನು ಬೆಳೆಸಿ ದೊಡ್ಡ ಮನುಷ್ಯ ಎನಿಸಿಕೊಳ್ಳಬಹುದಿತ್ತು. ಬದಲಿಗೆ ತಂತ್ರಗಳಿಗೆ ತಲೆ ಕೊಟ್ಟರು. ತಮ್ಮ ಆಪ್ತರಿಂದ, ಪತ್ನಿ ಹೆಸರನ್ನು ತೇಲಿಬಿಟ್ಟರು. ಮತ್ತೊಂದು ಸಲ ಸ್ಥಳೀಯ ಕಾರ್ಯಕರ್ತರನ್ನು ನಿಲ್ಲಿಸಿ ಗೆಲ್ಲಿಸಿಕೊಳ್ಳುತ್ತೇವೆ ಗುಟುರು ಹಾಕಿದರು. ಕೈ ಮೀರಿ ಹೋದಾಗ ಯೋಗೇಶ್ವರ್ ಜೆಡಿಎಸ್‌ನಿಂದ ಸ್ಪರ್ಧಿಸುವುದಾದರೆ ಸಿದ್ದ ಎಂದರು. ಅಂತಿಮವಾಗಿ ಪುತ್ರ ನಿಖಿಲ್ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಿದರು.

ಕುಮಾರಸ್ವಾಮಿಯವರ ಈ ನಿರ್ಧಾರ ಜೆಡಿಎಸ್‌ನ ಸಾಮಾನ್ಯ ಕಾರ್ಯಕರ್ತರಿಗೆ ಭಾರೀ ಬೇಸರವನ್ನುಂಟು ಮಾಡಿತು. ಪಕ್ಷದೊಳಗೆ ಅಸಮಾಧಾನದ ಅಲೆ ಎಬ್ಬಿಸಿತು. ಅದಕ್ಕಿಂತ ಹೆಚ್ಚಾಗಿ ಗೌಡರ ಕುಟುಂಬದೊಳಗೆ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿತು. ಗೌಡರ ಪುತ್ರ ಎಚ್.ಡಿ. ರೇವಣ್ಣನವರ ಕುಟುಂಬ ಕೋರ್ಟು ಕಚೇರಿ ಅಲೆಯುತ್ತಿದ್ದರೆ; ಕುಮಾರಸ್ವಾಮಿಯವರು ಕೇಂದ್ರ ಸಚಿವರಾಗಿ ಸಂಭ್ರಮಿಸುತ್ತಿದ್ದರು. ಅಷ್ಟೇ ಅಲ್ಲ, ಪುತ್ರ ನಿಖಿಲ್‌ರನ್ನು ರಾಜಕಾರಣಕ್ಕೆ ಕರೆತಂದು, ಪಿತೃ ಪಕ್ಷವನ್ನು ಕೋಮುವಾದಿ ಪಕ್ಷವನ್ನಾಗಿ ಮಾಡುವತ್ತ ಮನಸ್ಸು ಹರಿಸಿದರು. ರೇವಣ್ಣನವರ ಕುಟುಂಬವನ್ನು ಬೀದಿಗೆ ತಂದ ದೇವರಾಜೇಗೌಡ ಎಂಬ ವಕೀಲರನ್ನು ಪ್ರಚಾರದಲ್ಲಿ ಪಕ್ಕಕ್ಕಿಟ್ಟುಕೊಂಡರು. ಇದು ರೇವಣ್ಣನವರ ಕುಟುಂಬವನ್ನು ನುಂಗಲೂ ಆಗದ, ಉಗಿಯಲೂ ಆಗದ ಸ್ಥಿತಿಗೆ ತಂದು ನಿಲ್ಲಿಸಿತು. ಚುನಾವಣಾ ಪ್ರಚಾರದಿಂದ ದೂರ ಉಳಿಯುವಂತೆ ಮಾಡಿತು.

Advertisements

ಇದನ್ನು ಓದಿದ್ದೀರಾ?: ಭಾವನೆ ಮೇಲೆ ರಾಜಕಾರಣ ನಡೆಯಲ್ಲ, 2028ಕ್ಕೆ ಜನರು ಮುನ್ನುಡಿ ಬರೆದಿದ್ದಾರೆ: ಡಿ ಕೆ ಶಿವಕುಮಾರ್

ಮತ್ತೊಂದು ಪ್ರಮುಖ ಕಾರಣ, ಇಡೀ ನಾಡು ಗೌರವಿಸುವ, ಏಕೈಕ ಕನ್ನಡಿಗ ಮಾಜಿ ಪ್ರಧಾನಿ ಎಂದು ಹೆಮ್ಮೆ ಪಡುವ ದೇವೇಗೌಡರು ಚುನಾವಣಾ ಪ್ರಚಾರಕ್ಕೆ ಬಂದದ್ದು. ಬರುವುದು ತಪ್ಪಲ್ಲ, ಮತಯಾಚಿಸುವುದೂ ತಪ್ಪಲ್ಲ. ಆದರೆ ಅವರು ಸಂಧ್ಯಾಕಾಲದಲ್ಲಿ ಆಡಿದ ಮಾತುಗಳು, ಅವರ ಹಿರಿತನಕ್ಕೆ ಶೋಭೆ ತರುವಂಥದ್ದಲ್ಲ. ಆ ಮಾತುಗಳು ಜೆಡಿಎಸ್ ಅಭ್ಯರ್ಥಿಯ ಗೆಲುವಿಗೆ ದುಬಾರಿಯಾಗಿದ್ದು ಸುಳ್ಳಲ್ಲ. ಹೆಸರು ಹೇಳಲು ಇಚ್ಛಿಸದ ಜೆಡಿಎಸ್ ಕಾರ್ಯಕರ್ತರೊಬ್ಬರು, ‘ದೊಡ್ಡಗೌಡರು ಕಣಕ್ಕಿಳಿದದ್ದು ನಮ್ಮಲ್ಲಿ ಹೊಸ ಹುಮ್ಮಸ್ಸು ಮೂಡಿಸಿತ್ತು, ಶಕ್ತಿ ತುಂಬಿತ್ತು, ಗೆಲುವಿನ ಹಾದಿಗೆ ಹೊರಳಿಸಿತ್ತು. ಅವರು ಕ್ಷೇತ್ರದಾದ್ಯಂತ ಸುಮ್ಮನೆ ಕೈ ಮುಗಿದುಕೊಂಡು ಹೋಗಿದ್ದರೆ ಸಾಕಿತ್ತು. ಅದು ನಮ್ಮನ್ನು ಗೆಲ್ಲಿಸುತ್ತಿತ್ತು. ಆದರೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಬಗ್ಗೆ ವಿನಾಕಾರಣ ದ್ವೇಷ ಕಾರಿದರು. ಕಾಂಗ್ರೆಸ್ಸನ್ನು ಕಿತ್ತೊಗೆಯಿರಿ ಎಂದು ಸಿಟ್ಟಿನಿಂದ ಕರೆ ಕೊಟ್ಟರು. ಅದು ಪಕ್ಷಕ್ಕೂ, ಅವರ ವ್ಯಕ್ತಿತ್ವಕ್ಕೂ ಹಾನಿಯನ್ನುಂಟುಮಾಡಿತು’ ಎಂದರು.  

ಇನ್ನು ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಸಂಭಾವಿತ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಆತನಿಗೆ ರಾಜಕಾರಣದ ಗಂಧ-ಗಾಳಿ ಗೊತ್ತಿಲ್ಲ. ತತ್ವ-ಸಿದ್ಧಾಂತಗಳ ಅರಿವಿಲ್ಲ. ಕಾರ್ಯಕರ್ತರೊಂದಿಗೆ ಬೆರೆತು ಪಕ್ಷ ಸಂಘಟಿಸಿದ ಅನುಭವವಿಲ್ಲ. ಈ ಹಿಂದಿನ ಎರಡು ಸೋಲು ಪಾಠ ಕಲಿಸಲಿಲ್ಲ. ಎರಡು ಸಲ ಸೋಲು ಕಂಡಿದ್ದ ನಿಖಿಲ್‌ರನ್ನು ಕೂರಿಸಿಕೊಂಡು ತಾತ ದೇವೇಗೌಡರು ರಾಜಕಾರಣದ ಪಾಠ ಹೇಳಿಕೊಡಲಿಲ್ಲ. ಅವರಿಗಿರುವ ಅನುಭವವನ್ನು ಮೊಮ್ಮಗನಿಗೆ ಧಾರೆ ಎರೆಯಲಿಲ್ಲ. ಬದಲಿಗೆ, ತಾತ, ತಂದೆಯಿಂದ ಸುಲಭವಾಗಿ ಸಿಕ್ಕಿದ ಹಣ ಮತ್ತು ಅಧಿಕಾರವನ್ನು ಅನುಭವಿಸಲು ಅವಕಾಶ ಕಲ್ಪಿಸಿಕೊಟ್ಟರು. ನಿಖಿಲ್ ಅದನ್ನೇ ರಾಜಕಾರಣವೆಂದುಕೊಂಡರು.

ಈಗಲೂ ಕಾಲ ಮಿಂಚಿಲ್ಲ. ವಯಸ್ಸೇನೂ ಆಗಿಲ್ಲ. ರಾಜಕಾರಣವನ್ನು ಗಂಭೀರವಾಗಿ ಪರಿಗಣಿಸಿ, ಜನಸಾಮಾನ್ಯರೊಂದಿಗೆ ಬೆರೆತು ಜನನಾಯಕನಾಗಿ ಹೊರಹೊಮ್ಮುವತ್ತ ಮನಸ್ಸು ಮಾಡಬೇಕಿದೆ. ಅದಕ್ಕೆ ತಾತ, ದೇವೇಗೌಡರ ರಾಜಕೀಯ ಬದುಕೇ ಬಹುದೊಡ್ಡ ಉದಾಹರಣೆಯಾಗಬೇಕಿದೆ.

ಇದನ್ನು ಓದಿದ್ದೀರಾ?: ಚನ್ನಪಟ್ಟಣ : ಸೋತ ಬಳಿಕ ಮತ್ತೆ ಮುಸ್ಲಿಮರ ಮೇಲೆ ಗೂಬೆ ಕೂರಿಸಿದ ನಿಖಿಲ್ ಕುಮಾರಸ್ವಾಮಿ

ಇದೇ ರೀತಿ, ಕುಟುಂಬ ರಾಜಕಾರಣಕ್ಕೆ ಮತ್ತೊಂದು ಬಹುದೊಡ್ಡ ಹಿನ್ನಡೆ, ಶಿಗ್ಗಾಂವಿಯ ಫಲಿತಾಂಶದಿಂದ ಹೊರಬಿದ್ದಿದೆ. ಅದು, ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿಯವರ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮಗ ಭರತ್ ಬೊಮ್ಮಾಯಿಯವರ ಸೋಲು.

ಜೆಡಿಎಸ್‌ನ ದೇವೇಗೌಡರ ಕುಟುಂಬ ರಾಜಕಾರಣಕ್ಕೆ ಹೋಲಿಸಿದರೆ, ಬೊಮ್ಮಾಯಿಯವರ ಕುಟುಂಬ, ರಾಜಕಾರಣವನ್ನು ಆವರಿಸಿಕೊಂಡಿಲ್ಲ, ಅಷ್ಟು ಕೆಡುಕಿನದೂ ಅಲ್ಲ. ಆದರೆ, ಬಿಜೆಪಿಯ ಹೈಕಮಾಂಡ್ ನಾಯಕರು ದೊಡ್ಡ ಗಂಟಲಿನಲ್ಲಿ ಟೀಕಿಸುತ್ತಿದ್ದ ವಂಶ ಪಾರಂಪರ್ಯ ರಾಜಕಾರಣವನ್ನು ತಾವೇ ಮುಂದುವರೆಸಿದ್ದು ನಗೆಪಾಟಲಿಗೀಡುಮಾಡಿತ್ತು. ಬಿಜೆಪಿಯ ದ್ವಿಮುಖನೀತಿಯನ್ನು ಹೊರಹಾಕಿತ್ತು. ಜೊತೆಗೆ ಬಿಜೆಪಿಯಲ್ಲಿಯೇ ಹಲವು ವರ್ಷಗಳ ಕಾಲ ದುಡಿದ, ಪಕ್ಷದ ಬ್ಯಾನರ್ ಕಟ್ಟಿದ ಕಾರ್ಯಕರ್ತರಿಗೆ ಟಿಕೆಟ್ ಕೊಡದೆ, ನಿರ್ಲಕ್ಷಿಸಿದ್ದು ಸಿಟ್ಟು ತರಿಸಿತ್ತು.    

ಕುತೂಹಲಕರ ಸಂಗತಿ ಎಂದರೆ, ಭರತ್ ಬೊಮ್ಮಾಯಿ ರಾಜಕಾರಣದತ್ತ ಮನಸ್ಸು ಮಾಡಿದವರಲ್ಲ. ಆ ಬಗ್ಗೆ ಯೋಚನೆ ಕೂಡ ಮಾಡಿದವರಲ್ಲ. ಬಸವರಾಜ ಬೊಮ್ಮಾಯಿಯವರಿಗೂ ಕೂಡ, ಪುತ್ರ ರಾಜಕಾರಣಕ್ಕೆ ಬರುವುದು ಇಷ್ಟವಿರಲಿಲ್ಲ. ಅದನ್ನವರು ಬಿಜೆಪಿ ಹೈಕಮಾಂಡಿಗೆ ಸ್ಪಷ್ಟವಾಗಿ ತಿಳಿಸಿದ್ದರು. ಆದರೆ, ಬಿಜೆಪಿ ವರಿಷ್ಠರಿಗೆ ಶಿಗ್ಗಾಂವಿ ಗೆಲುವು ಮುಖ್ಯವಾಗಿತ್ತು. ಆ ನಾಯಕರ ಬಲವಂತಕ್ಕೆ ಮಣಿದು ಅಭ್ಯರ್ಥಿಯಾದ ಭರತ್ ಬೊಮ್ಮಾಯಿ, ಹಿಂಜರಿಕೆಯಿಂದಲೇ ಜನರ ಮುಂದೆ ನಿಂತು ಕೈ ಮುಗಿದರು. ಅಪ್ಪನ ಆಶೀರ್ವಾದ, ಬಿಜೆಪಿಯ ಬೆಂಬಲ, ಮೋದಿಯ ವರ್ಚಸ್ಸು ಭರತ್ ಬೊಮ್ಮಾಯಿಯವರ ಬೆನ್ನಿಗಿತ್ತು. ಆದರೂ ಭರತ್ ಸೋತರು.

ಈ ಸೋಲು ಕುಟುಂಬ ರಾಜಕಾರಣಕ್ಕಾದ ಸೋಲು ಎನ್ನುವುದಕ್ಕಿಂತ ಹೆಚ್ಚಾಗಿ, ಹಿಂದೂ-ಮುಸ್ಲಿಂ ದ್ವೇಷ ರಾಜಕಾರಣಕ್ಕೆ ಕೊಟ್ಟ ದಿಟ್ಟ ಉತ್ತರ ಎನ್ನಬಹುದು. ಶಿಗ್ಗಾಂವಿ ಕ್ಷೇತ್ರದಲ್ಲಿ ಬಹುಸಂಖ್ಯಾತರಾದ ಮುಸ್ಲಿಮರು, ಕುರುಬರು ಮತ್ತು ದಲಿತರು ಒಂದಾಗಿ, ಬಿಜೆಪಿಯ ದ್ವೇಷ ರಾಜಕಾರಣದ ವಿರುದ್ಧ ಮತ ಚಲಾಯಿಸಿದ್ದಾರೆ. ಚುನಾವಣೆ ಹತ್ತಿರವಾದಂತೆಲ್ಲ ಬಿಜೆಪಿಯವರು ವಕ್ಫ್ ವಿಚಾರವನ್ನು ಎಳೆದು ತಂದರು. ಜನರಲ್ಲಿ ಗೊಂದಲ ಉಂಟು ಮಾಡಿದರು. ಒಟ್ಟಾಗಿ ಬದುಕುತ್ತಿದ್ದವರ ನಡುವೆ ಭಿನ್ನಾಭಿಪ್ರಾಯ ಮೂಡಿಸಿದರು. ರಾಡಿ ಎಬ್ಬಿಸಿದರು. ಅದಕ್ಕೆ ಗೋದಿ ಮೀಡಿಯಾ ಗಾಳಿ ಹಾಕಿತು.  

ಭರತ್ ಬೊಮ್ಮಾಯಿ ಸೋಲಿಗೆ ಕಾರಣ ಕೊಟ್ಟ ಬಿಜೆಪಿಯ ನಾಯಕರೊಬ್ಬರು, ‘ಶಿಗ್ಗಾಂವಿ ಕ್ಷೇತ್ರ ಯಾವತ್ತೂ ಧರ್ಮ ದ್ವೇಷಿಗಳ ಕದನ ಕಣವಾಗಿರಲಿಲ್ಲ. ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಮುಸ್ಲಿಮರ ವಿರುದ್ಧ ತೀರಾ ಕೆಟ್ಟದಾಗಿ ವರ್ತಿಸಿದರೂ, ಅದನ್ನು ಪಕ್ಷಕ್ಕಾಗಿ ಮಾಡಿದ್ದು ಎಂದುಕೊಂಡಿದ್ದರು. ಕ್ಷೇತ್ರದಲ್ಲಿ ಹಿಂದು-ಮುಸ್ಲಿಮರು ಅಣ್ಣ-ತಮ್ಮಂದಿರಂತೆ ಬದುಕುತ್ತಿದ್ದರು. ಬೊಮ್ಮಾಯಿಯವರನ್ನು ಭಯ್ಯಾ ಎನ್ನುತ್ತಿದ್ದರು. ಬೊಮ್ಮಾಯಿಯವರು ಕೂಡ ಅವರನ್ನು ಹೊರಗಿನವರೆಂದು ಭಾವಿಸದೆ, ಆತ್ಮೀಯವಾಗಿ ಸ್ಪಂದಿಸುತ್ತಿದ್ದರು. ಆದರೆ, ನಮ್ಮ ಪಕ್ಷದೊಳಗಿನ ಬಂಡಾಯ, ಗುಂಪುಗಾರಿಕೆ ಮತ್ತು ಅಪ್ಪ-ಮಗನ ರಾಜಕಾರಣ ಭರತ್ ಸೋಲಿಗೆ ಕಾರಣವಾಯಿತು. ಜೊತೆಗೆ ವಕ್ಫ್ ಗಲಾಟೆ, ನಾವು ಅಂದುಕೊಂಡಂತಾಗದೆ ಉಲ್ಟಾ ಹೊಡೆಯಿತು’ ಎಂದರು.  

ಇವೆಲ್ಲ ಕಾರಣದಿಂದ ಮೂವತ್ತು ವರ್ಷಗಳ ನಂತರ, ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವಂತಾಯಿತು. ಮುಸ್ಲಿಂ ಸಮುದಾಯದ ಪಠಾಣ್ ಗೆಲುವು ವಂಶ ಪಾರಂಪರ್ಯ ರಾಜಕಾರಣಕ್ಕೆ ಬ್ರೇಕ್ ಹಾಕಿತು. ಆ ಮೂಲಕ ಧರ್ಮ ದ್ವೇಷಕ್ಕೆ ಕಡಿವಾಣ ಬಿತ್ತು.

ಎಚ್.ಡಿ. ದೇವೇಗೌಡ ಮತ್ತು ಎಸ್.ಆರ್. ಬೊಮ್ಮಾಯಿ- ಇಬ್ಬರೂ ಜನತಾದಳದ ಧುರೀಣರು. ಇಬ್ಬರೂ ಬಹಳ ಕಡಿಮೆ ಅವಧಿಗೆ ಈ ರಾಜ್ಯದ ಮುಖ್ಯಮಂತ್ರಿಗಳಾದವರು. ಇವರ ಕಾಲಕ್ಕೆ ರಾಜಕಾರಣ ಅಷ್ಟೊಂದು ಕೆಟ್ಟಿರಲಿಲ್ಲ. ಇವರೂ ಕೂಡ ಕೆಟ್ಟ ಮುಖ್ಯಮಂತ್ರಿಗಳು ಎನಿಸಿಕೊಳ್ಳಲಿಲ್ಲ. ಆದರೆ, ಇವರ ನಂತರ ಇವರ ಪುತ್ರರಾದ ಎಚ್.ಡಿ. ಕುಮಾರಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಗಳಾದ ಕಾಲಕ್ಕೆ, ಇವರೂ ಕೆಟ್ಟು, ರಾಜಕಾರಣವನ್ನೂ ಕೆಡಿಸಿದರು. ರಾಜಕಾರಣವೆಂದರೆ, ಕೋಟ್ಯಂತರ ರೂಪಾಯಿಗಳ ವಹಿವಾಟುಳ್ಳ ವ್ಯವಹಾರವನ್ನಾಗಿ ಪರಿವರ್ತಿಸಿದರು. ಮೂರನೇ ತಲೆಮಾರು ರಾಜಕಾರಣಕ್ಕೆ ಕಾಲಿಡುವ ಕಾಲಕ್ಕೆ, ಜನರ ನಡುವಿನಿಂದ ನಾಯಕನಾಗಿ ಹೊರಹೊಮ್ಮುವ ಬದಲು, ಹಣ ಚೆಲ್ಲಿ ಶಾಸಕರಾಗಿ ಆಯ್ಕೆಯಾಗುವತ್ತ ಗಮನ ಹರಿಸಿದರು.

ಬೊಮ್ಮಾಯಿ ಕುಮಾರಸ್ವಾಮಿ1

ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾದ ಕುಟುಂಬ ರಾಜಕಾರಣಕ್ಕೆ ಈಗ ಹಿನ್ನಡೆಯಾಗಿದೆ. ಶಿಗ್ಗಾಂವಿಯಿಂದ ಪಠಾಣ್, ಚನ್ನಪಟ್ಟಣದಿಂದ ಯೋಗೇಶ್ವರ್ ಗೆಲ್ಲುವ ಮೂಲಕ, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಆದರೆ, ದೇಶದ ರಾಜಕಾರಣ ಸಾಗುತ್ತಿರುವ ಹಾದಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ; ಕರ್ನಾಟಕದಲ್ಲಿ ಕುಟುಂಬ ರಾಜಕಾರಣದ ಮೆರೆದಾಟ ನೋಡಿದರೆ, ಈ ಹಿನ್ನಡೆ ತಾತ್ಕಾಲಿಕ. ಮತ್ತೆ ಮುನ್ನೆಲೆಗೆ ಬರುವುದು ನಿಶ್ಚಿತ. ಹಾಗಾಗಿ, ಸಂಭ್ರಮ ಸದ್ಯಕ್ಕಷ್ಟೇ.

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

1 COMMENT

  1. ನಾಡಿನ ಪ್ರಮುಖ ಅತ್ಯಂತ ಹೆಚ್ಚು ಪ್ರಸರಣ ಇರುವ ದಿನಪತ್ರಿಕೆಗಳಲ್ಲಿ ಈ ರೀತಿಯ ನೇರ , ದಿಟ್ಟ ಸಂಪಾದಕೀಯಗಳು ಬಾರದೆ ಬರೇ ಪೊಳ್ಳು ಪುರಾಣದ, ಬ್ರಾಹ್ಮಣ್ಯದ ವೈಭವೀಕರಣದ, ತೌಡು ಕುಟ್ಟುವ ವರದಿಗಳೇ ಬರೋದಾದರೇ, ಯಾವ ಪುರುಷಾರ್ಥಕ್ಕೆ ಆ ಪತ್ರಿಕೆಗಳನ್ನು ಓದಬೇಕು…

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

Download Eedina App Android / iOS

X