ರಾಜ್ಯದಲ್ಲಿ ಬಿಜೆಪಿಗೆ ಮೂರನೇ ಬಾರಿ ‘ಆಪರೇಷನ್‌ ಕಮಲ’ ಸಾಧ್ಯವೇ?, ಅಂಕಿ-ಅಂಶ ಏನು ಹೇಳುತ್ತೆ?

Date:

Advertisements

ರಾಜ್ಯದ ಸದ್ಯದ ರಾಜಕೀಯ ಸನ್ನಿವೇಶದಲ್ಲಿ ಆಪರೇಷನ್ ಕಮಲದ ಸಾಧ್ಯತೆ ಎಷ್ಟರಮಟ್ಟಿಗಿದೆ ಎಂಬುದನ್ನು ಗಮನಿಸಬೇಕು. ಇದನ್ನು ಶಾಸಕರ ಬಲದ ಅಂಕಿಸಂಖ್ಯೆಗಳು ನಮಗೆ ಅರ್ಥ ಮಾಡಿಸುತ್ತವೆ. 40-45 ಶಾಸಕರನ್ನು ಖರೀದಿ ಮಾಡಿ, ಆಪರೇಷನ್‌ ಕಲಮದ ದುಸ್ಸಾಹಸಕ್ಕೆ ಬಿಜೆಪಿ ಸಾವಿರಾರು ಕೋಟಿ ಹಣ ಎಲ್ಲಿಂದ ತರುತ್ತದೆ? ಅಷ್ಟು ಹಣ ಸರಬರಾಜು ಮಾಡಿ ಮುಖ್ಯಮಂತ್ರಿಯಾಗುವ ಆಸೆ ಬಿಜೆಪಿಯಲ್ಲಿ ಯಾರಿಗಿದೆ? 

ರಾಜ್ಯದಲ್ಲಿ ಮತ್ತೆ ‘ಆಪರೇಷನ್‌ ಕಮಲ’ ವಿಚಾರ ಸದ್ದು ಮಾಡುತ್ತಿದೆ. ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ರಾಜ್ಯದಲ್ಲಿ ‘ಆಪರೇಷನ್ ಕಮಲ’ ನಡೆಯಲಿದ್ದು, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪತನವಾಗಲಿದೆ ಎನ್ನುವ ಚರ್ಚೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಮುನ್ನುಡಿ ಬರೆದಿದ್ದಾರೆ.

ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೋ ಗಂಭೀರ ಪ್ರಕರಣ ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿರುವ ಹೊತ್ತಲ್ಲಿ ರಾಜ್ಯದ ಗಮನ ಬೇರೆಡೆ ಸೆಳೆಯಲು ಈ ‘ಆಪರೇಷನ್‌ ಕಮಲ’ ವಿಚಾರ ತೇಲಿ ಬಿಡಲಾಗುತ್ತಿದೆಯಾ ಎನ್ನುವ ಅನುಮಾನ ಕಾಡುತ್ತಿದೆ. ಈ ಬಾರಿ ಅಂತೂ ವಾಸ್ತವಕ್ಕೆ ಹತ್ತಿರವೇ ಇಲ್ಲದ ‘ಆಪರೇಷನ್‌ ಕಮಲ’ ವಿಚಾರ ಪದೇ ಪದೆ ಏಕೆ ಚರ್ಚೆ ಆಗುತ್ತಿದೆ ಎಂಬುದು ಅದೊಂದು ತಂತ್ರಗಾರಿಕೆ ಅಷ್ಟೇ!

Advertisements

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರು ಕರ್ನಾಟಕದಲ್ಲಿ ‘ಆಪರೇಷನ್ ಕಮಲ’ ನಡೆಯಲಿದ್ದು, ಸಿದ್ದರಾಮಯ್ಯ ಸರ್ಕಾರ ಪತನವಾಗಲಿದೆ ಎಂದು ಹೇಳಿಕೆ ನೀಡಿದ್ದಾರೆ. “ತೆರೆಯ ಮರೆಯಲ್ಲಿ ಕರ್ನಾಟಕದ ಬಿಜೆಪಿ ನಾಯಕರಿಂದಲೇ ತಮಗೆ ಆಪರೇಷನ್​​ ಮಾಡಲು ಆಹ್ವಾನವಿದೆ” ಎಂದಿದ್ದಾರೆ. ಮುಂದುವರಿದು “ಕರ್ನಾಟಕದ ಒಂದು ಸಭೆಗೆ ತೆರಳಿದ್ದೆ. ಕರ್ನಾಟಕದಲ್ಲಿಯೂ ‘ನಾಥ್’ ಆಪರೇಷನ್ ಮಾಡೋದಿದೆ ಎಂದು ಅಲ್ಲಿಯ ನಾಯಕರು ಹೇಳಿದ್ದಾರೆ. ‘ನಾಥ್ ಆಪರೇಷನ್‘ ಅಂದ್ರೆ ಏನು? ಅಂತ ನಾನು ಅವರನ್ನು ಕೇಳಿದೆ. ಆಗ ಅವರು ನೀವು ಮಹಾರಾಷ್ಟ್ರದ ಮಹಾಘಟಬಂಧನ ಸರ್ಕಾರವನ್ನು ಪತನ ಮಾಡಿದ್ದೀರಾ, ಹೀಗಾಗಿ ನಿಮ್ಮ ಅನುಭವ ನಮಗೆ ಬಹಳ ಅವಶ್ಯಕವಿದೆ ಎಂದು ಹೇಳಿದ್ದಾರೆ. ಅದಕ್ಕೆ ಲೋಕಸಭಾ ಚುನಾವಣೆ ಮುಗಿದ ಮೇಲೆ ನಾನು ಕರ್ನಾಟಕಕ್ಕೆ ಮತ್ತೆ ಬರುತ್ತೇನೆ ಎಂದು ಹೇಳಿದ್ದೇನೆ” ಎಂದು ಏಕನಾಥ್‌ ಶಿಂದೆ ಹೇಳಿದ್ದಾರೆ.

ಏಕನಾಥ್‌ ಶಿಂದೆ ಹೇಳಿಕೆ ಸುತ್ತವೇ ಕರ್ನಾಟಕ ದೃಶ್ಯಮಾಧ್ಯಮಗಳು ‘ಆಪರೇಷನ್‌ ಕಮಲ’ ವಿಷಯ ಹಿಡಿದು ಹಲವು ಮಗ್ಗಲಿನಲ್ಲಿ ಚರ್ಚೆ ಅರಂಭಿಸಿವೆ. ಬಿಜೆಪಿ ನಾಯಕರೂ ಶಿಂದೆ ಹೇಳಿಕೆಗೆ ಧ್ವನಿಗೂಡಿಸಿ, ಫಲಿತಾಂಶ ಬಳಿಕ ಕಾಂಗ್ರೆಸ್‌ ಬಣ ಜಗಳದಲ್ಲಿ ಸರ್ಕಾರ ಬೀಳಲಿದೆ ಎನ್ನುತ್ತಿದ್ದಾರೆ. ವಾಸ್ತವದಲ್ಲಿ ಕಾಂಗ್ರೆಸ್ ಸರಕಾರ ಮತ್ತೊಮ್ಮೆ ಬಿಜೆಪಿಯ ಆಪರೇಷನ್ ಕಮಲಕ್ಕೆ ತುತ್ತಾಗಿ ಅಧಿಕಾರ ಕಳೆದುಕೊಳ್ಳಲಿದೆಯಾ? ಲೋಕಸಭೆ ಬಳಿಕ ಸರ್ಕಾರ ಪತನವಾಗಲಿದೆಯಾ? ಯಾವ ಲಾಜಿಕ್‌ನಲ್ಲಿ ‘ಆಪರೇಷನ್‌ ಕಮಲ ನಡೆಯುತ್ತೆ ಅಂತ ಮಾಧ್ಯಮಗಳು ಬಾಯಿ ಚಪ್ಪರಿಸುತ್ತಿವೆ?

ಸದ್ಯದ ರಾಜಕೀಯ ಸನ್ನಿವೇಶದಲ್ಲಿ ಆಪರೇಷನ್ ಕಮಲದ ಸಾಧ್ಯತೆ ಎಷ್ಟರಮಟ್ಟಿಗಿದೆ ಎಂಬುದನ್ನು ಗಮನಿಸಬೇಕು. ಇದನ್ನು ಶಾಸಕರ ಬಲದ ಅಂಕಿಸಂಖ್ಯೆಗಳು ನಮಗೆ ಅರ್ಥ ಮಾಡಿಸುತ್ತವೆ. ಇದಕ್ಕೂ ಮೊದಲು ನಾವು ಅರ್ಥಮಾಡಿಕೊಳ್ಳಬೇಕಾದ ಮಹತ್ವದ ಸಂಗತಿಯೊಂದಿದೆ. ಏನೆಂದರೆ ಹಿಂದಿನ ಆಪರೇಷನ್ ಕಮಲಗಳನ್ನು ಅವಲೋಕಿಸಿದರೆ ‘ಆಪರೇಷನ್ ಕಮಲ’ಕ್ಕೆ ಜನ್ಮನೀಡಿದ ಬಿಜೆಪಿಯೊಳಗೆ ಆಪರೇಷನ್‌ ಕಮಲ ನಡೆಸಲು ಅದಕ್ಕೊಂದು ಚಾಲನಾ ಶಕ್ತಿ ಇತ್ತು.

2008 ಮತ್ತು 2019 ‘ಆಪರೇಷನ್ ಕಮಲ’ ಪ್ರಕರಣಗಳಲ್ಲಿ ಬಿಜೆಪಿ ಪಾಲಿಗೆ ಅಂತಹ ಚಾಲನಾ ಶಕ್ತಿ ಆಗಿದ್ದವರು ಬಿ ಎಸ್ ಯಡಿಯೂರಪ್ಪ.‌ ಅವರಿಗಿದ್ದ ಅಧಿಕಾರದ ದಾಹ ಆಪರೇಷನ್‌ ಕಮಲ ಹುಟ್ಟಿಗೆ ಕಾರಣವಾಗಿತ್ತು. 2008ರಲ್ಲಿ ಗಾಲಿ ಜನಾರ್ದನ ರೆಡ್ಡಿ ಇಡೀ ಆಪರೇಷನ್ ಕಮಲದ ನೇತೃತ್ವ ವಹಿಸಿದ್ದರು. ಆರು ಮಂದಿ ಪಕ್ಷೇತರ ಶಾಸಕರ ಬೆಂಬಲದಿಂದ ಸರಕಾರ ರಚಿಸಿದ್ದರೂ, ಈ ಹಿಂದೆ ಕೈತಪ್ಪಿದಂತೆ ಸಿಎಂ ಹುದ್ದೆ ಎಲ್ಲಿ ಕೈಬಿಟ್ಟುಹೋಗುವುದೋ ಎಂಬ ಆ ಅಸ್ಥಿರತೆಯ ಆತಂಕವೇ ಅವರನ್ನು ಆಪರೇಷನ್ ಕಮಲಕ್ಕೆ ಪ್ರೇರೇಪಿಸಿತ್ತು.

2019ರಲ್ಲಿ ಹೆಚ್ಚೂಕಮ್ಮಿ ಅದೇ ಪರಿಸ್ಥಿತಿ. ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಜೆಡಿಎಸ್‌ಕಾಂಗ್ರೆಸ್ ಮೈತ್ರಿಯಿಂದಾಗಿ, ವಿಶ್ವಾಸಮತಕ್ಕೂ ಮೊದಲೇ ಯಡಿಯೂರಪ್ಪನವರು ಸಿಎಂ ಕುರ್ಚಿ ಕಳೆದುಕೊಳ್ಳಬೇಕಾಗಿ ಬಂತು. ಅವರು ಅದನ್ನೊಂದು ಅವಮಾನದಂತೆಯೂ, ಪ್ರತಿಷ್ಠೆಯಂತೆಯೂ ಸ್ವೀಕರಿಸಿದ್ದರು.

ತಮ್ಮ ರಾಜಕೀಯ ಜೀವನದ ಕೊನೇ ಅಂಕದಲ್ಲಿ ಇಂತಹ ಅವಮಾನವನ್ನಾಗಲಿ, ಪ್ರತಿಷ್ಠೆಗೆ ಪೆಟ್ಟನ್ನಾಗಲಿ ಸ್ವೀಕರಿಸಲು ಸಿದ್ಧರಿರದ ಯಡಿಯೂರಪ್ಪನವರು ಶತಾಯಗತಾಯ ಸಿಎಂ ಆಗಲೇಬೇಕೆಂದು ಮತ್ತೊಂದು ಸುತ್ತಿನ ಆಪರೇಷನ್ ಕಮಲಕ್ಕೆ ಅಡಿಪಾಯ ಹಾಕಿದರು. ಅದಕ್ಕೆ ಕುಮ್ಮಕ್ಕು ಕೊಟ್ಟದ್ದು ಬಿಜೆಪಿ ಹೈಕಮಾಂಡ್. ಅದರ ಪರಿಣಾಮ ಎರಡನೇ ಸಲದ ಆಪರೇಷನ್‌ ಕಮಲದಲ್ಲಿ 17 ವಿರೋಧಿ ಬಣದ ಶಾಸಕರನ್ನು ಸೆಳೆದು ಬಿಜೆಪಿ ಎರಡನೇ ಸಲ ಅಧಿಕಾರಕ್ಕೇರಿತು.

ಆದರೆ, ಸದ್ಯದ ಪ್ರಶ್ನೆ ಕರ್ನಾಟಕದಲ್ಲಿ ಮತ್ತೆ ಆಪರೇಷನ್ ಕಮಲ ಸಾಧ್ಯವಾಗಬೇಕಾದರೆ ಅದರ ಹಿಂದಿನ ಚಾಲನಾ ಶಕ್ತಿ ಯಾರಾಗುತ್ತಾರೆ ಎಂಬುದು? ಹಾಗೇ ನೋಡಿದರೆ ಸಿಎಂ ಆಗುವ ಅಧಿಕಾರದ ದಾಹ ಬಿಜೆಪಿಯ ಹಲವರಿಗೆ ಇರಬಹುದಾದರೂ ಅವರಲ್ಲಿ ಚಾಲನಾ ಶಕ್ತಿಯಾಗಿ ಕೆಲಸ ಮಾಡಬಲ್ಲ ಸಾಮರ್ಥ್ಯ ಸದ್ಯಕ್ಕೆ ಯಾರಿಗೂ ಇದ್ದಂತೆ ಕಾಣುವುದಿಲ್ಲ. ಸುಮ್ಮನೇ ಬಾಯಿ ಮಾತಿಗೆ ಬಿಜೆಪಿಯರು ಆಪರೇಷನ್‌ ಕಮಲ ಜಪ ಮಾಡುತ್ತಿದ್ದಾರೆ.

ಹಿಂದಿನ ಎರಡೂ ಆಪರೇಷನ್ ಕಮಲಗಳ ಸಂದರ್ಭದಲ್ಲಿ ಬಿಜೆಪಿ ನೂರಕ್ಕಿಂತಲೂ ಹೆಚ್ಚಿನ ಸ್ಥಾನಗಳೊಂದಿಗೆ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. 2008ರಲ್ಲಿ 110 ಸ್ಥಾನ ಗಳಿಸಿದ್ದರೆ, 2018ರಲ್ಲಿ 104 ಸ್ಥಾನಗಳೊಂದಿಗೆ ಬಹುಮತಕ್ಕೆ (113) ತೀರಾ ಸನಿಹದಲ್ಲಿ ಮುಗ್ಗರಿಸಿತ್ತು. ಅದರರ್ಥ ಎದುರಾಳಿ ಪಕ್ಷಗಳ ಸಂಖ್ಯಾಬಲ ತೀರಾ ಕ್ಷೀಣವಾಗಿತ್ತು. 2008ರಲ್ಲಿ ಕಾಂಗ್ರೆಸ್ 80 ಸ್ಥಾನ ಗಳಿಸಿದ್ದರೆ, ಜೆಡಿಎಸ್ 28 ಸ್ಥಾನ ಗಳಿಸಿತ್ತು. 2018ಲ್ಲಿ ಕಾಂಗ್ರೆಸ್‌ನ ಗಳಿಕೆ 80ಕ್ಕೆ ಸೀಮಿತವಾಗಿದ್ದರೆ, ಜೆಡಿಎಸ್ 37 ಶಾಸಕರನ್ನು ಹೊಂದಿತ್ತು. ಸಾಧ್ಯತೆ  ದೃಷ್ಟಿಯಿಂದಾಗಿ ನೋಡಿದಾಗ ಈ ಸಂಖ್ಯೆಗಳ ಬಲಾಬಲ, ಆಪರೇಷನ್ ಕಮಲವನ್ನು ನಡೆಸಲು ಬಿಜೆಪಿಗೆ ಒಂದಷ್ಟು ಧೈರ್ಯ ತಂದುಕೊಟ್ಟಿತ್ತು ಅನ್ನಿಸುತ್ತೆ. ಆದರೆ ಈಗ ಅಂಕಿಗಳು ಮೊದಲಿ ರೀತಿಯಲ್ಲಿಲ್ಲ. ಕಾಂಗ್ರೆಸ್ 135 ಸ್ಥಾನಗಳೊಂದಿಗೆ ಬಹುಮತಕ್ಕಿಂತಲೂ ಬಹಳಷ್ಟು ಮುಂದಿದೆ. ಬಿಜೆಪಿ 66 ಸ್ಥಾನಗಳಿಗೆ ಕುಸಿದಿದೆ. ಜೆಡಿಎಸ್ ಕೇವಲ 19 ಶಾಸಕರನ್ನು ಹೊಂದಿದೆ. ಇತರೆ ನಾಲ್ಕು ಶಾಸಕರು ಇದ್ದಾರೆ.

ಮೈತ್ರಿಯಿಂದಾಗಿ ಬಿಜೆಪಿ-ಜೆಡಿಎಸ್ ಶಾಸಕರು ಒಟ್ಟುಗೂಡಿದರೂ ವಿರೋಧ ಪಕ್ಷಗಳ ಸಂಖ್ಯೆ 85 ಆಗಲಿದೆ. ಅಂದರೆ ಬಹುಮತವನ್ನು ತಲುಪಬೇಕೆಂದರೆ, 28 ಸ್ಥಾನಗಳ ಕೊರತೆ ಕಾಡುತ್ತದೆ. ಆ 28 ಸ್ಥಾನಗಳ ಕೊರತೆ ಪೂರೈಸಿಕೊಳ್ಳಬೇಕೆಂದರೆ, ಈಗ ನಡೆಯಬಹುದೆಂದು ಹುಯಿಲೆಬ್ಬಿಸಲಾಗುತ್ತಿರುವ ಆಪರೇಷನ್ ಕಮಲದಲ್ಲಿ ಕನಿಷ್ಠವೆಂದರೂ 40-45 ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಸೆಳೆದುಕೊಳ್ಳಬೇಕು! ಕಾರಣ ಆಪರೇಷನ್‌ಗೆ ತುತ್ತಾದವರೆಲ್ಲರೂ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮತ್ತೆ ಉಪಚುನಾವಣೆಯಲ್ಲಿ ಗೆಲ್ಲುತ್ತಾರೆಂಬ ವಿಶ್ವಾಸ ಇರುವುದಿಲ್ಲ.

ಇನ್ನು 40-45 ಶಾಸಕರನ್ನು ಖರೀದಿ ಮಾಡುವುದೆಂದರೆ ಬಿಜೆಪಿ ಸಾವಿರಾರು ಕೋಟಿ ಹಣವನ್ನು ಎಲ್ಲಿಂದ ತರುತ್ತದೆ? ಅಷ್ಟು ಹಣ ಸರಬರಾಜು ಮಾಡಿ ಮುಖ್ಯಮಂತ್ರಿಯಾಗುವ ಆಸೆ ಬಿಜೆಪಿಯಲ್ಲಿ ಯಾರಿಗಿದೆ? ಇದಕ್ಕೆಲ್ಲ ಉತ್ತರ ಹುಡುಕಿದರೆ ಬಿಜೆಪಿಗೆ ‘ಆಪರೇಷನ್‌ ಕಮಲ’ ಎಂಬುದು ಹಗಲುಗನಸು ಎಂಬಂತೆ ಕಾಣುವುದಿಲ್ಲವೇ?

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X