ನೀತಿ ಆಯೋಗದ ಸಭೆಗೆ ಹೋಗದ ಸಿದ್ದರಾಮಯ್ಯನವರು ಕರ್ನಾಟಕದಲ್ಲಿ ಕೂತು ಮೋದಿ ವಿರುದ್ಧ ಕಟಕಿಯಾಡಿದರೆ; ಭಟ್ಟಂಗಿಗಳ ಮುಂದೆ ಬಲಿಷ್ಠನಂತೆ ಕಾಣಬಹುದೇ ಹೊರತು, ರಾಜ್ಯಕ್ಕೇನೂ ಉಪಯೋಗವಾಗುವುದಿಲ್ಲ.
”ರಾಷ್ಟ್ರೀಯ ಗುರಿಗಳನ್ನು ಸಾಧಿಸಲು ಕೇಂದ್ರ ಸರ್ಕಾರ ಹಾಗೂ ರಾಜ್ಯಗಳು ಸಹಕಾರದಿಂದ ಕೆಲಸ ಮಾಡಬೇಕು. ನೀತಿಗಳನ್ನು ಜಾರಿಗೆ ತರುವ ಮೂಲಕ ಸಾಮಾನ್ಯ ನಾಗರಿಕರ ಜೀವನದಲ್ಲಿ ಬದಲಾವಣೆ ತರುವ ರೀತಿಯಲ್ಲಿ ನಾವು ಕೆಲಸ ಮಾಡಬೇಕು. 140 ಕೋಟಿ ಜನರ ಆಕಾಂಕ್ಷೆಗಳನ್ನು ಈಡೇರಿಸಲು ಕೇಂದ್ರ ಮತ್ತು ಎಲ್ಲ ರಾಜ್ಯಗಳು ‘ಟೀಮ್ ಇಂಡಿಯಾ’ದಂತೆ ಕೆಲಸ ಮಾಡಬೇಕು.”
ಇದು, ಮೇ 24ರಂದು ನವದೆಹಲಿಯಲ್ಲಿ ನಡೆದ 10ನೇ ನೀತಿ ಆಯೋಗದ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿದ್ದು. ಆಶ್ಚರ್ಯವೆಂದರೆ, ಕೇಂದ್ರ ಸರ್ಕಾರ ತೆರಿಗೆ ಪಾಲು ಹಂಚಿಕೆಯಲ್ಲಿ, ಅನುದಾನ ಬಿಡುಗಡೆ ಮಾಡುವಲ್ಲಿ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಕೂಗು ಕೇಳಿ ಬರುತ್ತಿರುವ ಹೊತ್ತಿನಲ್ಲಿಯೇ ಪ್ರಧಾನಿ ಮೋದಿಯವರು ‘ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ’ ಎಂದಿದ್ದಾರೆ.
ನೀತಿ ಆಯೋಗ(NITI- National Institution for Transforming India)ವನ್ನು ಭಾರತದ ಯೋಜನಾ ಆಯೋಗದ ಬದಲಿಗೆ ಜನವರಿ 2, 2105ರಲ್ಲಿ ಸ್ಥಾಪಿಸಲಾಗಿದೆ. ಇದು ಮುಖ್ಯವಾಗಿ ಭಾರತದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ನೀತಿ ರೂಪಣೆಯಲ್ಲಿ ಬೌದ್ಧಿಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.
ದೇಶದ ಅಭಿವೃದ್ಧಿಗೆ ಪರಿಗಣಿಸಬೇಕಾದ ವಿಷಯಗಳು, ಕ್ಷೇತ್ರಗಳು ಮತ್ತು ತಂತ್ರಗಳ ಕುರಿತು ರಾಜ್ಯಗಳ ಸಲಹೆಯೊಂದಿಗೆ ನೀತಿ ರೂಪಿಸುವುದು ಇದರ ಪ್ರಮುಖ ಕೆಲಸ. ಕೇಂದ್ರ-ರಾಜ್ಯಗಳ ನೀತಿ ರೂಪಣೆ ವಿಷಯದಲ್ಲಿ ‘ಚಿಂತಕರ ಚಾವಡಿ’ಯ ಪಾತ್ರವಹಿಸಿ ಸಲಹೆ ಸೂಚನೆಗಳನ್ನು ನೀಡುವುದು, ತಳಮಟ್ಟದಿಂದಲೇ ಅಭಿವೃದ್ಧಿಯಾಗುವಂತೆ ನೋಡಿಕೊಳ್ಳುವುದು ಮತ್ತು ಅಭಿವೃದ್ಧಿಯ ಮೌಲ್ಯಮಾಪನ ಮಾಡುವುದು ಈ ಆಯೋಗದ ಮುಖ್ಯ ಕೆಲಸ.
ಇದನ್ನು ಓದಿದ್ದೀರಾ?: ಜಾತಿ ಜನಗಣತಿಗೆ ಪ್ರಧಾನಿ ಮೋದಿ ಶ್ಲಾಘನೆ; ಸಮೀಕ್ಷೆ ಬೇಡಿಕೆ ಟೀಕಿಸಿದ್ದ ಹಳೆ ವಿಡಿಯೋ ಪೋಸ್ಟ್ ಮಾಡಿದ ಕಾಂಗ್ರೆಸ್
ಈ ನಿಟ್ಟಿನಲ್ಲಿ ನಡೆದ 10ನೇ ನೀತಿ ಆಯೋಗದ ಸಭೆಗೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೂ ಹಾಜರಿದ್ದರು. ವಿರೋಧ ಪಕ್ಷಗಳ ಆಡಳಿತವಿರುವ 6 ರಾಜ್ಯಗಳ ಮುಖ್ಯಮಂತ್ರಿಗಳೂ ಪಾಲ್ಗೊಂಡಿದ್ದರು. ಆದರೆ, 4 ರಾಜ್ಯಗಳ ಮುಖ್ಯಮಂತ್ರಿಗಳು- ಸಿದ್ದರಾಮಯ್ಯ(ಕರ್ನಾಟಕ), ಮಮತಾ ಬ್ಯಾನರ್ಜಿ(ಪಶ್ಚಿಮ ಬಂಗಾಳ), ನಿತೀಶ್ ಕುಮಾರ್(ಬಿಹಾರ) ಹಾಗೂ ಎನ್.ರಂಗಸಾಮಿ(ಪುದುಚೆರಿ) ಗೈರುಹಾಜರಾಗಿದ್ದರು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ತಾವು ಹೋಗದೆ ತಮ್ಮ ಸಂಪುಟ ಸಹೋದ್ಯೋಗಿ ಕೆ.ಎನ್. ಬಾಲಗೋಪಾಲ್ ಅವರನ್ನು ಕಳುಹಿಸಿಕೊಟ್ಟಿದ್ದರು.
ಗೈರು ಹಾಜರಾದವರ ಪೈಕಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೂ ಒಬ್ಬರಾಗಿದ್ದರು. ಈಗ ಇವರ ಗೈರು ಹಾಜರಿ ಚರ್ಚೆಯ ವಸ್ತುವಾಗಿದೆ. ವಿರೋಧವೂ ವ್ಯಕ್ತವಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪೂರ್ವನಿಗದಿತ ಕಾರ್ಯಕ್ರಮಗಳಿದ್ದ ಕಾರಣ ಗೈರುಹಾಜರಾದರು ಎಂದು ಸಿಎಂ ಸಚಿವಾಲಯದ ಮೂಲಗಳು ಸ್ಪಷ್ಟಪಡಿಸಿವೆ. ಜೊತೆಗೆ ಮುಖ್ಯಮಂತ್ರಿಗಳ ಬದಲಿಗೆ, ಅವರ 16 ಪುಟಗಳ ಭಾಷಣದ ಪ್ರತಿಯನ್ನು ಸಭೆಗೆ ಕಳುಹಿಸಿಕೊಡಲಾಗಿದೆ ಎಂದು ಸಂಜೆ 6.45ಕ್ಕೆ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ. ಅಂದರೆ, ಹೋಗದಿರುವುದನ್ನು ತಪ್ಪಾಗಿ ಅರ್ಥೈಸಬಾರದು ಎಂಬ ಕಾರಣಕ್ಕಾಗಿ ಭಾಷಣದ ಪ್ರತಿಯನ್ನು ಕಳುಹಿಸಿಕೊಟ್ಟಿರುವುದು ಎದ್ದು ಕಾಣುತ್ತದೆ. ಅದು ಕೂಡ ನೀತಿ ಆಯೋಗದ ಸಭೆ ಮುಗಿದ ನಂತರ!
2047ಕ್ಕೆ ದೇಶ ಸ್ವಾತಂತ್ರ್ಯ ಪಡೆದು ನೂರು ವರ್ಷಗಳನ್ನು ಪೂರೈಸಲಿದೆ. ನಾವು ಈ ಸಂಭ್ರಮಾಚರಣೆಯ ಹತ್ತಿರದಲ್ಲಿದ್ದೇವೆ. ಹೋರಾಟಗಾರರ ತ್ಯಾಗ, ಬಲಿದಾನಗಳ ಮೂಲಕ ಸ್ವಾತಂತ್ರ್ಯ ಗಳಿಸಿದ ನಾವು ಅವರ ಕನಸು ನನಸು ಮಾಡಬೇಕು. ಅಸಮಾನತೆ ಅಂತರ ಕನಿಷ್ಠ ಮಟ್ಟಕ್ಕೆ ಇಳಿಯಬೇಕು. ದೇಶವು ಸಬಲೀಕರಣಗೊಂಡ ರಾಜ್ಯಗಳ ಒಕ್ಕೂಟವಾಗಿ ಒಟ್ಟಾಗಿ ಅಭಿವೃದ್ಧಿ ಆಗಬೇಕು. ಪ್ರಬಲ, ಸಮಾನ ಮತ್ತು ಸಬಲೀಕರಣಗೊಂಡ ರಾಜ್ಯಗಳಿಂದ ಮಾತ್ರ ಬಲವಾದ ಒಕ್ಕೂಟ ಹೊರಹೊಮ್ಮಲು ಸಾಧ್ಯ. ಇದು ಬರೀ ಭಾಷಣ ಮತ್ತು ಆಚರಣೆ ಆಗದೆ, ನಮ್ಮ ಜವಾಬ್ದಾರಿಯಾಗಬೇಕು ಎಂದು ಸಿದ್ದರಾಮಯ್ಯನವರು ತಮ್ಮ ಬಾಷಣದಲ್ಲಿ ತಿಳಿಸಿದ್ದಾರೆ.
ಅಂದರೆ ರಾಜ್ಯಗಳಿದ್ದರೆ ಕೇಂದ್ರ, ಒಕ್ಕೂಟ ವ್ಯವಸ್ಥೆಗೊಂದು ಗೌರವ ಎಂದಿದ್ದಾರೆ. ಅವರ ಆಶಯವೆಲ್ಲವೂ ಸರಿ. ಆದರೆ, ಕೇಂದ್ರ ಸರ್ಕಾರವನ್ನು ಮುನ್ನಡೆಸುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಎದುರುಗೊಳ್ಳುವ, ಎಲ್ಲವನ್ನು ಮುಕ್ತವಾಗಿ ಚರ್ಚಿಸುವ ಒಂದು ‘ಅಪೂರ್ವ ಅವಕಾಶ’ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವರಾಗಿಯೇ ಕಳೆದುಕೊಳ್ಳಲಿಲ್ಲವೇ ಎಂಬ ಪ್ರಶ್ನೆಯೂ ಎದುರಾಗುತ್ತದೆ.
ಈ ಪ್ರಶ್ನೆಗೆ ಪೂರಕವಾಗಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರವನ್ನು ನಿಂದಿಸುತ್ತಾ ಕೂತರೆ ಪ್ರಯೋಜನವಿಲ್ಲ. ಹದಿನಾಲ್ಕು ಬಜೆಟ್ ಮಂಡಿಸಿದ ಅವರು ನೀತಿ ಆಯೋಗದ ಸಭೆಗೆ ಗೈರು ಆಗುವುದು ಎಷ್ಟು ಸರಿ? ರಾಜಕೀಯ ಪ್ರತಿಷ್ಠೆಗೆ ರಾಜ್ಯದ ಹಿತವನ್ನು ಬಲಿಕೊಡುವುದು ತಪ್ಪು. ಸಂವಾದವೇ ಇಲ್ಲದಿದ್ದರೆ ಸಮಸ್ಯೆ ಹೇಗೆ ಬಗೆಹರಿಯುತ್ತದೆ? ರಾಷ್ಟ್ರದ ನೀತಿ ನಿರೂಪಣೆ, ಅಭಿವೃದ್ಧಿಗೆ ಸಂಬಂಧಿಸಿ ಪ್ರಧಾನಿ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಅವರು ತಪ್ಪದೇ ಭಾಗವಹಿಸಬೇಕಿತ್ತು. ಮುಂದಾದರೂ ರಾಜ್ಯದ ಹಿತದೃಷ್ಟಿಯಿಂದ ಮುಖ್ಯಮಂತ್ರಿಯವರು ಇಂತಹ ಸಭೆಯಲ್ಲಿ ತಪ್ಪದೇ ಭಾಗವಹಿಸಬೇಕು ಎಂಬುದು ನನ್ನ ಸಲಹೆ. ಒಕ್ಕೂಟ ವ್ಯವಸ್ಥೆಯಲ್ಲಿ ಒಟ್ಟಿಗೆ ಕೆಲಸ ಮಾಡಬೇಕು. ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಖಂಡಿತಾ ಬೇಡ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರು ಆಡಿರುವ ಮಾತುಗಳು ಅಕ್ಷರಶಃ ಸತ್ಯ ಮತ್ತು ಸರಿಯಾಗಿದೆ.
ಪ್ರಧಾನಿ ಮೋದಿಯವರೇ ‘ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ’ ಎಂದಿರುವಾಗ, ಆ ಮಾತುಗಳನ್ನು ಉಲ್ಲೇಖಿಸಿ, ಕಳೆದ ಹನ್ನೊಂದು ವರ್ಷಗಳಲ್ಲಿ ಕೇಂದ್ರದಿಂದ ಆದ ಅನ್ಯಾಯಗಳನ್ನು ಎಳೆಎಳೆಯಾಗಿ ಬಿಡಿಸಿಡಬಹುದಾಗಿತ್ತು. ಅಂತಹ ಅಪೂರ್ವ ಅವಕಾಶವನ್ನು ಪಕ್ಕದ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್, ಸಭೆಗೆ ಹಾಜರಾಗುವ ಮೂಲಕ ಸದುಪಯೋಗಪಡಿಸಿಕೊಂಡರು.’‘ಕೇಂದ್ರದ ತೆರಿಗೆಗಳಲ್ಲಿ ರಾಜ್ಯದ ಪಾಲನ್ನು ಶೇ. 50ಕ್ಕೆ ಏರಿಸಬೇಕು. 15ನೇ ಹಣಕಾಸು ಆಯೋಗವು ರಾಜ್ಯಗಳಿಗೆ ಶೇ. 42ರಷ್ಟು ಪಾಲು ನಿಗದಿಪಡಿಸಲಾಗಿದೆ. ಆದರೆ, ರಾಜ್ಯ ಪ್ರಸ್ತುತ ಕೇವಲ ಶೇ. 33.16 ಪಡೆಯುತ್ತಿದೆ’ ಎಂದು ಹೇಳುವ ಮೂಲಕ ಇತರ ರಾಜ್ಯಗಳ ಮುಖ್ಯಮಂತ್ರಿಗಳಲ್ಲಿ ಪ್ರಶ್ನಿಸುವ ಧೈರ್ಯ ತುಂಬಿದರು. ಒಕ್ಕೂಟ ವ್ಯವಸ್ಥೆ ನಡೆಯಬೇಕಾದ ಹಾದಿಯನ್ನು ಪ್ರಧಾನಿಯವರಿಗೆ ನೆನಪಿಸಿದರು.

ಏಕೆಂದರೆ, ಕಳೆದ ಹನ್ನೊಂದು ವರ್ಷಗಳ ಹಿಂದೆ ಪ್ರಧಾನಿ ಪಟ್ಟಕ್ಕೇರಿದ ಮೋದಿಯವರು, ‘ಅಚ್ಛೇ ದಿನ್ ಆಯೇಗಾ’ ಎಂದಿದ್ದರು. ನೋಟು ಅಮಾನ್ಯೀಕರಣಗೊಳಿಸಿ, ಕಪ್ಪು ಹಣವನ್ನು ಮತ್ತು ಭಯೋತ್ಪಾದನೆಯನ್ನು ಬಲಿ ಹಾಕಲಿದ್ದೇನೆ ಎಂದಿದ್ದರು. ಆದರೆ ಕಳೆದ ಹನ್ನೊಂದು ವರ್ಷಗಳ ಕಾಲ ಪ್ರಧಾನಿಯಾಗಿ ಅವರೇ ಅಧಿಕಾರದಲ್ಲಿದ್ದರೂ, ಇವತ್ತಿಗೂ ಅಚ್ಚೇ ದಿನ್ ಬರಲಿಲ್ಲ; ಕಪ್ಪು ಹಣದ ಚಲಾವಣೆ ನಿಂತಿಲ್ಲ; ಭಯೋತ್ಪಾದನೆಯ ಸಮಸ್ಯೆಯೂ ಬಗೆಹರಿದಿಲ್ಲ.
ಇದನ್ನು ಓದಿದ್ದೀರಾ?: ಹೊರಗೆ ಗಾಂಧೀ ವೇಷ- ಒಳಗೆ ಮುಸ್ಲಿಮ್ ದ್ವೇಷ!
ಈಗ ಮತ್ತೆ, 10ನೇ ನೀತಿ ಆಯೋಗದ ಸಭೆಯಲ್ಲಿ ”ಅಂತಾರಾಷ್ಟ್ರೀಯ ಹಣಕಾಸು ನಿಧಿಯು ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಿದ್ದ ಜಾಗತಿಕ ಆರ್ಥಿಕ ಮುನ್ನೋಟ ಕುರಿತ ವರದಿಯಲ್ಲಿ, ‘2025ರಲ್ಲಿ ಭಾರತವು 4.19 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ (₹356.15 ಲಕ್ಷ ಕೋಟಿ) ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಲಿದೆ’ ಎಂದು ಹೇಳಿದೆ. ಐಎಂಎಫ್ ವರದಿ ಅನ್ವಯ ಭಾರತದ ತಲಾ ಆದಾಯವು ದುಪ್ಪಟ್ಟುಗೊಂಡಿದೆ. 2013–14ರಲ್ಲಿ 1,438 ಡಾಲರ್ (₹1,22,476) ಇದ್ದ ತಲಾ ಆದಾಯವು, ಪ್ರಸಕ್ತ ವರ್ಷದಲ್ಲಿ 2,880 ಡಾಲರ್‌ಗೆ (₹2,45,293) ಮುಟ್ಟಿದೆ. 2025–26ನೇ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿಯು ಶೇ 6.2ರಷ್ಟು ಪ್ರಗತಿ ಕಾಣಲಿದೆ ಎಂದು ಅಂದಾಜಿಸಿದೆ. ಜಪಾನ್ ದೇಶವನ್ನು ಹಿಂದಿಕ್ಕಿರುವ ಭಾರತವು ಜಾಗತಿಕ ಮಟ್ಟದಲ್ಲಿ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ” ಎಂದು ನೀತಿ ಆಯೋಗದ ಸಿಇಒ ಬಿ.ವಿ.ಆರ್. ಸುಬ್ರಹ್ಮಣ್ಯಂ ಹೇಳಿದ್ದಾರೆ.
ಸುಬ್ರಹ್ಮಣ್ಯಂ ಅವರ ಮಾತುಗಳಿಗೆ ಪುಷ್ಟಿ ನೀಡುವಂತೆ ಪ್ರಧಾನಿ ಮೋದಿಯವರು, ‘ಪ್ರತಿಯೊಂದು ರಾಜ್ಯವನ್ನು, ಪ್ರತಿ ನಗರವನ್ನು, ಪ್ರತಿ ನಗರಪಾಲಿಕೆಯನ್ನು ಮತ್ತು ಪ್ರತಿ ಹಳ್ಳಿಯನ್ನು ವಿಕಸಿತ ಮಾಡುವ ಗುರಿಯನ್ನು ನಾವು ಹೊಂದಿರಬೇಕು. ಈ ದಿಕ್ಕಿನಲ್ಲಿ ನಾವು ಕೆಲಸ ಮಾಡಿದರೆ, ಅಭಿವೃದ್ಧಿ ಹೊಂದಿದ ಭಾರತ ಆಗಲು ನಾವು 2047 ರವರೆಗೆ ಕಾಯಬೇಕಾಗಿಲ್ಲ. ರಾಷ್ಟ್ರೀಯ ಗುರಿಗಳನ್ನು ಸಾಧಿಸಲು ಕೇಂದ್ರ ಸರ್ಕಾರ ಹಾಗೂ ರಾಜ್ಯಗಳು ಸಹಕಾರದಿಂದ ಕೆಲಸ ಮಾಡಬೇಕು’ ಎಂದಿದ್ದಾರೆ. ಹಾಗೆಯೇ ಕಳೆದ ಹನ್ನೊಂದು ವರ್ಷಗಳಿಂದ ರಾಜ್ಯಗಳ- ಅದರಲ್ಲೂ ದಕ್ಷಿಣ ರಾಜ್ಯಗಳ ಸಹಕಾರ ಪಡೆದು, ವಾಪಸ್ ಕೊಡದಿರುವ ಬಗ್ಗೆ ತುಟಿಬಿಚ್ಚದೆ ಸುಮ್ಮನಾಗಿದ್ದಾರೆ.
ಮೋದಿಯವರ ಈ ತಾರತಮ್ಯ ನೀತಿಯನ್ನು ಬಹಳ ಹತ್ತಿರದಿಂದ ಕಂಡಿರುವ, ಅವರ ಹೊಸ ‘ವಿಕಸಿತ ಭಾರತ’ಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, ”ಅಧಿಕಾರದಲ್ಲಿರುವವರು (ಬಿಜೆಪಿಗರು) ತಮ್ಮ ದುಷ್ಟ ಗುರಿಗಳನ್ನು ಪೂರೈಸಲು ಸಂಸತ್ತು, ನ್ಯಾಯಾಂಗ, ವಿಶ್ವವಿದ್ಯಾಲಯಗಳು, ಮಾಧ್ಯಮ, ಸಾಂವಿಧಾನಿಕ ಮತ್ತು ಶಾಸನಬದ್ಧ ಅಧಿಕಾರಗಳನ್ನು ದುರುಪಯೋಗ ಮಾಡಿಕೊಂಡರೆ, ವಿಕಸಿತ ಭಾರತ ಉದ್ದೇಶ ಹೇಗೆ ಈಡೇರುತ್ತದೆ” ಎಂದು ರಮೇಶ್ ಕಿಡಿಕಾರಿದ್ದಾರೆ.
ಮುಂದುವರೆದು, ”ದೇಶದಲ್ಲಿ ಕೆಲವೇ ಕೆಲವು ವ್ಯಕ್ತಿಗಳ ಕೈಯಲ್ಲಿ ಸಂಪತ್ತು ಸಂಗ್ರಹವಾಗುತ್ತಲೇ ಇದೆ. ಆರ್ಥಿಕ ಅಸಮಾನತೆಗಳು ತೀವ್ರಗೊಳ್ಳುತ್ತಿವೆ. ಭಾರತದ ವೈವಿಧ್ಯತೆಗಳನ್ನು ಉದ್ದೇಶಪೂರ್ವಕವಾಗಿ ಅವಮಾನಿಸಲು ಮತ್ತು ಅಳಿಸಿ ಹಾಕಲು ಪ್ರಯತ್ನಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ನೀತಿ ಆಯೋಗದ ಸಭೆ ನಡೆಸುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬೂಟಾಟಿಕೆ ಪ್ರದರ್ಶನ ಮಾಡುತ್ತಿದೆ. ಜತೆಗೆ, ಜನರ ದಿಕ್ಕು ತಪ್ಪಿಸುವ ಮತ್ತೊಂದು ಕಸರತ್ತು ಮಾಡುತ್ತಿದೆ. ನೀತಿ ಆಯೋಗ ಎಂಬುದು ‘ಅಯೋಗ್ಯ ಸಂಸ್ಥೆ’ಯಾಗಿದೆ” ಎಂದು ಬಿಜೆಪಿ ವಿರುದ್ಧ ರಮೇಶ್ ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ ಪಕ್ಷ ಜೈರಾಂ ರಮೇಶ್, ಅವರಿಗೆ ನೀಡಿರುವ ಸ್ಥಾನವನ್ನು ಬಳಸಿಕೊಂಡು, ಪ್ರಧಾನಿ ಮೋದಿಯವರ ಸರ್ಕಾರದ ಬೂಟಾಟಿಕೆಯನ್ನು ಸೂಕ್ತ ಸಮಯದಲ್ಲಿ ಹೊರಹಾಕಿದ್ದಾರೆ.
ಹಾಗೆಯೇ, ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯನವರಿಗೆ ನೀಡಿರುವ ಮುಖ್ಯಮಂತ್ರಿ ಸ್ಥಾನವನ್ನು ಬಳಸಿಕೊಂಡು, ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳುವ ಅವಕಾಶ ಕೂಡಿ ಬಂದಿತ್ತು. 2013ರಿಂದ 18ವರೆಗೆ, ಐದು ವರ್ಷ ಹಾಗೂ 2013ರಿಂದ, ಎರಡು ವರ್ಷಗಳಿಂದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರಿಗೆ, ರಾಜ್ಯದ ಆರ್ಥಿಕ ಸ್ಥಿತಿಯ ಅರಿವಿತ್ತು. ಸ್ವತಃ ಹಣಕಾಸು ಮಂತ್ರಿಯಾಗಿ 14 ಬಜೆಟ್ ಮಂಡಿಸಿರುವ ಅಪಾರ ಅನುಭವವಿತ್ತು. ಜೊತೆಗೆ ಕಳೆದ ಹನ್ನೊಂದು ವರ್ಷಗಳಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅದ ಅನ್ಯಾಯ, ತೆರಿಗೆ ತಾರತಮ್ಯ, ಅನುದಾನ ಬಿಡುಗಡೆಯಲ್ಲಿ ಆದ ನಿಧಾನದ್ರೋಹವೆಲ್ಲ ಗೊತ್ತಿತ್ತು. ಅವೆಲ್ಲವನ್ನೂ ಖುದ್ದಾಗಿ ಪ್ರಧಾನಿಯವರ ಮುಂದೆ ನಿಂತು, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಬಿಚ್ಚಿಡುವ ಅಪೂರ್ವ ಅವಕಾಶವೂ ಇತ್ತು.
ಇದನ್ನು ಓದಿದ್ದೀರಾ?: ಕೆ.ಆರ್.ಪೇಟೆ ದಲಿತ ಯುವಕ ಜಯಕುಮಾರ್ ಕೇಸ್‌ನಲ್ಲಿ ಪೊಲೀಸರು ಕುರುಡಾಗಿದ್ದು ಅಕ್ಷಮ್ಯ
ಅದೆಲ್ಲಕ್ಕಿಂತ ಹೆಚ್ಚಾಗಿ ಕಳೆದ ಹನ್ನೊಂದು ವರ್ಷಗಳಲ್ಲಿ ಪ್ರಧಾನಿ ಮೋದಿಯವರು ಆಡಿದ್ದೊಂದು-ಮಾಡಿದ್ದೊಂದನ್ನು, ಅಚ್ಛೇ ದಿನದ ಅಧ್ವಾನವನ್ನು ಎಳೆಎಳೆಯಾಗಿ ಬಿಚ್ಚಿಡಬಹುದಿತ್ತು. ಇತರ ರಾಜ್ಯಗಳ ಮುಖ್ಯಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಧಾನಿಗಳ ಮೇಲೆ ಒತ್ತಡ ಹಾಕಬಹುದಿತ್ತು. ಒಕ್ಕೂಟ ವ್ಯವಸ್ಥೆಯ ಸೊಗಸನ್ನು ಸಾರಿ ಹೇಳಬಹುದಿತ್ತು.

ಇದಾವುದನ್ನೂ ಮಾಡದ, ಸಭೆಗೂ ಹೋಗದ ಸಿದ್ದರಾಮಯ್ಯನವರು ‘ದೇಶವು ಸಬಲೀಕರಣಗೊಂಡ ರಾಜ್ಯಗಳ ಒಕ್ಕೂಟವಾಗಿ ಒಟ್ಟಾಗಿ ಅಭಿವೃದ್ಧಿ ಆಗಬೇಕು. ಇದು ಬರೀ ಭಾಷಣ ಮತ್ತು ಆಚರಣೆ ಆಗದೆ, ನಮ್ಮ ಜವಾಬ್ದಾರಿಯಾಗಬೇಕು’ ಎಂದು ತಮ್ಮ ಜವಾಬ್ದಾರಿಯನ್ನೇ ಮರೆತರೆ; ಕರ್ನಾಟಕದಲ್ಲಿ ಕೂತು ಮೋದಿ ವಿರುದ್ಧ ಕಟಕಿಯಾಡಿದರೆ; ಭಟ್ಟಂಗಿಗಳ ಮುಂದೆ ಬಲಿಷ್ಠನಂತೆ ಕಾಣಬಹುದೇ ಹೊರತು, ರಾಜ್ಯಕ್ಕೇನೂ ಉಪಯೋಗವಾಗುವುದಿಲ್ಲ. ಕೊಟ್ಟ ಕುದುರೆಯನೇರದವನು
ವೀರರೂ ಅಲ್ಲ ಧೀರರೂ ಅಲ್ಲ… ಎನಿಸಿಕೊಳ್ಳದೆ ಇರುವುದಿಲ್ಲ.

ಲೇಖಕ, ಪತ್ರಕರ್ತ