ಹಮಾಸ್ ದಾಳಿಯ ಬೆನ್ನಲ್ಲೇ ಗಾಝಾ ಮೇಲಿನ ದಾಳಿಯನ್ನು ಇಸ್ರೇಲ್ ಮುಂದುವರಿಸಿದ್ದು ಸುಮಾರು 11 ಲಕ್ಷ ಜನಸಂಖ್ಯೆಯಿರುವ ಉತ್ತರ ಗಾಝಾದ ಜನರನ್ನು 24 ಗಂಟೆಗಳೊಳಗೆ ತೆರಳುವಂತೆ ಆದೇಶಿಸಿದೆ.
ಈ ನಡುವೆ ಹೆಲಿಕಾಪ್ಟರ್ ಮೂಲಕ ಸಾವಿರಾರು ಕರಪತ್ರಗಳನ್ನು ಎಸೆದಿರುವ ಇಸ್ರೇಲ್, ‘ಮುಂದಿನ ಸೂಚನೆ ತನಕ ಗಾಝಾಕ್ಕೆ ಬರಬೇಡಿ’ ಎಂದು ತಿಳಿಸಿದೆ.
ಆಕಾಶದಿಂದ ಸಾವಿರಾರು ಕರಪತ್ರಗಳನ್ನು ಕರಪತ್ರಗಳನ್ನು ಗಾಜಾಕ್ಕೆ ಬಿಡಲಾಗಿದ್ದು, ಪತ್ರದಲ್ಲಿ, ‘ಇಸ್ರೇಲ್ ರಕ್ಷಣಾ ಪಡೆಗಳಿಂದ ಮುಂದಿನ ಸೂಚನೆ ಬರುವವರೆಗೆ ನಿಮ್ಮ ಮನೆಗಳಿಗೆ ಹಿಂದಿರುಗಬೇಡಿ. ಗಾಝಾ ನಗರದಲ್ಲಿ ನಿಮಗೆ ತಿಳಿದಿರುವ ಎಲ್ಲ ಸಾರ್ವಜನಿಕ ಆಶ್ರಯಗಳನ್ನು ತೊರೆದು ಬಿಡಿ. ಭದ್ರತಾ ಗೋಡೆಗಳ ಹತ್ತಿರ ಸಮೀಪಿಸಬೇಡಿ. ಒಂದು ವೇಳೆ ಭದ್ರತಾ ಗೋಡೆಗಳ ಹತ್ತಿರ ತೆರಳುವವರು ತಮ್ಮ ಪ್ರಾಣವನ್ನು ಅಪಾಯಕ್ಕೆ ತಂದುಕೊಳ್ಳುತ್ತಾರೆ’ ಎಂದು ತಿಳಿಸಿದೆ.
ಇಸ್ರೇಲ್‌ನ ಮಿಲಿಟರಿ ಈ ಸೂಚನೆ ನೀಡಿದ್ದು ಗಾಝಾ ಮೇಲಿನ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸುವ ಸುಳಿವು ನೀಡಿದೆ. ಗಾಝಾ ಪಟ್ಟಿಯ ಸುಮಾರು ಅರ್ಧದಷ್ಟು ಜನಸಂಖ್ಯೆ ಉತ್ತರ ಭಾಗದಲ್ಲಿದೆ. ದಕ್ಷಿಣಕ್ಕೆ ತೆರಳುವಂತೆ ಸೂಚನೆ ನೀಡಿದೆ.
ಹಮಾಸ್ ಸುಮಾರು 150 ಇಸ್ರೇಲಿಗರನ್ನು ಒತ್ತೆಯಾಳಾಗಿ ಇರಿಸಿರುವುದರಿಂದ ಅವರನ್ನು ಬಿಡುಗಡೆಗೊಳಿಸುವ ತನಕ ತನ್ನ ದಾಳಿ ನಿಲ್ಲುವುದಿಲ್ಲ ಎಂದು ಇಸ್ರೇಲ್ ಹೇಳಿದೆ.
ಉತ್ತರ ಗಾಝಾದಿಂದ ತೆರಳುವಂತೆ ಜನರಿಗೆ ಇಸ್ರೇಲ್ ನೀಡಿದ ಸೂಚನೆ ಕುರಿತು ಪ್ರತಿಕ್ರಿಯಿಸಿರುವ ವಿಶ್ವ ಸಂಸ್ಥೆಯ ವಕ್ತಾರೆ ಸ್ಟೆಫಾನಿ ದುಜರ್ರಿಕ್, ಇಸ್ರೇಲ್‌ನ ಈ ಆದೇಶ ಜಾರಿಗೊಳಿಸುವುದು ಅಸಾಧ್ಯ ಎಂದಿದ್ದಾರೆ.
Hamas maximizes harm to civilians in Gaza by hiding behind them.
The IDF minimizes harm to civilians in Gaza by dropping endless flyers urging them to leave harms way. pic.twitter.com/zLXmQDj5TT
— Israel Defense Forces (@IDF) October 13, 2023
ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಹಮಾಸ್ ಅನ್ನು ನಾಶಗೈಯ್ಯುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಈಗಾಗಲೇ ಘೋಷಿಸಿದ್ದಾರೆ. ಆದರೆ ಇಸ್ರೇಲ್ ದಾಳಿಯಿಂದಾಗಿ ಗಾಝಾ ಪಟ್ಟಿಯಲ್ಲಿ ಅಪಾರ ಸಾವು ನೋವು ಸಂಭವಿಸಿದ್ದು ಸಾವಿನ ಸಂಖ್ಯೆ 1500 ದಾಟಿದೆ ಹಾಗೂ ಅಗತ್ಯ ಸಾಮಗ್ರಿಗಳ ದಾಸ್ತಾನು ಮುಗಿಯುತ್ತಿದೆ. ಈ ನಡುವೆಯೇ ಈ ರೀತಿಯ ಘೋಷಣೆ ಮಾಡಿದೆ.