- ಸೂರ್ಯನ ಅಧ್ಯಯನಕ್ಕೆ ಆದಿತ್ಯ ಎಲ್-1 ನೌಕೆ ಸೆ.2ಕ್ಕೆ ಉಡಾವಣೆ
- ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ
ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಅನ್ನು ಯಶಸ್ವಿಯಾಗಿ ‘ಸಾಫ್ಟ್ ಲ್ಯಾಂಡಿಂಗ್’ ಮಾಡುವ ಮೂಲಕ ಜಗತ್ತಿನ ಗಮನ ಸೆಳೆದಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮಹತ್ವದ ತನ್ನ ಮುಂದಿನ ಯೋಜನೆಯನ್ನು ಸೋಮವಾರ ಪ್ರಕಟಿಸಿದೆ.
ಸೂರ್ಯನ ಬಗ್ಗೆ ಅಧ್ಯಯನ ನಡೆಸುವ ನಿಟ್ಟಿನಲ್ಲಿ ಆದಿತ್ಯ ಎಲ್-1 ನೌಕೆಯನ್ನು ಇಸ್ರೋ ಕಳಿಸಿಕೊಡಲಿದೆ ಎಂದು ಚಂದ್ರಯಾನ-3 ಯಶಸ್ವಿಯಾದ ಬಳಿಕ ತಿಳಿಸಿತ್ತು. ಈಗ ಈ ಆದಿತ್ಯ ಯೋಜನೆಯ ಉಡಾವಣೆಯ ದಿನಾಂಕ ಹಾಗೂ ಸಮಯವನ್ನು ಇಸ್ರೋ ಟ್ವಿಟರ್ನಲ್ಲಿ ಪ್ರಕಟಿಸಿದೆ.
ಸೋಮವಾರ ಟ್ವೀಟ್ ಮಾಡಿರುವ ಇಸ್ರೋ, ಸೆಪ್ಟೆಂಬರ್ 2ರಂದು ಆದಿತ್ಯ ಎಲ್-1 ನೌಕೆಯನ್ನು ಉಡಾವಣೆ ಮಾಡಲಿದ್ದೇವೆ ಎಂದು ತಿಳಿಸಿದೆ.
ಅಂದು ಬೆಳಗ್ಗೆ 11.50ಕ್ಕೆ ಆಂಧ್ರದ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಇದರ ಉಡಾವಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದೆ.
ವೀಕ್ಷಕರಿಗೂ ನೇರವಾಗಿ ವೀಕ್ಷಿಸಲು ಇಸ್ರೋ ಅವಕಾಶ ಕಲ್ಪಿಸಿದ್ದು, ಅಧಿಕೃತ ವೆಬ್ಸೈಟ್ನಲ್ಲಿ ಹೆಸರು ನೋಂದಣಿ ಮಾಡಿಕೊಂಡು ಉಡಾವಣಾ ಸ್ಥಳವಾದ ಶ್ರೀಹರಿಕೋಟಾಕ್ಕೆ ಬರುವಂತೆ ಆಹ್ವಾನ ನೀಡಿದೆ.
ಸೂರ್ಯನ ಅಧ್ಯಯನಕ್ಕೆ ಸೆಪ್ಟೆಂಬರ್ ಮೊದಲ ವಾರದಲ್ಲಿ ‘ಆದಿತ್ಯ-ಎಲ್1’ ಯೋಜನೆ ಕೈಗೊಳ್ಳಲಿದ್ದು, ಇನ್ನೆರಡು ದಿನಗಳಲ್ಲಿ ದಿನಾಂಕ ಘೋಷಿಸುವುದಾಗಿ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಹೇಳಿದ್ದರು.