ಜಗದೀಶ್ ಶೆಟ್ಟರ್ ಅವರು ಮತ್ತೆ ಬಿಜೆಪಿಗೆ ಸೇರಿರುವ ಬಗ್ಗೆ ಕಾಂಗ್ರೆಸ್ ಪಾಳಯ ಆಕ್ರೋಶ ಹೊರಹಾಕುತ್ತಿದೆ. ಅಲ್ಪಸಂಖ್ಯಾತ ಸಮುದಾಯ ಶೆಟ್ಟರ್ರನ್ನು ಒಪ್ಪಿರಲಿಲ್ಲ, ಹೋಗಿದ್ದು ಒಳ್ಳೆಯದಾಯಿತು ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರೆ, ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಅತಿಯಾದ ಓಲೈಕೆ ಹಾಗೂ ಹಿಂದೂ ವಿರೋಧಿ ನಿಲುವಿನಿಂದ ಬೇಸತ್ತು ಮತ್ತೆ ಬಿಜೆಪಿಗೆ ಬಂದಿದ್ದಾರೆ ಎಂದು ಬಿಜೆಪಿ ಪಾಳಯವು ಸಮರ್ಥನೆ ಮಾಡಿಕೊಳ್ಳುತ್ತಿದೆ.
ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿ ಸೇರ್ಪಡೆಗೊಂಡ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರಾಮೀಣಾಭಿವೃದ್ದಿ, ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ‘ಕೇಂದ್ರ ಸರ್ಕಾರವು ಐಟಿ, ಇಡಿ ಭಯ ತೋರಿಸಿದ್ದರಿಂದ ಶೆಟ್ಟರ್ ಮತ್ತೆ ಬಿಜೆಪಿಗೆ ಹೋಗಿರಬಹುದು’ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾ ಪ್ರವಾಸದಲ್ಲಿರುವ ಉಸ್ತುವಾರಿ ಸಚಿವ ಖರ್ಗೆ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಈ ರೀತಿಯಾಗಿ ಸಂಶಯ ವ್ಯಕ್ತಪಡಿಸಿದ್ದಾರೆ.
“ಜಗದೀಶ್ ಶೆಟ್ಟರ್ ಅವರಿಗೆ ಐಟಿ, ಇಡಿ ಭಯ ತೋರಿಸಿದ್ದರಿಂದ ಅವರು ದಿಢೀರ್ ಆಗಿ ಬಿಜೆಪಿ ಸೇರ್ಪಡೆಯಾಗಿರಬಹುದು. ವಿಪಕ್ಷಗಳ ನಾಯಕರನ್ನು ಹಣಿಯಲು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಐಟಿ, ಇಡಿ, ಸಿಬಿಐಗಳನ್ನು ಅಸ್ತ್ರವಾಗಿ ಬಳಸುತ್ತಿದೆ. ಶೆಟ್ಟರ್ ಅವರನ್ನು ಸೆಳೆಯಲು ಇದೇ ತಂತ್ರ ಅನುಸರಿಸಿರಬಹುದು” ಎಂದು ಹೇಳಿಕೆ ನೀಡಿದ್ದಾರೆ.
“ಜಗದೀಶ್ ಶೆಟ್ಟರ್ ಅವರನ್ನು ನಮ್ಮ ಪಕ್ಷ ಗೌರವಯುತವಾಗಿಯೇ ನಡೆಸಿಕೊಂಡಿತ್ತು. ಈ ಬಗ್ಗೆ ಅವರೇ ಹೇಳಿಕೆ ನೀಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡರೂ ವಿಧಾನಪರಿಷತ್ ಸ್ಥಾನವನ್ನು ನೀಡಲಾಗಿತ್ತು. ಬಿಜೆಪಿಗೆ ಇಡಿ, ಐಟಿ, ಸಿಬಿಐಗಳೇ ಸ್ಟಾರ್ ಕ್ಯಾಂಪೇನರ್‌ಗಳಾಗಿದ್ದಾರೆ. ಇವುಗಳನ್ನು ಬಿಟ್ಟರೆ ಬಿಜೆಪಿಯವರಿಗೆ ಗತಿ ಇಲ್ಲ. ತಾಕತ್ತಿದ್ದರೆ ವಿರೋಧ ಪಕ್ಷಗಳ ನಾಯಕರ ಮೇಲೆ ಇಡಿ, ಐಟಿಗಳನ್ನು ಭೂ ಬಿಡದೇ ಚುನಾವಣೆ ಎದುರಿಸಲಿ ನೋಡೋಣ” ಎಂದು ಸವಾಲು ಹಾಕಿದರು.
“ಎಂತಹ ಭ್ರಷ್ಟ ವ್ಯಕ್ತಿಯೇ ಇರಲಿ, ಆತ ಬಿಜೆಪಿ ಎಂಬ ವಾಷಿಂಗ್ ಮೆಷಿನ್‌ನಲ್ಲಿ ಹಾದು ಹೋದರೆ ಶುಭ್ರನಾಗುತ್ತಾನೆ” ಎಂದು ವ್ಯಂಗ್ಯವಾಡಿದ ಸಚಿವರು, “ಶಾಸಕ ಲಕ್ಷ್ಮಣ ಸವದಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನಮಾನ ನೀಡುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಅದನ್ನು ಮುಖ್ಯಮಂತ್ರಿ ಅವರೇ ನಿರ್ಧಾರ ಮಾಡುತ್ತಾರೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಅಲ್ಪಸಂಖ್ಯಾತ ಸಮುದಾಯ ಶೆಟ್ಟರ್ರನ್ನು ಒಪ್ಪಿರಲಿಲ್ಲ, ಹೋಗಿದ್ದು ಒಳ್ಳೆಯದಾಯಿತು: ಡಿಕೆ ಶಿವಕುಮಾರ್
“ಲಕ್ಷ್ಮಣ ಸವದಿ ಅವರನ್ನು ಬಿಜೆಪಿ ಸೆಳೆಯಲು ಯತ್ನಿಸಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಸವದಿ ಅವರು ಸಹಜವಾಗಿಯೇ ಭೇಟಿ ಮಾಡಿದ್ದಾರೆ. ನಾನೂ ಆಗಾಗ ಶಿವಕುಮಾರ್ ಅವರನ್ನು ಭೇಟಿ ಮಾಡುತ್ತೇನೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ” ಎಂದು ಇದೇ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.