- ಬಿಜೆಪಿಯೊಂದಿಗೆ ಅಧಿಕೃತವಾಗಿ ಮೈತ್ರಿ ಘೋಷಿಸಿದ ಜಾತ್ಯತೀತ ಜನತಾದಳ
- ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಒಂದಂಕೆಗೆ ಇಳಿಯಲಿದೆ ಎಂದ ಸಚಿವ
ಬಿಜೆಪಿ -ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲ ಆಗಲಿದ್ದು, ಇದೀಗ ಜೆಡಿಎಸ್ ಬಿಜೆಪಿ ಬಿ ಟೀಮ್ ಎಂಬುದು ಸಾಬೀತಾಗಿದೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಜೆಡಿಎಸ್, ಬಿಜೆಪಿಯೊಂದಿಗೆ ಅಧಿಕೃತವಾಗಿ ಮೈತ್ರಿ ಘೋಷಿಸಿದ ಬಳಿಕ ಮಾತನಾಡಿದ ಅವರು ಜೆಡಿಎಸ್ ಇನ್ನು ಮುಂದೆ ಜಾತ್ಯತೀತ ಪದ ತೆಗೆಯುವುದು ಸೂಕ್ತ ಎಂದು ಹೇಳಿದರು.
2019ರಲ್ಲಿ ಜೆಡಿಎಸ್ ಜತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿತ್ತು. ನಾವು ಪ್ರತ್ಯೇಕವಾಗಿ ಹೋಗಿದ್ದರೆ ಕನಿಷ್ಠ ಹತ್ತು ಸ್ಥಾನ ಗೆಲ್ಲುತ್ತಿದ್ದೆವು. ಜೆಡಿಎಸ್ ಜತೆ ಹೋಗಿದ್ದಕ್ಕೆ ಒಂದಂಕೆಗೆ ಇಳಿದೆವು. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯವರ ಸ್ಥಿತಿಯೂ ಇದೇ ಆಗಲಿದೆ ಎಂದು ವ್ಯಂಗ್ಯವಾಡಿದರು.
ಕರ್ನಾಟಕದ ಹಿತಕ್ಕಾಗಿ @JanataDal_S & @BJP4India ಮೈತ್ರಿ ವಿಷಯದ ಬಗ್ಗೆ ಕೇಂದ್ರದ ಗೃಹ ಸಚಿವರಾದ ಶ್ರೀ @AmitShah ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ @JPNadda ಅವರೊಂದಿಗೆ ನವದೆಹಲಿಯ ಗೃಹ ಸಚಿವರ ನಿವಾಸದಲ್ಲಿ ಮಹತ್ವದ ಮಾತುಕತೆ ನಡೆಸಲಾಯಿತು.
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) September 22, 2023
ಗೋವಾ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಪ್ರಮೋದ್ ಸಾವಂತ್ @goacm ಅವರು,… pic.twitter.com/pvWwXg6UL8
ಮೈತ್ರಿ ಮಾತುಕತೆಗೆ ರಾಜ್ಯ ಜೆಡಿಎಸ್ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರನ್ನು ಕರೆದಿಲ್ಲ. ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾರೆ ಎಂದು ಕರೆದಿಲ್ಲವೇ ಎಂದು ಸಚಿವರು ಪ್ರಶ್ನಿಸಿದ್ದಾರೆ.
ದೇವೇಗೌಡರ ಬಗ್ಗೆ ನನಗೆ ಅಪಾರ ಗೌರವ ಇದೆ. ಹಿಂದೆ ಬಿಜೆಪಿ ಜತೆ ಸೇರಿ ಸರ್ಕಾರ ಮಾಡಿದ್ದಕ್ಕೆ ನನ್ನ ಒಪ್ಪಿಗೆ ಇರಲಿಲ್ಲ ಎಂದು ಹೇಳಿದ್ದ ಮಾಜಿ ಪ್ರಧಾನಿ ದೇವೇಗೌಡರು ಇದೀಗ ಏನು ಹೇಳುತ್ತಾರೆ. ಮೈತ್ರಿ ಬಗ್ಗೆ ಅವರು ಮೌನ ವಹಿಸಿರುವುದು ಯಾಕೆ ಎಂದು ಝಮೀರ್ ಅಹಮದ್ ಖಾನ್ ಕೇಳಿದರು.
ಜೆಡಿಎಸ್ -ಬಿಜೆಪಿ ಮೈತ್ರಿಯಿಂದ ಇದೀಗ ಕಾಂಗ್ರೆಸ್ ಪಕ್ಷ ಒಂದೇ ಜಾತ್ಯತೀತ ಎಂಬುದು ಸಾಬೀತಾಗಿದೆ. ಯಾವುದೇ ಸಿದ್ಧಾಂತ ಇಲ್ಲದ ಮೈತ್ರಿ ಎಂಬುದು ರಾಜ್ಯದ ಜನತೆಗೂ ಸ್ಪಷ್ಟತೆ ಸಿಕ್ಕಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್‌ಗೆ ಲಾಭ ಆಗಲಿದೆ ಎಂದು ಸಚಿವ ಝಮೀರ್ ಭವಿಷ್ಯ ನುಡಿದಿದ್ದಾರೆ.