ಜಗನ್ vs ನಾಯ್ಡು | 560 ಕೋಟಿ ವೆಚ್ಚದ ‘ರುಷಿಕೊಂಡ ಅರಮನೆ’ ವಿವಾದವೇನು?

Date:

Advertisements

ಆಂಧ್ರಪ್ರದೇಶದ ವಿಶಾಖಪಟ್ಟಣಂನ ಸಮುದ್ರ ತೀರದ ರುಷಿಕೊಂಡ ಬೆಟ್ಟದಲ್ಲಿ ನಿರ್ಮಾಣವಾಗಿರುವ ‘ಅರಮನೆ’ ಈಗ ಚರ್ಚೆಯ ವಸ್ತುವಾಗಿದೆ. ರಾಜ್ಯದಲ್ಲಿ ಸಂಚಲನದ ಬಿರುಗಾಳಿ ಎಬ್ಬಿಸಿದೆ. ಆಂಧ್ರ ಮಾಜಿ ಮುಖ್ಯಮಂತ್ರಿ ಮತ್ತು ವೈಎಸ್‌ಆರ್ ಕಾಂಗ್ರೆಸ್ (ವೈಎಸ್‌ಆರ್‌ಸಿಪಿ) ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅವರು ತಮ್ಮ ‘ವೈಯಕ್ತಿಕ ಅಗತ್ಯ’ಕ್ಕಾಗಿ 560 ಕೋಟಿ ರೂ. ಸರ್ಕಾರಿ ಹಣದಲ್ಲಿ ಅರಮನೆಯನ್ನು ನಿರ್ಮಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಆದರೆ, ಅದು ರಾಜ್ಯ ಪ್ರವಾಸೋದ್ಯಮದ ಉತ್ತೇಜನಕ್ಕಾಗಿ ನಿರ್ಮಿಸಲಾದ ಸರ್ಕಾರಿ ಕಟ್ಟಡಗಳೆಂದು ವೈಎಸ್‌ಆರ್‌ಸಿಪಿ ಹೇಳಿಕೊಂಡಿದೆ. ಆದಾಗ್ಯೂ, ಆ ಅರಮನೆಯೊಳಗಿನ ದುಬಾರಿ ವಸ್ತುಗಳು ಅದು ಪ್ರವಾಸೋದ್ಯಮಕ್ಕೋ ಅಥವಾ ವೈಯಕ್ತಿಕ ಐಷಾರಾಮಿ, ವಿಲಾಸಿ ಜೀವನಕ್ಕೋ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.

ಇತ್ತೀಚೆಗೆ, ಆಂಧ್ರದಲ್ಲಿ ಸರ್ಕಾರ ರಚಿಸಿರುವ ತೆಲುಗು ದೇಶಂ ಪಕ್ಷವು (ಟಿಡಿಪಿ) ಮಾಜಿ ಮುಖ್ಯಮಂತ್ರಿ ಜಗನ್ ಅವರ ವೈಯಕ್ತಿಕ ವಿಲಾಸಿ ಜೀವನಕ್ಕಾಗಿ ರಾಜ್ಯದ ಬೊಕ್ಕಸದಿಂದ ಖರ್ಚು ಮಾಡಿ ‘ರುಷಿಕೊಂಡ ಅರಮನೆ’ ನಿರ್ಮಿಸಲಾಗಿದೆ ಎಂದು ಆಕ್ರಮಣಕಾರಿಯಾಗಿ ಪ್ರಚಾರ ಮಾಡುತ್ತಿದೆ. ಅರಮನೆಯಲ್ಲಿ ಐಷಾರಾಮಿ ಬಾತ್‌ಟಬ್, ದುಬಾರಿ ಪೀಠೋಪಕರಣಗಳು, ಹೈ-ಎಂಡ್ ಸ್ಪಾ ರೂಮ್‌, ಕೆಫೆಟೆರಿಯಾ, ಐಷಾರಾಮಿ ಊಟದ ಕೋಣೆ – ಟೇಬಲ್‌ಗಳು, 12 ಕೋಣೆಗಳು ಹಾಗೂ ಬೃಹತ್ ಸಭಾಂಗಣವನ್ನು ಹೊಂದಿದೆ. ಇಂತಹ ರೆಸಾರ್ಟ್‌ ಯಾವ ಸಾರ್ವಜನಿಕರಿಗೆ ಅವಕಾಶ ನೀಡುತ್ತದೆ, ಸೇವೆ ಒದಗಿಸುತ್ತದೆ ಎಂದು ಟಿಡಿಪಿ ಪ್ರಶ್ನಿಸುತ್ತಿದೆ.

ಅರಮನೆಯನ್ನು ಪ್ರವಾಸೋದ್ಯಮ ಯೋಜನೆಯೆಂದು ಮರೆಮಾಚಲಾಗಿದೆ. ಆದರೆ, ಅದನ್ನು ಮುಖ್ಯವಾಗಿ ಜಗನ್ ಅವರ ವೈಯಕ್ತಿಕ ಬಳಕೆಗಾಗಿ ನಿರ್ಮಾಣ ಮಾಡಲಾಗಿದೆ ಎಂದು ಟಿಡಿಪಿ ಆರೋಪಿಸಿದೆ. ರುಷಿಕೊಂಡ ಬೆಟ್ಟದಲ್ಲಿ ಸರ್ಕಾರ ನಡೆಸುತ್ತಿದ್ದ ‘ಹರಿತಾ ರೆಸಾರ್ಟ್’ ಅನ್ನು ಅಭಿವೃದ್ಧಿ ಪಡಿಸುವುದಾಗಿ 2021ರಲ್ಲಿ ಆಂಧ್ರಪ್ರದೇಶ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಎಪಿಟಿಡಿಸಿ) ನಿರ್ಧರಿಸಿತ್ತು. ವೈಎಸ್‌ಆರ್‌ಸಿಪಿ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವೆಯಾಗಿದ್ದ ಆರ್‌.ಕೆ ರೋಜಾ ಪುನರಾಭಿವೃದ್ಧಿ ಯೋಜನೆಯನ್ನು ಉದ್ಘಾಟಿಸಿದ್ದರು. ಅಂದಿನಿಂದ, ರೆಸಾರ್ಟ್‌ನ ಸುಮಾರು 9.88 ಎಕರೆ ಪ್ರದೇಶದಲ್ಲಿ ಸಾರ್ವಜನಿಕರಿಗೆ ನಿರ್ಬಂಧಿಸಿದ ಸರ್ಕಾರ, ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ ಎಂದು ಹೇಳಿಕೊಂಡಿತ್ತು.

Advertisements

ಆದರೆ, ರುಷಿಕೊಂಡ ಬೆಟ್ಟವನ್ನು ಅಗೆದು, ಗೌಪ್ಯವಾಗಿ ಐಷಾರಾಮಿ ಬಂಗಲೆ ನಿರ್ಮಿಸಲಾಗುತ್ತಿದೆ ಎಂದು ಈ ಹಿಂದೆಯೇ ಟಿಡಿಪಿ ಆರೋಪಿಸಿತ್ತು. ಅಲ್ಲದೆ, ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಮತ್ತು ಜನಸೇನೆಯ ಪವನ್ ಕಲ್ಯಾಣ್ ಅವರು ರೆಸಾರ್ಟ್‌ಗೆ ಭೇಟಿ ನೀಡಿ, ಅಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಹೊರ ಜಗತ್ತಿಗೆ ತೆರೆಯಲು ಮುಂದಾಗಿದ್ದರು. ಆದರೆ, ಅವರಿಗೂ ಪ್ರವೇಶವನ್ನು ನಿರಾಕರಿಸಲಾಗಿತ್ತು. ಅವರು ಬೆಟ್ಟಕ್ಕೆ ಪ್ರವೇಶಿಸದಂತೆ ಜಗನ್ ಸರ್ಕಾರ ತಡೆದಿತ್ತು.

ಇದೀಗ ಸರ್ಕಾರ ಬದಲಾದ ನಂತರ, ರೆಸಾರ್ಟ್‌ಗೆ ಮಾಧ್ಯಮ ಸಿಬ್ಬಂದಿಯೊಂದಿಗೆ ಭೇಟಿ ನೀಡಿದ್ದ ಭೀಮ್ಲಿ ಶಾಸಕ, ಮಾಜಿ ಸಚಿವ ಗಂಟಾ ಶ್ರೀನಿವಾಸ ರಾವ್ ಅವರು ರುಷಿಕೊಂಡ ಅರಮನೆಯ ಚಿತ್ರಣವನ್ನು ಹೊರತಂದರು. ಭವ್ಯ ಬಂಗಲೆ, ಐಷಾರಾಮಿ ಸೌಕರ್ಯಗಳು ಅಲ್ಲಿವೆ ಎಂಬುದನ್ನು ಸಾರ್ವಜನಿಕಗೊಳಿಸಿದರು. ಆದಾಗ್ಯೂ, ಜಗನ್ ರೆಡ್ಡಿ ಮುಖ್ಯಮಂತ್ರಿಯಾಗಿದ್ದಾಗ ಮೂರು ರಾಜಧಾನಿ ಯೋಜನೆಯನ್ನು ಘೋಷಿಸಿತ್ತು. ಅದರಲ್ಲಿ, ವಿಶಾಖಪಟ್ಟಣಂ ಅನ್ನು ಕಾರ್ಯಕಾರಿ ರಾಜಧಾನಿಯನ್ನಾಗಿ ಮಾಡಲು ಉದ್ದೇಶಿಸಿತ್ತು. ಅದನ್ನೇ ಇಟ್ಟುಕೊಂಡು ಸಮಜಾಯಷಿ ನೀಡುತ್ತಿರುವ ವೈಎಸ್‌ಆರ್‌, ‘ವಿಶಾಖಪಟ್ಟಣಂಗೆ ಭೇಟಿ ನೀಡುವ ಪ್ರಧಾನಿ, ರಾಷ್ಟ್ರಪತಿ, ಮುಖ್ಯಮಂತ್ರಿ ಅಥವಾ ಇತರ ಗಣ್ಯರನ್ನು ಇರಿಸಲು ಈ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ’ ಎಂದು ಹೇಳಿಕೊಂಡಿದೆ. ಆ ಸ್ವತ್ತು ಸರ್ಕಾರದ ಆಸ್ತಿ, ಖಾಸಗಿ ಆಸ್ತಿಯಲ್ಲ. ಅದನ್ನು ಸರ್ಕಾರವು ತಮ್ಮ ವಿವೇಚನೆಗೆ ತಕ್ಕಂತೆ ಬಳಸಿಕೊಳ್ಳಬಹುದು ಎಂದು ವಾದಿಸುತ್ತಿದೆ.

 

”ರುಷಿಕೊಂಡ ಅರಮನೆಯಲ್ಲಿ ಜಗನ್ ಮೋಹನ್ ರೆಡ್ಡಿಗೆ ಒದಗಿಸಲಾದ ಐಷಾರಾಮಿ ಸೌಕರ್ಯಗಳು ಆತಂಕಕಾರಿಯಾಗಿವೆ. 560 ಕೋಟಿ ರೂ. ಸರ್ಕಾರಿ ಹಣವನ್ನು ಜಗನ್‌ ಖಾಸಗಿ ಬದುಕಿಗಾಗಿ ವ್ಯಯಿಸಲಾಗಿದೆ. ಈ ವೆಚ್ಚದಲ್ಲಿ ಅಂದಾಜು 40 ಲಕ್ಷ ರೂಪಾಯಿ ಮೌಲ್ಯದ ಬಾತ್‌ಟಬ್ ಮತ್ತು 10 ರಿಂದ 12 ಲಕ್ಷ ರೂಪಾಯಿ ಮೌಲ್ಯದ ಕಮೋಡ್ ಸೇರಿವೆ. ಹೆಚ್ಚುವರಿಯಾಗಿ, ಅರಮನೆಯು ಐಷಾರಾಮಿ ಪೀಠೋಪಕರಣಗಳನ್ನು ಹೊಂದಿದೆ. ಅತ್ಯಾಧುನಿಕ ಮಸಾಜ್ ಟೇಬಲ್ ಇರುವ ಸ್ಪಾ ರೂಮ್ ಅನ್ನು ಹೊಂದಿದೆ” ಎಂದು ಟಿಡಿಪಿ ವಕ್ತಾರ ಪಟ್ಟಾಭಿ ರಾಮ್ ಕೊಮ್ಮರೆಡ್ಡಿ ಹೇಳಿದ್ದಾರೆ.

ಜಗನ್ ವಿರುದ್ಧ ಟಿಡಿಪಿ ಅನಗತ್ಯ ‘ದೂಷಣೆ’ ಮಾಡುತ್ತಿದೆ ಎಂದು ವೈಎಸ್‌ಆರ್‌ಸಿಪಿ ನಾಯಕ ಕನುಮುರಿ ರವಿಚಂದ್ರ ರೆಡ್ಡಿ ಆರೋಪಿಸಿದ್ದಾರೆ. ”ಟಿಡಿಪಿ ನಾಯಕರು ಜನರ ಗಮನವನ್ನು ಬೇರೆಡೆ ಸೆಳೆಯುತ್ತಿದ್ದೀರಿ. ಇದು ಅಗತ್ಯವಿಲ್ಲ. ಜನರು ನಿಮಗೆ (ಟಿಡಿಪಿ) ದೊಡ್ಡ ಜನಾದೇಶವನ್ನು ನೀಡಿದ್ದಾರೆ. ಆದ್ದರಿಂದ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವತ್ತ ಗಮನ ಹರಿಸಿ” ಎಂದು ಅವರು ಹೇಳಿದ್ದಾರೆ.

ಹರಿತಾ ರೆಸಾರ್ಟ್ ಮತ್ತು ರುಷಿಕೊಂಡ ಅರಮನೆ ಕೂಡ ಪರಿಸರ ನಿಯಮಗಳನ್ನು ಉಲ್ಲಂಘಿಸಿರುವ ಕಾರಣ ಪರಿಶೀಲನೆಗೆ ಒಳಪಟ್ಟಿವೆ. ನಿವೃತ್ತ ಅಧಿಕಾರಿ ಇಎಎಸ್ ಶರ್ಮಾ ಅವರು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಯೋಜನೆಗೆ ನೀಡಲಾಗಿರುವ ಕರಾವಳಿ ನಿಯಂತ್ರಣ ವಲಯದ (ಸಿಆರ್‌ಝಡ್) ಅನುಮತಿ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.

ಜಗನ್ ಅವರ ಸಹೋದರಿ ಮತ್ತು ರಾಜಕೀಯ ಪ್ರತಿಸ್ಪರ್ಧಿಯಾಗಿರುವ ಆಂಧ್ರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ವೈ.ಎಸ್ ಶರ್ಮಿಳಾ ಅವರು ಆರೋಪಗಳಿಗೆ ಪ್ರತಿಕ್ರಿಯಿಸುತ್ತಾ, ”ರುಷಿಕೊಂಡ ಅರಮನೆಗೆ ಜನರ ಹಣವನ್ನು ಖರ್ಚು ಮಾಡಿದ್ದರೆ, ಅದನ್ನು ಕ್ಷಮಿಸಲಾಗುವುದಿಲ್ಲ. ಸರ್ಕಾರದ ಬೊಕ್ಕಸವನ್ನು ಯಾಕೆ ಬಳಸಲಾಗಿದೆ ಎಂಬುದು ಜನರಿಗೆ ತಿಳಿದಿರಬೇಕು. ಈ ಬಗ್ಗೆ ಹಾಲಿ ನ್ಯಾಯಾಧೀಶರಿಂದ ವಿಚಾರಣೆ ನಡೆಸಿದರೆ ಸತ್ಯಾಂಶ ಹೊರಬರಲಿದೆ. ವೈಎಸ್‌ಆರ್‌ಸಿಪಿ ಸರ್ಕಾರವು 8 ಲಕ್ಷ ಕೋಟಿ ರೂಪಾಯಿ ಸಾಲ ತೆಗೆದುಕೊಂಡಿದೆ. ಇಂತಹ ಸಂದರ್ಭದಲ್ಲಿ, ಈ ರೀತಿ ಹಣವನ್ನು ಖರ್ಚು ಮಾಡುವುದನ್ನು ಕ್ಷಮಿಸಲಾಗುವುದಿಲ್ಲ” ಎಂದಿದ್ದಾರೆ.

“ಇದು ರೆಸಾರ್ಟ್‌ ಆಗಿರಲಿ ಅಥವಾ ಸರ್ಕಾರಿ ಆಸ್ತಿಯಾಗಿರಲಿ. ಇಡೀ ಯೋಜನೆಯಲ್ಲಿ ಪಾರದರ್ಶಕತೆಯ ಕೊರತೆ ಇದ್ದು ಕಾಣುತ್ತಿದೆ. ಇದು ಗಮನಿಸಬೇಕಾದ ಪ್ರಮುಖ ಅಂಶ. ಬೆಟ್ಟದ ಮೇಲಿನ ಕಡಲತೀರದ ಉದ್ದಕ್ಕೂ ರೆಸಾರ್ಟ್‌ ಅಥವಾ ಅರಮನೆ ನಿರ್ಮಿಸಿರುವುದು ಪರಿಸರ ಮತ್ತು ಸಿಆರ್‌ಝಡ್‌ ಮಾನದಂಡಗಳನ್ನು ಉಲ್ಲಂಘಿಸಿವೆ. ಈ ಉಲ್ಲಂಘನೆಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಬದಲಾಗಿ ರಾಜಕೀಯ ಕೆಸರೆರಚಾಟದಲ್ಲಿ ತೊಡಗಿದ್ದಾರೆ” ಎಂದು ಪರಿಸರ ಕಾರ್ಯಕರ್ತ ಗಂಜಿವರಪು ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರುಷಿಕೊಂಡ ಅರಮನೆಯ ವಿವಾದ ಚರ್ಚೆಯಲ್ಲಿರುವಾಗಲೇ ಗುಂಟೂರು ಜಿಲ್ಲೆಯ ಸೀತಾನಗರಂನಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಕಚೇರಿಗಾಗಿ ನಿರ್ಮಾಣ ಹಂತದಲ್ಲಿರುವ ಕಟ್ಟಡವನ್ನು ತಾಡೆಪಲ್ಲಿ ಪಾಲಿಕೆಯ ಅಧಿಕಾರಿಗಳು ಶನಿವಾರ ಬೆಳಗ್ಗೆ ನೆಲಸಮ ಮಾಡಿದ್ದಾರೆ.

ಆ ಕಟ್ಟಡವು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ನಿವಾಸದಿಂದ ಟಿಡಿಪಿ ಕಚೇರಿಗೆ ಹೋಗುವ ಮಾರ್ಗದ ಮಧ್ಯದಲ್ಲಿತ್ತು. ಕಟ್ಟಡದ ಧ್ವಂಸವನ್ನು ಜಗನ್ ರೆಡ್ಡಿ ಖಂಡಿಸಿದ್ದು, ‘ಇದು ಆಡಳಿತಾರೂಢ ಟಿಡಿಪಿಯ ವಿನಾಶಕಾರಿ ಸೇಡಿನ ರಾಜಕಾರಣ’ ಎಂದಿದ್ದಾರೆ. ಆದರೆ, ಕಟ್ಟಡವನ್ನು ಅಕ್ರಮವಾಗಿ ನಿರ್ಮಾಣ ಮಾಡಲಾಗುತ್ತಿತ್ತು. ಹಾಗಾಗಿ, ಕೆಡವಲಾಗಿದೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ಒಟ್ಟಿನಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ಅಧಿಕಾರಸ್ಥರು ದುರುಪಯೋಗಪಡಿಸಿಕೊಳ್ಳುವುದು ಆಂಧ್ರದಲ್ಲಿ ನಿರಂತರವಾಗಿ ನಡೆಯುತ್ತಲೇ ಇದೆ. ಹಾಗೆಯೇ ಒಬ್ಬರ ಮೇಲೊಬ್ಬರು ದೂರುವುದು ಸಹ ಸಾಮಾನ್ಯವಾಗಿದೆ. ಹಾಗಾದರೆ ಸತ್ಯಸಂಧರು ಯಾರು?

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಕಟ್ಟಡಗಳನ್ನು ಕೆಡುವುದರ ಬದಲು ಸಾರ‍್ವಜನಿಕರ ಒಳಿತಿಗೆ ಬಳಸಿಕೊಂಡು ಅಪಾರ ನಯ್ಸರ್ಗಿಕ ಸಂಪನ್ಮೂಲಗಳ ಪೋಲನ್ನು ತಡೆಯಬೇಕು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X