ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆ ಆರೋಪಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಮುಂದಿನ ದಿನದಲ್ಲಿ ಇಂತಹ ಕೃತ್ಯ ಮರುಕಳಿಸದಂತೆ ನೋಡಿಕೊಳ್ಳುತ್ತೇವೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಭರವಸೆ ನೀಡಿದ್ದಾರೆ.
ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ಪ್ರಕರಣ ಸಂಬಂಧ ಹುಬ್ಬಳ್ಳಿಯಲ್ಲಿ ಗೃಹ ಇಲಾಖೆ ಸಚಿವ ಡಾ. ಜಿ ಪರಮೇಶ್ವರ್ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.
ಈ ಪ್ರಕರಣದಲ್ಲಿ ಯಾರೂ ರಾಜಕೀಯ, ತಾರತಮ್ಯ ಮಾಡುವುದಿಲ್ಲ. ಜೈನಮುನಿ ಹತ್ಯೆ ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ನಮ್ಮ ಇಲಾಖೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ದಿನದಲ್ಲಿ ಇಂತಹ ಕೃತ್ಯ ಮರುಕಳಿಸದಂತೆ ಎಚ್ಚರ ವಹಿಸಲಾಗುವುದು ಎಂದು ಹೇಳಿದ್ದಾರೆ.
ಅಪರಾಧಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಇದೆ. ಇದು ಸ್ವಾಭಾವಿಕ ಪದ್ದತಿ, ಇದರಲ್ಲಿ ತಾರತಮ್ಯ ಪ್ರಶ್ನೆ ಇಲ್ಲ. ಘಟನೆ ಆದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. ವರೂರಲ್ಲಿ ಜೈನ ಮುನಿಗಳು ಉಪವಾಸ ಕುಳಿತಿದ್ದಾರೆ. ಅವರ ಬೇಡಿಕೆ ಕೇಳುತ್ತೇನೆ ಎಂದರು.
ನಮ್ಮ ಗೃಹ ಇಲಾಖೆ ಸಮರ್ಥವಾಗಿದೆ. ಆರೋಪಿಗಳು ಪೊಲೀಸರ ವಶದಲ್ಲಿದ್ದು ತನಿಖೆ ಶುರುವಾಗಿದೆ. ಪ್ರಕರಣವನ್ನು ಸಿಬಿಐಗೆ ನೀಡುವ ಅಗತ್ಯ ಇಲ್ಲ. ಗೃಹ ಇಲಾಖೆಯೇ ಸಮರ್ಥವಾಗಿದೆ. ನಮ್ಮ ಇಲಾಖೆಯ ತನಿಖೆ ಮುಗಿದ ಬಳಿಕ ಸತ್ಯಾಸತ್ಯತೆ ಗೊತ್ತಾಗಲಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಆಗಲಿದೆ ಎಂದು ತಿಳಿಸಿದರು.
ಸುಮ್ಮನೆ ನಮ್ಮ ವಿರುದ್ಧ ಅಪವಾದ ಹೊರಿಸುವ ಬಿಜೆಪಿಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಆಗುತ್ತಿಲ್ಲ. ಅವರಲ್ಲಿ ಆಂತರಿಕ ಒಳಜಗಳ ಇದೆ. ಅವರಿಗೆ ಎಷ್ಟರ ಮಟ್ಟಿಗೆ ಜವಾಬ್ದಾರಿ ಇದೆ ಎಂಬುದನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ ಎಂದು ಹೇಳಿದರು.
ಉಗ್ರಗಾಮಿಗಳ ಕೈವಾಡ ಇದೆ: ಬಿಜೆಪಿ ಶಾಸಕ ಸಿದ್ದು ಸವದಿ
“ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡನೀಯ. ಜೈನ ಮುನಿಗಳ ಹತ್ಯೆ ಪ್ರಕರಣದ ಹಿಂದೆ ಐಸೀಸ್ ಚಿತಾವಣೆ ಇದೆ. ಇದರ ಹಿಂದೆ ಉಗ್ರಗಾಮಿಗಳ ಕೈವಾಡ ಇದೆ” ಎಂದು ಬಿಜೆಪಿ ಶಾಸಕ ಸಿದ್ದು ಸವದಿ ಆರೋಪಿಸಿದ್ದಾರೆ.
ಈ ಕುರಿತು ಸೋಮವಾರ ವಿಧಾನಸೌಧದಲ್ಲಿ ಸುದ್ದಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, “ಜೈನ ಮುನಿಗಳನ್ನು ಚಿತ್ರಹಿಂಸೆ ಮಾಡಿ ಕರೆಂಟ್ ಶಾಕ್ ಕೊಟ್ಟು ಕೊಂದಿದ್ದಾರೆ. ಇದರ ಹಿಂದೆ ಉಗ್ರಗಾಮಿಗಳ ಕೈವಾಡ ಇದೆ. ಇನ್ನು ಭಯಾನಕ ಘಟನೆ ಭವಿಷ್ಯದಲ್ಲಿ ಕಾಣುವ ಆತಂಕ ಇದೆ. ಇದರ ಹಿಂದೆ ಐಸೀಸ್ ಉಗ್ರರ ಚಿತಾವಣೆ ಇದೆ, ಆದರೆ ಸರ್ಕಾರದ ನಡೆ ಸಂಶಯಾಸ್ಪದವಾಗಿದೆ” ಎಂದು ಹೇಳಿದರು.
“ಸರ್ವ ಸಂಗ ತ್ಯಾಗ ಮಾಡಿದ ಮುನಿಗಳ ಹತ್ಯೆಯ ಹಿಂದೆ ಪಿತೂರಿ ಇದೆ. ಜೈನ ಮುನಿಗಳ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ನೀಡಬೇಕು ಆಗ ಸಂಪೂರ್ಣ ಸತ್ಯ ಹೊರ ಬರುತ್ತದೆ. ಸ್ವಾಮಿಗಳು ಆರ್ಥಿಕ ವ್ಯವಹಾರ ಮಾಡಿರುವ ಸಾಧ್ಯತೆ ಇಲ್ಲ, ಭಕ್ತರು ಆರ್ಥಿಕ ವ್ಯವಹಾರ ಮಾಡಿರಬಹುದು. ಇದರ ಹಿಂದೆ ಪಿತೂರಿ ಇದೆ. ಸಂಸ್ಕಾರ ಕೊಡುವ ಮುನಿಗಳು ಆರ್ಥಿಕ ವ್ಯವಹಾರ ಮಾಡುವ ಸಾಧ್ಯವಿಲ್ಲ. ಸರ್ಕಾರ ಮುಚ್ಚಿಡುವ ಯತ್ನ ಮಾಡುತ್ತಿದೆ. ಎಲ್ಲಾ ಮುನಿಗಳಿಗೆ ರಕ್ಷಣೆ ನೀಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ, ಬೀದರ್ ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರಗಳಾಗಿ ಘೋಷಿಸಿದ ಸಚಿವ ಈಶ್ವರ ಖಂಡ್ರೆ
ಜೈನಮುನಿ ಹತ್ಯೆ ಖಂಡಿಸಿ ಸದನದಲ್ಲಿ ಹೋರಾಟ: ಬಸವರಾಜ ಬೊಮ್ಮಾಯಿ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡಿಸಿ ಸೋಮವಾರ ವಿಧಾನಸಭೆಯ ಒಳಗೆ ಹೋರಾಟ ನಡೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸ್ವಾಮೀಜಿಯ ಅಮಾನವೀಯ ಕೊಲೆ ಖಂಡಿಸಿ ಅನ್ನ ನೀರು ಬಿಟ್ಟು ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹುಬ್ಬಳ್ಳಿಯ ವರೂರು ಶ್ರೀಕ್ಷೇತ್ರದ ಶ್ರೀ ಗುಣಧರ ನಂದಿ ಮಹಾರಾಜರಿಗೆ ದೂರವಾಣಿ ಮೂಲಕ ಮಾತನಾಡಿ ಈ ಘಟನೆಯನ್ನು ಉಗ್ರವಾಗಿ ಖಂಡಿಸಿರುವುದಾಗಿ ತಿಳಿಸಿದ್ದಾರೆ.
ಅಲ್ಲದೇ ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಸರ್ಕಾರಕ್ಕೆ ಆಗ್ರಹಿಸಿರುವುದಾಗಿ ತಿಳಿಸಿದ ಬೊಮ್ಮಾಯಿ, ಹತ್ಯೆಯನ್ನು ಖಂಡಿಸಿ, ಉನ್ನತ ಮಟ್ಟದ ತನಿಖೆ ನಡೆಸುವಂತೆ ಸೋಮವಾರ ವಿಧಾನಸಭೆಯಲ್ಲಿ ಹೋರಾಟ ಮಾಡುವುದಾಗಿ ಬಸವರಾಜ ಬೊಮ್ಮಾಯಿ ಸ್ವಾಮೀಜಿಗೆ ತಿಳಿಸಿದ್ದಾರೆ.