ರಾಜ್ಯ ಸರ್ಕಾರಗಳು ಅಶಿಸ್ತಿನಿಂದ ವರ್ತಿಸುವ ಮತ್ತು ಬೇಜವಾಬ್ದಾರಿಯ ಕೆಲಸ ಮಾಡುವ ಸಿಬ್ಬಂದಿಗಳ ಮೇಲೆ ಹೊಣೆಗಾರಿಕೆಯನ್ನು ನಿಗದಿ ಮಾಡಿ ಶಿಸ್ತು ಕ್ರಮ ಕೈಗೊಳ್ಳದೇ ಹೋದರೆ ಸಾರ್ವಜನಿಕ ಹಿತಾಸಕ್ತಿಯಿಂದ ತಾವು ಕೈಗೊಂಡಿರುವ ಜನತಾ ದರ್ಶನದಲ್ಲಿ ಸಾರ್ವಜನಿಕ ಅರ್ಜಿಗಳ ಮತ್ತು ದೂರುಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ. ಆಡಳಿತ ಯಂತ್ರಕ್ಕೆ ನಿಯಮಾವಳಿಗಳ ಮುಖಾಂತರ ಚುರುಕು ಮುಟ್ಟಿಸಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ವಿಧಾನ ಪರಿಷತ್ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ರಮೇಶ್ ಬಾಬು ಪತ್ರದ ಮೂಲಕ ಮನವಿ ಮಾಡಿದ್ದಾರೆ.
ನ.27ರಂದು ನಡೆದ ಜನತಾ ದರ್ಶನದ ವೇಳೆ ಅಧಿಕಾರಿಗಳ ದೂರುಗಳ ಸರಮಾಲೆ ಬಂದ ಹಿನ್ನೆಲೆಯಲ್ಲಿ ರಮೇಶ್ ಬಾಬು ಈ ಪತ್ರ ಬರೆದಿದ್ದಾರೆ.
“ಆಡಳಿತ ಯಂತ್ರಕ್ಕೆ ನಿಯಮಾವಳಿಗಳ ಮುಖಾಂತರ ಚುರುಕು ಮುಟ್ಟಿಸದೇ ಹೋದರೆ ಜನಸಾಮಾನ್ಯರು ಪ್ರತೀ ದಿನ ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿ ಆಡಳಿತ ಮತ್ತು ಸಿಬ್ಬಂದಿ ಇಲಾಖೆಯ ಮುಖಾಂತರ ರಾಜ್ಯ ಸರ್ಕಾರದ ಸರ್ಕಾರೀ ನೌಕರರ ಸೇವಾ ನಿಯಮಗಳಿಗೆ ತಿದ್ದುಪಡಿ ತಂದು ಇಂತಹ ಸಿಬ್ಬಂದಿಗೆ ಹೊಣೆಗಾರಿಕೆ ನಿಗದಿಪಡಿಸುವುದರ ಜೊತೆಗೆ ಶೀಘ್ರ ಕ್ರಮ ಕೈಗೊಳ್ಳಿ” ಎಂದು ಪತ್ರದಲ್ಲಿ ವಿನಂತಿಸಿದ್ದಾರೆ.
“ತಮ್ಮ ನಾಯಕತ್ವದಲ್ಲಿ ನ.27ರಂದು ನಡೆದ ಜನತಾದರ್ಶನ ಕಾರ್ಯಕ್ರಮವು ಅತ್ಯಂತ ಸಮರ್ಪಕವಾಗಿ ಮತ್ತು ಯಶಸ್ವಿಯಾಗಿ ನಡೆದಿದೆ. ರಾಜ್ಯದ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿರುವ ಮುಖ್ಯಮಂತ್ರಿಗಳನ್ನು ನೇರ ಭೇಟಿಯಾದರೆ ತಮ್ಮ ಸಮಸ್ಯೆ ಬಗೆಹರಿಯಬಹುದು ಮತ್ತು ರಾಜ್ಯದ ಮುಖ್ಯಮಂತ್ರಿಗಳನ್ನು ಭೇಟಿಯಾಗುವ ಅವಕಾಶದ ಕಾರಣಕ್ಕೂ ಜನಸಾಮಾನ್ಯರು ಜನತಾ ದರ್ಶನವನ್ನು ಬಯಸುತ್ತಾರೆ. ದೂರದ ಹಳ್ಳಿಗಳಿಂದ ಬೆಂಗಳೂರಿಗೆ ಬಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡುವುದು ಕಷ್ಟವಾದರೂ ಸಮಸ್ಯೆಗೆ ಪರಿಹಾರ ಬಯಸಿ ಮತ್ತು ಮುಖ್ಯಮಂತ್ರಿಗಳಲ್ಲಿ ವಿಶ್ವಾಸ ಇಟ್ಟು ಅತಿ ದೊಡ್ಡ ಸಂಖ್ಯೆಯಲ್ಲಿ ಜನತಾ ದರ್ಶನದ ಅವಕಾಶವನ್ನು ಬಳಸಿಕೊಂಡಿದ್ದಾರೆ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ರಾಜ್ಯ ಸರ್ಕಾರಕ್ಕೆ ಬಂದಿರುವ ಬಹುತೇಕ ಅರ್ಜಿಗಳಲ್ಲಿ ಕೆಳ ಹಂತದ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಉಡಾಫೆಯ ವರ್ತನೆ ನಿಚ್ಚಳವಾಗಿ ಕಾಣುತ್ತಿದೆ. ವಿಶೇಷವಾಗಿ ಕಾರ್ಯಾಂಗದಲ್ಲಿ ಸಹಾಯಕ ಸಿಬ್ಬಂದಿ ನೆಪಗಳನ್ನು ಹೇಳಿ ಟಿಪ್ಪಣಿಗಳನ್ನು ಮುಂದೊಡ್ಡಿ ಜನಸಾಮಾನ್ಯರನ್ನು ಅಲೆಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಸಕಾಲ ಕಾಯಿದೆ ಜಾರಿಯಲ್ಲಿ ಇದ್ದರೂ ಅದನ್ನೂ ತಪ್ಪಿಸಿ ಜನರಿಗೆ ಸಬೂಬುಗಳನ್ನು ನೀಡಿ ದಿನನಿತ್ಯ ಅಲೆಸುವುದನ್ನು ಪರಿಪಾಠ ಮಾಡಿಕೊಂಡಿರುತ್ತಾರೆ. ಜನಸಾಮಾನ್ಯರಿಗೆ ನಿಗದಿತ ಸಮಯದಲ್ಲಿ ಅವರ ಕೆಲಸಗಳನ್ನು ಮಾಡಿಕೊಟ್ಟರೆ ಅವರು ಬೆಂಗಳೂರಿಗೆ ಅಲೆಯುವ ಅಥವಾ ಮುಖ್ಯಮಂತ್ರಿಗಳಿಗೆ, ಮಂತ್ರಿಗಳಿಗೆ ಭೇಟಿ ಮಾಡುವ ಅನಿವಾರ್ಯತೆ ತಪ್ಪುತ್ತದೆ. ಸಹಾಯಕ ಸಿಬ್ಬಂದಿಯಿಂದ ಸಾರ್ವಜನಿಕರ ಕೆಲಸಗಳಿಗೆ ಅಡ್ಡಿಯಾದರೆ ಅಥವಾ ನಿಧಾನವಾದರೆ ಅಂತಹ ಸಿಬ್ಬಂದಿಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳಲು ಮತ್ತು ಅಂತಹ ಸಿಬ್ಬಂದಿಗೆ ಕೂಡಲೇ ಶಿಕ್ಷೆ ವಿಧಿಸಲು ಸೇವಾ ನಿಯಮಗಳಲ್ಲಿ ಅವಕಾಶ ಇರುವುದಿಲ್ಲ. ನೈಸರ್ಗಿಕ ನಿಯಮದ ಕಾನೂನಿನ ಲಾಭವನ್ನು ಪಡೆದು ಬಹುತೇಕ ಸಹಾಯಕ ಸಿಬ್ಬಂದಿ ಶಿಸ್ತು ಕ್ರಮದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಹಾಗಾಗಿ, ಆಡಳಿತ ಯಂತ್ರಕ್ಕೆ ನಿಯಮಾವಳಿಗಳ ಮುಖಾಂತರ ಚುರುಕು ಮುಟ್ಟಿಸಿ” ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ಕಾಂಗ್ರೆಸ್ ಮುಖಂಡ ರಮೇಶ್ ಬಾಬು ವಿನಂತಿಸಿಕೊಂಡಿದ್ದಾರೆ.