ಈಗಲಾದರೂ ಚರ್ಚೆಗೆ ಬರುತ್ತದೆಯೇ ಪ್ರಾದೇಶಿಕ ಅಸಮಾನತೆ ಕೂಗು

Date:

ಕರ್ನಾಟಕ ಏಕೀಕರಣವಾಗಿ ಅರ್ಧ ಶತಮಾನ ಕಳೆದರೂ ಇಡೀ ಕರ್ನಾಟಕವನ್ನು ಸಮಗ್ರವಾಗಿ ಅಭಿವೃದ್ಧಿಯ ಪಥದಲ್ಲಿ ಸಾಗಿಸುವಲ್ಲಿ ವಿಫಲವಾಗಿರುವುದನ್ನು ಯಾರೂ ಅಲ್ಲಗಳೆಯಲಾಗದು. ಇದಕ್ಕೆ ಮೂಲ ಕಾರಣ ಪ್ರಾದೇಶಿಕ ಅಸಮಾನತೆ ಎಂದು ಹೇಳಿದರೂ ತಪ್ಪಾಗಲಾರದು.

ಹಲವು ವಿಷಯಗಳಲ್ಲಿ ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕ ಹಿಂದೆ ಇರುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ದೇಶದಲ್ಲಿ ಪ್ರಾದೇಶಿಕ ಅಸಮಾನತೆ ಎಂಬುದು ಹಲವೆಡೆ ಇದ್ದೇ ಇದೆ, ಪ್ರದೇಶ ಪ್ರದೇಶಗಳ ನಡುವೆ, ಜಿಲ್ಲೆ ಜಿಲ್ಲೆಗಳ ಮಧ್ಯೆ ಅಭಿವೃದ್ಧಿಯಲ್ಲಿ ಭಿನ್ನತೆ ಕಾಣಿಸಿಕೊಂಡ ಕಾರಣಕ್ಕೆ ಪ್ರಾದೇಶಿಕ ಅಸಮಾನತೆ ಕೂಗು ಸಹಜವಾಗಿ ಕೇಳಿ ಬರುತ್ತದೆ. ಇದೇ ಪರಿಸ್ಥಿತಿ ಕರ್ನಾಟಕದಲ್ಲಿಯೂ ಇದೆ ಎಂಬುದು ನಮಗೆ ಗೊತ್ತಿದೆ.

1956ರಲ್ಲಿ ಕರ್ನಾಟಕ ಏಕೀಕರಣವಾಯಿತು, ಆವಾಗ ಬೇರೆ ಬೇರೆ ಸಂಸ್ಥಾನದ ಅಡಿಯಲ್ಲಿ ಇರುವ ಬೇರೆ ಬೇರೆ ಪ್ರಾಂತ್ಯಗಳು ಸೇರಿ ಕರ್ನಾಟಕ ಅಂತ ಆಯ್ತು. ಕರ್ನಾಟಕದ ರಾಜಧಾನಿ ದಕ್ಷಿಣ ಭಾಗದಲ್ಲಿ ಇತ್ತು.ರಾಜ್ಯ ಪುನರ್ ವಿಂಗಡಣೆ ಸಂದರ್ಭದಲ್ಲಿ ಬೇರೆ ಬೇರೆ ಪ್ರಾಂತ್ಯಗಳು ತಮ್ಮದೇ ಆದ ವಿಶೇಷತೆ ಹೊಂದಿದ್ದವು, ಮುಂಬೈ ಕರ್ನಾಟಕ ಶಿಕ್ಷಣದಲ್ಲಿ ಮೈಸೂರಿಗಿಂತ ಶಿಕ್ಷಣದಲ್ಲಿ ಮುಂದುವರೆದರೆ, ಹೈದರಾಬಾದ್ ಕರ್ನಾಟಕ ಕೃಷಿ ವಿಸ್ತರಣೆ ಮಾಡಿ ಇಡೀ ರಾಜ್ಯಕ್ಕೆ ಆಹಾರ ಉತ್ಪಾದಿಸುವ ಸಾಧ್ಯತೆಗಳಿದ್ದವು, ಆದರೆ ಹೈದ್ರಾಬಾದ್ ಕರ್ನಾಟಕ ಮೊದಲಿನಿಂದಲೂ ಹಿಂದುಳಿದ ಪ್ರದೇಶ ಆಗಿರಲಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕರ್ನಾಟಕ ಏಕೀಕರಣ ನಂತರ ಬೆಂಗಳೂರು ಕೇಂದ್ರಿತ ಅಭಿವೃದ್ಧಿ ವೇಗವಾಗಿ ನಡೆಯಿತು. ಹೈದ್ರಾಬಾದ್ ಕರ್ನಾಟಕ ಸೇರಿದಂತೆ ಯಾವ ಭಾಗದವರು ಆಡಳಿತ ನಡೆಸಿದರೂ ದಕ್ಷಿಣ ಭಾಗದ ರಾಜಧಾನಿ ಬೆಂಗಳೂರು ಕೇಂದ್ರಿತವಾಗಿಯೇ ಅಭಿವೃದ್ಧಿ ಕಾರ್ಯಗಳು ನಡೆದವು. ಹೀಗಾಗಿ ಕರ್ನಾಟಕದ ಏಕೀಕರಣವಾದ ದಿನದಿಂದಲೂ ಉತ್ತರ ಕರ್ನಾಟಕದವರು ನಿರಂತರವಾಗಿ ಅನ್ಯಾಯಕ್ಕೆ ಒಳಗಾಗುತ್ತಲೇ ಬಂದಿದ್ದಾರೆ. ಕರ್ನಾಟಕದ ರಾಜಧಾನಿಯನ್ನಾಗಿ ಬೆಂಗಳೂರನ್ನು ಆಯ್ಕೆ ಮಾಡಿದ್ದು ವೈಜ್ಞಾನಿಕವಾಗಿ ಸರಿಯಿಲ್ಲ ಎಂಬ ಅವರ ಕೂಗಿಗೆ ನ್ಯಾಯ ಸಿಗಲೇ ಇಲ್ಲ. ಅಲ್ಲಿಂದ ಆರಂಭವಾದ ಅಸಮಾನತೆ ಕೂಗು ಅರ್ಧ ಶತಮಾನ ಕಳೆದರೂ ಇಂದಿಗೂ ಮುಂದುವರೆದಿದೆ.

ರಾಜ್ಯದ ಅಭಿವೃದ್ಧಿ ಕಲ್ಪನೆ ಬೆಂಗಳೂರು ಕೇಂದ್ರಿತವಾಗಿಯೇ ಮುಂದುವರೆದು ಇತರೆ ಭಾಗಗಳಿಗೆ ಕಡೆಗಣಿಸಲಾಗುತ್ತಿದೆ ಎಂದು ಮನಗಂಡು ಅಖಂಡ ಕರ್ನಾಟಕ ಭಾಗವಾಗಿದಕ್ಕೆ ನಾವು ಹಿಂದುಳಿದಿದ್ದೇವೆ, ಅಭಿವೃದ್ಧಿ ಯೋಜನೆಗಳಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ತಾರತಮ್ಯ ಮಾಡಲಾಗುತ್ತಿದೆ ಎಂಬುದು ಬಲವಾದ ಧ್ವನಿ ಅಂದಿನಿಂದಲೂ ಇದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಅಗತ್ಯ ಶಿಫಾರಸುಗಳನ್ನು ಮಾಡುವುದಕ್ಕಾಗಿ 2002ರಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ವೇಳೆ ಡಾ. ನಂಜುಂಡಪ್ಪ ಆಯೋಗ ರಚಿಸಲಾಯಿತು.

ನಂಜುಂಡಪ್ಪ ನೇತೃತ್ವದ ಸಮಿತಿ ರಾಜ್ಯದಲ್ಲಿ ಎಂಟು ವರ್ಷಗಳ ಕಾಲ ರಾಜ್ಯಾದಂತ ಸಂಚರಿಸಿ ಒಟ್ಟು 175 ತಾಲೂಕಿನಲ್ಲಿ 114 ಹಿಂದುಳಿದ ತಾಲೂಕುಗಳೆಂದು ಗುರುತಿಸಿತು. ವಿಶೇಷ ಅನುದಾನ ಮೀಸಲಿಟ್ಟು ಅದನ್ನು ಸಮರ್ಪಕವಾಗಿ ಬಳಸಿದರೆ ರಾಜ್ಯದಲ್ಲಿ ಇರುವ ಪ್ರಾದೇಶಿಕ ಅಸಮಾನತೆ ಹೋಗಲಾಡಿಸಬಹುದು ಎಂದು ಆ ಸಮಿತಿ ಶಿಫಾರಸು ಮಾಡಿತು. ಇನ್ನೊಂದು ವಿಷಯ ಏನೆಂದರೆ ಉತ್ತರ ಕರ್ನಾಟಕದ ಜಿಲ್ಲೆಗಳು ಮಾತ್ರವಲ್ಲ, ಹಳೆಯ ಮೈಸೂರಿನ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರಿನ ಕೆಲ ಭಾಗಗಳು ಹಿಂದುಳಿದ ಪ್ರದೇಶಗಳೆಂದು ನಂಜುಂಡಪ್ಪ ಆಯೋಗದ ವರದಿ ತಿಳಿಸಿತು.

ಡಿ.ಎನ್. ನಂಜುಂಡಪ್ಪ ವರದಿಯ ಪ್ರಕಾರ ರಾಜ್ಯದ ಒಟ್ಟು 175 ತಾಲೂಕುಗಳ ಪೈಕಿ ಶೇ.65% ಅಂದ್ರೆ 175 ರಲ್ಲಿ 114 ತಾಲೂಕು ಹಿಂದುಳಿದಿದ್ದು, ಅದರಲ್ಲಿ ಅತ್ಯಂತ ಹಿಂದುಳಿದ ತಾಲ್ಲೂಕು 39, ಅತಿ ಹಿಂದುಳಿದ ತಾಲ್ಲೂಕು 40 ಹಾಗೂ ಹಿಂದುಳಿದ ತಾಲ್ಲೂಕು 35 ಎಂದು ಮೂರು ಭಾಗವಾಗಿ ವರ್ಗೀಕರಿಸಿತು. ಅದರಲ್ಲಿ ಅತ್ಯಂತ ಹಿಂದುಳಿದ ಒಟ್ಟು 39 ತಾಲೂಕಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ್ದೇ 21 ತಾಲೂಕುಗಳಿವೆ. ಅಂದ್ರೆ ಶೇ.60% ಕ್ಕಿಂತ ಹೆಚ್ಚು ಭಾಗ ಹಿಂದುಳಿದುರುವಿಕೆ ಎಂದರ್ಥ. ಇದರಲ್ಲಿ ಉತ್ತರ ಭಾಗದ 26, ಹಾಗೂ ದಕ್ಷಿಣ ಭಾಗದ 13 ತಾಲೂಕು ಅತ್ಯಂತ ಹಿಂದುಳಿದಿವೆ.

ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ತಮ್ಮ ಪ್ರದೇಶ ಹಿಂದುಳಿದಿರುವುದು ಮಾತ್ರವಲ್ಲದೆ ಸಾರ್ವಜನಿಕ ಸೇವೆ, ಮಂಡಳಿ, ಸಮಿತಿ, ಅಕಾಡೆಮಿ ಮತ್ತು ವಿವಿಧ ಅಂತಹದ್ದೇ ಸಂಸ್ಥೆಗಳ ರಾಜಕೀಯ ನೇಮಕಾತಿಗಳಲ್ಲಿ, ಪ್ರಶಸ್ತಿ ಆಯ್ಕೆ ಸೇರಿದಂತೆ ಹಲವು ವಿಷಯಗಳಲ್ಲಿ ಕೂಡ ಪ್ರಾದೇಶಿಕ ಪ್ರಾತಿನಿಧ್ಯ ನಿರ್ಲಕ್ಷ್ಯಸಿವೆ ಎಂಬುದು ಇಂದಿಗೂ ಉತ್ತರ ಕರ್ನಾಟಕ ಜನರ ಮನದಲ್ಲಿ ಬೇರೂರಿದೆ.

ಹೈದರಾಬಾದ್ ಕರ್ನಾಟಕ ಪ್ರದೇಶ ತೀವ್ರ ಹಿಂದುಳಿದುರುವಿಕೆ ಗಮನದಲ್ಲಿಟ್ಟುಕೊಂಡು 1991ರ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಅಸ್ತಿತ್ವಕ್ಕೆ ಬಂದಿತು. ಇದೇ ರೀತಿ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ 1993 ರಲ್ಲಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಿತು. ನಂತರದ ದಿನಗಳಲ್ಲಿ ಸೌಲಭ್ಯ ವಂಚಿತರಿಗೆ ಉತ್ತಮ ರೀತಿಯಲ್ಲಿ ಸೇವೆ ಒದಗಿಸಿ ಸರ್ವಾಂಗೀಣ ಅಭಿವೃದ್ಧಿಗೆ ಅನುಗುಣವಾಗಿ ಭಾರತ ಸಂವಿಧಾನದ 371ನೇ ಅನುಚ್ಛೇದ ತಿದ್ದುಪಡಿ ಮೇರೆಗೆ ಮಹಾರಾಷ್ಟ್ರ ಸರ್ಕಾರದ ಮಾದರಿಯಲ್ಲೇ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಅನುಷ್ಠಾನಗೊಂಡಿತು.

2019ರಲ್ಲಿ ಹೈದರಾಬಾದ್ ಕರ್ನಾಟಕಕ್ಕೆ ‘ಕಲ್ಯಾಣ ಕರ್ನಾಟಕ’ ಎಂದು ಹೆಸರೇನೋ ಬದಲಾವಣೆಯಾಯಿತು. ಆದರೆ ಆ ಭಾಗದ ‘ಕಲ್ಯಾಣ’ ಮಾತ್ರ ಕನಸಿನ ಮಾತಾಗಿಯೇ ಉಳಿದಿದೆ. ಅಭಿವೃದ್ಧಿಯ ಅಸಮಾನತೆಯ ಜೊತೆಗೆ ಸಾಮಾಜಿಕ ಅಸಮಾನತೆ ಕೂಡ ಉತ್ತರ ಕರ್ನಾಟಕದಲ್ಲಿ ಅಧಿಕವಾಗಿಯೇ ಇದೆ. ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ಪದ್ಧತಿ, ಹೆಣ್ಣು ಮಕ್ಕಳು ಶಿಕ್ಷಣದಲ್ಲಿ ಹಾಗೂ ಮೂಲಭೂತ ಸೌಕರ್ಯ, ಉದ್ಯೋಗ ಸೇರಿದಂತೆ ಹಲವು ವಿಷಯಗಳಲ್ಲಿ ಹಿಂದುಳಿದಿರುವಿಕೆ ಸೇರಿದಂತೆ ಹಲವು ಸಾಮಾಜಿಕ ಅನಿಷ್ಠಗಳು ಈ ಭಾಗದಲ್ಲಿ ಇಂದಿಗೂ ಕೊನೆಯಾಗಿಲ್ಲ ಎಂಬುದು ದೌರ್ಭಾಗ್ಯವೇ ಸರಿ.

ಕಲ್ಯಾಣ ಕರ್ನಾಟಕದ ಅತೀ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗಾಗಿ ವಿಶೇಷಾಭಿವೃದ್ಧಿ ಯೋಜನೆಯಡಿ ಕೋಟಿಗಟ್ಟಲೆ ಹಣ ವೆಚ್ಚ ಮಾಡಲಾಗಿದೆ. ಇದಲ್ಲದೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮೂಲಕ ಪ್ರತಿ ವರ್ಷ ಸರಾಸರಿ 3 ರಿಂದ 5 ಸಾವಿರಾರು ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇದಲ್ಲದೆ ಬೇರೆ ಬೇರೆ ಅನುದಾನದ ಮತ್ತು ಯೋಜನೆಗಳಡಿಯಲ್ಲಿ ಕೋಟಿ ಕೋಟಿ ರೂ. ಹರಿದು ಬರುತ್ತಿದ್ದರೂ ಅಭಿವೃದ್ಧಿ ಮಾತ್ರ ಹೇಳಿಕೊಳ್ಳುವಷ್ಟು ಆಗಿಲ್ಲ. ಪ್ರಾದೇಶಿಕ ಅಸಮಾನತೆಯನ್ನು ಎದುರಿಸಲು ಈ ಭಾಗದ ಜನಪ್ರತಿನಿಧಿಗಳಿಂದ ಸಾಧ್ಯವೇ ಆಗಲಿಲ್ಲ, ಅದಕ್ಕಾಗಿ ತಕ್ಕಮಟ್ಟಿನ ಪ್ರಯತ್ನ ಮಾಡಲಿಲ್ಲ ಎಂಬುದು ಸೋಜಿಗದ ಸಂಗತಿ.

ಉತ್ತರ ಹಾಗೂ ದಕ್ಷಿಣ ಕರ್ನಾಟಕ ಭೇದ ಭಾವವಿಲ್ಲದೆ ರಾಜ್ಯದ ಅಭಿವೃದ್ಧಿಯಾದಾಗ ಮಾತ್ರ ರಾಜ್ಯದ ಸಮತೋಲಿತ ಅಭಿವೃದ್ಧಿ ಸಾಧ್ಯ. ಮೂಲಭೂತ ಸೌಕರ್ಯ ಹಾಗೂ ಅಭಿವೃದ್ಧಿಯ ಮೇಲೆ ಮಾಡಬಹುದಾದ ಹೂಡಿಕೆ ಹಾಗೂ ಸೌಕರ್ಯಗಳ ಹಂಚಿಕೆಯಲ್ಲಿ ಕಂಡುಬರುವ ಅಸಮತೋಲನವನ್ನು ಒಂದೇ ಬಾರಿಗೆ ನಿವಾರಿಸಲು ಸಾಧ್ಯವಿಲ್ಲ ಎಂಬುದು ನಿಜ, ಏಕೆಂದರೆ ಅಭಿವೃದ್ಧಿ ಎಂಬುದು ನಿರಂತರ ಪ್ರಕ್ರಿಯೆ. ಬಹುತೇಕ ಗಡಿ ಪ್ರದೇಶವಾದ ಉತ್ತರ ಕರ್ನಾಟಕ, ಅದರಲ್ಲೂ ಹೈದರಾಬಾದ್ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಇಂದಿಗೂ ಸಮಪರ್ಕವಾಗಿ ಮೂಲಭೂತ ಸೌಕರ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಕಲುಷಿತ ನೀರು ಸೇವಿಸಿ ಅಸ್ವಸ್ಥರಾದ ಮೃತಪಟ್ಟವರ ಸಂಖ್ಯೆ ಹೆಚ್ಚಾಗಿದ್ದು ಇದೇ ಭಾಗದಲ್ಲಿ, ಉದ್ಯೋಗ ಅರಿಸಿಕೊಂಡು ನಗರಗಳಿಗೆ ಗುಳೆ ಹೋಗುವುದು ಇನ್ನೂ ತಪ್ಪಿಲ್ಲ. ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಸಾಧಿಸಲು ಆಗಲೇ ಇಲ್ಲ.

ಕೆಲಸ ಇಲ್ಲದೆ ನಗರಗಳಿಗೆ ಹೊರಟ ಕಾರ್ಮಿಕರು – ಸಾಂದರ್ಭಿಕ ಚಿತ್ರ

ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ವಿಶೇಷ ಅನುದಾನ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗಕ್ಕೆ 371 (ಜೆ) , ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಇದ್ದರೂ ದಕ್ಷಿಣ ಕರ್ನಾಟಕದಂತೆ ಅಭಿವೃದ್ಧಿ ಹೊಂದಲು ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದು ತೀರಾ ಯೋಚಿಸಬೇಕಾದ ಸಂಗತಿ. ಹೀಗೆ ಹಲವು ಕ್ಷೇತ್ರಗಳಲ್ಲಿ ತೀರಾ ಹಿಂದುಳಿಯಲು ಪ್ರಾದೇಶಿಕ ಅಸಮಾನತೆಯೇ ಮೂಲ ಕಾರಣ ಎಂಬುದು ಈ ಭಾಗದ ಜನರ ಒಕ್ಕೊರಲ ದನಿ.

ಬಾಲಾಜಿ ಕುಂಬಾರ್
+ posts

ಕವಿ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಕವಿ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ನಕ್ಸಲ್ ಹೋರಾಟಗಾರ್ತಿ ಪೊಲೀಸ್ ವಶಕ್ಕೆ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪೊಲೀಸರು ನಕ್ಸಲ್ ಹೋರಾಟದ ಪ್ರಕರಣಗಳ ತನಿಖೆಯನ್ನು ಚುರುಕುಗೊಳಿಸಿದ್ದು,...

ಬೆಳಗಾವಿ | ಮಹಿಳೆಯ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ; ಇಬ್ಬರ ಬಂಧನ

ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದ ಉಗಾರ ರಸ್ತೆಗೆ ಹೊಂದಿಕೊಂಡ...

ಪಾಕ್‌ ಪರ ಘೋಷಣೆ ಆರೋಪ | ಜನಾಕ್ರೋಶಕ್ಕೆ ಮಣಿದ ಸರ್ಕಾರ, ಮೂವರು ಆರೋಪಿಗಳ ಬಂಧನ: ಆರ್‌ ಅಶೋಕ್‌

ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ...

ಬೆಂ.ಗ್ರಾಮಾಂತರ | ಕೃಷಿ ಹೊಂಡಕ್ಕೆ ಜಾರಿ ಬಿದ್ದ ಮಗಳು; ರಕ್ಷಿಸಲು ಹೋದ ಪೋಷಕರೂ ಸಾವು

ಕೃಷಿ ಹೊಂಡದಲ್ಲಿ ಕೈತೊಳೆಯಲು ಹೋಗಿ ಜಾರಿ ಬಿದ್ದ ಮಗಳನ್ನು ರಕ್ಷಿಸಲು ಹೋದ...