- ಎಸ್ ಎಂ ಕೃಷ್ಣರನ್ನು ಕೆಳಗಿಳಿಸಿದಾಗ ಕಾಂಗ್ರೆಸ್ ಕೃತಜ್ಞತೆ ಎಲ್ಲಿತ್ತು?
- ವಿಧಾನಸೌಧ ಗುರುವಾರದ ಬಜಾರ್ ಆಗಿಬಿಟ್ಟಿದೆ ಎಂದ ಜೆಡಿಎಸ್
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಟೀಕೆ ಮಾಡಿದ್ದ ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ತೀವ್ರ ತಿರುಗೇಟು ನೀಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದಿದೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಜೆಡಿಎಸ್, ಮೂರ್ಖರಿಗೆ ಬುದ್ಧಿ ಮಂದ ಎನ್ನುವ ಮಾತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅದೇ ಆಗಿದೆ. ಅಧಿಕಾರದ ಮದದಿಂದ ಅದರ ಮಿದುಳಿಗೂ ಗೆದ್ದಲು ಹಿಡಿದಿದೆ. ನಾಲ್ಕು ವರ್ಷದ ಹಿಂದೆ ಸರಕಾರ ಮಾಡಲು ಸಿದ್ದರಾಮಯ್ಯ, ಡಿಕೆಶಿ ಅವರ ಮನೆಗೆ ಕುಮಾರಸ್ವಾಮಿ ಅವರು ಬಂದಿದ್ದರಾ? ಸುಳ್ಳು ಹೇಳುವುದಕ್ಕೆ ಸಾಸಿವೆ ಕಾಳಿನಷ್ಟಾದರೂ ಸಂಕೋಚ ಬೇಡವೇ? ಎಂದು ಜೆಡಿಎಸ್ ತರಾಟೆಗೆ ತೆಗೆದುಕೊಂಡಿದೆ.
‘ಕೈ’ ಅಭಯದ ಸಂಕೇತವೆಂದು ನಂಬಿದ್ದರು ಕುಮಾರಸ್ವಾಮಿ. ಆದರೆ, ಡಿ.ಕೆ.ಶಿವಕುಮಾರ್ ಅವರದ್ದು ‘ಕೈ’ ಎತ್ತುವುದಷ್ಟೇ ಅಲ್ಲ, ‘ಕೈ’ ಕೊಡುವುದರಲ್ಲೂ ಎತ್ತಿದ ‘ಕೈ’ ಎಂದು ಅವರಿಗೆ ಗೊತ್ತಾಗಲೇ ಇಲ್ಲ. ಅಸೆಂಬ್ಲಿಯಲ್ಲಿ ‘ಕೈ’ ಎತ್ತಿದರು, ಮಂಡ್ಯದಲ್ಲೂ ‘ಕೈ’ ಎತ್ತಿದರು. ಬೆಂಗಳೂರು ಗ್ರಾಮಾಂತರದಲ್ಲೂ ‘ಕೈ’ ಎತ್ತಿದರು!! ಪಾಪ… ಕುಮಾರಸ್ವಾಮಿ ಅವರು ನಂಬಿದರು. ಬೆಂಗಳೂರು ಗ್ರಾಮಾಂತರದಲ್ಲಿ ಕುಮಾರಸ್ವಾಮಿಯವರು, ಅವರ ‘ಕೈ’ ಹಿಡಿದರು. ಮಂಡ್ಯದಲ್ಲಿ ಅದೇ ‘ಕೈ’ ಅವರನ್ನು ನಡುರಸ್ತೆಯಲ್ಲಿ ಬಿಟ್ಟು ಜಾರಿಕೊಂಡಿತು.
ಇದೆಂತಾ ಕೈಚಳಕ? ಅವರ ಹಸ್ತವಾಸಿ ವಿಸ್ವಾಸಘಾತುಕಕ್ಕೇ ಹೆಸರುವಾಸಿ… ಅಲ್ಲವೇ? ಎಂದು ಜೆಡಿಎಸ್ ಖಾರವಾಗಿ ಕೇಳಿದೆ.
ಕುಮಾರಸ್ವಾಮಿ ಅವರ ಕಣ್ಣುಗಳಲ್ಲಿ ಕಣ್ಣೀರು ಬರುತ್ತದೆ, ನಿಜ. ಇಲ್ಲ ಎಂದವರು ಯಾರು? ಇನ್ನೊಬ್ಬರ ಕಣ್ಣಲ್ಲಿ ರಕ್ತ ಸುರಿಸುವ ಕೆಲಸವನ್ನು ಅವರೆಂದೂ ಮಾಡಿಲ್ಲ, ಅವರ ನಾಲಿಗೆ ಸತ್ಯದ ಕಡೆಗೆ ಹೊರಳಿದೆಯೇ ಹೊರತು, ಅಸತ್ಯದೆಡೆಗಲ್ಲ. ಅಣ್ಣಾ.. ಅಣ್ಣಾ ಎಂದ ಆಚಾರವಿಲ್ಲದ ಆ ನಾಲಿಗೆ, ಇಂಥಾ ನೀಚ ಬುದ್ಧಿ ಬಿಡುವುದು ಯಾವಾಗ? ಪಿಹೆಚ್ ಡಿ ಮಾಡೋದಕ್ಕೆ ಅವರಿಂತ…
— Janata Dal Secular (@JanataDal_S) October 11, 2023
ಜಾತ್ಯತೀತ ಎಂದ ಪೆನ್ನು ಜಾತಿ ಜಾತಿ ಎಂದು ಗೀಚುತ್ತಿದೆ. ಮಿದುಳಿಗೂ ಪೆನ್ನಿಗೂ ಲಿಂಕ್ ತಪ್ಪಿದೆಯಾ ಹೇಗೆ? ಅಥವಾ ಬೇರೆಯವರು ಬೆಪ್ಪರು ಎನ್ನುವ ಮದವೇ? ಅಧಿಕಾರಕ್ಕಾಗಿ ಶಿವಸೇನೆಯ ಜತೆ ಮಹಾ ಶೋ ನಡೆಸಿದಾಗ ಆ ಜಾತ್ಯತೀತತೆಯನ್ನು ಯಾವ ಶೋಕೇಸಿನಲ್ಲಿ ಇಟ್ಟಿದ್ದಿರಿ? ಬಿಜೆಪಿ ಜತೆ ಸುದೀರ್ಘ ಕಾಲ ಅಧಿಕಾರದ ಸುಖ ಅನುಭವಿಸಿದ ನಿತೀಶ್ ಕುಮಾರ್ ಪಕ್ಕದಲ್ಲಿ ಆಸೀನರಾದಾಗ ಜಾತ್ಯತೀತವನ್ನು ಎಲ್ಲಿ ಜೀತಕ್ಕೆ ಇಟ್ಟಿದ್ದಿರಿ? I.N.D.I.A ಕೂಟದಲ್ಲಿರುವ ಬಿಜೆಪಿಯ ಎಲ್ಲ ನೇರ ಫಲಾನುಭವಿಗಳ ಪದತಲದಲ್ಲಿ ಹಣೆ ಇಟ್ಟಾಗ ಹಸ್ತದ ಜಾತ್ಯತೀತತೆಯನ್ನು ಮಡಚಿ ಯಾರ ಜೇಬಿನಲ್ಲಿ ಇಟ್ಟಿದ್ದಿರಿ? ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.
ಪ್ರಾದೇಶಿಕ ಪಕ್ಷಗಳ ಪಟ್ಟುಗಳಿಗೆ ಸೂತ್ರವಿಲ್ಲದ ಪತಂಗದಂತೆ ಪತರಗುಟ್ಟುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಅಮಿತ್ ಶಾ ಅವರ ಹೆಸರು ದುಃಸ್ವಪ್ನದಂತೆ ಕಾಡುತ್ತಿದೆ. ರಾಜಕೀಯ ಸ್ವಾರ್ಥಕ್ಕಾಗಿ ಭಯೋತ್ಪಾದಕರನ್ನೂ ಸಮರ್ಥಿಸುತ್ತಾ; ಈಗ ಭಯ, ಒತ್ತಡ, ಷರತ್ತು ಎಂದು ಪಠಿಸುತ್ತಿದೆ. ಕಾಲಾಯ ತಸ್ಮೈ ನಮಃ, ಇದನ್ನು ಕಾಂಗ್ರೆಸ್ ಮರೆಯದಿದ್ದರೆ ಕ್ಷೇಮ. ಪರಿವಾರ ಪಾಲಿಟಿಕ್ಸ್ʼನಲ್ಲಿ ಕಾಂಗ್ರೆಸ್ಸಿಗೆ ಸಾಟಿ ಮೇಟಿ ಉಂಟೆ? ಜನಪಥ ಹತ್ತರಲ್ಲಿರುವ ಮನೆಗಿಂತಾ ಬೇಕೆ? ಎಷ್ಟು ನಾಯಕರು ಅಲ್ಲಿನ ರಾಜಕೀಯಕ್ಕೆ ಉಸಿರುಗಟ್ಟಿ ನರಳಿದರೆಂಬ ಲೆಕ್ಕಾ ಇದೆಯೇ? ಎಂದು ಜೆಡಿಎಸ್ ಕಾಂಗ್ರೆಸ್ ಕಾಲೆಳೆದಿದೆ.
ನಿಮ್ಮ ಪಟ್ಟಿಯಲ್ಲಿರುವ ರಾಜಕೀಯದ ಪರಮ ಪುರುಷೋತ್ತಮರೆಲ್ಲರೂ ನಮ್ಮ ಪಕ್ಷಕ್ಕೆ ಬಂದರು. ಪೊಗದಸ್ತಾಗಿ ಉಂಡರು, ಆಮೇಲೆ ಎದ್ದು ಹೋದರು. ʼಉಂಡು ಹೋದ, ಕೊಂಡು ಹೋದʼ ಎನ್ನುತ್ತೀವಲ್ಲಾ.. ಹಾಗೆ. ಆದರೆ, ಅದೇ ಸಿದ್ದಪುರುಷನನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಂಡವರು, ‘ಅನ್ ಪಾಲಿಷ್ಡ್ ಡೈಮಂಡ್’ ಎಂದು ಸೋನಿಯಾ ಗಾಂಧಿ ಅವರ ಮುಂದೆ ವಕಾಲತ್ತು ಹಾಕಿದ ಎಸ್.ಎಂ.ಕೃಷ್ಣ ಅವರ ಬಗ್ಗೆ ಈ ಪರಿಯ ಕೃತಜ್ಞತೆಗೆ ಏನಾಗಿತ್ತು? ಕೃತಜ್ಞತೆ, ಕರುಣೆ, ಉಪಕಾರ ಸ್ಮರಣೆಗಳ ಕತ್ತು ಕುಯ್ದು ರಾಜಕೀಯದ ಅಂತ್ಯಕಾಲದಲ್ಲಿ ಅವರು ಬಿಜೆಪಿಗೆ ಹೋಗುವ ಸ್ಥಿತಿ ಸೃಷ್ಟಿಸಿದವರು ಯಾರು? ವಿಶ್ವಸಂಸ್ಥೆಯಿಂದ ದೆಹಲಿಗೆ ಮರಳಿದ ಕೂಡಲೇ ಅಪಮಾನಕರವಾಗಿ ಸಂಪುಟದಿಂದ ಅವರನ್ನು ಕಿತ್ತೊಗೆದದ್ದು ಉಪಕಾರ ಸ್ಮರಣೆಯೇ? ಕಷ್ಟಕಾಲದಲ್ಲಿ ಇಡೀ ಕಾಂಗ್ರೆಸ್ಸಿಗೆ ಆಸರೆ ಆಗಿದ್ದವರನ್ನು ತುಚ್ಛವಾಗಿ ಆಚೆಗಟ್ಟಿದ್ದು ಗೌರವವೇ? ಅವಕಾಶವಾದಿ, ಗೋಸುಂಬೆ, ನರಿಬುದ್ಧಿ ಯಾರದ್ದು? ಎಂದು ಜೆಡಿಎಸ್ ಟಾಂಗ್ ನೀಡಿದೆ.
‘ನಂಬಿಕೆ, ಪ್ರಾಮಾಣಿಕತೆ, ನಿಷ್ಠೆ, ನಿಯತ್ತನ್ನು ಗುಜರಿಗೆ ಹಾಕಿ ʼಸಂಡೇ ಬಜಾರ್ʼನಂತೆ ವಿಧಾನಸೌಧವನ್ನೇ ʼಗುರುವಾರದ ಬಜಾರ್ʼ ಮಾಡಿಕೊಂಡವರು ನೀವು. ನಿಜಕ್ಕೂ ನಿಮಗೆ ಲಜ್ಜೆ ಇದೆಯಾ? ವಾರಕ್ಕೊಂದು ದಿನ, ಅದೂ ಗುರುವಾರದ ದಿನವಷ್ಟೇ ಸಂಪುಟ ನೆಪದಲ್ಲಿ 3ನೇ ಮಹಡಿಯಲ್ಲಿ ಕೆಲ ಹೊತ್ತಷ್ಟೇ ಠಳಾಯಿಸಿ, 24/7 ರಾಜ್ಯವನ್ನು ಗುಡಿಸಿ ಗುಂಡಾಂತರ ಮಾಡುತ್ತಿರುವವರು ಲಜ್ಜೆಯಲ್ಲೂ ಕನಿಷ್ಠ-ಗರಿಷ್ಠ ಎಂದು ಅಳತೆ ಮಾಡುತ್ತಿರುವುದು ಅದ್ಭುತ.. ಅಲ್ಲಲ್ಲ.. ಅದ್ಭುತಃ!’ ಎಂದು ಜೆಡಿಎಸ್, ಕಾಂಗ್ರೆಸ್‌ಗೆ ಟಾಂಗ್ ನೀಡಿದೆ.