ರಾಜ್ಯದಲ್ಲಿ 2025ರ ಫೆಬ್ರವರಿಯಲ್ಲಿ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಅವರ ಹೇಳಿಕೆಯ ಬೆನ್ನಲ್ಲೇ, ಸ್ಥಳೀಯ ಸಂಸ್ಥೆಗಳಲ್ಲಿ ರಾಜಕಾರಣ ಗರಿಗೆದರಿದೆ. ಪಕ್ಷಾಂತರಗಳೂ ಆರಂಭವಾಗಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರಸಭೆಯ ಅಧ್ಯಕ್ಷೆ ಮತ್ತು ಸದಸ್ಯರು ಬಿಜೆಪಿ-ಜೆಡಿಎಸ್ ತೊರೆದು ಮಂಗಳವಾರ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ
ಜೆಡಿಎಸ್ನಿಂದ ಗೆದ್ದು ನಗರಸಭೆ ಅಧ್ಯಕ್ಷೆಯಾಗಿದ್ದ ಪೂರ್ಣಿಮಾ, ನಗರಸಭೆ ಸದಸ್ಯರಾದ ಎನ್ ಗಣೇಶ್, ಶಾರದ ಉಮೇಶ್, ಭಾರತಿ ಬಾಯಿ ಹಾಗೂ ಬಿಜೆಪಿ-ಜೆಡಿಎಸ್ನ ಹಲವಾರು ಮುಖಂಡರು ಕಾಂಗ್ರೆಸ್ ಶಾಸಕ ಎನ್ ಶ್ರೀನಿವಾಸ್ ಸಮ್ಮುಖದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ.
ಈ ವೇಳೆ ಮಾತನಾಡಿದ ಶಾಸಕ ಶ್ರೀನಿವಾಸ್, “ಕಾಂಗ್ರೆಸ್ ಸಿದ್ದಾಂತವನ್ನು ಒಪ್ಪಿಕೊಂಡು ಪಕ್ಷಕ್ಕೆ ಸೇರ್ಪಡೆಯಾಗುವುದು ಸಂತೋಷದ ಸಂಗತಿ. ಎಲ್ಲರ ಸೇರ್ಪಡೆಯಿಂದ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ. ಪಕ್ಷಕ್ಕೆ ಬಂದವರನ್ನು ಪಕ್ಷವು ಎಂದಿಗೂ ಕೈಬಿಟ್ಟಿಲ್ಲ. ಹಲವಾರು ಹಂತಗಳಲ್ಲಿ ಜವಾಬ್ದಾರಿ ನೀಡಿದೆ. ನೆಲಮಂಗಲದಲ್ಲಿ ಇನ್ನೂ ಹಲವಾರು ಮಂದಿ ಕಾಂಗ್ರೆಸ್ಗೆ ಬರಲಿದ್ದಾರೆ” ಎಂದು ಹೇಳಿದರು.