- ‘ಅಕ್ರಮ, ಅವ್ಯವಹಾರ, ಅನಾಚಾರದ ವೀರ ಕಾಂಗ್ರೆಸ್’
- ‘ನಾಮ ಹಾಕುವುದರಲ್ಲಿ ಕಾಂಗ್ರೆಸ್ ಪರಮ ನಿಸ್ಸೀಮ’
ಆಡಳಿತ ಪಕ್ಷಕ್ಕೆ ಆಕ್ರೋಶ, ಹತಾಶೆ, ಆತಂಕ, ಅನುಕಂಪ ಇರಬೇಕು, ತಪ್ಪಲ್ಲ. ಆದರೆ, ಹೊಟ್ಟೆಯಲ್ಲಿರುವ ಅಸಹ್ಯವನ್ನೆಲ್ಲ ಬಾಯಲ್ಲಿ ಕಾರಿಕೊಳ್ಳುವ ವಿಕೃತಿ ಮಾತ್ರ ಇರಲೇಬಾರದು. ಕಾಂಗ್ರೆಸ್ ತನಗಿರುವ ಬಿರುದು ಬಾವಲಿಗಳನ್ನು ಇನ್ನೊಬ್ಬರ ಹಣೆಗೆ ಕಟ್ಟುವ ಕೀಳು ಕಸುಬಿಗೆ ಕೈ ಹಾಕಿದೆ ಎಂದು ಜೆಡಿಎಸ್ ಟೀಕಿಸಿದೆ.
ಕಾಂಗ್ರೆಸ್ ಟೀಕೆಗೆ ತಿರುಗೇಟು ನೀಡಿರುವ ಜೆಡಿಎಸ್, “ಗೋಮುಖವ್ಯಾಘ್ರವೇ ಈಗ ಕುಮಾರಸ್ವಾಮಿ ಅವರನ್ನು ಗೋಸುಂಬೆ ಎಂದು ನಿಂದಿಸುತ್ತಿದೆ. ಅಕ್ರಮ, ಅವ್ಯವಹಾರ, ಅನಾಚಾರ.. ಅಷ್ಟೇ ಅಲ್ಲ, ವಾಮಾಚಾರದ ವೀರನೇ ರಾಜ್ಯ ಕಾಂಗ್ರೆಸ್ ಸಾರಥಿ” ಎಂದು ಕುಟುಕಿದೆ.
“ನಾಮ ಹಾಕುವುದರಲ್ಲಿ ಕಾಂಗ್ರೆಸ್ ಪರಮ ನಿಸ್ಸೀಮ; ಅದಕ್ಕೆ ಸಾವಿರದೆಂಟು ಉದಾಹರಣೆ ಕೊಡಬಹುದು. ಈಗ ಹೇಳಿ; ಕೊಳಕುಮಂಡಲ ಯಾವುದು? ಅದೇ ಕಾಂಗ್ರೆಸ್ ಅಲಿಯಾಸ್ ಕೊಳಕುಗ್ರೆಸ್! ಕಾಂಗ್ರೆಸ್ ವಕ್ರರೇಖೆಗಳ ಹೊಲಸುಗುಚ್ಛ! ಅಷ್ಟಾವಕ್ರನ ಅಪರಾವತಾರಿ. ನಾಮ, ಪಂಗನಾಮ, ಉಂಡೆನಾಮಗಳೆಲ್ಲ ಅದರ ಆಜನ್ಮ ಆಸ್ತಿ. ಕೊಳಕು, ಹುಳಕು, ತಳಕು ಅದರ ಪೇಟೆಂಟು. ಭಾರತೀಯ ಅಸ್ಮಿತೆಯ ನೈಜ ಶತ್ರು, ದೇಶದ್ರೋಹಿಗಳ ಆಪ್ತಬಂಧು, ಹಸ್ತಿನಾವತಿಯಲ್ಲೇ ಅಡ್ರಸ್ಸಿಲ್ಲದ ಪಕ್ಷ, ಕರ್ನಾಟಕ ಜೋಡೋ ಬದಲು ಕಾವೇರಿ ತೋಡೋ ಎನ್ನುತ್ತಿದೆ” ಎಂದು ತಿರುಗೇಟು ನೀಡಿದೆ.
SST, YST ಬಾಬ್ತು
“ಒಂದೆಡೆ ಆದಾಯ ತೆರಿಗೆಯವರಿಗೆ SST, YST ಬಾಬ್ತುಗಳ ಕಂತೆ ಕಂತೆ ಹಣ ಸಿಕ್ಕಿದೆ. ಸಿಎಂ, ಡಿಸಿಎಂ ಪಟಾಲಂ ಪರಿಶ್ರಮದಿಂದ ಬಾಚಿದ್ದ ಪಾಪದ ಹಣ ಕೈ ತಪ್ಪಿದೆ. ಐಟಿ, ಈಡಿ ಕುಣಿಕೆ ಯಾರಿಗೆಲ್ಲ ಬಿಗಿದುಕೊಳ್ಳಲಿದೆಯೋ ಗೊತ್ತಿಲ್ಲ. ಸಾಹುಕಾರ ಸಿವಕುಮಾರ ಸುಲ್ತಾನನಿಗೂ ಸಿಬಿಐ ಸಿಕ್ಕು ಬಿದ್ದಿದೆ. ಇದೆಲ್ಲಾ ಹೋಗಲಿ ಎಂದರೆ, ಕಾಂಗ್ರೆಸ್ ಸರಕಾರಕ್ಕೆ 5 ತಿಂಗಳು ತುಂಬುವ ಮೊದಲೇ ಬೆಳಗಾವಿ ಜ್ವಾಲೆ ಭುಗಿಲೆದ್ದಿದೆ. ಅಂತಃಪುರದ ಕಲಹ ಹಾದಿಬೀದಿಗಳಲ್ಲಿ ಮೂರು ಕಾಸಿಗೆ ಬಿಕರಿಯಾಗುತ್ತಿದೆ. ಇನ್ನು ಕಕ್ಕಿಕೊಳ್ಳುವುದು ಬಿಟ್ಟರೆ ಇನ್ನೇನಿದೆ” ಎಂದು ಜೆಡಿಎಸ್ ಪ್ರಶ್ನಿಸಿದೆ.
“ಸರಕಾರಗಳನ್ನು ಕೊಲ್ಲುವ, ಹೆಗಲು ಕೊಟ್ಟವರನ್ನೇ ಮೇಲೆತ್ತಿದ ಪಕ್ಷಗಳನ್ನೇ ಕೊಳಕುಮಂಡಲದಂತೆ ಕಚ್ಚುವ ಕೈ ಪಕ್ಷ ರಾಮಾಯಣ, ಮಹಾಭಾರತದಿಂದ ಎರವಲು ಪಡೆದದ್ದು ಅದೇ ಮಂಥರೆ, ಶಕುನಿಯ ಕುತಂತ್ರವನ್ನೇ. ಆಶ್ರಯ, ಅನ್ನ ಕೊಟ್ಟ ಪಕ್ಷಕ್ಕೇ ಕನ್ನ ಕೊರೆಯುವ, ಉಂಡ ಮನೆಗೇ ಎರಡನ್ನು ಬಗೆಯುವ ಮೀರ್ʼಸಾದಿಕರ ಆಡಂಬೋಲವೇ ಕಾಂಗ್ರೆಸ್. 75 ವರ್ಷದ ಈ ಪರದೇಸಿ ಪಕ್ಷದ್ದು ಸಮಾಜವಾದ, ಸಮತಾವಾದ, ಪ್ರಜಾಪ್ರಭುತ್ವವಾದ ಅಲ್ಲ, ಅದರದ್ದೇನಿದ್ದರೂ ‘ಮೀರುಸಾದಿಕವಾದ!’ ಆ ಹಸ್ತವಾಸಿ ಲೋಕವಿಖ್ಯಾತಿ” ಎಂದು ಕಿಚಾಯಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಲದ ಗುಂಡಿಗೆ ಮನುಷ್ಯರನ್ನು ಇಳಿಸುವುದು ‘ವಿಶ್ವಗುರು’ವಿಗೆ ಶೋಭೆಯಲ್ಲ
ಜಾತ್ಯತೀತತೆ ಗುತ್ತಿಗೆ
“ಜಾತ್ಯತೀತತೆ ತನ್ನದೇ ಗುತ್ತಿಗೆ ಎಂದು ಕರ್ಣಕಠೋರ ಸುಳ್ಳು ಹೇಳುತ್ತಾ ಅದನ್ನು ಬಿಹಾರದ ನಿತೀಶ್ ಕುಮಾರ್ ಅವರ ಮನೆ ಹಿತ್ತಲಲ್ಲಿ ಹೂತು ಸಮಾಧಿ ಮಾಡಿದೆ ಕಾಂಗ್ರೆಸ್. ಈಗ ಜಾತಿ-ಜಾತಿ ಎನ್ನುತ್ತಾ ಜಾತಿಗಣಿತ ಎಂಬ ಅಪಾಯಕಾರಿ ಆಟ ಆರಂಭಿಸಿ ಚುನಾವಣೆಗೆ ಮುನ್ನವೇ ಟೂಲ್ ಕಿಟ್ ರೆಡಿ ಮಾಡಿಟ್ಟಿದೆ. ಈ ದುಷ್ಟ ಟೂಲುಕಿಟ್ಟಿನ ಕಿರಾತಕ ಕಾರ್ಯಾಗಾರ ಇಟಲಿಯಲ್ಲಿದೆಯೋ ಅಥವಾ ಲುಲೂ ಮಾಲಿನ ಮೇಲಿದೆಯೋ?” ಎಂದು ಲೇವಡಿ ಮಾಡಿದೆ.
“ಕುಮಾರಸ್ವಾಮಿ ಅವರನ್ನು ವಚನ ಭ್ರಷ್ಟರು ಎನ್ನುತ್ತೀರಿ. ಮೈತ್ರಿ ಸರಕಾರ ತೆಗೆದು ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೇ ಒಳಏಟು ಕೊಟ್ಟ ಸಿದ್ದಪುರುಷರನ್ನೇ ಸಿಎಂ ಮಾಡಿಕೊಂಡಿದ್ದೀರಿ. ಸಿಗ್ಗು, ಲಜ್ಜೆ ಇಲ್ಲವೇ? ಪಕ್ಷ ವಿರೋಧಿಗೇ ಪಟ್ಟ ಕಟ್ಟಿ, ಪಕ್ಷದ ಚಟ್ಟ ಎತ್ತಿದ ಈ ರಾಜಕಾರಣಕ್ಕೆ ಏನೆಂದು ಹೇಳಬೇಕು? ಕಾಂಗ್ರೆಸ್ ಕಳ್ಳಸುಳ್ಳಿನ ಫ್ಯಾಕ್ಟರಿ. ಅಪ್ಪಟ ಅಸತ್ಯಗಳ ಅಡ್ಡೆ. ದೇಶದ್ರೋಹಿಗಳ ಪರವಿರುವ ಪಾತಕ ಪಕ್ಷ. ಒಂದು ಸಮುದಾಯದ ತುಷ್ಟೀಕರಣದ ನಗದೀಕರಣವೇ ಅದರ ಅರ್ಥಶಾಸ್ತ್ರ” ಎಂದು ಹರಿಹಾಯ್ದಿದೆ.
ಜಿನ್ನಾ ಜೀನ್ಸಿನ ಕಾಂಗ್ರೆಸ್
“ಜಿನ್ನಾ ಜೀನ್ಸಿನ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಜೆಡಿಎಸ್, ಬಿಜೆಪಿ ಫೋಬಿಯಾ ಶುರುವಾಗಿದೆ. ಅದಕ್ಕೆ ಹೊಸ ಟೂಲ್ ಕಿಟ್ ಗಳ ಆವಿಷ್ಕಾರದಲ್ಲಿ ತೊಡಗಿದೆ. ತುಷ್ಟೀಕರಣ ಮಾಡುತ್ತಲೇ ಕಾಶ್ಮೀರಕ್ಕೆ ಮರಣಶಾಸನ ಬರೆದಿದ್ದ ಹೇಯ ಪಕ್ಷವು ಈಗ ಆತ್ಮಗೌರವ ಎಂದು ಹಲುಬುತ್ತಿದೆ. ಸರ್ದಾರ್ ವಲ್ಲಭ ಭಾಯಿ ಪಟೇಲ್, ನೇತಾಜಿ, ಲಾಲ್ ಬಹದ್ದೂರ್ ಶಾಸ್ತ್ರಿ, ಪಿ.ವಿ.ನರಂಹರಾವ್ ಸೇರಿ ಅನೇಕ ಮಹಾಪುರುಷರ ಕೀರ್ತಿಗೆ ಗ್ರಹಣ ಹಿಡಿಸಿ ಆತ್ಮರತಿ ಮಾಡಿಕೊಂಡ ಪಕ್ಷಕ್ಕೆ ಲೋಕಸಭೆ ಚುನಾವಣೆಯಲ್ಲಿ ಅಂತ್ಯ ಸಂಸ್ಕಾರ ಆಗಲಿದೆ” ಎಂದಿದೆ.
“ಜಾತ್ಯತೀತ ಎನ್ನುತ್ತ ಒಕ್ಕಲಿಗರನ್ನು ಎತ್ತಿಕಟ್ಟುವ ನೀಚ ಪ್ರಯತ್ನಕ್ಕೂ ಕೈ ಹಾಕಿದೆ ಕಾಂಗ್ರೆಸ್. ಒಕ್ಕಲಿಗರು ಹೀನ ಸಂಸ್ಕೃತಿಯುಳ್ಳವರು, ಸಂಸ್ಕೃತಿಹೀನರು ಎನ್ನುವ ಕೊಳಕು ಹೇಳಿಕೆ ಹಿಂದೆ ಇದೇ ಕಾಂಗ್ರೆಸ್ಸಿನ ಟೂಲ್ ಕಿಟ್ ಷಡ್ಯಂತ್ರ ಅಡಗಿದೆ. ಆ ಭಾಗವಾಗಿ ಒಕ್ಕಲಿಗರ ಕುಲದೈವ ಶ್ರೀ ಭೈರವೇಶ್ವರ ದೇವರನ್ನು, ಪರಮಪೂಜ್ಯ ಶ್ರೀಗಳನ್ನು ಎಳೆದು ತಂದಿರುವುದು ಅಕ್ಷಮ್ಯ ಹಾಗೂ ಒಕ್ಕಲಿಗರನ್ನು ಕೆಣಕುವ ದುಷ್ಟ ಹುನ್ನಾರವಲ್ಲದೆ ಬೇರೇನೂ ಅಲ್ಲ” ಎಂದು ತಿರುಗೇಟು ನೀಡಿದೆ.
“ಅಲ್ಪಸಂಖ್ಯಾತರನ್ನು ತನ್ನ ರಾಜಕೀಯ ಲಾಭಕ್ಕಾಗಿ ಎತ್ತಿಕಟ್ಟುತ್ತಾ ಬಹುಸಂಖ್ಯಾತರ ವಿರುದ್ಧ ಛೂ ಬಿಡುತ್ತಿರುವುದು ಕೂಡ ಕಾಂಗ್ರೆಸ್ ಕಿಡಿಗೇಡಿ ಟೂಲ್ ಕಿಟ್ ನ ಒಳಸಂಚು. ಅವರನ್ನು ತನ್ನ ಸ್ವಾರ್ಥಕ್ಕಾಗಿ ಸಮಾಜದಿಂದಲೇ ಪ್ರತ್ಯೇಕಿಸುವ ಕೀಳು ರಾಜಕೀಯ ಮಾಡುತ್ತಿದೆ. ಆರೋಗ್ಯಕರ ಸಮಾಜಕ್ಕೆ ಕೊಳಕುಮಂಡಲದಂತೆ ತನ್ನ ಕೆನ್ನಾಲಿಗೆ ಮೂಲಕ ವಿಷಪ್ರಾಶನ ಮಾಡುತ್ತಿದೆ” ಎಂದಿದೆ.