- ಜಮ್ಮು- ಕಾಶ್ಮೀರದ 370ನೇ ವಿಧಿ ರದ್ದುಪಡಿಸಿದ್ದ ವೇಳೆ ವಿರೋಧ ವ್ಯಕ್ತಪಡಿಸಿದ್ದ ಹುರಿಯತ್ ಅಧ್ಯಕ್ಷ
- ಜಾಮಿಯಾ ಮಸೀದಿಯಲ್ಲಿ ಶುಕ್ರವಾರದ ಸಾಮೂಹಿಕ ಪ್ರಾರ್ಥನೆಯ ನೇತೃತ್ವ ವಹಿಸಲು ಬಂದ ಮೀರ್ವೈಝ್
ಜಮ್ಮು-ಕಾಶ್ಮೀರದ ಹುರಿಯತ್ ಕಾನ್ಸರೆನ್ಸ್‌ನ ಅಧ್ಯಕ್ಷ ಮೀರ್ವೈಝ್ ಉಮರ್ ಫಾರೂಕ್ ಅವರನ್ನು ನಾಲ್ಕು ವರ್ಷಗಳ ನಂತರ ಗೃಹ ಬಂಧನದಿಂದ ಶುಕ್ರವಾರ ಮುಕ್ತಗೊಳಿಸಲಾಗಿದೆ.
ಸಂವಿಧಾನದ 370ನೇ ವಿಧಿಯಡಿ ಈ ಹಿಂದಿನ ಜಮ್ಮು- ಕಾಶ್ಮೀರ ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆಯುವ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ 2019ರಲ್ಲಿ ಅವರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಗೃಹ ಬಂಧನದಲ್ಲಿರಿಸಿದ್ದರು.
ಗೃಹಬಂಧನದಿಂದ ಮುಕ್ತರಾದ ನಂತರ ಐತಿಹಾಸಿಕ ಜಾಮಿಯಾ ಮಸೀದಿಯಲ್ಲಿ ನಡೆಯಲಿರುವ ಶುಕ್ರವಾರದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು ಅವರು ತೆರಳಿದ್ದಾರೆ.
#WATCH | After J&K administration releases Mirwaiz Umar Farooq from house arrest, he arrives at Srinagar's Jamia Masjid to offer Friday prayers pic.twitter.com/nSA7eGVo6h
— ANI (@ANI) September 22, 2023
‘ಮೀರ್ವೈಝ್ ಅವರ ಮನೆಗೆ ಗುರುವಾರ ಸಂಜೆ ಭೇಟಿ ನೀಡಿದ ಅಧಿಕಾರಿಗಳು ಗೃಹಬಂಧನದಿಂದ ಮುಕ್ತಗೊಳಿಸುತ್ತಿರುವ ವಿಷಯ ತಿಳಿಸಿದರು. ಜಾಮಿಯಾ ಮಸೀದಿಯಲ್ಲಿ ಶುಕ್ರವಾರ ನಡೆಯಲಿರುವ ಪಾರ್ಥನೆಯಲ್ಲಿ ಪಾಲ್ಗೊಳ್ಳಲು ಅವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ’ ಎಂದು ನೊಹತಾ ಪ್ರದೇಶದ ಅಂಜುಮನ್ ವಕ್ಫ್ ಜಾಮಿಯಾ ಮಸೀದಿಯ ವ್ಯವಸ್ಥಾಪನಾ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿತ್ತು.
ತಮ್ಮ ಗೃಹ ಬಂಧನವನ್ನು ಪ್ರಶ್ನಿಸಿ ಪ್ರತ್ಯೇಕತಾವಾದಿ ಹುರಿಯತ್ ಕಾನ್ಸರೆನ್ಸ್‌ನ ಅಧ್ಯಕ್ಷ ಮೀರ್ವೈಝ್ ಅವರು ಹೈಕೋರ್ಟ್ ಮೊರೆ ಹೋದ ನಂತರ ಅವರ ಬಿಡುಗಡೆ ಮಾಡಲಾಗಿದೆ. ಮೀರ್ವೈಝ್ ಅವರ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುವಂತೆ ಜಮ್ಮು ಮತ್ತು ಕಾಶ್ಮೀರ ಆಡಳಿತಕ್ಕೆ ಸೆ. 15ರಂದು ನ್ಯಾಯಾಲಯ ಕೇಳಿತ್ತು.
#WATCH | Mirwaiz Umar Farooq leads Friday prayers at Srinagar's Jamia Masjid pic.twitter.com/min4gUhCW6
— ANI (@ANI) September 22, 2023
“ನನ್ನ ಮನೆಯ ಸುತ್ತಲಿನಲ್ಲಿ ಕಾವಲಿದ್ದ ಪೊಲೀಸರನ್ನು ಇಂದು (ಶುಕ್ರವಾರ) ಬೆಳಗ್ಗೆ ಹಿಂದೆಗೆದುಕೊಳ್ಳಲಾಗಿದೆ. ನಿನ್ನೆ ಸಂಜೆ ಅಧಿಕಾರಿಗಳು ನನ್ನನ್ನು ಗೃಹಬಂಧನದಿಂದ ಬಿಡುಗಡೆ ಮಾಡುತ್ತಿದ್ದೇವೆ ಎಂದು ನನಗೆ ತಿಳಿಸಿದರು. ಮುಖ್ಯ ಧಾರ್ಮಿಕ ಗುರುವಾಗಿ ನನ್ನ ಜವಾಬ್ದಾರಿಯನ್ನು ನಿರ್ವಹಿಸಲು ಜಾಮಾ ಮಸೀದಿಗೆ ಹೊರಟಿದ್ದೇನೆ. ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಅದನ್ನು ಮಾಡದಂತೆ ಅನ್ಯಾಯವಾಗಿ ನಿಲ್ಲಿಸಲಾಗಿತ್ತು” ಎಂದು ಮೀರ್ವೈಝ್ ಉಮರ್ ಫಾರೂಕ್ ತಿಳಿಸಿದ್ದಾರೆ.
ಬಿಡುಗಡೆಯ ಸುದ್ದಿಯ ಬೆನ್ನಲ್ಲೇ ಮಸೀದಿಯ ಸುತ್ತಮುತ್ತಲೂ ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಹಲವು ಮಂದಿ ಅವರ ಅಭಿಮಾನಿಗಳು ಮಸೀದಿಗೆ ಆಗಮಿಸುತ್ತಿದ್ದಾರೆ.