ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡ ಬಳಿಕ, ಜೆಡಿಎಸ್ ತೊರೆಯುವವರ ಸಂಖ್ಯೆ ಹೆಚ್ಚುತ್ತದಲೇ ಇದೆ. ಹಳೇ ಮೈಸೂರು ಭಾಗದಲ್ಲಿ ಆರಂಭವಾದ ಪಕ್ಷ ತೊರೆಯುವ ಪರ್ವ, ಇದೀಗ ಉತ್ತರ ಕರ್ನಾಟಕಕ್ಕೂ ವ್ಯಾಪಿಸಿದೆ. ಕಲಬುರಗಿಯ ಹಲವಾರು ಮುಖಂಡರು ಜೆಡಿಎಸ್‌ಗೆ ಗುಡ್‌ಬೈ ಹೇಳಲು ಮುಂದಾಗಿದ್ದಾರೆ.
ಕಲಬುರಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಯ ಪಕ್ಷದ ಅಲ್ಪಸಂಖ್ಯಾತ ಮುಖಂಡರು ಕಲಬುರಗಿಯಲ್ಲಿ ಸಭೆ ನಡೆಸಿದ್ದು, ಪಕ್ಷದಲ್ಲಿ ಮುಂದುವರೆಯುವುದಾ ಅಥವಾ ಪಕ್ಷಕ್ಕೆ ತೊರೆಯುವುದಾ? ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಭೆಯಲ್ಲಿ ಪಕ್ಷದ ಅಲ್ಪಸಂಖ್ಯಾತ ಘಟಕದ ಮಾಜಿ ರಾಜ್ಯಾಧ್ಯಕ್ಷ ನಾಸಿರ್ ಹುಸೇನ್ ಉಸ್ತಾದ್ ಮಾತನಾಡಿ, “ಜೆಡಿಎಸ್ ಜಾತ್ಯಾತೀಯ ಪಕ್ಷವೆಂದು ಪಕ್ಷ ಕಟ್ಟಲು ದುಡಿದ್ದಿದ್ದೇವೆ. ಆದರೆ, ಪಕ್ಷದ ನಾಯಕರು ಕೋಮುವಾದಿ ಪಕ್ಷದೊಂದಿಗೆ ಮಯತ್ರಿ ಮಾಡಿಕೊಂಡಿದ್ದಾರೆ. ಆ ಮೂಲಕ ಅಲ್ಪಸಂಖ್ಯಾತ ಸಮುದಾಯವನ್ನು ಕಡೆಗಣಿಸಿದ್ದಾರೆ. ಮುಂದಿನ ವಾರ ಬೆಂಗಳೂರಿನಲ್ಲಿ ಪಕ್ಷದ ಅಲ್ಪಸಂಖ್ಯಾತ ಮುಖಂಡರು ಸಭೆ ನಡೆಸಿ ನಿರ್ಣಯ ಕೈಗೊಳ್ಳುತ್ತೇವೆ” ಎಂದು ಹೇಳಿದ್ದಾರೆ.