ಕಂಗನಾ ಎಂಬ ಅವಿವೇಕಿಯನ್ನು, ಅಪ್ರಬುದ್ಧೆಯನ್ನು ಸೆರಗಿಗೆ ಕಟ್ಟಿಕೊಂಡಿರುವ ಬಿಜೆಪಿ, ಈಗ ಆ ಬೆಂಕಿಗೆ ಬೆಚ್ಚಿ ಬೀಳುತ್ತಿದೆ. ಆಕೆಯ ದ್ವೇಷ, ವಿಷ, ದುರುದ್ದೇಶವೆಲ್ಲ ಬಯಲಾಗಿ ಬಿಜೆಪಿ ಭವಿಷ್ಯದಲ್ಲಿ ಭಾರಿ ಬೆಲೆ ತೆರಬೇಕಾಗಬಹುದು. ಆದರೆ, ಬಿಜೆಪಿಯದು ಎಚ್ಚೆತ್ತುಕೊಳ್ಳುವ ಜಾಯಮಾನವಲ್ಲ. ಆಕೆಗೆ ಅಧಿಕೃತ ಅನುಮತಿ ನೀಡಿ, ಇನ್ನಷ್ಟು ಅವಕಾಶ ಕಲ್ಪಿಸಿಕೊಟ್ಟರೂ ಆಶ್ಚರ್ಯವಿಲ್ಲ...
‘ರೈತರ ಪ್ರತಿಭಟನೆಯ ಸಮಯದಲ್ಲಿ ರೈತರು ಜನರನ್ನು ಕೊಂದು ನೇತು ಹಾಕಿದ್ದಾರೆ, ರೈತರು ರೇಪ್ ಮಾಡಿದ್ದಾರೆ. ಆ ಸಮಯದಲ್ಲಿ ದೇಶದಲ್ಲಿ ಸಮರ್ಥ ನಾಯಕತ್ವ ಇಲ್ಲದಿದ್ದರೆ ಭಾರತ ಇನ್ನೊಂದು ಬಾಂಗ್ಲಾದೇಶ ಆಗುತಿತ್ತುʼ ಎಂದು ಚಿತ್ರನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ಹೇಳಿದ್ದಾರೆ.
ದೇಶಕ್ಕೆ ಅನ್ನ ನೀಡುವ ರೈತರ ಬಗ್ಗೆ, ಅವರ ನ್ಯಾಯಯುತ ಪ್ರತಿಭಟನೆಯ ಬಗ್ಗೆ ದ್ವೇಷ ಕಾರುತ್ತಾರೆಂದರೆ, ಅವರು ಹೊಟ್ಟೆಗೆ ಅನ್ನ ತಿನ್ನುತ್ತಾರೋ ಅಥವಾ ಅಮೇಧ್ಯ ಸೇವಿಸುತ್ತಾರೋ ಎಂಬ ಅನುಮಾನ ಕಾಡುತ್ತದೆ.
ಕಂಗನಾ ಚುನಾಯಿತ ಸಂಸದೆಯಾಗಿದ್ದರೂ, ಈಕೆ ಇನ್ನೂ ಬಣ್ಣದ ಜಗತ್ತಿನ ಬಿನ್ನಾಣ ಬಿಟ್ಟಿಲ್ಲ, ಪ್ರಬುದ್ಧತೆ ಬಂದಿಲ್ಲ ಎನ್ನುವುದು ಈಕೆಯ ಈ ಹೇಳಿಕೆಯಿಂದ ವೇದ್ಯವಾಗುತ್ತದೆ. ಅಂತಹ ನಟಿಯ ಅಪ್ರಬುದ್ಧ ಹೇಳಿಕೆಗಳಿಂದ ಬಿಜೆಪಿ ಇಕ್ಕಟ್ಟಿಗೆ ಸಿಲುಕಿಕೊಂಡಿದೆ. ಆಕೆಯನ್ನು ಸಂಸದೆಯನ್ನಾಗಿ ಮಾಡಿದ್ದರ ಫಲವನ್ನು ಈಗ ಉಣ್ಣುತ್ತಿದೆ.
ರೈತರ ಪ್ರತಿಭಟನೆ ಕುರಿತು ಕಂಗನಾ ರಣಾವತ್ ಹೇಳಿಕೆಗೆ ಅಸಮ್ಮತಿ ವ್ಯಕ್ತಪಡಿಸಿರುವ ಭಾರತೀಯ ಜನತಾ ಪಕ್ಷವು, ಭವಿಷ್ಯದಲ್ಲಿ ಇಂತಹ ಹೇಳಿಕೆಗಳನ್ನು ನೀಡದಂತೆ ಸಂಸದೆ ಕಂಗನಾಗೆ ನಿರ್ದೇಶನ ನೀಡಿದೆ. ಮುಂದುವರೆದು, ಆಕೆಯ ಹೇಳಿಕೆಗೂ ಬಿಜೆಪಿಗೂ ಸಂಬಂಧವಿಲ್ಲ, ಆಕೆಯ ಹೇಳಿಕೆ ಪಕ್ಷದ ಅಭಿಪ್ರಾಯವಲ್ಲ ಎಂದು ಹೇಳಿದೆ.
ಕಂಗನಾ ರಣಾವತ್ ಗೆದ್ದಿರುವುದು ಅರುಣಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ. ಅಕ್ಟೋಬರ್ 1ರಂದು ಹರಿಯಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹರಿಯಾಣ ಹೇಳಿಕೇಳಿ ರೈತರ ಕರ್ಮಭೂಮಿ. 2020ರ ರೈತ ಚಳವಳಿಯಲ್ಲಿ ಹರಿಯಾಣ, ಉತ್ತರಖಂಡ, ಉತ್ತರ ಪ್ರದೇಶ ಮತ್ತು ಪಂಜಾಬಿನ ರೈತರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅವರೆಲ್ಲರೂ ಆಡಳಿತಾರೂಢ ಬಿಜೆಪಿಯನ್ನು ಬಲವಾಗಿ ವಿರೋಧಿಸಿದ್ದರಿಂದ, ಮೂರು ಕರಾಳ ಕೃಷಿ ಕಾಯ್ದೆಗಳನ್ನು ಪ್ರಧಾನಿ ಮೋದಿಯವರು ಹಿಂಪಡೆದಿದ್ದರು. ಇದು ಗೊತ್ತಿದ್ದೂ, ಬಿಜೆಪಿ ಸಂಸದೆ ಕಂಗನಾ ರೈತರನ್ನು ಕುರಿತು ತೀರಾ ತುಚ್ಛವಾಗಿ ಮಾತಾಡಿ, ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಚುನಾವಣಾ ಸಮಯವಾದ್ದರಿಂದ ಭಯಕ್ಕೆ ಬಿದ್ದ ಬಿಜೆಪಿ, ಆಕೆಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಕೈ ತೊಳೆದುಕೊಂಡಿದೆ.
ಹಾಗೆ ನೋಡಿದರೆ, ನಟಿ ಕಂಗನಾ ರಣಾವತ್‌ರದು ಇದೊಂದೇ ಅಲ್ಲ, ಉದ್ದಕ್ಕೂ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗಿದ್ದೇ ಹೆಚ್ಚು. ಇತ್ತೀಚೆಗೆ, ಕಂಗನಾ ಸಂಸದೆಯಾದ ನಂತರ, ರೈತ ಚಳವಳಿ ಬಗ್ಗೆ ತೀರಾ ಕೆಟ್ಟದಾಗಿ ಮಾತನಾಡಿದ್ದಕ್ಕೆ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯಿಂದ ಕಪಾಳಮೋಕ್ಷಕ್ಕೆ ಒಳಗಾಗಿದ್ದರು. ಆಗಲೇ ಆಕೆ ಸಾರ್ವಜನಿಕ ಬದುಕಿನ ಬುದ್ಧಿ ಕಲಿಯಬೇಕಾಗಿತ್ತು. ಈಗಲೂ ಕಲಿತಿಲ್ಲ.
2004ರಲ್ಲಿ ಚಿತ್ರರಂಗಕ್ಕೆ ಅಡಿ ಇಟ್ಟ ಕಂಗನಾ, ಭಿನ್ನ ಕತೆಯುಳ್ಳ ವಿಭಿನ್ನ ಪಾತ್ರಗಳ ಮೂಲಕ ಜನಪ್ರಿಯತೆ ಗಳಿಸಿದವರು. ಇಲ್ಲಿಯವರೆಗೆ ಸುಮಾರು 40 ಚಿತ್ರಗಳಲ್ಲಿ ನಟಿಸಿದ್ದಾರೆ. ಉತ್ತಮ ಅಭಿನಯಕ್ಕಾಗಿ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಷ್ಟೇ ಅಲ್ಲ, ಭಾರತ ಸರ್ಕಾರ ನೀಡುವ ಪದ್ಮಶ್ರೀ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.
ಬಲಪಂಥೀಯ ಒಲವುಳ್ಳ ಕಂಗನಾ, ಹಿಂದೂ ಧರ್ಮ, ಸಂಸ್ಕೃತಿ, ಶ್ರೀರಾಮನ ಬಗ್ಗೆ ಮಾತನಾಡುತ್ತಲೇ ತುಂಡುಬಟ್ಟೆಯಲ್ಲಿ ನಟಿಸಿದ್ದಿದೆ. ಬಾಯಿಗೆ ಬಂದದ್ದು ಮಾತಾಡಿ ವಿವಾದಕ್ಕೆ ಸಿಲುಕಿಕೊಂಡದ್ದಿದೆ. ಮೋದಿಯನ್ನು ಹೊಗಳಿ, ಪದ್ಮಶ್ರೀ ಪಶಸ್ತಿ ಪಡೆದಿದ್ದಿದೆ. ಹಾಗೆಯೇ ರಾಜಕಾರಣಕ್ಕೆ ಬರುವ ದೂರಾಲೋಚನೆಯಿಂದ ಆರೆಸೆಸ್, ಸಂಘ ಪರಿವಾರ ಮತ್ತು ಬಿಜೆಪಿ ಪರ ವಕಾಲತ್ತು ವಹಿಸಿದ್ದೂ ಇದೆ. ಟಿಕೆಟ್ ಪಡೆದು ಮಂಡಿ ಕ್ಷೇತ್ರದಿಂದ ಗೆದ್ದು ಸಂಸದೆಯಾಗಿದ್ದೂ ಇದೆ.
ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರು ರಾಜಕಾರಣಕ್ಕೆ ಬರಬಹುದು. ಅವರಿಗೆ ಬೇಕಾದ ಪಕ್ಷವನ್ನು ಆಯ್ಕೆ ಮಾಡಿಕೊಳ್ಳಬಹುದು. ಚುನಾವಣೆಗೂ ಸ್ಪರ್ಧಿಸಬಹುದು. ಸಂಸದೆಯಾಗಿ ಆಯ್ಕೆಯಾದ ಮೇಲಾದರೂ ಬಿಜೆಪಿಯವರು ಈಕೆಗೆ ಸಂಸದೀಯ ನಡವಳಿಕೆಗಳ ಬಗ್ಗೆ ತರಬೇತಿ ಕೊಡಬೇಕಿತ್ತು. ದೇಶದ ಚರಿತ್ರೆ, ಸ್ವಾತಂತ್ರ್ಯ ಹೋರಾಟ, ಸಂವಿಧಾನ ಕುರಿತು ತಿಳಿವಳಿಕೆ ತುಂಬಬೇಕಾಗಿತ್ತು. ಆದರೆ, ಅದಾವುದನ್ನು ಮಾಡದೆ ಬಿಜೆಪಿ, ಉತ್ತರ ಪ್ರದೇಶದಲ್ಲಿ ದನಗಳನ್ನು ಬೀದಿಗೆ ಬಿಟ್ಟಂತೆ, ಈಕೆಯನ್ನು ಬಿಟ್ಟು ಈಗ ಆಕೆಯ ಹೇಳಿಕೆ ಮತ್ತು ವರ್ತನೆಗಳಿಂದ ಮುಜುಗರಕ್ಕೀಡಾಗುತ್ತಿದೆ.
ಈಕೆ ಸಂಸದೆಯಾಗುತ್ತಿದ್ದಂತೆ, ತನ್ನ ಕ್ಷೇತ್ರದ ಜನ, ತನ್ನ ಭೇಟಿಗೆ ಬರುವವರು ಆಧಾರ್ ಕಾರ್ಡ್ ತನ್ನಿ ಎಂದಿದ್ದರು. ಗೆಲ್ಲಿಸಿ ದಿಲ್ಲಿಗೆ ಕಳುಹಿಸಿದ ಮತದಾರರಿಗೆ ಸರಿಯಾದ ʼಪಾಠʼ ಕಲಿಸಿದ್ದರು.
ಹಿಂದೊಮ್ಮೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬಗ್ಗೆ ಕೆಟ್ಟದಾಗಿ ಮಾತಾಡಿ, ಮಾನನಷ್ಟ ಮೊಕದ್ದಮೆ ಎದುರಿಸುವಂತಾಗಿತ್ತು. ಅದೇ ಮೂಡ್‌ನಲ್ಲಿ ಅಧಿವೇಶನದಲ್ಲಿ ಪಾಲ್ಗೊಂಡ ಕಂಗನಾ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಭಾಷಣ ಕೇಳಿ, ಕಲಿಯುವುದು ಬಿಟ್ಟು, ʼರಾಹುಲ್ ಗಾಂಧಿ ಡ್ರಗ್ಸ್ ತೆಗೆದುಕೊಳ್ಳುತ್ತಾರೆ, ಅವರು ವಿಷಕಾರಿ, ದೇಶಕ್ಕೆ ಅಪಾಯ, ಅವರನ್ನು ಪರೀಕ್ಷೆಗೊಳಪಡಿಸಿʼ ಎಂದೆಲ್ಲ ಬಡಬಡಿಸಿದ್ದರು.
ಆಗಲಾದರೂ ಬಿಜೆಪಿ ಎಚ್ಚೆತ್ತುಕೊಳ್ಳಬೇಕಾಗಿತ್ತು. ಆದರೆ ಅವರು ಎಚ್ಚೆತ್ತುಕೊಳ್ಳುವವರಲ್ಲ. ಎಚ್ಚರ ತಪ್ಪಿಸುವವರು. ಕಂಗನಾ ಮಾತಿಗೆ ನಕ್ಕು ಕುಮ್ಮಕ್ಕು ಕೊಟ್ಟರು. ಅದು ಆಕೆಗೆ ಇನ್ನಷ್ಟು ಶಕ್ತಿ ತುಂಬಿತು. ʼಸೆಕ್ಸ್ ಬೇಕು ಅನ್ನಿಸಿದರೆ ತಡೀಬೇಡಿ, ಕ್ರಿಯೆಗೆ ಮಕ್ಕಳನ್ನು ಪಾಲಕರೇ ಪ್ರೇರೇಪಿಸಬೇಕುʼ ಎಂದರು. ಸಂಸ್ಕೃತಿ, ಧರ್ಮ, ಆಚಾರ, ವಿಚಾರಗಳ ಬಗ್ಗೆ ಮಾತನಾಡುವ ಬಿಜೆಪಿ ಬೇಸ್ತು ಬಿದ್ದಿತ್ತು. ಅರಗಿಸಿಕೊಳ್ಳುವುದು ಕಷ್ಟವಾಗಿತ್ತು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ದರ್ಶನಾತಿಥ್ಯ- ಪೊಲೀಸರಿಂದ ಪೊಲೀಸರಿಗಾದ ಅವಮಾನ
ಆದರೆ, ಮೋದಿಯವರ ಆಡಳಿತದಲ್ಲಿ ಬೇಟಿ ಬಚಾವೋ ಕೂಡ ಇದೆ. ಅತ್ಯಾಚಾರಗಳೂ ನಡೆಯುತ್ತಿವೆ. ಸಬ್ ಕಾ ಸಾಥ್ ಕೂಡ ಇದೆ, ಮುಸ್ಲಿಮರನ್ನು ಹಿಡಿದು ಬಡಿಯಲಾಗುತ್ತಿದೆ. ಅಂದರೆ, ಮೋದಿ ಮಾತನಾಡುವುದು ಒಂದು, ಮಾಡುವುದು ಇನ್ನೊಂದು. ಬಿಜೆಪಿಯವರ ʼಸಂಸ್ಕೃತಿʼ ಕಂಗನಾಗೂ ಅರ್ಥವಾಗಿರಬೇಕು.
ಕಂಗನಾ ಇಂದಿರಾ ಗಾಂಧಿ ಪಾತ್ರದಲ್ಲಿ ʼಎಮರ್ಜೆನ್ಸಿʼ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಹೇಳಿಕೇಳಿ ಬಿಜೆಪಿಯ ಪ್ರಾಪಗ್ಯಾಂಡ ಚಿತ್ರ. ಕಾಂಗ್ರೆಸ್ ಅಧಿನಾಯಕಿ ಇಂದಿರಾ ಗಾಂಧಿಯನ್ನು ಖಳನಾಯಕಿಯನ್ನಾಗಿ ಚಿತ್ರಿಸಿದ್ದರೂ ಆಶ್ಚರ್ಯವಿಲ್ಲ. ಆದರೆ ಕಂಗನಾ ನಿಜಕ್ಕೂ ಕಲಾವಿದೆ, ಆ ಪಾತ್ರಕ್ಕೆ ಜೀವ ತುಂಬುತ್ತಾರೆ. ಅದರ ಬಗ್ಗೆ ಅನುಮಾನವಿಲ್ಲ. ಪ್ರಶ್ನೆ ಏನೆಂದರೆ, ಆಕೆ ತನ್ನ ಎದೆಯಲ್ಲಿ ಅಷ್ಟೊಂದು ವಿಷ ಇಟ್ಟುಕೊಂಡು, ಮಾತೃಹೃದಯಿ ಇಂದಿರಮ್ಮನ ಪಾತ್ರವನ್ನು ಹೇಗೆ ನಿಭಾಯಿಸಬಲ್ಲಳು ಎಂಬುದು.
ಅಂತೂ ಕಂಗನಾ ಎಂಬ ಅವಿವೇಕಿಯನ್ನು, ಅಪ್ರಬುದ್ಧೆಯನ್ನು ಸೆರಗಿಗೆ ಕಟ್ಟಿಕೊಂಡಿರುವ ಬಿಜೆಪಿ, ಈಗ ಆ ಬೆಂಕಿಗೆ ಬೆಚ್ಚಿ ಬೀಳುತ್ತಿದೆ. ಮುಂದಾಗುವ ಅನಾಹುತಕ್ಕೂ ತಲೆ ಕೊಡಬೇಕಾಗಿದೆ. ಆಕೆಯ ದ್ವೇಷ, ವಿಷ, ದುರುದ್ದೇಶವೆಲ್ಲ ಬಯಲಾಗಿ ಬಿಜೆಪಿ ಭವಿಷ್ಯದಲ್ಲಿ ಭಾರಿ ಬೆಲೆ ತೆರಬೇಕಾಗಬಹುದು. ಆದರೆ, ಬಿಜೆಪಿಯದು ಎಚ್ಚೆತ್ತುಕೊಳ್ಳುವ ಜಾಯಮಾನವಲ್ಲ. ಆಕೆಗೆ ಅಧಿಕೃತ ಅನುಮತಿ ನೀಡಿ, ಇನ್ನಷ್ಟು ಅವಕಾಶ ಕಲ್ಪಿಸಿಕೊಟ್ಟರೂ ಆಶ್ಚರ್ಯವಿಲ್ಲ, ಅಲ್ಲವೇ?

ಲೇಖಕ, ಪತ್ರಕರ್ತ