ರಾಜ್ಯದ ಪ್ರತಿ ಮಸೀದಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೌಲಾನಾಗಳಿಗೂ ಕೂಡ ಕನ್ನಡ ಬೋಧನೆಯನ್ನು ಮಾಡಲಾಗುವುದು ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಬಿ.ಝೆಡ್. ಝಮೀರ್ ಅಹ್ಮದ್ ಖಾನ್ ಹೇಳಿದರು.
ಮಂಗಳವಾರ ನಗರದ ಶೇಷಾದ್ರಿಪುರಂ ಮುಖ್ಯ ರಸ್ತೆಯಲ್ಲಿರುವ ಕೆಎಂಡಿಸಿ ಭವನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹಮ್ಮಿಕೊಂಡಿದ್ದ, ‘ಮದ್ರಸಾ ಶಿಕ್ಷಕರಿಗೆ ಕನ್ನಡ ಕಲಿಸುವ ಅಭಿಯಾನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯದ ವಿವಿಧ ಮದ್ರಸಾಗಳ 200 ಶಿಕ್ಷಕರಿಗೆ ಕರ್ನಾಟಕದ ರಾಜ್ಯ ಭಾಷೆ ಕನ್ನಡವನ್ನು ಮೊದಲ ಹಂತವಾಗಿ ಕಲಿಸಿಕೊಡಲಾಗುವುದು. ಅದರಂತೆ ಒಟ್ಟು 36 ಗಂಟೆಗಳ ಕನ್ನಡ ಕಲಿಕೆಯನ್ನು 3 ತಿಂಗಳೊಳಗೆ ಹೇಳಿಕೊಡಲಾಗುವುದು. ಮುಂದಿನ ಹಂತದಲ್ಲಿ ಪ್ರತಿ ಮದ್ರಸಾಗಳ ಶಿಕ್ಷಕರಿಗೆ ಕನ್ನಡ ಕಲಿಸುವ ಕಾರ್ಯಕ್ರಮ ವಿಸ್ತರಿಸಲಾಗುವುದು. ಆನಂತರ, ಮುಂಬರುವ ದಿನಗಳಲ್ಲಿ ಪ್ರತಿ ಮಸೀದಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೌಲಾನಾಗಳಿಗೂ ಕನ್ನಡ ಕಲಿಕಾ ತರಗತಿ ನಡೆಸಲಾಗುವುದು ಎಂದರು.
ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ನಮಗೆ ನೀಡಿರುವ ಸಂವಿಧಾನದಿಂದ ನಾವು ಇಂದು ಅಸ್ತಿತ್ವದಲ್ಲಿದ್ದೇವೆ. ರಾಜ್ಯದಲ್ಲಿ ಕಲಬುರಗಿ, ಯಾದಗಿರಿ, ಬೀದರ್ ಮುಂತಾದ ಜಿಲ್ಲೆಗಳಲ್ಲಿ ಬಹುತೇಕರಿಗೆ ಕನ್ನಡ ಮಾತನಾಡಲು ಬರುವುದಿಲ್ಲ. ಕರ್ನಾಟಕದಲ್ಲಿ ಆಡು ಭಾಷೆ ಹಾಗೂ ಆಡಳಿತ ಭಾಷೆ ಕನ್ನಡದಲ್ಲಿರುವುದರಿಂದ ಕನ್ನಡ ಕಲಿಯುವುದು ಅತ್ಯವಶ್ಯಕವಾಗಿದೆ ಎಂದು ಅವರು ತಿಳಿಸಿದರು.
ಕನ್ನಡ ಓದು, ಬರಹವನ್ನು ಕಲಿತರೆ ಕನ್ನಡದಲ್ಲಿ ವ್ಯವಹರಿಸಲು ಸುಲಭವಾಗುತ್ತದೆ. ಇದರಿಂದ ಬಹುಸಂಖ್ಯಾತರು ಹಾಗೂ ಅಲ್ಪಸಂಖ್ಯಾತರ ನಡುವಿನ ಭೇದ ಹೋಗಲಾಡಿಸಿ, ಕನ್ನಡ ಭಾಷೆಯನ್ನು ಬಲಪಡಿಸದಂತಾಗುತ್ತದೆ. ನಾನು ಈಗಲೂ ಕೂಡ ಕನ್ನಡ ಕಲಿಕೆ ಮಾಡುತ್ತಿದ್ದು, ಈ ಅಭಿಯಾನದಲ್ಲಿ ವಿದ್ಯಾರ್ಥಿ ಆಗಿಯೂ ಪಾಲ್ಗೊಳ್ಳಲಿದ್ದೇನೆ ಎಂದು ಸಚಿವ ಝಮೀರ್ ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಇದೇ ಸಂದರ್ಭದಲ್ಲಿ ಮಾತನಾಡಿದರು.
ಸಮಾರಂಭದಲ್ಲಿ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹ್ಮದ್, ಕೆಎಂಡಿಸಿ ಅಧ್ಯಕ್ಷ ಅಲ್ತಾಫ್ ಖಾನ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್, ವಾರ್ತಾಭಾರತಿ ಪತ್ರಿಕೆಯ ಪ್ರಧಾನ ಸಂಪಾದಕರೂ ಆದ ಆಯೋಗದ ಸದಸ್ಯ ಅಬ್ದುಸ್ಸಲಾಮ್ ಪುತ್ತಿಗೆ, ಕಾರ್ಯದರ್ಶಿ ಡಾ.ಮಾಜುದ್ದೀನ್ ಖಾನ್, ಮೌಲಾನಾ ಸೈಯದ್ ಶಬ್ಬೀರ್ ಅಹ್ಮದ್ ನದ್ವಿ, ಮುಫ್ತಿ ಶಂಸುದ್ದೀನ್ ಬಜ್ಲಿ, ನಿವೃತ್ತ ಡಿಸಿಪಿ ಜಿ.ಎ.ಬಾವಾ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

