ಲಡಾಖ್‌ಗೆ ರಾಜ್ಯತ್ವ ನೀಡಲು ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗಳ ಕಾವು ಮತ್ತಷ್ಟು ಹೆಚ್ಚಾಗಿದೆ. ಈಗಾಗಲೇ ಕಾರ್ಗಿಲ್‌ನಲ್ಲಿ ಪ್ರತಿಭಟನೆ ನಡೆದಿದೆ. ಇನ್ನು ಮಾರ್ಚ್ 24ರಂದು ಸಾಮಾಜಿಕ ಕಾರ್ಯಕರ್ತ, ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಸೋನಮ್ ವಾಂಗ್ಚುಕ್ ನಡೆಯುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಹಲವರು ಭಾಗಿಯಾಗಲಿದ್ದಾರೆ. ಈಗಾಗಲೇ ಹಲವಾರು ದಿನಗಳಿಂದ ಸೋನಮ್ ವಾಂಗ್ಚುಕ್ ಕೊರೆಯುವ ಚಳಿಯಲ್ಲಿಯೂ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಲಡಾಖ್‌ಗೆ ರಾಜ್ಯತ್ವ ನೀಡಲು ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ, ಮಾರ್ಚ್ 4ರಂದು ಕೇಂದ್ರ ಗೃಹ ಸಚಿವಾಲಯ ಮತ್ತು ಸಾಮಾಜಿಕ-ರಾಜಕೀಯ ಕಾರ್ಯಕರ್ತರ ಸಭೆ ನಡೆದಿದೆ. ಆದರೆ, ಮಾತುಕತೆ ವಿಫಲಗಿದ್ದರಿಂದ ಬುಧವಾರ ಲಡಾಖ್‌ನ ಕಾರ್ಗಿಲ್ ಜಿಲ್ಲೆಯಲ್ಲಿ ಮುಷ್ಕರಗಳು ನಡೆಯುತ್ತಿವೆ. ಪ್ರತಿಭಟನೆಗಳ ಸ್ವರೂಪ ತೀವ್ರತೆ ಪಡೆದುಕೊಳ್ಳುತ್ತಿದ್ದು, ಕಾರ್ಗಿಲ್ ಪ್ರಜಾಪ್ರಭುತ್ವ ಒಕ್ಕೂಟದ (ಕೆಡಿಎ) ಮುಖಂಡರು ಮತ್ತು ಕಾರ್ಯಕರ್ತರು ಉಪವಾಸ ಸತ್ಯಾಗ್ರಹ ನಡೆಸಲು ಮುಂದಾಗಿದ್ದಾರೆ.
ಇದನ್ನು ಓದಿದ್ದೀರಾ? ರಾಜ್ಯ ಸ್ಥಾನಮಾನ ಬೇಡಿಕೆಗೆ ಆಗ್ರಹಿಸಿ ಲಡಾಖ್‌ನಲ್ಲಿ ಸಾವಿರಾರು ಜನರಿಂದ ಪ್ರತಿಭಟನೆ
ಲಡಾಖ್‌ಗೆ ರಾಜ್ಯತ್ವ ನೀಡಲು, ಸಂವಿಧಾನದ ಆರನೇ ಪರಿಚ್ಛೇದದಡಿ ಸೇರಿಸಲು ಆಗ್ರಹಿಸಿ ಬುಧವಾರ ಸಾವಿರಾರು ಜನರು ರ್‍ಯಾಲಿ ನಡೆಸಿದ್ದಾರೆ. ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ವ್ಯಾಪಾರಸ್ಥರು ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ‘ನಮಗೆ ಪ್ರಜಾಪ್ರಭುತ್ವ ಬೇಕು’ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದ್ದಾರೆ. ಹಾಗೆಯೇ ಕೇಂದ್ರದೊಂದಿಗಿನ ಹಲವಾರು ಸುತ್ತಿನ ಮಾತುಕತೆ ವಿಫಲವಾಗಿದ್ದು, ದಿನ ಕಳೆದಂತೆ ಪ್ರತಿಭಟನೆಯ ಕಾವು ಅಧಿಕವಾಗುತ್ತಿದೆ.
2019ರ ಲೋಕಸಭೆ ಚುನಾವಣೆ ಮತ್ತು 2020 ರ ಸ್ಥಳೀಯ ಹಿಲ್ ಕೌನ್ಸಿಲ್ ಚುನಾವಣೆಯಲ್ಲಿ, ಕೇಂದ್ರಾಡಳಿತ ಪ್ರದೇಶಕ್ಕೆ 6ನೇ ಶೆಡ್ಯೂಲ್ ಅಡಿಯಲ್ಲಿ ರಕ್ಷಣೆಯ ಬಗ್ಗೆ ಬಿಜೆಪಿ ಭರವಸೆ ನೀಡಿತು. 2019ರಲ್ಲಿ ಲಡಾಖ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಗೆಲುವು ಸಾಧಿಸಿತು. ಆದರೆ ಈವರೆಗೂ ಭರವಸೆಯನ್ನು ಈಡೇರಿಸಿಲ್ಲ.