- ಸ್ವಯಂಪ್ರೇರಿತವಾಗಿ ಅಂಗಡಿ-ಮಳಿಗೆ ಬಂದ್ ಮಾಡಿದ ವ್ಯಾಪಾರಸ್ಥರು
- ರಾಜಧಾನಿಯಲ್ಲಿ 144 ಸೆಕ್ಷನ್ ಜಾರಿ, ಪ್ರತಿಭಟನಾಕಾರರ ಬಂಧನ
ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಕನ್ನಡಪರ, ರೈತ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ರಾಜ್ಯಾದ್ಯಂತ ಬೆಂಬಲ ವ್ಯಕ್ತವಾಗಿದೆ.
ರಾಜಧಾನಿಯಲ್ಲಿ ಬಹುತೇಕ ವ್ಯಾಪಾರ – ವಹಿವಾಟು ಸ್ಥಗಿತವಾಗಿದೆ. ಬೆಳಗ್ಗೆಯಿಂದಲೇ ವ್ಯಾಪಾರಿಗಳು, ಸ್ವಯಂಪ್ರೇರಿತವಾಗಿ ಅಂಗಡಿ-ಮಳಿಗೆ ಬಂದ್ ಮಾಡಿದ್ದಾರೆ.
ಬೆಂಗಳೂರು ನಗರದ ಪುರಭವನ ಎದುರು ಜಮಾಯಿಸಿ ಮೆರವಣಿಗೆ ನಡೆಸಲು ಮುಂದಾಗಿದ್ದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು. ಇದೇ ಸಂದರ್ಭದಲ್ಲಿ ಬಸ್‌ನಲ್ಲಿ ಕುಳಿತಿದ್ದ ಪ್ರತಿಭಟನಾಕಾರರು ಬಿಎಂಟಿಸಿ ಬಸ್ ಗಾಜು ಒಡೆದಿದ್ದಾರೆ.
ಕರ್ನಾಟಕ ಬಂದ್‌ಗೆ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಬೆಂಬಲ ವ್ಯಕ್ತಪಡಿಸಿವೆ. ಅಲ್ಲದೇ ಬೆಂಗಳೂರಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಈಗಾಗಲೆ ಪೊಲೀಸರು ಬಂದೋಬಸ್ತ್ಗೆ ಫೀಲ್ಡ್ಗೆ ಇಳಿದಿದ್ದಾರೆ.
ಸಿಎಂ ಸಿವಾಸಕ್ಕೆ ಹೋಗುವ ಎಲ್ಲ ರಸ್ತೆಗಳಲ್ಲಿ ಬಂದೋಬಸ್ತ್
ಮುಖ್ಯಮಂತ್ರಿ ನಿವಾಸಕ್ಕೆ ಹೋಗುವ ಎಲ್ಲ ರಸ್ತೆಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಪ್ರತಿಭಟನಾಕಾರರು ಇಂದು (ಸೆ. 29) ಸಿಎಂ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ನೀಡಲಾಗಿದೆ.
ಬೆಂಗಳೂರಿನಲ್ಲಿ ಪ್ರತಿಭಟನೆಯ ಕಾವು ಜೋರಾಗುತ್ತಿದ್ದಂತೆ ಪೊಲೀಸರು ಎಲ್ಲೆಡೆ ಹೈ ಅಲರ್ಟ್ ಆಗಿದ್ದಾರೆ. ಪ್ರತಿಭಟನೆಗಳು ನಡೆಯುವ ಜಾಗಗಳಾದ ಟೌನ್ ಹಾಲ್ ಸೇರಿದಂತೆ ಕೆಲವಾರು ಸ್ಥಳಗಳನ್ನು ಮೊದಲೇ ಗುರುತಿಸಿದ್ದ ಪೊಲೀಸರು ಅಲ್ಲಿಗೆ ಆಗಮಿಸಿದ ಪ್ರತಿಭಟನಾಕಾರರನ್ನು ಬಸ್‌ಗಳಲ್ಲಿ ತುಂಬಿ ಫ್ರೀಡಂ ಪಾರ್ಕ್ ನತ್ತ ಕೊಂಡೊಯ್ದಿದ್ದಾರೆ.
ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರದಿಂದ ಎಚ್ಚರಿಕೆ
ಬಂದ್ ನಲ್ಲಿ ಭಾಗಿಯಾಗಬಯಸಲಿರುವ ಎಲ್ಲ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ. ಬಂದ್ ಹಿನ್ನೆಲೆಯಲ್ಲಿ ನಡೆಯುವ ಪ್ರತಿಭಟನೆಗಳಲ್ಲಿ ಯಾವುದೇ ಸರ್ಕಾರಿ ನೌಕರ ಭಾಗವಹಿಸುವಂತಿಲ್ಲ ಎಂದು ಸರ್ಕಾರದಿಂದ ಸುತ್ತೋಲೆ ಹೊರಡಿಸಿದೆ. ನಿಗಮ, ಮಂಡಳಿಗಳ ಪದಾಧಿಕಾರಿಗಳಿಗೂ ಸೂಚನೆ ನೀಡಿದೆ. ಅನಗತ್ಯವಾಗಿ ಇಂದು (ಸೆ. 29) ರಜೆ ಹಾಕಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ರಾಜ್ಯ ಸರ್ಕಾರ ಎಚ್ಚರಿಸಿದೆ.