ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮ ಬಜೆಟ್ ಭಾಷಣದಲ್ಲಿ ಮೂಲಸೌಕರ್ಯ ಕ್ಷೇತ್ರದ ಅಭಿವೃದ್ಧಿಗೆ ಭರ್ಜರಿ ಕೊಡುಗೆ ನೀಡಿದ್ದಾರೆ. ಕರಾವಳಿ ಜಿಲ್ಲೆಗಳನ್ನು ತಮ್ಮ ಬಜೆಟ್‌ನಲ್ಲಿ ಕೈಬಿಡದ ಸಿಎಂ, ಮೊದಲ ಬಾರಿಗೆ ಮೀನುಗಾರರ ರಕ್ಷಣೆಗೆ ‘ಸಮುದ್ರ ಆ್ಯಂಬುಲೆನ್ಸ್’ ಎಂಬ ಹೊಸ ಯೋಜನೆಯನ್ನು ಪರಿಚಯಿಸಿದ್ದಾರೆ.
ಸಮುದ್ರ ಮೀನುಗಾರಿಕೆಗೆ ತೆರಳಿದಾಗ ಅಪಘಾತ ಅಥವಾ ಅನಾರೋಗ್ಯಕ್ಕೆ ತುತ್ತಾಗುವ ಮೀನುಗಾರರನ್ನು ತ್ವರಿತವಾಗಿ ದಡಕ್ಕೆ ತರಲು ಏಳು ಕೋಟಿ ರೂ. ವೆಚ್ಚದಲ್ಲಿ ‘ಸಮುದ್ರ ಆ್ಯಂಬುಲೆನ್ಸ್’ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
2023ರ ಏಪ್ರಿಲ್‌ನಲ್ಲಿ ಉಡುಪಿಯಲ್ಲಿ ಮೀನುಗಾರರೊಂದಿಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರೊಂದಿಗೆ ನಡೆದಿದ್ದ ಸಂವಾದದಲ್ಲಿ ‘ಸಮುದ್ರ ಆ್ಯಂಬುಲೆನ್ಸ್’ ನೀಡುವಂತೆ ಮೀನುಗಾರ ಮಹಿಳೆಯೋರ್ವರು ಮನವಿ ಮಾಡಿದ್ದರು. ಈ ಮನವಿಗೆ ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ಘೋಷಣೆ ಮಾಡುವ ಮೂಲಕ ಮೀನುಗಾರರಿಗೆ ರಾಹುಲ್ ಗಾಂಧಿ ನೀಡಿದ್ದ ಭರವಸೆಯನ್ನು ಈಡೇರಿಸಿದ್ದಾರೆ.
ಉಳಿದಂತೆ ಘೋಷಿಸಲಾದ ಯೋಜನೆಗಳು ಈ ರೀತಿ ಇದೆ
- ರಾಜ್ಯದ 320 ಕಿ.ಮೀ. ಉದ್ದದ ಕರಾವಳಿ ತೀರವನ್ನು ಆರ್ಥಿಕ ಅಭಿವೃದ್ಧಿಗೆ ಸಮರ್ಥವಾಗಿ ಬಳಸಿಕೊಳ್ಳಲು ಆದ್ಯತೆ
- ಬಂದರು, ರೈಲು ಮತ್ತು ವಿಮಾನ ಸಂಪರ್ಕವನ್ನು ಒದಗಿಸುವ ಮೂಲಕ ಕೆಲವು ವರ್ಷಗಳಲ್ಲಿ ಅಂದಾಜು 20,000 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಸಮುದ್ರ ಸಾರಿಗೆ, ಸರಕು ಸಾಗಣೆ ಹಾಗೂ ಪರಿಸರ ಪ್ರವಾಸೋದ್ಯಮ ವಲಯಗಳಲ್ಲಿ ಗಣನೀಯ ಅಭಿವೃದ್ಧಿ ಸಾಧಿಸುವ ಗುರಿ
- ರಾಜ್ಯದಲ್ಲಿ ಜಲಸಾರಿಗೆ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ಖಾಸಗಿ ಹೂಡಿಕೆಗಳನ್ನು ಆಕರ್ಷಿಸಲು, ಕರ್ನಾಟಕ ಜಲಸಾರಿಗೆ ಅಭಿವೃದ್ಧಿ ನೀತಿಯನ್ನು ಹಾಗೂ ಒಳನಾಡು ಜಲಸಾರಿಗೆ ನಿಯಮ
- ಸಾಗರಮಾಲಾ ಯೋಜನೆಯಡಿ ಕಡಲ ತೀರದ ವ್ಯಾಪಾರಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವ ಉದ್ದೇಶದಿಂದ ಅಂದಾಜು 1,017 ಕೋಟಿ ರೂ.ಗಳ ವೆಚ್ಚದಲ್ಲಿ ಒಟ್ಟು 26 ಕಾಮಗಾರಿ
- ಕರಾವಳಿ ತೀರ ಪ್ರದೇಶ ಹಾಗೂ ಬಂದರುಗಳ ಅಭಿವೃದ್ಧಿಯು ರಾಜ್ಯದ ಜಲಸಾರಿಗೆ ವಹಿವಾಟು ಹೆಚ್ಚಿಸಲು ನಿರ್ಧಾರ
- ಉತ್ತರ ಕನ್ನಡ ಜಿಲ್ಲೆಯ ಕೇಣಿಯಲ್ಲಿ 30 MTPA ಸಾಮರ್ಥ್ಯದ ಮತ್ತು ₹4200 ಕೋಟಿ ರೂ. ಅಂದಾಜು ಯೋಜನಾ ವೆಚ್ಚದ ಹೊಸ ಆಳಸಮುದ್ರ ಸರ್ವಋತು ಬಂದರನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ
- ಉತ್ತರ ಕನ್ನಡ ಜಿಲ್ಲೆಯ ಪಾವಿನಕುರ್ವೆಯಲ್ಲಿ ಪಿ.ಪಿ.ಪಿ. ಮಾದರಿಯಲ್ಲಿ ಅಂದಾಜು 3048 ಕೋಟಿ ರೂ.ಗಳ ಯೋಜನಾ ವೆಚ್ಚದಲ್ಲಿ ಎರಡನೇ ಬೃಹತ್ ಬಂದರಿನ ಅಭಿವೃದ್ಧಿಗೆ ಅಂತಾರಾಷ್ಟ್ರೀಯ ಟೆಂಡರ್
- ಕಾರವಾರ, ಮಲ್ಪೆ ಮತ್ತು ಹಳೇ ಮಂಗಳೂರು ಬಂದರುಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಡಿ ನಾಲ್ಕು Birth ಅಭಿವೃದ್ಧಿಪಡಿಸಲು ಗುರಿ
- ಕಾರವಾರ, ಹಳೆ ಮಂಗಳೂರು ಮತ್ತು ರಾಜ್ಯದ 11 ಕಿರು ಬಂದರುಗಳಲ್ಲಿ ಸುಗಮ ಸಂಚಾರಕ್ಕಾಗಿ ಹಂತ ಹಂತವಾಗಿ ಹೂಳೆತ್ತುವ ಕಾಮಗಾರಿ
- ಉತ್ತರ ಕನ್ನಡ ಜಿಲ್ಲೆಯ ಮಂಕಿಯಲ್ಲಿ ವಿವಿಧೋದ್ದೇಶ ಬಂದರಿನ ಅಭಿವೃದ್ಧಿಗೆ ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲಾಗುತ್ತಿದೆ.
- ಕಾರವಾರ ಬಂದರಿನಲ್ಲಿ ಬೆಂಕಿ ನಂದಿಸುವ ಉಪಕರಣಗಳ ಅಳವಡಿಕೆ ಕಾಮಗಾರಿ
- ಹಳೇ ಮಂಗಳೂರು ಬಂದರಿನಲ್ಲಿ 350 ಮೀ. ಉದ್ದದ ಕೋಸ್ಟಲ್ ಬರ್ತ್ ನಿರ್ಮಾಣ ಕಾಮಗಾರಿ
- ಹಳೆ ಮಂಗಳೂರು ಮತ್ತು ಹಂಗಾರಕಟ್ಟೆ ಬಂದರುಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಆಧುನಿಕ ಹಡಗು ನಿರ್ಮಾಣ ಚಟುವಟಿಕೆಗಳನ್ನು ಪ್ರಾರಂಭ
- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಕ್ರೂಸ್ ಮತ್ತು ಪ್ರವಾಸೋದ್ಯಮ ಬಂದರನ್ನು (ICTP) ಅಭಿವೃದ್ಧಿಪಡಿಸಲು ಐ.ಐ.ಟಿ. ಮದ್ರಾಸ್ ಸಹಯೋಗದೊಂದಿಗೆ ಕಾರ್ಯಸಾಧ್ಯತಾ ವರದಿ
- ದ್ವೀಪಗಳ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್
- ಮಂಗಳೂರಿನ ಗುರುಪುರ ಹಾಗೂ ನೇತ್ರಾವತಿ ನದಿಗಳಲ್ಲಿ ಜಲಮೆಟ್ರೋ ಸೇವೆಗಳನ್ನು ಪರಿಚಯಿಸಲು ಕಾರ್ಯಸಾಧ್ಯತಾ ವರದಿ
- ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳೊಂದಿಗೆ ಸಂಪರ್ಕ ಸಾಧಿಸುವ ದೃಷ್ಟಿಯಿಂದ 1600 ಕೋಟಿ ರೂ. ವೆಚ್ಚದಲ್ಲಿ ವಿವಿಧ ವಿಮಾನ ನಿಲ್ದಾಣಗಳ ಅಭಿವೃದ್ಧಿ
- ಕಾರವಾರ ನೌಕಾನೆಲೆಯ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಯ ಭೂಸ್ವಾಧೀನ ಪ್ರಕ್ರಿಯೆಯ ತೊಡಕುಗಳನ್ನು ನಿವಾರಿಸಿ ಕಾಮಗಾರಿ ಪ್ರಾರಂಭ