ರಾಮೇಶ್ವರಂ ಕೆಫೆ ರೀತಿಯಲ್ಲೇ ಮತ್ತೊಮ್ಮೆ ಬಾಂಬ್ ಸ್ಫೋಟ ನಡೆಸುವುದಾಗಿ ಸಿಎಂ, ಡಿಸಿಎಂ ಹಾಗೂ ಬೆಂಗಳೂರು ಪೊಲೀಸ್ ಕಮಿಷನರ್ ಅವರಿಗೆ ಇ-ಮೇಲ್ ಮೂಲಕ ಬೆದರಿಕೆ ಹಾಕಿರುವ ವಿಚಾರ ಬೆಳಕಿಗೆ ಬಂದಿದೆ.
2.5 ಮಿಲಿಯನ್ ಡಾಲರ್ ಕೊಟ್ಟಿಲ್ಲ ಅಂದರೆ ಬಸ್ಸು, ರೈಲು, ಬಸ್‌ಸ್ಟ್ಯಾಂಡ್ ಸೇರಿ ಹಲವಾರು ಕಡೆ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಹಾಕಿರುವ ವಿಚಾರ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಸಿಎಂ, ಗೃಹ ಮಂತ್ರಿ, ಡಿಸಿಎಂ, ಮತ್ತು ಬೆಂಗಳೂರು ನಗರ ಪೊಲೀಸ್ ಕಮಿಷನರ್ಗೆ ಬೆದರಿಕೆ ಇ-ಮೇಲ್ ಬಂದಿದ್ದು, ರಾಮೇಶ್ವರಂ ಕೆಫೆ ರೀತಿಯಲ್ಲೇ ಬಾಂಬ್ ಸ್ಫೋಟಿರುವುದಾಗಿ ಇಮೇಲ್ನಲ್ಲಿ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ.
ಈ ಇಮೇಲ್ ಬೆದರಿಕೆ ಸಂಬಂಧ ಸಿಸಿಬಿ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ. Shahidkhan10786@protonmail.com ಎನ್ನುವ ಇ-ಮೇಲ್ ಐಡಿಯಿಂದ ಬೆದರಿಕೆ ಬಂದಿದ್ದು, ಸದ್ಯ ಸಿಸಿಬಿ ಪೊಲೀಸರು ಈ ಇಮೇಲ್ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಘಟನೆಯನ್ನು ಪರೋಕ್ಷವಾಗಿ ಉಲ್ಲೇಖಿಸಿರುವ ಈ ಮೇಲ್‌ನಲ್ಲಿ, “ಮೊನ್ನೆಯ ಸಿನಿಮಾ ಟ್ರೈಲರ್ ಬಗ್ಗೆ ನಿಮ್ಮ ಅಭಿಪ್ರಾಯವೇನು? ನೀವು ನಮಗೆ 2.5 ಮಿಲಿಯನ್ ಡಾಲರ್ ನೀಡದಿದ್ದರೆ, ನಾವು ಕರ್ನಾಟಕದಾದ್ಯಂತ ಬಸ್ಸು, ರೈಲು ನಿಲ್ದಾಣ, ದೇವಸ್ಥಾನ, ಹೋಟೆಲ್‌ಗಳು ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ದೊಡ್ಡ ಸ್ಫೋಟಗಳನ್ನು ಮಾಡುತ್ತೇವೆ” ಎಂದು ಈ ಮೇಲ್‌ನಲ್ಲಿ ಬರೆಯಲಾಗಿದೆ ಎಂದು ವರದಿಯಾಗಿದೆ.
“ನಾವು ನಿಮಗೆ ಇನ್ನೊಂದು ಟ್ರೈಲರ್ ಅನ್ನು ತೋರಿಸಲು ಬಯಸುತ್ತೇವೆ. ನಾವು ಮುಂದಿನದನ್ನು ಅಂಬಾರಿ ಉತ್ಸವ ಬಸ್‌ನಲ್ಲಿ ಸ್ಪೋಟಿಸಲಿದ್ದೇವೆ. ಅಂಬಾರಿ ಉತ್ಸವ ಬಸ್ ಸ್ಪೋಟದ ನಂತರ, ನಾವು ನಮ್ಮ ಬೇಡಿಕೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸುತ್ತೇವೆ. ನಿಮಗೆ ಕಳುಹಿಸಲಾದ ಮೇಲ್‌ನ ಸ್ಕ್ರೀನ್‌ಶಾಟ್‌ಗಳನ್ನು ಅಪ್‌ಲೋಡ್ ಮಾಡುತ್ತೇವೆ. ಸಾಮಾಜಿಕ ಮಾಧ್ಯಮದಲ್ಲಿ ನಾವು ನಮ್ಮ ಮುಂದಿನ ಸ್ಫೋಟದ ಮಾಹಿತಿಯನ್ನು ಟ್ವೀಟ್ ಮಾಡುತ್ತೇವೆ” ಎಂದು ಇ-ಮೇಲ್‌ನಲ್ಲಿ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.
ಮಾರ್ಚ್ 1ರಂದು ಬೆಂಗಳೂರಿನ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಆಗಿದ್ದು, ನಾಲ್ಕು ದಿನ ಕಳೆದರೂ ಸಹ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟ ಉಗ್ರರ ಸಣ್ಣ ಸುಳಿವು ಕೂಡ ಪೊಲೀಸ್ ಇಲಾಖೆಗಾಗಲೀ, ಉನ್ನತಮಟ್ಟದ ಅಧಿಕಾರಿಗಳಿಗಾಗಲೀ ಸಿಗುತ್ತಿಲ್ಲ.
ಅಧಿಕಾರಿಗಳು ಸಿಸಿ ಟಿವಿ ದೃಶ್ಯಗಳನ್ನು ಸಂಗ್ರಹಿಸಿ, ಯಾವ ಕಡೆಗೆ ಹೋಗಿದ್ದಾನೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆಯೇ ಹೊರತು, ಬಾಂಬಿಟ್ಟವ ಎಲ್ಲಿದ್ದಾನೆ ಎನ್ನುವುದು ಖಾಕಿಗೆ ಗೊತ್ತಾಗುತ್ತಿಲ್ಲ. ಒಂದ್ಕಡೆ ಎಫ್‌ಎಸ್‌ಎಲ್ ತಂಡ, ಮತ್ತೊಂದೆಡೆ ಸಿಸಿಬಿ ಪೊಲೀಸರು, ಇನ್ನೊಂದೆಡೆ ಎನ್‌ಐಎ ಅಧಿಕಾರಿಗಳೂ ದೇಶದ ನಾನಾ ಮೂಲೆಗಳಿಂದ ಶಂಕಿತ ಉಗ್ರನ ಬೆನ್ನತ್ತಿದ್ದಾರೆ. ಇದರ ಮಧ್ಯೆ ಮತ್ತೊಂದು ಬಾಂಬ್ ಬೆದರಿಕೆ ಇಮೇಲ್ ಬಂದಿರುವುದು ಆತಂಕಕ್ಕೀಡು ಮಾಡಿದೆ.
ಈ ಹಿಂದೆ ಬೆಂಗಳೂರಿನ ಹಲವು ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಇಮೇಲ್ ಬೆದರಿಕೆಗಳು ಬಂದಿದ್ದವು. ರಾಜಭವನಕ್ಕೂ ಈಮೇಲ್ ಕಳುಹಿಸಿದ್ದ ವ್ಯಕ್ತಿಯೋರ್ವ, ಬಾಂಬ್ ಇಟ್ಟಿರುವುದಾಗಿ ತಿಳಿಸಿದ್ದ. ಆತನನ್ನು ಬಂಧಿಸಿದ್ದರು. ಬೆದರಿಕೆ ಕರೆ ಮಾಡಿದ್ದ ಭಾಸ್ಕರ್ ಎಂಬಾತನನ್ನು ಪತ್ತೆ ಮಾಡಿ ಬಂಧಿಸಿದ್ದ ಪೊಲೀಸರು, ಅಪರಾಧ ಸಂಚು ಮತ್ತು ಹುಸಿ ಕರೆ ಮಾಡಿ ಸಾರ್ವಜನಿಕರಲ್ಲಿ ಭಯ ಸೃಷ್ಟಿಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು.
ಇದನ್ನು ಓದಿದ್ದೀರಾ? ಪಾಕ್ ಪರ ಘೋಷಣೆ | ನಾಸೀರ್ ಹುಸೇನ್ ವಿರುದ್ಧವೂ ಪ್ರಕರಣ ದಾಖಲಾಗಲಿ: ಬಿ ವೈ ವಿಜಯೇಂದ್ರ
ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಎನ್ನುವುದು ದೃಢಪಟ್ಟಿದೆಯಾದರೂ, ಕಳುಹಿಸಿದವರನ್ನು ಬಂಧಿಸಲು ಪೊಲೀಸರಿಗೆ ಈವರೆಗೆ ಸಾಧ್ಯವಾಗಿಲ್ಲ ಅನ್ನೋದು ವಾಸ್ತವ. ಅಲ್ಲದೇ, ಅದರ ತನಿಖೆ ಈಗ ಯಾವ ಮಟ್ಟದಲ್ಲಿದೆ ಎಂಬುದನ್ನೂ ಕೂಡ ಪೊಲೀಸರು ಈವರೆಗೆ ಬಹಿರಂಗಪಡಿಸಿಲ್ಲ. ಈ ನಡುವೆಯೇ ಇದೀಗ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ರೀತಿಯಲ್ಲೇ ಬಸ್, ರೈಲ್ವೇ ಸ್ಟೇಷನ್ಗಳಲ್ಲಿ ಸ್ಪೋಟಿಸುವುದಾಗಿ ಬೆದರಿಕೆ ಇಮೇಲ್ ಬಂದಿರುವುದು ಸಹಜವಾಗಿಯೇ ಆತಂಕಕ್ಕೆ ಕಾರಣವಾಗಿದೆ.
