- ರಾಹುಲ್ ಗಾಂಧಿ ಪರ ಸುಪ್ರೀಂ ತಡೆ : ಕಲಬುರಗಿಯಲ್ಲಿ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ
- ಸೂರ್ಯ, ಚಂದ್ರ, ಸತ್ಯವನ್ನು ಬಹಳಷ್ಟು ದಿನ ಮುಚ್ಚಿಡಲಿಕ್ಕೆ ಆಗಲ್ಲ: ಖರ್ಗೆ
ರಾಹುಲ್ ಗಾಂಧಿಯವರ ಪ್ರಶ್ನೆ ಬಿಜೆಪಿಯವರಿಗೆ ತೊಂದರೆ ಉಂಟು ಮಾಡುತ್ತಿದೆ. ಅದಕ್ಕಾಗಿ ಅವರ ಧ್ವನಿಯನ್ನು ಅಡಗಿಸಲು ವ್ಯವಸ್ಥಿತವಾಗಿ ಯತ್ನಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಬಿಜೆಪಿ ಸರ್ಕಾರಕ್ಕೆ ಮತ್ತೆ ಪ್ರಶ್ನೆಗಳನ್ನು ಕೇಳಿ, ಸಕ್ರಿಯವಾಗಲಿದ್ದಾರೆ. ಲೋಕಸಭೆಯ ಒಳಗಡೆ ಹಾಗೂ ಹೊರಗಡೆ ಸತ್ಯದ ಘರ್ಜನೆಯಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಮೋದಿ ಉಪನಾಮ ಪ್ರಕರಣದಲ್ಲಿ ರಾಹುಲ್ ಗಾಂಧಿಯವರಿಗೆ ವಿಧಿಸಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ ಬಗ್ಗೆ ಅವರು ಪ್ರತಿಕ್ರಿಯಿಸಿದರು.
ಕಲಬುರಗಿಯಲ್ಲಿ ಇಂಧನ ಸಚಿವರಾದ ಕೆ.ಜೆ.ಜಾರ್ಜ್ ಜೊತೆಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೂರ್ಯ, ಚಂದ್ರ, ಸತ್ಯವನ್ನು ಬಹಳಷ್ಟು ದಿನ ಮುಚ್ಚಿಡಲಿಕ್ಕೆ ಆಗುವುದಿಲ್ಲ ಎಂದು ಬುದ್ಧ ಹೇಳಿದ್ದಾನೆ. ಅದೇ ರೀತಿ, ಇವತ್ತು ಸುಪ್ರೀಂ ಕೋರ್ಟ್ ರಾಹುಲ್ ಗಾಂಧಿಯವರ ಪರವಾಗಿ ನೀಡಿದ ತಡೆಯಾಜ್ಞೆಯು ರಾಷ್ಟ್ರದಲ್ಲಿ ನಡೆಯುತ್ತಿರುವ ಸತ್ಯವನ್ನು ಬಿಚ್ಚಿಟ್ಟಿದೆ. ಈ ಆದೇಶವು ಸಂವಿಧಾನದ ಗೆಲುವು, ಪ್ರಜಾಪ್ರಭುತ್ವದ ಹಾಗೂ ಕೋಟ್ಯಂತರ ಜನರ ಗೆಲುವು ಎಂದರು.
ಸಂಘಸಂಸ್ಥೆ, ಮಾಧ್ಯಮ ಹಾಗೂ ವಿಪಕ್ಷದವರು ಸರ್ಕಾರದ ವಿರುದ್ಧ ಮಾತನಾಡಿದರೆ ಅವರನ್ನು ಹೆದರಿಸುವ, ಬೆದರಿಸುವ ತಂತ್ರಗಾರಿಕೆ ನಡೆದಿದೆ. ಕಳೆದ 10 ವರ್ಷಗಳಿಂದ ಇದೇ ರೀತಿ ನಡೆಯುತ್ತಿದೆ. ಜನರ ಪರವಾಗಿ, ಸಂವಿಧಾನದ ಪರವಾಗಿ ಮಾತನಾಡುವವರನ್ನು ವ್ಯವಸ್ಥಿತ ಷಡ್ಯಂತ್ರದ ಮೂಲಕ ಸದೆಬಡಿಯಲಾಗುತ್ತಿದೆ ಎಂಬುದನ್ನು ಉತ್ತರ ಪ್ರದೇಶ ಸೇರಿದಂತೆ ಕೆಲ ರಾಜ್ಯಗಳಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಉದಾಹರಣೆ ಸಹಿತ ಸಚಿವ ಖರ್ಗೆ ವಿವರಿಸಿದರು.
ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಾಧೀಶರ ಪೀಠವು ಈ ತಡೆಯಾಜ್ಞೆ ನೀಡಿದ ವೇಳೆ ಕೆಳ ಹಂತದ ನ್ಯಾಯಾಲಯಗಳ ಪ್ರಬುದ್ಧತೆಯನ್ನು ಪ್ರಶ್ನೆ ಮಾಡಿದೆ. ಈ ಪ್ರಕರಣ ಇಲ್ಲಿಯತನಕ ಬರುವಂತಹ ಅವಶ್ಯಕತೆಯೇ ಇರಲಿಲ್ಲ ಎಂಬುದನ್ನು ಹೇಳಿದೆ. ಈ ಪ್ರಕರಣ ದಾಖಲಾಗಿ, ಓರ್ವ ಚುನಾಯಿತ ಜನಪ್ರತಿನಿಧಿಗೆ ಶಿಕ್ಷೆಯಾಗಿರುವುದಲ್ಲದೇ, ಅನರ್ಹತೆಯಾಗಿರುವುದರ ಬಗ್ಗೆ ದೇಶದ ನೂರಾರು ಕಾನೂನು ತಜ್ಞರೇ ಆಶ್ಚರ್ಯಪಟ್ಟಿದ್ದರು. ನನ್ನ ಪ್ರಕಾರ, ಇದು ದಾಖಲಾಗಬೇಕಾದ ಪ್ರಕರಣವೇ ಅಲ್ಲ. ಯಾವ ಮಟ್ಟಕ್ಕೆ ಇವರು ವ್ಯವಸ್ಥೆಯನ್ನು ದುರುಪಯೋಗ ಪಡಿಸಿದ್ದಾರೆ ಎಂಬುದು ತಿಳಿದುಬರುತ್ತದೆ ಎಂದು ಸಚಿವ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಏನೇ ಇರಲಿ, ನ್ಯಾಯಾಲಯದ ಮೇಲೆ ರಾಹುಲ್ ಗಾಂಧಿ ಸಹಿತ ಎಲ್ಲರಿಗೂ ನಂಬಿಕೆ ಇತ್ತು. ಸುಪ್ರೀಂ ಕೋರ್ಟ್ ಆ ನಂಬಿಕೆಯನ್ನು ಉಳಿಸಿಕೊಂಡಿದೆ. ರಾಹುಲ್ ಗಾಂಧಿಯವರ ಪ್ರಾಮಾಣಿಕ ಹೋರಾಟ ಮತ್ತು ಬುದ್ಧ, ಬಸವ, ಅಂಬೇಡ್ಕರ್ ಹೋರಾಟವನ್ನು ಈ ಆದೇಶ ಎತ್ತಿ ಹಿಡಿದಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
‘ರಾಹುಲ್ ಗಾಂಧಿ ಹೇಳಿಕೆ ನೀಡಿರುವುದು ಕೋಲಾರದಲ್ಲಿ. ಆದರೆ ಪ್ರಕರಣ ದಾಖಲಾಗಿ ಎಲ್ಲ ನಡೆಯುತ್ತಿರುವುದು ಗುಜರಾತ್‌ನಲ್ಲಿ. ಅದರಲ್ಲೇ ನಮಗೆ ಗೊತ್ತಾಗುತ್ತದೆ ಯಾವ ರೀತಿ ವ್ಯವಸ್ಥಿತವಾಗಿ ಅವರ ಧ್ವನಿಯನ್ನು ಅಡಗಿಸಲಾಗುತ್ತದೆ ಎಂಬುದು. ನ್ಯಾಯಾಲಯದ ಮೇಲೆ ಎಲ್ಲರಿಗೂ ನಂಬಿಕೆ ಇತ್ತು. ಹಾಗಾಗಿಯೇ ನಮ್ಮ ನಂಬಿಕೆಗೆ ಗೆಲುವಾಗಿದೆ’ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ತಿಳಿಸಿದರು.