ರಾಜ್ಯಗಳ ಚುನಾವಣೆಗಳಲ್ಲಿ ಮತದಾರರು ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಮತ ನೀಡುತ್ತಾರೆಯೇ ವಿನಃ, ರಾಜಕೀಯ ವಿಷಯಗಳ ಮೇಲಲ್ಲ ಎಂದು ಅನೇಕ ಚುನಾವಣಾ ಅಧ್ಯಯನಗಳು ಹೇಳಿವೆ. ಅದನ್ನು ಕರ್ನಾಟಕದ ಚುನಾವಣೆ ಮತ್ತೊಮ್ಮೆ ಸಾಬೀತುಪಡಿಸಿದೆ.
ಇತ್ತೀಚೆಗೆ ನಡೆದ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ. 2018ರ ಚುನಾವಣೆ ಬಳಿಕ, ಆಪರೇಷನ್ ಕಮಲದ ಮೂಲಕ ಅಧಿಕಾರ ದಕ್ಕಿಸಿಕೊಂಡಿದ್ದ ಕೇಸರಿ ಪಡೆ, ಈ ಬಾರಿಯೂ ಜನಮನ್ನಣೆ ಪಡೆಯುವಲ್ಲಿ ವಿಫಲವಾಗಿದೆ. ಇದೇ ಸಮಯದಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿಯೂ ಬಿಜೆಪಿ ನೆಲೆ ಕಳೆದುಕೊಳ್ಳುತ್ತಿದೆ. ಇದೆಲ್ಲದಕ್ಕೂ ಮೂಲ ಕಾರಣವೇನು ಎಂಬುದನ್ನು ಅರಿಯವುದು ಬಿಜೆಪಿಗೆ ತೀರಾ ಕಷ್ಟವೇನೂ ಆಗಲಾರದು. ಆದರೂ, ಅದು ತನ್ನ ತಂತ್ರಗಳನ್ನು ಬದಲಿಸಿಕೊಳ್ಳಲು ಅಹಂ ಎದುರಾಗಿದೆ.
ಕೇಂದ್ರ ಸರ್ಕಾರದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ಮೋದಿ ಅವರು ಕರ್ನಾಟಕದಲ್ಲಿ ಭಾರೀ ರೋಡ್ ಶೋಗಳನ್ನು ನಡೆಸಿದರು. ಕಳೆದ ಒಂಬತ್ತು ವರ್ಷಗಳಲ್ಲಿ ರಾಜ್ಯಕ್ಕೆ ಭೇಟಿ ನೀಡಿದ್ದಕ್ಕಿಂತ ಹೆಚ್ಚು ಬಾರಿ, ಈ ಚುನಾವಣಾ ಸಮಯದಲ್ಲಿ ಭೇಟಿ ನೀಡಿದರು. ಅವರು ಮಾತ್ರವಲ್ಲದೆ, ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿಯೇ ಬೀಡುಬಿಟ್ಟವರಂತೆ ಕಾಣಿಸಿಕೊಳ್ಳುತ್ತಿದ್ದರು. ಬಿಜೆಪಿ ಅಧಿಕಾರದಲ್ಲಿರುವ ನಾನಾ ರಾಜ್ಯಗಳ ಮುಖ್ಯಮಂತ್ರಿಗಳೂ ಬಂದು ಪ್ರಚಾರ ನಡೆಸಿದರು. ಆದರೂ, ರಾಜ್ಯವನ್ನು ಬಿಜೆಪಿ ಗೆಲ್ಲಲಾಗಲಿಲ್ಲ. ಅದಕ್ಕೆ ಕಾರಣ, ಸ್ಥಳೀಯ ನಾಯಕತ್ವ ಅಥವಾ ರಾಜ್ಯ ನಾಯಕತ್ವದ ಕೊರತೆ.
ರಾಜ್ಯ ಚುನಾವಣೆಗಳಲ್ಲಿ ಮತದಾರರು ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಮತ ನೀಡುತ್ತಾರೆಯೇ ವಿನಃ, ರಾಜಕೀಯ ವಿಷಯಗಳ ಮೇಲಲ್ಲ ಎಂದು ಅನೇಕ ಚುನಾವಣಾ ಅಧ್ಯಯನಗಳು ಹೇಳಿವೆ. ಅದನ್ನು ಕರ್ನಾಟಕದ ಚುನಾವಣೆ ಮತ್ತೊಮ್ಮೆ ಸಾಬೀತುಪಡಿಸಿದೆ.
ಅದಂತೆಯೇ, ರಾಜ್ಯದಲ್ಲಿ ಕಾಂಗ್ರೆಸ್ ರಾಜ್ಯ ನಾಯಕತ್ವದೊಂದಿಗೆ ಚುನಾವಣೆಯನ್ನು ಎದುರಿಸಿತು. ಇವತ್ತಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಚುನಾವಣಾ ಪ್ರಚಾರವನ್ನು ಮುನ್ನಡೆಸಿದ್ದರು. ಜೊತೆಗೆ, ರಾಜ್ಯ ರಾಜಕೀಯದ ಅರಿವಿದ್ದ, ರಾಜ್ಯದವರೇ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಸಾರಥ್ಯ ವಹಿಸಿದ್ದರು. ದೇಶ, ಗಡಿ, ಧರ್ಮ ಎನ್ನದೆ, ‘ಸಾಮಾಜಿಕ ನ್ಯಾಯ’ದ ಪರಿಕಲ್ಪನೆಯ ಆಶಯದೊಂದಿಗೆ ಚುನಾವಣೆ ಎದುರಿಸಿದರು. ಅದು ರಾಜ್ಯದಲ್ಲಿ ಕಳೆದ 30 ವರ್ಷಗಳಲ್ಲಿ ಕಾಂಗ್ರೆಸ್ ಕಾಣದಿದ್ದಂಥ ಗೆಲುವನ್ನು ತಂದುಕೊಟ್ಟಿತು.
ಈ ಸುದ್ದಿ ಓದಿದ್ದೀರಾ?: ಎಐಸಿಸಿ ಅಧ್ಯಕ್ಷರಾಗಿ ಖರ್ಗೆ ಆಯ್ಕೆ ಕಾಂಗ್ರೆಸ್‌ನ ಅತ್ಯುತ್ತಮ ನಿರ್ಧಾರ: 9 ಕಾರಣಗಳು
ಆದರೆ, ಚುನಾವಣಾ ಸಮಯದಲ್ಲಿ ಬಿಬಿಜೆಯಲ್ಲಿ ರಾಜ್ಯ ನಾಯಕತ್ವದ ಕೊರತೆ ಎದ್ದುಕಾಣುತ್ತಿತ್ತು. ಐದಾರು ತಿಂಗಳ ಹಿಂದೆ, ತಾವು ಅಗ್ರೆಸ್ಸಿವ್ ಆಗಬೇಕೆಂದು ಆಗಿನ ಸಿಎ ಆಗಿದ್ದ ಬೊಮ್ಮಾಯಿ ಅವರು ‘ದಮ್ಮು, ತಾಕತ್ತು’ ಎಂಬ ಪದ ಬಳಕೆ ಮಾಡಿದ್ದರು. ಆದರೂ, ಅವರು ಬಿಜೆಪಿಗೆ ಸಮರ್ಥ ನಾಯಕತ್ವ ನೀಡಲಾಗಲಿಲ್ಲ. ಚುನಾವಣೆಯ ಸಮಯದಲ್ಲಿ ಬಿಜೆಪಿಯ ಪರಿಸ್ಥಿತಿ ಹೇಗಿತ್ತೆಂದರೆ, ‘ಒಂದು ವೇಳೆ ಬಿಜೆಪಿ ಸೋತು, ವಿಪಕ್ಷದಲ್ಲಿ ಕುಳಿತರೆ, ವಿರೋಧ ಪಕ್ಷದ ನಾಯಕರು ಯಾರಾಗಬಹುದು’ ಎಂದು ಚಿಂತಿಸಬೇಕಾದ ಸ್ಥಿತಿಯಲ್ಲಿತ್ತು. ಜೊತೆಗೆ, ತಾವೇ ಅಧಿಕಾರದಲ್ಲಿದ್ದರೂ ತಮ್ಮ ಸಾಧನೆಗಳ ಬದಲಿಗೆ, ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಬಗ್ಗೆ ಟೀಕೆ ಮಾಡಿ ಮತ ಕೇಳುವಂತಾಗಿತ್ತು. ಮೋದಿ, ಅಮಿತ್ ಶಾ ಕೂಡ ಇದನ್ನೇ ಮಾಡಿದರು. ಹೀಗಾಗಿ, ರಾಷ್ಟ್ರ ನಾಯಕರು ರಾಜ್ಯದಲ್ಲಿ ಅಬ್ಬರಿಸಿ-ಬೊಬ್ಬಿರಿದರೂ, ಫಲ ಸಿಗಲಿಲ್ಲ.
ದುರ್ಬಲ ಮುಖ್ಯಮಂತ್ರಿಯಿಂದ ಗೆಲುವು ಸಾಧ್ಯವಿಲ್ಲ
ರಾಜ್ಯಗಳ ಚುನಾವಣೆಗಳಲ್ಲಿ ಆಡಳಿತಾರೂಢ ಪಕ್ಷದ ಅಳಿವು-ಉಳಿವು ಮುಖ್ಯಮಂತ್ರಿಯ ನಾಯಕತ್ವದೊಂದಿಗೆ ಅವಿನಾಬಾವ ಸಂಬಂಧ ಹೊಂದಿರುತ್ತದೆ. ಅವರು ಆಡಳಿತದ ಮುಖವಾಗುವ ಜೊತೆಗೆ ಚುನಾವಣಾ ಪ್ರಚಾರದಲ್ಲಿ ಪಕ್ಷದ ಪ್ರಮುಖ ಮುಖವೂ ಆಗಿರುತ್ತಾರೆ.
ಅದರಂತೆ, ಉತ್ತರ ಪ್ರದೇಶ, ಅಸ್ಸಾಂ ಮತ್ತು ಮಣಿಪುರ ರಾಜ್ಯಗಳಲ್ಲಿ ಚುನಾವಣಾ ಸಮಯದಲ್ಲಿ ಪ್ರಬಲರನ್ನು ಬಿಜೆಪಿ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿತ್ತು. ಆ ರಾಜ್ಯಗಳಲ್ಲಿ ಬಿಜೆಪಿ ಮರು ಆಯ್ಕೆಯಾಗಿ ಅಧಿಕಾರಕ್ಕೇರಿತು. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಬಿಜೆಪಿ ರಾಷ್ಟ್ರ ನಾಯಕರ ಸಾಲಿಗೆ ನಿಂತವರಂತೆ ರಾಜ್ಯದಲ್ಲಿ ಕಾಣಿಸಿಕೊಂಡಿದ್ದರು.
ಅಸ್ಸಾಂನ ಮಾಜಿ ಮುಖ್ಯಮಂತ್ರಿ ಮತ್ತು ಕೇಸರಿ ಪಕ್ಷದ ನಾಯಕ ಸರ್ಬಾನಂದ ಸೋನೋವಾಲ್ ಆ ರಾಜ್ಯದಲ್ಲಿ ಹೆಚ್ಚಿನ ಪ್ರಭಾವ ಹೊಂದಿದ್ದರು. ಜೊತೆಗೆ, ಸೋನೋವಾಲ್ ಉತ್ತರಾಧಿಕಾರಿಯಾಗಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಮುಖ್ಯಮಂತ್ರಿಯಾಗಿ ಬಿಜೆಪಿ ನೇಮಿಸಿತು. ಶರ್ಮಾ ಅವರು ಈಶಾನ್ಯ ರಾಜ್ಯಗಳ ಪ್ರಮುಖ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಸೋನೋವಾಲ್ ಮತ್ತು ಶರ್ಮಾ ಅವರ ನಾಯಕತ್ವವು ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತಂದಿತು.
ಯೋಗಿ ಅಥವಾ ಶರ್ಮಾ ಅವರಂತಹ ಪ್ರಬಲ ನಾಯಕರು ಮುಖ್ಯಮಂತ್ರಿಗಳಾಗಿದ್ದಾಗ, ಜನರ ಗಮನವು ಅವರ ಮೇಲೆ ಕೇಂದ್ರೀಕೃತವಾಗಿರುತ್ತದೆ. ಅದು ಜನರ ಗಮನವನ್ನು ಪಕ್ಷದತ್ತ ಸೆಳೆಯುತ್ತದೆ.
ಆದರೆ, ಬಸವರಾಜ್ ಬೊಮ್ಮಾಯಿಯಂತಹ ದುರ್ಬಲ ಮುಖ್ಯಮಂತ್ರಿಗಳ ಉಪಸ್ಥಿತಿಯು ಪಕ್ಷಕ್ಕೆ ಪ್ರಯೋಜನ ತರುವುದಿಲ್ಲ. ಆಡಳಿತ ವಿರೋಧಿ ಭಾವನೆಗಳನ್ನು ಶಮನ ಮಾಡಲಾಗದೆ, ದುರ್ಬಲ ಆಡಳಿತವೆಂಬ ಹಣೆಪಟ್ಟಿ ಕಟ್ಟಿಕೊಳ್ಳುತ್ತದೆ. ಅದನ್ನು ಅನಿವಾರ್ಯವಾಗಿ ಬಿಜೆಪಿ ಒಪ್ಪಿಕೊಳ್ಳಬೇಕಾಗುತ್ತದೆ. ರಾಜ್ಯದಲ್ಲಿ ಇದೆಲ್ಲವೂ ತೆರೆಯ ಮೇಲೆಯೇ ನಡೆದಿವೆ.

ಕೊರೊನಾ ಸಮಯದಲ್ಲಿ ಉತ್ತರ ಪ್ರದೇಶದಲ್ಲಿ ಗಂಗಾ ತೀರದಲ್ಲಿ ಮೃತದೇಹಗಳು ತೇಲಿದವು. ಇದು ರಾಷ್ಟ್ರಾದ್ಯಂತ ಚರ್ಚೆಯಾಯಿತು. ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಆದರೂ, ಏನೂ ಆಗಿಯೇ ಇಲ್ಲವೆಂಬಂತೆ ಯೋಗಿ ಆದಿತ್ಯನಾಥ್, ಸಾರ್ವಜನಿಕರ ಕೋಪವನ್ನು ನಿರ್ವಹಿಸಿದರು. ಮಾತ್ರವಲ್ಲ, ಕಳೆದ ವರ್ಷ ಆ ರಾಜ್ಯದಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದಿತು. ಆದರೆ, ಕರ್ನಾಟಕದಲ್ಲಿ ಕೊರೊನಾ ಕಿಟ್ ಹಗರಣವನ್ನು ಮುಚ್ಚಿಕೊಳ್ಳಲು ಬಿಜೆಪಿಗೆ ಸಾಧ್ಯವಾಗಲಿಲ್ಲ. ಜೊತೆಗೆ, ಪಿಎಸ್‌ಐ ಹಗರಣ, ಮೊಟ್ಟೆ ಹಗರಣ, ಶಿಕ್ಷಕರ ನೇಮಕಾತಿ ಹಗರಣ, 40% ಕಮಿಷನ್ ಸೇರಿದಂತೆ ಹಲವಾರು ಆರೋಪಗಳನ್ನು ನಿಭಾಯಿಸಲು ಬಿಜೆಪಿಗೆ ಸಾಧ್ಯವಾಗಲಿಲ್ಲ.
ಮುಖ್ಯಮಂತ್ರಿ ಬದಲಾವಣೆ; ಉತ್ತರದಂತಲ್ಲ ಎಂದ ಕರ್ನಾಟಕ
ಕೇಂದ್ರ ನಾಯಕತ್ವದ ಇಚ್ಛಾಶಕ್ತಿಗೆ ತಕ್ಕಂತೆ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳನ್ನು ಬದಲಿಸುವುದು ಒಳ್ಳೆಯದಲ್ಲ ಎಂಬುದುನ್ನು ಬಿಜೆಪಿ ಅರಿತುಕೊಳ್ಳಬೇಕೆಂದು ಕರ್ನಾಟಕ ಎಚ್ಚರಿಕೆ ನಿಡಿದೆ. ಆಪರೇಷನ್ ಕಮಲ ಮಾಡಿ, ಉಪಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿಕೊಂಡು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರನ್ನು ದಿಢೀರನೆ ಕೆಳಗಿಳಿಸಿ, ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ತಪ್ಪು ನಿರ್ಧಾರವೆಂದು ರಾಜ್ಯದ ಚುನಾವಣೆ ತೊರಿಸಿದೆ.
ಈದಿನ.ಕಾಮ್ ಸೇರಿದಂತೆ ಹಲವು ಸಂಸ್ಥೆಗಳ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಗಳು, ಬೊಮ್ಮಾಯಿ ಅವರ ಜನಪ್ರಿಯತೆ ಕುಸಿದಿದೆ ಎಂಬುದನ್ನು ಗುರುತಿಸಿದ್ದವು. ನಾಯಕತ್ವದಲ್ಲಿನ ಹಠಾತ್ ಬದಲಾವಣೆಯನ್ನು ಮತದಾರರು ತಿರಸ್ಕರಿಸಿರುತ್ತಾರೆ ಎಂದು ಹೇಳಿದ್ದವು. ಇದು ಬಿಜೆಪಿಯ ಆಂತರಿಕ ಸಮೀಕ್ಷೆಯಲ್ಲೂ ಗುರುತಿಸಲ್ಪಟ್ಟಿಲ್ಲ ಎಂದಲ್ಲ, ಆದರೆ, ಬಿಜೆಪಿ ಅದನ್ನು ಒಪ್ಪಿಕೊಳ್ಳಲಿಲ್ಲವಷ್ಟೇ. ಆದರೂ, ಈ ಹಿಂದೆ ಯಡಿಯೂರಪ್ಪರನ್ನು ಸಂಪೂರ್ಣವಾಗಿ ಮೂಲೆ ಗುಂಪಾಗಿಸಿದ್ದ ಬಿಜೆಪಿ, ಚುನಾವಣಾ ಸಮಯದಲ್ಲಿ ಯಡಿಯೂರಪ್ಪ ಮಾತಿಗೆ ಬೆಲೆ ಕೊಡಲಾರಂಭಿಸಿತು. ಆದರೆ, ಅವರಿಗೆ ಚುನಾವಣಾ ನಾಯಕತ್ವ ನೀಡಲು ಬಿಜೆಪಿ ಮುಂದಾಗಲಿಲ್ಲ.
ರಾಜ್ಯಗಳಲ್ಲಿ ಪದೇ ಪದೇ ಮುಖ್ಯಮಂತ್ರಿಯನ್ನು ಬದಲಿಸುವುದು ಕೇಂದ್ರ ನಾಯಕರ ಅಧಿಕಾರವನ್ನು ಹೆಚ್ಚಿಸಬಹುದು. ಆದರೆ, ಇದು ರಾಜ್ಯ ಘಟಕಗಳಿಗೆ ಭಾರೀ ಹೊಡೆತ ಕೊಡುತ್ತದೆ ಎಂಬುದನ್ನು ಈ ಚುನಾವಣೆ ಸ್ಪಷ್ಟಪಡಿಸಿದೆ.
ಕೈಹಿಡಿಯದ ಹಿಂದುತ್ವ
ಉತ್ತರದ ರಾಜ್ಯಗಳಂತೆ ದಕ್ಷಿಣದ ರಾಜ್ಯಗಳಲ್ಲಿ ಹಿಂದುತ್ವ ಅಥವಾ ಕೋಮುವಾದದ ಮೇಲೆ ಮತ ಧ್ರುವೀಕರಣ ಸಾಧ್ಯವಾಗದು ಎಂಬುದನ್ನೂ ಕರ್ನಾಟಕದ ಚುನಾವಣೆ ಸಾಬೀತುಪಡಿಸಿದೆ. ದಕ್ಷಿಣದ ರಾಜ್ಯಗಳ ಪೈಕಿ, ಕರ್ನಾಟಕದಲ್ಲಿ ಮಾತ್ರವೇ ಬಿಜೆಪಿ ತನ್ನ ಪ್ರಾಬಲ್ಯವನ್ನು ಬೆಳೆಸಿಕೊಂಡಿದ್ದದ್ದು. ಅದೂ, ಪ್ರಾದೇಶಿಕ ಪಕ್ಷದ ಅವಕಾಶವಾದಿತನದಿಂದ. ಕಾಂಗ್ರೆಸ್ ಜೊತೆಗೆ ಮತ್ತೊಂದು ಪ್ರಬಲ ವಿರೋಧ ಪಕ್ಷವು ರಾಜ್ಯದಲ್ಲಿಲ್ಲದೇ ಇದ್ದದ್ದೂ ಕೂಡ ಬಿಜೆಪಿ ಬೆಳವಣಿಗೆಗೆ ಕಾರಣವೇ ಹೊರತು ಹಿಂದುತ್ವದ ಅಜೆಂಡಾ ಅಲ್ಲ ಎಂಬುದನ್ನು ಬಿಜೆಪಿ ನಾಯಕರು ಒಪ್ಪಿಕೊಳ್ಳಬೇಕು.
ಅದು ಸ್ಪಷ್ಟವಾಗಿರುವ ಕಾರಣದಿಂದಾಗಿಯೇ, ಬಿಜೆಪಿ ತನ್ನ ಹಿಂದುತ್ವದ ಪ್ರಯೋಗಶಾಲೆಯಾಗಿಸಿಕೊಂಡಿರುವ ಕರಾವಳಿಯನ್ನು ಬಿಟ್ಟು, ಬೇರೆಲ್ಲೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಾಗಿಲ್ಲ. ಇಂದಿನ ಜಾಗತೀಕರಣದ ಜಗತ್ತಿನಲ್ಲಿ ವಿಭಿನ್ನ ಪ್ರದೇಶಗಳು ವಿಭಿನ್ನ ಮತ್ತು ವಿಶಿಷ್ಟ ಸಾಂಸ್ಕೃತಿಕ, ಜನಸಂಖ್ಯಾ ಮತ್ತು ಐತಿಹಾಸಿಕ ಅಂಶಗಳನ್ನು ಹೊಂದಿವೆ. ಅವುಗಳನ್ನು ಗೌರವಿಸದೇ, ದೂರದ ಗುಮ್ಮನನ್ನು (ಹಿಂದುತ್ವ, ಗಡಿ) ತೋರಿಸಿ ಚುನಾವಣೆ ಗೆಲ್ಲಲು ಸಾದ್ಯವಿಲ್ಲ.
ಈ ಸುದ್ದಿ ಓದಿದ್ದೀರಾ?: ಬಿಜೆಪಿಗೆ ವಿರುದ್ಧವಾಗಿ ಪುತ್ತಿಲ ಪರಿವಾರ; ಕರಾವಳಿಯಲ್ಲಿ ಹಿಂದುತ್ವಕ್ಕೆ ಹಿಂದುತ್ವವೇ ವೈರಿ!
ಕರ್ನಾಟಕದ ರಾಜಕೀಯದಲ್ಲಿ ಹಿಂದುತ್ವವನ್ನು ಮುನ್ನೆಲೆಗೆ ತರಲು ಯತ್ನಿಸಿದ್ದ ಕೇಸರಿ ಪಡೆ, ಹಿಜಾಬ್, ಹಲಾಲ್, ಟಿಪ್ಪು, ಲವ್ ಜಿಹಾದ್, ದಿ ಕೇರಳ ಸ್ಟೋರಿ ಹಾಗೂ ಪಿಎಫ್‌ಐ ನಿಷೇಧದಂತಹ ಅಜೆಂಡಾಗಳನ್ನು ತುರುಕತೊಡಗಿತ್ತು. ಆದರೆ, ಕರಾವಳಿ ಹೊರತುಪಡಿಸಿ, ಉಳಿದೆಲ್ಲೂ ಇವು ಫಲ ನೀಡಲಿಲ್ಲ.
ಈ ವಿಚಾರಗಳು, ಉತ್ತರ ಭಾರತದ ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಕೆಲಸ ಮಾಡಬಹುದು. ಆದರೆ, ಅದೇ ಭಾಗದ ಹಿಂದಿಯೇತರ ರಾಜ್ಯಗಳಲ್ಲಿ ಪ್ರಾಮುಖ್ಯತೆ ಪಡೆದಿಲ್ಲ. ಇನ್ನು, ದಕ್ಷಿಣದಲ್ಲಿ ದ್ರಾವಿಡ ಸಂಸ್ಕೃತಿಯ ನೆಲೆದಲ್ಲಿ ಹಿಂದುತ್ವ ಸಿದ್ಧಾಂತವನ್ನು ಜಾರಿಗೊಳಿಸುವುದು ಬಿಜೆಪಿಯ ವಿಫಲ ಪ್ರಯತ್ನವಾಗಿದೆ ಎಂದು ಚುನಾವಣೆ ಒತ್ತಿ ಹೇಳಿದೆ.
ಬಿಜೆಪಿಯ ಹಿಂದುತ್ವವಾದಿ ಸಿದ್ಧಾಂತದಿಂದಾಗಿ ರಾಜ್ಯದ ಮುಸ್ಲಿಂ ಸಮುದಾಯವು ಬಹುತೇಕ ಕಾಂಗ್ರೆಸ್ ಜೊತೆಗೆ ನಿಲ್ಲುವಂತೆ ಮಾಡಿತು.
ರಾಜ್ಯದಲ್ಲಿ ದುರ್ಬಲ ಮುಖ್ಯಮಂತ್ರಿ, ಅಸಮರ್ಥ ಆಡಳಿತ, ರಾಜ್ಯ ನಾಯಕತ್ವದ ಕೊರತೆ ಮತ್ತು ಸ್ಥಳೀಯ ನಾಯಕತ್ವದೊಂದಿಗಿನ ಕಾಂಗ್ರೆಸ್ ಗೆಲುವು ಬಿಜೆಪಿಗೆ ಬದಲಾವಣೆಯ ಪಾಠವನ್ನು ಕಲಿಸಿದೆ.