ಎಐಸಿಸಿ ಅಧ್ಯಕ್ಷರಾಗಿ ಖರ್ಗೆ ಆಯ್ಕೆ ಕಾಂಗ್ರೆಸ್‌ನ ಅತ್ಯುತ್ತಮ ನಿರ್ಧಾರ: 9 ಕಾರಣಗಳು

Date:

ಈ ವರ್ಷದ ಅಂತ್ಯದಲ್ಲಿ ಚುನಾವಣೆ ನಡೆಯುವ ರಾಜಸ್ಥಾನ ಮತ್ತು ಛತ್ತೀಸ್‌ಗಢವನ್ನು ಉಳಿಸಿಕೊಳ್ಳುವ, ಆಪರೇಷನ್‌ ಕಮಲಕ್ಕೆ ಬಲಿಯಾದ ಮಧ್ಯಪ್ರದೇಶವನ್ನು ಮರಳಿ ಪಡೆಯುವ ಹಾಗೂ ಮಿಜೋರಾಂ, ತೆಲಂಗಾಣದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಮತ್ತು ಗೆಲ್ಲಲು ಕಾಂಗ್ರೆಸ್‌ ಶ್ರಮಿಸಬೇಕಿದೆ. ಖರ್ಗೆ ಅವರ ಜವಾಬ್ದಾರಿ ಹೆಚ್ಚಾಗಿದೆ. 

ಕರ್ನಾಟಕದಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಿದೆ. ಯಾವುದೇ ಆಪರೇಷನ್‌ಗೂ ಅಲುಗಾಡದೆ ಸರ್ಕಾರ ನಡೆಸುವಷ್ಟು ಸ್ಥಾನಗಳನ್ನು ಕೈ ಪಡೆ ಗೆಲುವು ಸಾಧಿಸಿದೆ. ಈ ಗೆಲುವಿಗೆ ಕಾಂಗ್ರೆಸ್‌ನ ರಾಷ್ಟ್ರಾಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ನೇಮಕವಾಗಿದ್ದೂ ಪ್ರಮುಖ ಕಾರಣ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ.

ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ನೇಮಕವಾದ ಏಳು ತಿಂಗಳ ಬಳಿಕ, ಅವರ ತವರು ರಾಜ್ಯದಲ್ಲಿ ಚುನಾವಣೆ ನಡೆದಿದ್ದು, ಕೈ ಪಕ್ಷ ಭಾರೀ ಬಹುಮತ ಪಡೆದು ಅಧಿಕಾರಕ್ಕೇರಿದೆ. ಈ ಚುನಾವಣೆಯಲ್ಲಿ ಖರ್ಗೆ ಅವರು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದರು. ಅವರು ತಮ್ಮ ಹಿರಿತನ ಮತ್ತು ಅವರಿಗಿದ್ದ ರಾಜ್ಯದ ಬಗೆಗಿನ ಸಂಪೂರ್ಣ ಜ್ಞಾನದಿಂದ ಚುನಾವಣೆಯನ್ನು ನಿರಾಳವಾಗಿ ನಿಭಾಯಿಸಿದರು. ಮಾತ್ರವಲ್ಲದೆ, ಪ್ರಮುಖ ಇಬ್ಬರು ಸ್ಪರ್ಧಿಗಳಾಗಿದ್ದ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್‌ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸರ್ಕಾರ ರಚಿಸಿ, ಅವರಿಬ್ಬರು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಎಲ್ಲವನ್ನೂ ನಿಭಾಯಿಸಿದರು.

ಕರ್ನಾಟಕದ ಗೆಲುವು ಎಐಸಿಸಿ ಅಧ್ಯಕ್ಷರಲ್ಲಿ ಮತ್ತಷ್ಟು ಉತ್ಸಾಹವನ್ನು ಹೆಚ್ಚಿಸಿದೆ. ಈಗ ಅವರು ರಾಷ್ಟ್ರ ಮಟ್ಟದಲ್ಲಿ ಪಕ್ಷವನ್ನು ಬಲಗೊಳಿಸಲು ಸಜ್ಜಾಗುತ್ತಿದ್ದಾರೆ. ಅಲ್ಲದೆ, ಈ ವರ್ಷದ ಕೊನೆಯಲ್ಲಿ ನಡೆಯುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮತ್ತು ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯತ್ತ ಗಮನ ಹರಿಸುತ್ತಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ವಿಪಕ್ಷಗಳನ್ನು ಒಗ್ಗೂಡಿಸುವ ಕಸರತ್ತೂ ಕೂಡ ನಡೆಯುತ್ತಿದ್ದು, ಮೇ 22ರಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರೊಂದಿಗೆ ಸಭೆ ನಡೆಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಛತ್ತೀಸ್‌ಗಢ, ಮಧ್ಯಪ್ರದೇಶ, ಮಿಜೋರಾಂ, ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ಈ ವರ್ಷದ ನವೆಂಬರ್-ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ. ಅದಕ್ಕಾಗಿ, ಕಾಂಗ್ರೆಸ್‌ ಸಿದ್ದತೆಗಾಗಿ ಖರ್ಗೆ ಅವರು ಉನ್ನತ ಮಟ್ಟದ ಸಭೆಗಳನ್ನು ನಡೆಸಲು ತಯಾರಿ ನಡೆಸುತ್ತಿದ್ದಾರೆ. ರಾಜಸ್ಥಾನ ಮತ್ತು ಛತ್ತೀಸ್‌ಗಢವನ್ನು ಉಳಿಸಿಕೊಳ್ಳುವ, ಆಪರೇಷನ್‌ ಕಮಲಕ್ಕೆ ಬಲಿಯಾದ ಮಧ್ಯಪ್ರದೇಶವನ್ನು ಮರಳಿ ಪಡೆಯುವ ಹಾಗೂ ಉಳಿದ ಎರಡು ರಾಜ್ಯಗಳಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಮತ್ತು ಗೆಲ್ಲಲು ಕಾಂಗ್ರೆಸ್‌ ಶ್ರಮಿಸಬೇಕಿದೆ. ಖರ್ಗೆ ಅವರಿಗೆ ಜವಾಬ್ದಾರಿ ಹೆಚ್ಚಾಗಿದೆ. ಅವರು ಎಲ್ಲವನ್ನೂ ನಿಭಾಯಿಸುತ್ತಾರೆಂಬ ವಿಶ್ವಾಸವೂ ಕಾಂಗ್ರೆಸ್‌ ಇತರ ನಾಯಕರಲ್ಲಿದೆ.

ಖರ್ಗೆ ಮೇಲಿನ ಕಾಂಗ್ರೆಸ್‌ ವಿಶ್ವಾಸಕ್ಕೆ ಪ್ರಮುಖ ಒಂಬತ್ತು ಅಂಶಗಳಿವೆ:

1. 24/7 ರಾಜಕಾರಣಿ

ಕಾಂಗ್ರೆಸ್ ಅಧ್ಯಕ್ಷರು ಪಟ್ಟುಬಿಡದ ರಾಜಕಾರಣಿ ಎಂದೇ ಹೆಸರಾಗಿದ್ದಾರೆ. ಅವರು ಕರ್ನಾಟಕ ಚುನಾವಣೆಯಲ್ಲಿ 40ಕ್ಕೂ ಹೆಚ್ಚು ರ್‍ಯಾಲಿಗಳು ಮತ್ತು ಅಸಂಖ್ಯಾತ ತೆರೆಮರೆಯ ಸಭೆಗಳನ್ನು ನಡೆಸಿದ್ದಾರೆ. ಪಕ್ಷದೊಳಗೆ ಮಾತ್ರವಲ್ಲದೆ ಸಾಮಾಜಿಕ ಸಂಘಟನೆಗಳೊಂದಿಗೆ ಕೂಡ ಚರ್ಚೆ-ಸಭೆಗಳನ್ನು ನಡೆಸಿದ್ದಾರೆ. ಸಾಮಾಜಿಕ ವಲಯದಿಂದ ಪಕ್ಷಕ್ಕೆ ಬೆಂಬಲ ತರುವಲ್ಲಿ ಭಾರೀ ಶ್ರಮ ವಹಿಸಿದ್ದಾರೆ.

ಯಾವುದೇ ವಿಷಯವನ್ನು ಇತ್ಯರ್ಥಪಡಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆಯೋ ಅಷ್ಟು ಸಮಯದವರೆಗೆ ಮಾತುಕತೆ ನಡೆಸಲು ಖರ್ಗೆ ಸಿದ್ಧರಿದ್ದಾರೆ. ಡಿ ಕೆ ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿ ಸ್ಥಾನಕ್ಕೆ ಮನವೊಲಿಸಿದ್ದು, ಅಂತಹ ಶ್ರಮಕ್ಕೆ ಒಂದು ಉದಾಹರಣೆಯಾಗಿದೆ.

ಕಳೆದೊಂದು ದಶಕದಲ್ಲಿ ಕಾಂಗ್ರೆಸ್‌ ಕಳೆದುಕೊಂಡಿದ್ದ ಇಮೇಜ್‌ ಅನ್ನು ಮತ್ತೆ ಮರಳಿ ತರಲು ಅವರು ಕಸರತ್ತು ನಡೆಸುತ್ತಿದ್ದಾರೆ.

2. ಖರ್ಗೆ-ರಾಹುಲ್ ಗಾಂಧಿ ಸಮೀಕರಣ

ಖರ್ಗೆ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದರೂ, ಭಾರತ್ ಜೋಡೋ ಯಾತ್ರೆಯ ನಂತರ ರಾಹುಲ್ ಗಾಂಧಿ ಪಕ್ಷದಲ್ಲಿ ಯುವಸಮೂಹದ ಮುಖವಾಗಿದ್ದಾರೆ. ವಾಸ್ತವವಾಗಿ, ಇಬ್ಬರ ನಡುವಿನ ಶ್ರಮ ವಿಭಜನೆಯು ಕಾಂಗ್ರೆಸ್‌ಗೆ ಮತ್ತಷ್ಟು ಬಲ ತುಂಬುತ್ತಿದೆ.

ರಾಹುಲ್ ಗಾಂಧಿ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬಲು ಕೆಲಸ ಮಾಡಿದರೆ, ಖರ್ಗೆ ಅವರು ಪಕ್ಷವನ್ನು ನಡೆಸುತ್ತಾರೆ ಮತ್ತು ಬಿಕ್ಕಟ್ಟುಗಳನ್ನು ನಿರ್ವಹಿಸುತ್ತಾರೆ. ಅಧ್ಯಕ್ಷರಾದ ನಂತರ ಖರ್ಗೆಯವರು ಕೆಲಸ ಮಾಡುತ್ತಿರುವ ರೀತಿ ಅವರ ಮತ್ತು ರಾಹುಲ್ ಗಾಂಧಿಯ ನಡುವಿನ ಹೆಚ್ಚಿನ ವಿಶ್ವಾಸವನ್ನು ಸೂಚಿಸುತ್ತದೆ.

ಖರ್ಗೆ ಅವರನ್ನು ಗಾಂಧಿ ಕುಟುಂಬದ ರಬ್ಬರ್ ಸ್ಟಾಂಪ್‌ ಎಂದು ಟೀಕಿಸಲಾಗುತ್ತಿತ್ತು. ಆದರೆ, ಖರ್ಗೆ ಮತ್ತು ರಾಹುಲ್‌ ಗಾಂಧಿ ಪರಸ್ಪರ ಸಹಕಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ನಿರ್ಣಾಯಕ ವಿಚಾರಗಳಲ್ಲಿಯೂ ಖರ್ಗೆ ಅವರೇ ಮುನ್ನಲೆಯಲ್ಲಿ ಶ್ರಮಿಸುತ್ತಿದ್ದಾರೆ, ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಖರ್ಗೆ ರಾಹುಲ್ kharge rahul

ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆದ್ದ ನಂತರ ಮುಖ್ಯಮಂತ್ರಿ ಯಾರೆಂದು ನಿರ್ಧರಿಸುವ ವಿಚಾರದಲ್ಲಿ ಖರ್ಗೆ ಅವರೇ ಮುಖ್ಯ ಪಾತ್ರ ವಹಿಸಿದ್ದರು. ಅಂತಿಮವಾಗಿ ರಾಜ್ಯದ ಇಬ್ಬರು ಮುಖ್ಯಮಂತ್ರಿ ಸ್ಪರ್ಧಿಗಳನ್ನು ಸಮಾಧಾನ ಪಡಿಸಿ, ಅವರಿಬ್ಬರೊಂದಿಗೆ ಖರ್ಗೆ ಅವರು ತೆಗೆದುಕೊಂಡ ಫೋಟೋ ಅದಕ್ಕೊಂದು ನಿದರ್ಶನ.

2018ರಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿಯೂ ಇಂಥದ್ದೇ ಬಿಕ್ಕಟ್ಟು ಎದುರಾಗಿದ್ದಾಗ ರಾಹುಲ್‌ ಗಾಂಧಿ ಕೂಡ ಇದೇ ರೀತಿ ನಿಭಾಯಿಸಿದ್ದರು. ನಂತರ, ಈ ರಾಜ್ಯಗಳಲ್ಲಿ ಏನಾಯಿತು ಎಂಬುದು ಬೇರೆ ವಿಷಯ. ಮೊನ್ನೆಯ ಫೋಟೋದಲ್ಲಿ ಖರ್ಗೆಯವರ ಬದಲು ರಾಹುಲ್ ಗಾಂಧಿ ಬಹಳ ಸುಲಭವಾಗಿ ಇರಬಹುದಿತ್ತು ಎಂಬುದು ಇಲ್ಲಿನ ವಿಚಾರ. ಅಂತಿಮ ನಿರ್ಧಾರದಲ್ಲಿ ಅವರ ಪಾತ್ರವೂ ಇದೆ ಎಂಬುದನ್ನು ಯಾರೂ ಅಲ್ಲಗಳೆಯುವುದಿಲ್ಲ. ಆದರೆ, ಅಂತಿಮ ನಿರ್ಧಾರ ಖರ್ಗೆ ಅವರದ್ದು ಎಂಬುದನ್ನು ಚಿತ್ರಗಳೇ ಸ್ಪಷ್ಟಪಡಿಸಿವೆ.

3. ಹೊಂದಾಣಿಕೆ, ಸಹಿಷ್ಣುತೆ, ದೃಢತೆ ಮತ್ತು ಮುನ್ನೋಟ

ಖರ್ಗೆ ಮತ್ತು ಸಿದ್ದರಾಮಯ್ಯ ಅಗಮ್ಯ ಇತಿಹಾಸವನ್ನು ಹಂಚಿಕೊಂಡಿದ್ದಾರೆ. 2013ರಲ್ಲಿ ಸಿದ್ದರಾಮಯ್ಯ ವಿರುದ್ಧ ಖರ್ಗೆ ಸಿಎಂ ರೇಸ್‌ನಲ್ಲಿ ಸೋತಿದ್ದರು ಎನ್ನಲಾಗಿದೆ. ಖರ್ಗೆ ಅವರನ್ನು ರಾಜ್ಯ ರಾಜಕಾರಣದಿಂದ ದೂರವಿಟ್ಟು ಕೇಂದ್ರಕ್ಕೆ ಕಳುಹಿಸುವಲ್ಲಿ ಸಿದ್ದರಾಮಯ್ಯ ಅವರ ಪಾತ್ರವಿದೆ ಎಂದು ಹೇಳಲಾಗುತ್ತಿದೆ.

ಆದರೆ, ಇತ್ತೀಚೆಗೆ, ಮುಖ್ಯಮಂತ್ರಿ ಯಾರೆಂದು ನಿರ್ಧರಿಸುವ ವಿಚಾರದಲ್ಲಿ ಖರ್ಗೆ ಅವರು ಸಿದ್ದರಾಮಯ್ಯ ವಿರುದ್ಧ ಇದ್ಯಾವುದನ್ನೂ ಮನಸ್ಸಿನಲ್ಲಿಟ್ಟುಕೊಂಡಿರಲಿಲ್ಲ. ಕಾಂಗ್ರೆಸ್‌ನ ವಿಜಯೋತ್ಸವದ ಸಂಭ್ರಮಾಚರಣೆಯಲ್ಲಿ ಖರ್ಗೆ ಮತ್ತು ಸಿದ್ದರಾಮಯ್ಯನವರ ವೀಡಿಯೊ ಅದನ್ನು ಸಂಕೇತಿಸುತ್ತಿದೆ. ವಿಡಿಯೋದಲ್ಲಿ ಖರ್ಗೆ ಅವರು ಸಿದ್ದರಾಮಯ್ಯ ಅವರಿಗೆ ಸಿಹಿ ತಿನ್ನಿಸುವ ವೇಳೆ ತಮಾಷೆಯಾಗಿ ಕೈ ಎಳೆದುಕೊಳ್ಳುತ್ತಿರುವುದನ್ನು ಕಾಣಬಹುದು. ಇದು ಇಬ್ಬರು ನಾಯಕರ ನಡುವಿನ ಆತ್ಮೀಯತೆಯ ಸಂಕೇತವಾಗಿದೆ ಎನ್ನುತ್ತಾರೆ ಕಾಂಗ್ರೆಸ್‌ ಮುಖಂಡರು.

ಈ ಸುದ್ದಿ ಓದಿದ್ದೀರಾ?: ಕಾಂಗ್ರೆಸ್ ಗೆಲುವಿನಲ್ಲಿದೆ ಮಲ್ಲಿಕಾರ್ಜುನ ಖರ್ಗೆ ಅಪ್ರತಿಮ ಪಾತ್ರ

ದೊಡ್ಡ ಗುರಿ, ಮುನ್ನೋಟ ಮತ್ತು ಸಣ್ಣ ಪೈಪೋಟಿಗಳನ್ನು ಮರೆತುಬಿಡುವ ಖರ್ಗೆ ಅವರ ಸಾಮರ್ಥ್ಯವು ಪಕ್ಷಕ್ಕೆ ದೊಡ್ಡ ಆಸ್ತಿಯಾಗಿದೆ ಎಂದು ಅನೇಕರು ಹೇಳುತ್ತಾರೆ.

4. ಮೋದಿಯನ್ನು ಎದುರಿಸಲು ಹಿಂಜರಿಯುವುದಿಲ್ಲ

ಪ್ರಧಾನಿ ನರೇಂದ್ರ ಮೋದಿ ಅವರನ್ನು ನೇರವಾಗಿ ಟೀಕಿಸಲು ಖರ್ಗೆ ಹೆದರುವುದಿಲ್ಲ ಎಂಬುದನ್ನು ಕರ್ನಾಟಕದ ಪ್ರಚಾರವೂ ತೋರಿಸಿದೆ. ಮೋದಿ ವಿಷ ಸರ್ಪವೆಂದು ಖರ್ಗೆ ಕರೆದಿದ್ದರು. ಮೋದಿ ವಿರುದ್ಧದ ಟೀಕೆಯು ಚುನಾವಣೆಯ ನಂತರವೂ ಮುಂದುವರೆದಿದೆ. ‘ಸಂಸತ್ತಿನ ಹೊಸ ಕಟ್ಟಡವನ್ನು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಬದಲಿಗೆ ಮೋದಿ ಉದ್ಘಾಟನೆ ಮಾಡುತ್ತಿದ್ದು, ರಾಷ್ಟ್ರಪತಿಗೆ ಅಗೌರವ ತೋರುತ್ತಿದ್ದಾರೆ’ ಎಂದು ಖರ್ಗೆ ಆರೋಪಿಸಿದ್ದಾರೆ.

ಬಿಜೆಪಿಯು ದಲಿತರು ಮತ್ತು ಆದಿವಾಸಿ ಮುಖಂಡರನ್ನು ಕೆಲವು ಸ್ಥಾನಗಳಿಗೆ ‘ಟೋಕನಿಸಂ’ಗಳಾಗಿ ನೇಮಕ ಮಾಡಿಕೊಳ್ಳುತ್ತಿದೆ ಎಂದು ಪ್ರಧಾನಿ ಮತ್ತು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

5. ಉತ್ತಮ ಸಂವಹನಕಾರ

ಖರ್ಗೆಯವರು ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು ಮತ್ತು ಮರಾಠಿ – ಹಲವಾರು ಭಾಷೆಗಳಲ್ಲಿ ಪರಿಣಾಮಕಾರಿಯಾಗಿ ಸಂವಹಿಸುತ್ತಾರೆ ಎಂದು ಹೆಸರುವಾಸಿಯಾಗಿದ್ದಾರೆ.

ಭಾರತ್ ಜೋಡೋ ಯಾತ್ರೆಯಲ್ಲಿ ಮರಾಠಿಯಲ್ಲಿ ಮಾತನಾಡಿರುವ ಮತ್ತು ಸಂಸತ್ತಿನಲ್ಲಿ ಹಾಸ್ಯ ಚಟಾಕಿ ಹಾರಿಸಿದ ಅವರ ವಿಡಿಯೋಗಳು ವೈರಲ್ ಆಗಿದ್ದವು.

6. ಹೆಚ್ಚಿನ ಸ್ವೀಕಾರಾರ್ಹತೆ

ಖರ್ಗೆ ಅವರು ಕಾಂಗ್ರೆಸ್‌ನ ಚುಕ್ಕಾಣಿ ಹಿಡಿದಿರುವುದರಿಂದ ಕಾಂಗ್ರೆಸ್ ವಿರೋಧಿ ಇತಿಹಾಸ ಹೊಂದಿದ್ದ ಹಲವು ಪಕ್ಷಗಳನ್ನು ಮತ್ತೆ ಜೊತೆಗೂಡಿಸಿಕೊಳ್ಳಲು ಕಾಂಗ್ರೆಸ್‌ಗೆ ಸುಲಭವಾಗಿದೆ.

ಇದಕ್ಕೆ ಒಂದು ಉದಾಹರಣೆ ಆಮ್ ಆದ್ಮಿ ಪಕ್ಷ(ಎಎಪಿ)ವು ಸೋನಿಯಾ ಗಾಂಧಿ ಕರೆದ ಪ್ರತಿಪಕ್ಷಗಳ ಸಭೆಗಳಿಂದ ದೂರ ಉಳಿದಿತ್ತು. ಆದರೆ, ವಿರೋಧ ಪಕ್ಷದ ನಾಯಕರಾಗಿ ಖರ್ಗೆ ಕರೆದ ಸಭೆಗಳಲ್ಲಿ ಎಎಪಿ ನಾಯಕರು ಭಾಗವಹಿಸಿದ್ದಾರೆ.

ಎಎಪಿ ಸಂಚಾಲಕ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಏಪ್ರಿಲ್‌ನಲ್ಲಿ ಸಿಬಿಐ ಕರೆಸಿಕೊಂಡಿತ್ತು. ಆಗ, ಅವರೊಂದಿಗೆ ಮಾತಾಡಿದ್ದ ಖರ್ಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದರು. ಇದು ಕಾಂಗ್ರೆಸ್‌ನ ಹಲವರನ್ನು ಅಚ್ಚರಿಗೊಳಿಸಿದೆ.

7. ಜಿ 23 ಅಂತ್ಯ

ಕಾಂಗ್ರೆಸ್ ಅಧ್ಯಕ್ಷರಾಗಿ ಖರ್ಗೆ ಆಯ್ಕೆಯಾದ ಬಳಿಕ, ಕಾಂಗ್ರೆಸ್‌ ಬಂಡಾಯಗಾರರ ಜಿ 23 ಔಪಚಾರಿಕ ಅಂತ್ಯ ಕಂಡಿದೆ. 2020ರಲ್ಲಿ ಆಗಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪಕ್ಷದ ವ್ಯವಹಾರಗಳ ವಿಚಾರದಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದ 23 ಮಂದಿಯ ಗುಂಪು ಪತ್ರ ಬರೆದಿತ್ತು. ಕಾಂಗ್ರೆಸ್‌ನಲ್ಲಿಯೇ ಆಂತರಿಕ ಟೀಕೆಗಳನ್ನು ಮಾಡುತ್ತಿತ್ತು. ಈಗ ಆ ಗುಂಪು ನಿಶಬ್ದವಾಗಿದೆ. ಈ ಗುಂಪಿನಲ್ಲಿ ಹಲವರು ಈ ಹಿಂದೆಯೇ ಪಕ್ಷ ತೊರೆದಿದ್ದಾರೆ.

8. ಸಾಮಾಜಿಕ ನ್ಯಾಯ

ಈ ಹಿಂದೆ ಖರ್ಗೆಯವರು ‘ದಲಿತ ನಾಯಕ’ ಎಂದು ಕರೆದವರನ್ನು ಧಿಕ್ಕರಿಸಿದ್ದರು. ತಮ್ಮನ್ನು ‘ಟೋಕನಿಸಂ’ ಆಗಿ ನೋಡಬಾರದು ಎಂಬುದು ಅವರ ಅನಿಸಿಕೆಯಾಗಿದೆ. ಯಾವುದೇ ಸ್ಥಾನವೂ ತಮ್ಮ ಸಾಮರ್ಥ್ಯದ ಆಧಾರದ ಮೇಲೆ ತಮಗೆ ದಕ್ಕಬೇಕೆಂದು ಅವರು ಬಯಸುತ್ತಾರೆ.

ಕರ್ನಾಟಕ ಚುನಾವಣೆಯ ಸಮಯದಲ್ಲಿ, ಖರ್ಗೆಯವರು ಕರ್ನಾಟಕದ ದಲಿತ ಸಂಘಟನೆಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿದ್ದರು. ಈ ಚುನಾವಣೆಯ ವೇಳೆ, ಕಾಂಗ್ರೆಸ್‌ಗೆ ದಲಿತರ ಬೆಂಬಲವು 2018ರ ಚುನಾವಣೆಗೆ ಹೋಲಿಸಿದರೆ ಶೇ.14ರಷ್ಟು ಹೆಚ್ಚಾಗಿದೆ.

ದಲಿತರು, ಆದಿವಾಸಿಗಳು ಮತ್ತು ಒಬಿಸಿಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಹಾಗೂ ಸಾಮಾಜಿಕ ನ್ಯಾಯವು 2024ರ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್‌ನ ಪ್ರಮುಖ ಮಾತುಕತೆಯಾಗಿದೆ.

9. ಸೈದ್ಧಾಂತಿಕ ಬದ್ಧತೆ

ಖರ್ಗೆ ಅವರು ಜಾತ್ಯತೀತ ಸಿದ್ದಾಂತದ ಬದ್ಧತೆಯಲ್ಲಿ ದೃಢವಾಗಿದ್ದಾರೆ. ಅವರು ಯಾವ ಆಯಾಮದಲ್ಲಿಯೂ ಮೃದುಹಿಂದುತ್ವದ ಪರವಾಗಿಲ್ಲ. ಅವರು ಪ್ರಾಯೋಗಿಕ ವಾಸ್ತವಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ಧಾರ್ಮಿಕತೆಯ ಪ್ರದರ್ಶನವನ್ನು ವಿರೋಧಿಸುವುದಿಲ್ಲ ಎಂದು ಹೇಳಲಾಗುತ್ತದೆ.

ಖರ್ಗೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಬಡವರ ಪರವಾದ ನಿಲುವನ್ನು ಮತ್ತಷ್ಟು ಚುರುಕುಗೊಳಿಸುವ ಕಾರ್ಯದಲ್ಲಿ ತೊಡಗಿದೆ.

ಮೂಲ: ದಿ ಕ್ವಿಂಟ್
ಕನ್ನಡಕ್ಕೆ: ಸೋಮಶೇಖರ್ ಚಲ್ಯ

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಸ್ಲಿಂ ಮೀಸಲಾತಿ | ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ: ರವಿವರ್ಮ ಕುಮಾರ್

ಮುಸ್ಲಿಂರನ್ನು ಹಿಂದುಳಿದ ಪಟ್ಟಿಗೆ ಸೇರಿಸಿದ್ದಾರೆ ಅಂತ ಹೇಳಲಾಗುತ್ತಿದೆ. ಹಿಂದುಳಿದ ಮೀಸಲಾತಿ ಮುಸ್ಲಿಂರಿಗೆ...

ಪೆನ್‌ಡ್ರೈವ್ ಆತಂಕ ಕೊನೆಗೊಳಿಸಿ – ಸಂತ್ರಸ್ತ ಮಹಿಳೆಯರನ್ನು ರಕ್ಷಿಸಿ; ಸಿಪಿಐಎಂ ಆಗ್ರಹ

"ಕಳೆದ ಎರಡು ಮೂರು ದಿನಗಳಿಂದ ಹಾಸನದಲ್ಲಿ ಪೆನ್‌ಡ್ರೈವ್ ವಿಚಾರ ಭಾರೀ ಚರ್ಚೆಯಾಗುತ್ತಿದೆ....

ತೀರ್ಥಯಾತ್ರೆ ನೆಪದಲ್ಲಿ ಮಹಿಳೆಯರು ಎಲ್ಲೆಲ್ಲೋ ಹೋಗ್ತಿದ್ದಾರೆ ಎಂದ ನಟಿ ಶೃತಿ: ಮಹಿಳಾ ಆಯೋಗದಿಂದ ನೋಟಿಸ್

“ಪ್ರೀ ಬಸ್ ಬಿಟ್ಟ ತಕ್ಷಣ ಹೆಣ್ಣುಮಕ್ಕಳು ತೀರ್ಥಯಾತ್ರೆ ಹೋಗ್ತೇವೆಂದು ಹೇಳಿ, ಎಲ್ಲಿಗೆ...

ಮಸ್ಲಿಮರನ್ನು ಒಬಿಸಿಗೆ ಸೇರಿಸಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್‌: ಮೋದಿಗೆ ದ್ವಾರಕಾನಾಥ್ ಇತಿಹಾಸ ಪಾಠ

"ಒಬಿಸಿಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ಸಂಚನ್ನು ಮೋದಿ ರೂಪಿಸಿದ್ದಾರೆ, ಮಂಡಲ್‌ ಆಯೋಗ...