ಕೆಇಎ ಪರೀಕ್ಷಾ ಅಕ್ರಮದ ಸೂತ್ರದಾರ ಎಂದು ಶಂಕಿಸಲಾಗಿರುವ ಆರ್.ಡಿ. ಪಾಟೀಲ್ನನ್ನು ಕಲಬುರಗಿ ಪೊಲೀಸರು ಮಹಾರಾಷ್ಟ್ರದಲ್ಲಿ ಬಂಧಿಸಿರುವುದಾಗಿ ವರದಿಯಾಗಿದೆ.
ಮಹಾರಾಷ್ಟ್ರ-ಅಫಝಲಪುರ ಗಡಿ ಭಾಗದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಕಲಬುರಗಿ ಪೊಲೀಸರು ಇತ್ತೀಚೆಗೆ ಆತನ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸಿದಾಗ ಕಾಂಪೌಂಡ್ ಹಾರಿ ಪರಾರಿಯಾಗಿದ್ದ. ಇದರ ವಿಡಿಯೋ ಸೋಷಿಯಲ್ ಮೀಡಿಯಾ ಸೇರಿ ಮಾಧ್ಯಮಗಳಲ್ಲೂ ಹರಡಿತ್ತು.
ಆರ್.ಡಿ. ಪಾಟೀಲ್ ಈ ಹಿಂದೆ ನಡೆದಿದ್ದ ಪಿಎಸ್ಐ ಪರೀಕ್ಷಾ ಅಕ್ರಮದಲ್ಲೂ ಭಾಗಿಯಾಗಿದ್ದ. ಇದೇ ರೀತಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ, ಕೊನೆಗೆ ಮಹಾರಾಷ್ಟ್ರದಲ್ಲೇ ಸಿನಿಮೀಯ ರೀತಿಯಲ್ಲಿ ಪೊಲೀಸರಿಂದ ಬಂಧನಕ್ಕೂ ಒಳಗಾಗಿದ್ದ. ಹನ್ನೊಂದು ತಿಂಗಳು ಜೈಲಿನಲ್ಲಿದ್ದ ಆರೋಪಿ, ಕೊನೆಗೆ ನ್ಯಾಯಾಲಯದಿಂದ ಷರತ್ತು ಬದ್ಧ ಜಾಮೀನಿನ ಮೇಲೆ ಹೊರಗಡೆ ಬಂದಿದ್ದ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧೆಯೂ ಮಾಡಿದ್ದ. ಹಲವು ರಾಜಕಾರಣಿಗಳ ಬೆಂಬಲವನ್ನೂ ಈತ ಹೊಂದಿದ್ದರಿಂದ ಕೆಇಎ ಪರೀಕ್ಷೆಯ ವೇಳೆ ಕೂಡ ಅಕ್ರಮ ನಡೆಸಿ, ಈತನೇ ಸೂತ್ರದಾರ ಎಂದು ಶಂಕಿಸಲಾಗಿದೆ.