ಪಂಜಾಬ್‌ನ ಲುಧಿಯಾನ ಪಶ್ಚಿಮ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಎಎಪಿ ರಾಜ್ಯಸಭಾ ಸಂಸದ ಸಂಜೀವ್ ಅರೋರಾ ಅವರಿಗೆ ಟಿಕೆಟ್ ನೀಡಲಾಗಿದೆ. ಹೀಗಾಗಿ, ಅವರು ಗೆದ್ದರೆ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಆ ಹುದ್ದೆಗೆ ಮಾಜಿ ಮುಖ್ಯಮಂತ್ರಿ, ಎಎಪಿ ನಾಯಕ ಅರವಿಂದ ಕೇಜ್ರಿವಾಲ್ ಆಯ್ಕೆಯಾಗುವ ಸಾಧ್ಯತೆ ಇದೆ ಎಂಧು ಹೇಳಲಾಗುತ್ತಿದೆ.
ಲುಧಿಯಾನ ಪಶ್ಚಿಮ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಶಾಸಕ ಗುರುಪ್ರೀತ್ ಬಸ್ಸಿ ಗೋಗಿ ಅವರು ಕಳೆದ ತಿಂಗಳು ಸಾವನ್ನಪ್ಪಿದ್ದರು. ಹೀಗಾಗಿ, ಆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಇನ್ನೂ ಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗ ಘೋಷಿಸಿಲ್ಲ. ಆದಾಗ್ಯೂ, ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಎಎಪಿ ಫೋಷಿಸಿದೆ. ರಾಜ್ಯಸಭಾ ಸದಸ್ಯ ಸಂಜೀವ್ ಅರೋರಾಗೆ ಟಿಕೆಟ್ ನೀಡಿದೆ.
ಸಂಜೀವ್ ಅವರಿಗೆ ಟಿಕೆಟ್ ನೀಡಿರುವ ಹಿನ್ನೆಲೆ, ರಾಜ್ಯಸಭೆಗೆ ಕೇಜ್ರಿವಾಲ್ ಆಯ್ಕೆಯಾಗುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು, ಅನುಮಾನಗಳು ವ್ಯಕ್ತವಾಗುತ್ತಿವೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪಂಜಾಬ್‌ನ ಕಾಂಗ್ರೆಸ್ ಶಾಸಕ ಸುಖಪಲ್ ಸಿಂಗ್ ಖೈರಾ, “ಕೇಜ್ರಿವಾಲ್ ರಾಜ್ಯಸಭೆಗೆ ಪ್ರವೇಶಿಸುವುದು ಖಚಿತ” ಎಂದು ಹೇಳಿದ್ದಾರೆ. “ಅರೋರಾ ಸ್ಥಾನಕ್ಕೆ ಅರವಿಂದ ಕೇಜ್ರಿವಾಲ್ ಅಥವಾ ಮನೀಶ್ ಸಿಸೋಡಿಯಾ ಆಯ್ಕೆಯಾಗುವ ಸಾಧ್ಯತೆಯಿದೆ” ಎಂದು ಶಿರೋಮಣಿ ಅಕಾಲಿದಳದ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಹೀನಾಯ ಸೋಲು ಕಂಡಿದೆ. ಎಎಪಿಯ ಘಟಾನುಘಟಿ ನಾಯಕರಾದ ಅರವಿಂದ್ ಕೇಜ್ರಿವಾಲ್, ಮನೀಷ್ ಸಿಸೋಡಿಯಾ ಸೇರಿದಂತೆ ಹಲವರು ಸೋತಿದ್ದಾರೆ. ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೇಜ್ರಿವಾಲ್, ಬಿಜೆಪಿಯ ಪರ್ವೇಶ್ ವರ್ಮಾ ವಿರುದ್ಧ ಸೋಲುಂಡಿದ್ದಾರೆ.