ಕೆರಗೋಡು ಧ್ವಜ ವಿವಾದದಲ್ಲಿ ಸಂಘಪರಿವಾರದ ನಡೆಗೆ ಮಂಡ್ಯದ ಜನರು ವಿರುದ್ಧವಿದ್ದಾರೆ. ಇದು ಅರ್ಥವಾದ ಮೇಲೆ ಮಂಡ್ಯ ಬಂದ್‌ನಿಂದ ಬಿಜೆಪಿ, ಜೆಡಿಎಸ್ ಹಿಂದೆ ಸರಿದಿವೆ. ಜೆಡಿಎಸ್ ಸಂಪೂರ್ಣವಾಗಿ ದೂರ ಉಳಿದರೆ, ಬಿಜೆಪಿ ನಾಮ್ ಕೆ ವಾಸ್ತೆಗೆ ಪ್ರತಿಭಟನೆ ನಡೆಸಿದೆ ಎಂದು ಬಿಜೆಪಿ-ಜೆಡಿಎಸ್ ವಿರುದ್ಧ ಕೃಷಿ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, “ಕೇಸರಿ ಧ್ವಜ ವಿವಾದದಲ್ಲಿ ರಾಜಕೀಯ ಲಾಭ ಪಡೆಯಲು ಬಿಜೆಪಿ-ಜೆಡಿಎಸ್ ಯತ್ನಿಸಿದ್ದವು. ಅದರೆ, ಜಿಲ್ಲೆಯ ಜನರು ಅದಕ್ಕೆ ವಿರುದ್ಧವಿದ್ದಾರೆ. ಬಂದ್‌ಗೆ ಬೆಂಬಲ ವ್ಯಕ್ತವಾಗಿಲ್ಲ. ಬಿಜೆಪಿಗರು ಬೈಕ್ ರ್‍ಯಾಲಿ ಮಾಡಿದ್ದಾರೆ. ಎಷ್ಟು ಸಾವಿರ ಜನ ಬಂದಿದ್ದರೋ ನಮಗೆ ಲೆಕ್ಕವಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ.
“ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ರಾಷ್ಟ್ರಧ್ವಜದ ವಿರುದ್ಧ ಬಿಜೆಪಿಗರು ಘೋಷಣೆ ಕೂಗಿದ್ದಾರೆ. ಕೇಸರಿ ಧ್ವಜ ಹಾರಿಸಲು ಬೇರೆ ಜಾಗ ಇದೆ. ನಮ್ಮ ಮೊದಲನೇ ಆದ್ಯತೆ ರಾಷ್ಟ್ರ, ಸಂವಿಧಾನ, ಪ್ರಜಾಪ್ರಭುತ್ವ. ಆದರೆ, ಕೇಸರಿ ಧ್ವಜ ಹಾರಿಸಿ, ಬಿಜೆಪಿ-ಜೆಡಿಎಸ್ ತಪ್ಪು ಮಾಡಿವೆ. ಅವರಿಗೆ ಜನರು ಉತ್ತರ ಕೊಡಬೇಕು” ಎಂದಿದ್ದಾರೆ.
“ಮಂಡ್ಯದಲ್ಲಿ ಧರ್ಮಗಳ ನಡುವಿನ ಘರ್ಷಣೆಗೆ ಅವಕಾಶವಿಲ್ಲ. ಇದು ಕುವೆಂಪು ಅವರನ್ನು ಪ್ರೀತಿಸುವ ಜಿಲ್ಲೆ. ಪ್ರಚೋದನೆಗೆ ಇಲ್ಲಿನ ಜನರು ಬಲಿಯಾಗುವುದಿಲ್ಲ. ಮೊನ್ನೆ ದೇವೇಗೌಡರು ಕೇಸರಿ ಶಾಲು ಹಾಕಿದ್ದು ತಪ್ಪು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ-ಜೆಡಿಎಸ್ ತಮ್ಮ ತಪ್ಪು ಒಪ್ಪಿಕೊಳ್ಳಲಾಗದೆ, ವ್ಯರ್ಥ ಬಂದ್ ಮಾಡಿದ್ದಾರೆ. ಅವರಿಗೆ ಜನರ ಉತ್ತರ ಕೊಡುತ್ತಾರೆ” ಎಂದು ಹೇಳಿದ್ದಾರೆ.