2024ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲಾತಿ ಮಸೂದೆಗೆ ತಿದ್ದುಪಡಿ ತರುವುದಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ರಾಜಸ್ಥಾನದ ಜೈಪುರದಲ್ಲಿ ಪಕ್ಷದ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “2024 ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ, ನಾವು ಮಾಡಬೇಕಾದ ಮೊದಲ ಕೆಲಸವೆಂದರೆ ಮಸೂದೆಗೆ ತಿದ್ದುಪಡಿಗಳನ್ನು ಮಾಡುವುದು. ಸಂಸತ್ತಿನಲ್ಲಿ ಮಸೂದೆಯನ್ನು ಬೆಂಬಲಿಸುವ ಸಂದರ್ಭದಲ್ಲಿ, ಕಾಂಗ್ರೆಸ್ ತಕ್ಷಣವೇ ಜಾರಿಗೆ ಬರುವಂತೆ ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ಮಹಿಳೆಯರಿಗೆ ಕೋಟಾವನ್ನು ಸೇರಿಸಬೇಕೆಂದು ಕೂಡ ಒತ್ತಾಯಿಸಲಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ‘ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ’: ಬಿಎಸ್‌ಪಿ ಸಂಸದ ದಾನಿಶ್ ಅಲಿ ಭೇಟಿ ಮಾಡಿದ ರಾಹುಲ್
‘ಸರೋಜಿನಿ ನಾಯ್ಡು ಅವರು ಕಾಂಗ್ರೆಸ್‌ನ ಪ್ರಥಮ ಮಹಿಳಾ ಅಧ್ಯಕ್ಷರಾಗಿದ್ದರು. ನೂರು ವರ್ಷಗಳಲ್ಲಿ ಯಾವುದೇ ಮಹಿಳೆ ಬಿಜೆಪಿ ಅಥವಾ ಆರ್‌ಎಸ್‌ಎಸ್ ಅಧ್ಯಕ್ಷರಾಗಿದ್ದಾರೆಯೇ?’ ಎಂದು ಪ್ರಶ್ನಿಸಿದ ಅವರು, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸದಿದ್ದರೆ ಜನರು ಗುಲಾಮರಾಗುತ್ತಾರೆ’ ಎಂದು ಖರ್ಗೆ ಎಚ್ಚರಿಕೆ ನೀಡಿದ್ದಾರೆ.
‘ಅಸ್ಪೃಶ್ಯರೆಂಬ ಕಾರಣಕ್ಕೆ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಹೊಸ ಸಂಸತ್ ಭವನದ ಶಂಕುಸ್ಥಾಪನೆಗೆ ಆಹ್ವಾನಿಸಿರಲಿಲ್ಲ. ಅಸ್ಪೃಶ್ಯರು ಶಂಕುಸ್ಥಾಪನೆ ನೆರವೇರಿಸಿದರೆ ಸಹಜವಾಗಿ ಅದನ್ನು ಗಂಗಾ ನೀರಿನಿಂದ ತೊಳೆಯಬೇಕಾಗುತ್ತದೆ’ ಎಂದು ಅವರು ಮಾಜಿ ರಾಷ್ಟ್ರಪತಿಯ ಜಾತಿ ಉಲ್ಲೇಖಿಸಿ ಹೇಳಿದ್ದಾರೆ.
ಹೊಸ ಸಂಸತ್ ಕಟ್ಟಡದ ಉದ್ಘಾಟನೆಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಿರಲಿಲ್ಲ. ಹಲವು ಗಣ್ಯರು ಮತ್ತು ಸಿನಿಮಾ ತಾರೆಯರನ್ನು ಆಹ್ವಾನಿಸಲಾಗಿತ್ತು. ಇದು ರಾಷ್ಟ್ರಪತಿಗೆ ಮಾಡಿದ ಅವಮಾನ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.