ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಭವಾನಿ ರೇವಣ್ಣ ಅವರ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ಭವಾನಿಯವರಿಗೆ ಬಂಧನ ಭೀತಿ ಎದುರಾಗಿದೆ. ಈ ಬೆಳವಣಿಗೆಯ ನಡುವೆಯೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಭವಾನಿ ರೇವಣ್ಣ ಕಾರು ಚಾಲಕನನ್ನು ಎಸ್ಐಟಿ ತಂಡ ಶುಕ್ರವಾರ ಸಂಜೆ ಬಂಧಿಸಿರುವುದಾಗಿ ವರದಿಯಾಗಿದೆ.
ಇಂದು ಸಂಜೆ ಎಸ್ಐಟಿಯವರು ಅಜಿತ್ನನ್ನು ಚಿಕ್ಕಮಗಳೂರಿನಲ್ಲಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಈ ಹಿಂದೆ ನೋಟಿಸ್ ಕೊಟ್ಟಿತ್ತು. ಆದರೂ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ವಿಶೇಷ ತನಿಖಾ ತಂಡದ ಪೊಲೀಸರು ಹೊಳೆನರಸೀಪುರದಲ್ಲಿರುವ ಅಜಿತ್ ನಿವಾಸಕ್ಕೆ ತೆರಳಿ ಸಮನ್ಸ್ ನೋಟಿಸ್ ಅನ್ನು ಅಂಟಿಸಿ ಕೂಡ ಬಂದಿದ್ದರು.
ಈ ನಡುವೆ ನಾನಾ ಕಡೆಗೆ ತಿರುಗುತ್ತಾ ಪೊಲೀಸರ ಕಣ್ಣು ತಪ್ಪಿಸುತ್ತಿದ್ದ ಅಜಿತ್ ಅನ್ನು ಇಂದು ಬಂಧಿಸುವಲ್ಲಿ ಎಸ್ಐಟಿ ತಂಡ ಯಶಸ್ವಿಯಾಗಿದೆ.
ಕೆ.ಆರ್ ನಗರದ ಸಂತ್ರಸ್ತ ಮಹಿಳೆಯನ್ನು ತನ್ನದೇ ಕಾರಿನಲ್ಲಿ ಕರೆದುಕೊಂಡು ಹೋಗಿದ್ದ ಆರೋಪ ಚಾಲಕ ಅಜಿತ್ ಮೇಲಿದೆ. ಅಲ್ಲದೇ, ಎಚ್ ಡಿ ರೇವಣ್ಣ ನಿರೀಕ್ಷಣಾ ಜಾಮೀನು ವಿಚಾರಣೆಯ ದಿನ ಸಂತ್ರಸ್ತ ಮಹಿಳೆಯ ವೀಡಿಯೋ ಚಿತ್ರೀಕರಣ ಮಾಡಿ, ಅದನ್ನು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡಿರುವ ಆರೋಪ ಕಡ ಈತನ ಮೇಲಿದೆ. ಹೀಗಾಗಿಯೇ ಅಜಿತ್ನನ್ನು ಎಸ್ಐಟಿಯವರು ಹುಡುಕಾಟ ನಡೆಸಿದ್ದರು. ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಿರೀಕ್ಷಣಾ ಜಾಮೀನು ವಜಾ: ನಾಪತ್ತೆಯಾಗಿರುವ ಭವಾನಿ ರೇವಣ್ಣ
ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಭವಾನಿ ರೇವಣ್ಣ ಅವರ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ಭವಾನಿಯವರಿಗೆ ಬಂಧನ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅವರು ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಇದನ್ನು ಓದಿದ್ದೀರಾ? ಸಂತ್ರಸ್ತೆಯ ಅಪಹರಣ ಪ್ರಕರಣ | ರೇವಣ್ಣಗೆ ಜಾಮೀನು ನೀಡಿರುವ ಆದೇಶದಲ್ಲಿ ದೋಷ ಇದ್ದಂತಿದೆ: ಹೈಕೋರ್ಟ್
ಭವಾನಿ ರೇವಣ್ಣ ಅವರ ತವರು ಮನೆಗೆ ಕೂಡ ಬೀಗ ಜಡಿಯಲಾಗಿದ್ದು, ಈ ಬೃಹತ್ ಬಂಗಲೆ ಇದೀಗ ಖಾಲಿ ಇದೆ ಎಂದು ವರದಿಯಾಗಿದೆ. ಸದ್ಯ ಚಾಲಕನನ್ನು ವಶಕ್ಕೆ ಪಡೆದಿರುವ ಎಸ್ಐಟಿ ತಂಡ, ಭವಾನಿ ರೇವಣ್ಣ ಅವರ ಚಲನವಲನಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವುದಾಗಿ ತಿಳಿದುಬಂದಿದೆ.
