- ನನ್ನನ್ನು ಸೋಲಿಸಲು ಆಗಲಿಲ್ಲ ಎಂಬ ಹತಾಶೆಯಿಂದ ತೇಜೋವಧೆ
- ಇದು ಹೀಗೆ ಮುಂದುವರಿದರೆ ನನ್ನ ವರಸೆ ತೋರಿಸುವೆ: ಎಚ್ಚರಿಕೆ
ನನ್ನನ್ನು ಸೋಲಿಸಲು ಆಗಲಿಲ್ಲ ಎಂಬ ಹತಾಶೆಯಿಂದ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಶಾಸಕ ಎಚ್ ಡಿ ರೇವಣ್ಣ ಸುಖಾಸುಮ್ಮನೆ ನನ್ನ ತೇಜೋವಧೆ ಮಾಡುತ್ತಿದ್ದಾರೆ. ಇದು ಹೀಗೆ ಮುಂದುವರೆದರೆ ನಾನು ಕೂಡ ನನ್ನ ವರಸೆ ತೋರಿಸಬೇಕಾಗುತ್ತದೆ ಎಂದು ಅರಸೀಕೆರೆ ಶಾಸಕ ಕೆ ಎಂ ಶಿವಲಿಂಗೇಗೌಡ ಎಚ್ಚರಿಕೆ ನೀಡಿದರು.
ಹಾಸನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರನ್ನು ವಿರೋಧಿಸಿ ಪಕ್ಷದಿಂದ ಹೊರಬಂದ ಒಕ್ಕಲಿಗ ನಾಯಕರನ್ನು ಚುನಾವಣೆಯಲ್ಲಿ ಸೋಲಿಸುತ್ತಾ ಬಂದಿದ್ದಾರೆ. ನನ್ನನ್ನು ಸೋಲಿಸಲು ಆಗಲಿಲ್ಲ ಎಂಬ ಹತಾಶೆ ಅವರಲ್ಲಿ ಕಾಡುತ್ತಿದೆ” ಎಂದು ಕುಟುಕಿದರು.
“ನಮ್ಮನ್ನು ಸುಮ್ಮನೇ ತೇಜೋವಧೆ ಮಾಡಬೇಡಿ. ನಮ್ಮ ಪಾಡಿಗೆ ನಮ್ಮ ಬಿಡಿ, ನಾನು ಜೆಡಿಎಸ್‌ನಲ್ಲಿ ಇರೋವರೆಗೂ ವಿಶ್ವಾಸದಿಂದ ಇದ್ದೆ. ಈಗ ನನ್ನ ಪಾಡಿಗೆ ನಾನಿದ್ದೇನೆ. ಅವರ ರಾಜಕೀಯ ಅವರು ಮಾಡಲಿ, ಮುಂದೆಯೂ ನನ್ನ ಸುದ್ದಿಗೆ ಬರಬೇಡಿ. ಇಲ್ಲ ಅಂದರೆ ನನ್ನ ವರಸೆ ತೋರಿಸುವೆ” ಎಂದು ಎಚ್ಚರಿಕೆ ನೀಡಿದರು.
”ದೇವೇಗೌಡರ ಬಗ್ಗೆ ನಾನು ಲಘುವಾಗಿ ಮಾತನಾಡಲ್ಲ. ಈ ಹಿಂದೆ ಪ್ರಧಾನಿ ಹುದ್ದೆಯಿಂದ ಕೆಳಗೆ ಇಳಿಯುವಾಗ ವಾಜಪೇಯಿ, ನಾವು ಬೆಂಬಲ ಕೊಡುತ್ತೇವೆ, ನೀವು ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಿರಿ ಎಂದರು. ಆಗ ನಿರಾಕರಿಸಿದ ದೇವೇಗೌಡರು ಈಗೇಕೆ ಬಿಜೆಪಿ ಜತೆ ಹೋದರು? ಜಾತ್ಯತೀತತೆ ಬಗ್ಗೆ ಮಾತನಾಡುತ್ತಿದ್ದವರು, ಈಗ ಎಲ್ಲಿ ಹೋಯಿತು” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಿಜೋರಾಂ ಪ್ರಚಾರಕ್ಕೆ ಮೋದಿ ಚಕ್ಕರ್; ಜನಾಕ್ರೋಶದ ಭಯವೇ?
”ಕುಮಾರಸ್ವಾಮಿ ವಿಧಾನಸಭೆಯಲ್ಲಿ ನನ್ನ ಹೆಸರು ಹೇಳುವುದಿಲ್ಲ, ಒಮ್ಮೆ ಅರಸೀಕೆರೆಯವನು ಅಂತಾರೆ, ನಾನೂ ಅವರನ್ನು ಚನ್ನಪಟ್ಟಣ ಶಾಸಕ ಅನ್ನಬಹುದು, ಆದರೆ ನಾನು ಹಾಗೆ ಮಾತನಾಡುವುದಿಲ್ಲ. ನನಗೂ ನಮ್ಮಪ್ಪ ಹೆಸರು ಕಟ್ಟಿದ್ದಾನೆ, ನಾನು ಬಡ ರೈತನ ಮಗ. ನನ್ನ ಹೆಸರು ಹೇಳೋಕೆ ನಾಚಿಕೆಯಾದರೆ ಹೇಳಬೇಡಿ ಎಂದು ವಿಧಾನಸಭೆಯಲ್ಲೇ ಹೇಳಿದ್ದೆ. ಆದರೂ ಅದೇ ಪರಿಪಾಟ ಇನ್ನೂ ಮುಂದುವರಿಸಿದ್ದಾರೆ. ಮಜ್ಜಿಗೆ ಮಾರುವವನು ಎಂದು ಹೊಸದಾಗಿ ಟೀಕಿಸಲು ಪ್ರಾರಂಭಿಸಿದ್ದಾರೆ. ಮಜ್ಜಿಗೆ ಏನು ಸ್ಮಗ್ಲಿಂಗ್ ಗೂಡ್ಸೇ” ಎಂದು ಪ್ರಶ್ನಿಸಿದರು.
”ವಿದ್ಯಾರ್ಥಿಯಾಗಿ ಗಂಡಸಿ ಶಾಲೆಗೆ ಸೈಕಲ್‌ನಲ್ಲಿ ಬರುತ್ತಿದ್ದಾಗ ಹಾಲು-ಮೊಸರನ್ನು ಕ್ಯಾನ್‌ನಲ್ಲಿ ತುಂಬಿ ಕಳುಹಿಸುತ್ತಿದ್ದರು. ಅದನ್ನು ತಂದು ಗಂಡಸಿ ಹೋಟೆಲ್‌ಗೆ ಕೊಡುತ್ತಿದ್ದೆ. ಇದು ತಪ್ಪೇ? ನಾನು ಮಜ್ಜಿಗೆ, ಮೊಸರು ಮಾರುವವನು ಎಂದು ವ್ಯಂಗ್ಯವಾಡುವುದಾದರೆ ಎಚ್.ಡಿ.ಕುಮಾರಸ್ವಾಮಿ ಹಿಂದೆ ಬಿಬಿಎಂಪಿ ಕಸದ ಟೆಂಡರ್ ಪಡೆದಿದ್ದರಲ್ಲ, ಅದಕ್ಕೆ ಏನನ್ನಬೇಕು?” ಎಂದು ಲೇವಡಿ ಮಾಡಿದರು.