ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ 2023-2024ನೇ ಸಾಲಿನ ರಾಜ್ಯಮಟ್ಟದ ಉತ್ತಮ ಪ್ರಾಂಶುಪಾಲ ಪ್ರಶಸ್ತಿ ಪ್ರಕಟವಾಗಿದ್ದು, ಈ ಬಾರಿಯ ಪ್ರಶಸ್ತಿಗೆ ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ. ಆಯ್ಕೆಯಾಗಿದ್ದರು.
ಎರಡು ವರ್ಷಗಳ ಹಿಂದೆ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರನ್ನು ಕಾಲೇಜಿನ ಗೇಟಿನಲ್ಲಿ ತಡೆದು ನಿಲ್ಲಿಸಿದ್ದ ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ. ಅವರನ್ನು 2024-25ನೇ ಶೈಕ್ಷಣಿಕ ಸಾಲಿಗೆ ರಾಜ್ಯಮಟ್ಟದ ‘ಉತ್ತಮ ಪ್ರಾಂಶುಪಾಲ ಪ್ರಶಸ್ತಿ’ಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಆಯ್ಕೆ ಮಾಡಿರುವುದು ಭಾರೀ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿತ್ತು.
ಈ ಬೆಳವಣಿಗೆಯು ಸುದ್ದಿಯಾಗಿ, ವಿವಾದ ಆಗುತ್ತಿದ್ದಂತೆಯೇ ಸರ್ಕಾರವು ಈ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ತಿಳಿದುಬಂದಿದೆ. ಅಲ್ಲದೇ, ಈ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕಾರಿಗಳು ಪ್ರಶಸ್ತಿ ನೀಡುವುದಕ್ಕೆ ತಡೆ ನೀಡಿದ್ದಾರೆ.

ಈ ಬಗ್ಗೆ ಈ ದಿನ.ಕಾಮ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, “ಈ ಬಗ್ಗೆ ಪಿಯು ಬೋರ್ಡ್ ಡೈರೆಕ್ಟರ್ ಅವರನ್ನು ಸಂಪರ್ಕಿಸಿ” ಎಂದು ತಿಳಿಸಿ ಕರೆ ಕಟ್ ಮಾಡಿದರು. ಆ ಬಳಿಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿರುವ ಸಿಂಧೂ ಬಿ ರೂಪೇಶ್ ಅವರನ್ನು ಸಂಪರ್ಕಿಸಲಾಯಿತಾದರೂ, ಅವರು ಕರೆ ಸ್ವೀಕರಿಸಲಿಲ್ಲ.
ಈ ಬೆಳವಣಿಗೆಯ ಬಗ್ಗೆ ಈ ದಿನ.ಕಾಮ್ ಕುಂದಾಪುರ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ. ಅವರನ್ನು ಸಂಪರ್ಕಿಸಿದಾಗ, “ಪ್ರಶಸ್ತಿಗೆ ಆಯ್ಕೆ ಮಾಡಿದ ಬಗ್ಗೆಯಷ್ಟೇ ನನಗೆ ಪತ್ರ ಬಂದಿತ್ತು. ಇಂದು ಮಧ್ಯಾಹ್ನ ಇಲಾಖೆಯಿಂದ ಕರೆ ಬಂದಿತ್ತು. ಪ್ರಶಸ್ತಿ ನೀಡುವುದನ್ನು ಮುಂದೂಡಿದ್ದೇವೆ ಎಂದಷ್ಟೇ ತಿಳಿಸಿದ್ದಾರೆ. ತಡೆಹಿಡಿದ ಬಗ್ಗೆ ಈವರೆಗೆ ನನಗೆ ಅಧಿಕೃತ ಮಾಹಿತಿ ಬಂದಿಲ್ಲ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಹಿಜಾಬ್ | ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಕಲ್ಲು ಹಾಕಿದ ಪ್ರಾಂಶುಪಾಲನಿಗೆ ಕಾಂಗ್ರೆಸ್ ಸರ್ಕಾರದಿಂದ ‘ರಾಜ್ಯಮಟ್ಟದ ಪ್ರಶಸ್ತಿ’
ಸಿಎಂ ಕಚೇರಿಯಲ್ಲೂ ಚರ್ಚೆ
ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ರಾಮಕೃಷ್ಣ ಬಿ.ಜಿ. ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಿಎಂ ಕಚೇರಿಯಲ್ಲೂ ಬುಧವಾರ ಚರ್ಚೆಗೆ ಕಾರಣವಾಗಿದೆ. ಪ್ರಶಸ್ತಿಗೆ ಆಯ್ಕೆ ಮಾಡಿದ ಸುದ್ದಿ ತಿಳಿಯುತ್ತಿದ್ದಂತೆಯೇ ರಾಜ್ಯದ ಪ್ರಮುಖ ಮುಸ್ಲಿಂ ಮುಖಂಡರು, ಪ್ರಗತಿಪರ ಚಿಂತಕರು ಸಿಎಂ ಕಚೇರಿಯನ್ನು ಸಂಪರ್ಕಿಸಿದ್ದು, ಅಧಿಕಾರಿಗಳ ನಡೆಯನ್ನು ಪ್ರಶ್ನಿಸಿದ್ದರು. ಆ ಬಳಿಕ ಎಚ್ಚೆತ್ತುಕೊಂಡ ಸರ್ಕಾರದ ಕೆಲವು ಪ್ರಮುಖರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ನಂತರ ಈ ಬೆಳವಣಿಗೆ ನಡೆದಿದೆ.

ರಾಜ್ಯದ ಪ್ರಶಸ್ತಿಗೆ ಆಯ್ಕೆಯಾಗಿರುವಂತಹ ಪ್ರಾಂಶುಪಾಲ ರಾಮಕೃಷ್ಣ ರವರಿಗೆ ಪ್ರಶಸ್ತಿನೀಡ ಬಾರದು !
ಯಾಕೆಂದರೆ ಒಬ್ಬ ಪ್ರಾಂಶುಪಾಲ ಸರ್ಕಾರಿ ಹುದ್ದೆಯಲ್ಲಿದ್ದು ಸರ್ಕಾರದ ನೀತಿ ನಿಯಮಗಳ ಪಾಲನೆಗಳನ್ನು ಮಾಡಬೇಕಾದ ವ್ಯಕ್ತಿ ಇಜಾಬ್ ವಿಚಾರದಲ್ಲಿ ವಿದ್ಯಾರ್ಥಿಗಳನ್ನು ಹೊರಗಡೆ ನಿಲ್ಲಿಸುವುದು ಒಬ್ಬ ಕೋಮುವಾದಿಯ ಪ್ರಚೋದನೆಯ ನಿಲುವಾಗಿರುತ್ತದೆ! ಇಂತಹ ವ್ಯಕ್ತಿಗೆ ರಾಜ್ಯದ ಉನ್ನತವಾದಂತಹ ಪ್ರಶಸ್ತಿ ನೀಡಿ ಆ ಪ್ರಶಸ್ತಿಗೆ ಅಗೌರವ ನೀಡುವುದು ಅವಿವೇಕಿಗಳ ನಿರ್ಧಾರ ಎಂದರೆ ತಪ್ಪಾಗಲಾರದು!
ಹಾಗಾಗಿ ತಕ್ಷಣಕ್ಕೆ ಸರ್ಕಾರದ ಗಮನಕ್ಕೆ ಬಂದಿರುವುದು ಒಳ್ಳೆಯ ವಿಚಾರವಾಗಿರುತ್ತದೆ ಈ ಪ್ರಾಂಶುಪಾಲ ರಾಮಕೃಷ್ಣ ನಿಗೆ ನೀಡುವ ಪ್ರಶಸ್ತಿಯನ್ನು ಕೂಡಲೇ ಸರ್ಕಾರ ರದ್ದು ಮಾಡಬೇಕು!