ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿ, ಚುನಾವಣಾ ಅಧಿಕಾರಿಗಳು ಲೇಹ್ ಜಿಲ್ಲೆಯ ವಾಶಿ ಎಂಬ ದೂರದ ಹಳ್ಳಿಯಲ್ಲಿ ಒಂದು ಕುಟುಂಬದ ಐದು ಸದಸ್ಯರಿಗಾಗಿ ಮತದಾನ ಕೇಂದ್ರವನ್ನು ಸ್ಥಾಪಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಲಡಾಖ್ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಯತೀಂದ್ರ ಎಂ ಮರಾಲ್ಕರ್, “ಲೇಹ್‌ನಿಂದ ಸುಮಾರು 170 ಕಿಮೀ ದೂರದಲ್ಲಿರುವ ನುಬ್ರಾದ ವಾಶಿ ಎಂಬ ದೂರದ ಹಳ್ಳಿಯಲ್ಲಿ ಟೆಂಟ್ ಅಡಿಯಲ್ಲಿ ಮತದಾನ ಕೇಂದ್ರವನ್ನು ಸ್ಥಾಪಿಸಲಾಗಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಜನರ ಭಾಗವಹಿಸುವಿಕೆ ಹೆಚ್ಚಿಸಿ ಶೇಕಡ 100ರಷ್ಟು ಮತದಾನ ಮಾಡಿಸುವ ಚುನಾವಣಾ ಆಯೋಗದ ಪ್ರಯತ್ನಗಳ ಭಾಗ ಇದಾಗಿದೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? 21 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚುಕ್
ಒಂದೇ ಕುಟುಂಬದ ಐವರು ಗ್ರಾಮದಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದು, ಟೆಂಟ್‌ನಲ್ಲಿರುವ ಮತಗಟ್ಟೆ ಅವರ ಮನೆ ಬಾಗಿಲಿನಲ್ಲೇ ಇದೆ. ಕುಟುಂಬದಲ್ಲಿ ಆರು ಸದಸ್ಯರು ಇದ್ದು ಅವರಲ್ಲಿ ಐವರು ಮತದಾನ ಮಾಡಲು ಅರ್ಹರಾಗಿದ್ದಾರೆ. ಇಬ್ಬರು ಪುರುಷ ಮತ್ತು ಮೂರು ಮಹಿಳಾ ಮತದಾರರು ಈ ಕುಟುಂಬದಲ್ಲಿದ್ದಾರೆ. ಈ ಕುಟುಂಬದ ಮುಖ್ಯಸ್ಥರು ರೈತರಾಗಿದ್ದಾರೆ ಎಂದು ವರದಿಯಾಗಿದೆ.
ಆಗಸ್ಟ್ 5, 2019 ರಂದು ಆರ್ಟಿಕಲ್ 370 ಅನ್ನು ರದ್ದುಗೊಳಿಸಿದ ನಂತರ ಮತ್ತು ಜಮ್ಮು & ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಜಮ್ಮು & ಕಾಶ್ಮೀರ ಮತ್ತು ಲಡಾಖ್ ವಿಭಜಿಸಿದ ನಂತರ ಇದೇ ಮೊದಲ ಬಾರಿಗೆ ಇಲ್ಲಿ ಲೋಕಸಭೆ ಚುನಾವಣೆ ನಡೆಸಲಾಗುತ್ತಿದೆ. ಲಡಾಖ್ ಲೋಕಸಭಾ ಸ್ಥಾನಕ್ಕೆ ಮೇ 20 ರಂದು 5 ನೇ ಹಂತದಲ್ಲಿ ಮತದಾನ ನಡೆಯಲಿದೆ.
ಇದನ್ನು ಓದಿದ್ದೀರಾ? ರಾಜ್ಯ ಸ್ಥಾನಮಾನ ಬೇಡಿಕೆಗೆ ಆಗ್ರಹಿಸಿ ಲಡಾಖ್‌ನಲ್ಲಿ ಸಾವಿರಾರು ಜನರಿಂದ ಪ್ರತಿಭಟನೆ
ಲಡಾಖ್ ಕೇಂದ್ರಾಡಳಿತ ಪ್ರದೇಶವು ಎರಡು ಜಿಲ್ಲೆಗಳನ್ನು ಹೊಂದಿದೆ. ಒಂದು ಕಾರ್ಗಿಲ್ ಆಗಿದ್ದು ಇದು ಮುಸ್ಲಿಂ ಪ್ರಾಬಲ್ಯದ ಜಿಲ್ಲೆಯಾಗಿದೆ. ಇನ್ನೊಂದು ಬೌದ್ಧ ಪ್ರಾಬಲ್ಯದ ಲೇಹ್ ಜಿಲ್ಲೆಯಾಗಿದೆ. ಇಲ್ಲಿ 91,703 ಪುರುಷರು ಮತ್ತು 90868 ಮಹಿಳೆಯರು ಸೇರಿದಂತೆ ಒಟ್ಟು 1,82,571 ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ.
ಚುನಾವಣಾ ಆಯೋಗವು ಲಡಾಖ್‌ನಾದ್ಯಂತ ಒಟ್ಟಾಗಿ 577 ಮತಗಟ್ಟೆಗಳನ್ನು ಸ್ಥಾಪಿಸಿದೆ. ಇದರಲ್ಲಿ 33 ನಗರ ಮತ್ತು 544 ಗ್ರಾಮೀಣ ಪ್ರದೇಶಗಳಲ್ಲಿ ಸ್ಥಾಪಿಸಲಾಗಿದೆ. ಇನ್ನು ಲಡಾಖ್‌ನಲ್ಲಿ ಕೆಲವು ಮತಗಟ್ಟೆಗಳು ದೂರದ ಹಳ್ಳಿಗಳಲ್ಲಿದ್ದು ಚುನಾವಣಾ ಸಾಮಗ್ರಿಗಳು ಮತ್ತು ಸಿಬ್ಬಂದಿಗಳನ್ನು ವಿಮಾನದಲ್ಲಿ ರವಾನಿಸಲಾಗುತ್ತಿದೆ.