ಧರ್ಮ-ದೇವರನ್ನು ಮುಂದಿಟ್ಟು ಓಟು ಗಿಟ್ಟಿಸಿ ಅಧಿಕಾರಕ್ಕೇರಿರುವ ಬಿಜೆಪಿ ಅಧಿಕಾರಾವಧಿಯಲ್ಲಿಯೇ, ತಿರುಪತಿ ತಿಮ್ಮಪ್ಪನನ್ನು ಇಟ್ಟು ವ್ಯಾಪಾರ ಮಾಡುತ್ತಿರುವ ಟಿಟಿಡಿ; ಸ್ವಾರ್ಥ ರಾಜಕಾರಣದ ಬೇಳೆ ಬೇಯಿಸಿಕೊಳ್ಳುತ್ತಿರುವ ಚಂದ್ರಬಾಬು ನಾಯ್ದು; ಖಾವಿ ತೊಟ್ಟವರ ಆಧ್ಯಾತ್ಮಿಕ ಅಟಾಟೋಪವೂ ನಡೆಯುತ್ತಿದೆ. ತಿಮ್ಮಪ್ಪನಿಗೇ ನಾಮ ಹಾಕಲು ಹವಣಿಸಲಾಗುತ್ತಿದೆ...
ಕಳೆದ ಜನವರಿಯಲ್ಲಿ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್, 2024-25ರ ಅಂದಾಜು ವಾರ್ಷಿಕ ಬಜೆಟ್ ಘೋಷಿಸಿತು. ಆ ಬಜೆಟ್ ಪ್ರಕಾರ, ತಿರುಪತಿ ದೇವಸ್ಥಾನಕ್ಕೆ ಹರಿದು ಬರುವ ಅಂದಾಜು ಆದಾಯ 5,141.74 ಕೋಟಿ ರೂಪಾಯಿಗಳು ಎಂದಿತ್ತು.
ಆಗ, ಆ ಸುದ್ದಿ ಯಾರಲ್ಲೂ ಯಾವ ಕುತೂಹಲವನ್ನು ಕೆರಳಿಸಿರಲಿಲ್ಲ. ಎಂದಿನ ವಾರ್ಷಿಕ ಆಯವ್ಯಯ ಎಂದೇ ಎಲ್ಲರೂ ಓದಿ ಮರೆತಿದ್ದರು. ಆದರೆ, ಈಗ ಲಡ್ಡು ಎಂಬ ಪ್ರಸಾದಕ್ಕೆ ಕಳಪೆ ಮಟ್ಟದ ತುಪ್ಪ ಬಳಸಲಾಗಿದೆ ಎಂಬ ವಿವಾದವೇರ್ಪಟ್ಟಾಗ; ಲಡ್ಡು ಮಾರಾಟದಿಂದಲೇ ವರ್ಷಕ್ಕೆ ಸುಮಾರು 600 ಕೋಟಿ ರೂಪಾಯಿಗಳ ಆದಾಯವಿದೆ ಎಂದಾಗ- ದೇವರ ಪ್ರಸಾದ, ಪ್ರಾವಿತ್ರ್ಯ, ಮಾರಾಟ, ಹಣ ಮುನ್ನೆಲೆಗೆ ಬರತೊಡಗಿದೆ.
ತಿರುಪತಿ ದೇವಸ್ಥಾನದ ಅಧಿಕೃತ ಮಾಹಿತಿಯ ಪ್ರಕಾರ ಪ್ರತೀ ದಿನ 3,50,000 ಲಡ್ಡುಗಳನ್ನು ತಯಾರಿಸಲಾಗುತ್ತದೆ. ಅಂದರೆ, ವರ್ಷಕ್ಕೆ 12ರಿಂದ 13 ಕೋಟಿ ಲಡ್ಡುಗಳನ್ನು ಪ್ರಸಾದ ಎಂದು ಮಾರಾಟ ಮಾಡುತ್ತದೆ. ತಿಂಗಳಿಗೆ ಕನಿಷ್ಠ ಒಂದು ಕೋಟಿ ಲಡ್ಡುಗಳನ್ನು ಮಾರುತ್ತದೆ. ಮಾರಾಟವೆಂದರೆ ವ್ಯಾಪಾರ, ಲಾಭ-ನಷ್ಟದ ಬಾಬತ್ತು. ಪ್ರಸಾದವೆಂಬ ತಿರುಪತಿ ಲಡ್ಡುಗಳು ವಾಸ್ತವದಲ್ಲಿ ಪ್ರಸಾದವಲ್ಲ. ಬದಲಿಗೆ, ಹಣ ಪಡೆದು ಮಾರಾಟ ಮಾಡುವ ಸರಕು. ದುಡ್ಡು ಕೊಟ್ಟು ಖರೀದಿಸುವುದು ಪ್ರಸಾದವಾಗುತ್ತದೆಯೇ? ಆದರೂ 600 ಜನ ಶ್ರೀವೈಷ್ಣವ ಬ್ರಾಹ್ಮಣರು ತಯಾರಿಸುವ ಪವಿತ್ರ ಪ್ರಸಾದವೆಂದು ಕಣ್ಣಿಗೊತ್ತಿಕೊಂಡು ಸ್ವೀಕರಿಸುತ್ತಾರೆ. ಜನರ ಈ ನಂಬಿಕೆಯೇ ಟಿಟಿಡಿಗೆ ಆದಾಯದ ಮೂಲವಾಗಿದೆ. ಹಣದ ಹೊಳೆಯೇ ಹರಿಯುತ್ತಿದೆ.
ಹೀಗೆ ದೇವರ ನೆಪದಲ್ಲಿ ಯಾವುದಾವುದೋ ಮೂಲಗಳಿಂದ ತಿರುಪತಿಗೆ ಹರಿದು ಬರುವ ಆದಾಯ ವರ್ಷಕ್ಕೆ ಐದು ಸಾವಿರ ಚಿಲ್ಲರೆ ಕೋಟಿ ರೂ.ಗಳಾಗುತ್ತದೆ. ಈ ಹಣದ ಹರಿವಿರುವ ತಿರುಮಲ ತಿರುಪತಿ ದೇವಸ್ಥಾನದ ಮೇಲೆ ಈಗ ಎಲ್ಲರ ಕಣ್ಣು ಬಿದ್ದಿದೆ. ಅದನ್ನು ಹೇಗಾದರೂ ಮಾಡಿ, ಕೈವಶ ಮಾಡಿಕೊಳ್ಳಬೇಕೆಂಬ ಹವಣಿಕೆ ಆರಂಭವಾಗಿದೆ. ಸಾಧ್ಯವಾಗದಿದ್ದರೆ ಸ್ವಲ್ಪಮಟ್ಟಿಗಿನ ಹಿಡಿತವನ್ನಾದರೂ ಸಾಧಿಸಬೇಕೆಂಬ ಆಸೆ ಹುಟ್ಟಿಸಿದೆ. ಆ ನಿಟ್ಟಿನಲ್ಲಿ ಮುಂಚೂಣಿಯಲ್ಲಿರುವವರು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು. ಇವರೇ ಪವಿತ್ರ ಪ್ರಸಾದಕ್ಕೆ ಹಸು, ಮೀನಿನ ಕೊಬ್ಬು ಬೆರೆಸಲಾಗಿದೆ ಎಂದವರು.
ನಾಯ್ಡುವಿನ ಈ ವಿವಾದಾತ್ಮಕ ಹೇಳಿಕೆಯ ಹಿಂದೆ ಹಲವಾರು ಲೆಕ್ಕಾಚಾರಗಳಿವೆ. ನಾಯ್ಡು ಈಗ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಆಂಧ್ರದ ಸಿಎಂ ಆಗಿದ್ದಾರೆ. ಅಧಿಕಾರ ಬಳಸಿ ಮಾಜಿ ಸಿಎಂ ಜಗನ್ ದೇವರ ಪ್ರಸಾದ ಲಡ್ಡುವಿನಲ್ಲೂ ಕಮಿಷನ್ ಹೊಡೆದಿದ್ದಾರೆ ಎಂದರು. ಆ ಕ್ಷಣವೇ ಬಿಜೆಪಿಯ ಐಟಿ ಸೆಲ್ ಆತನ ಕ್ರೈಸ್ತ ಧರ್ಮವನ್ನು ಎಳೆದುತಂದು, ತಿರುಪತಿ ದೇವಸ್ಥಾನದ ಹೆಸರು ಹಾಳು ಮಾಡಲು, ಹಿಂದೂಗಳನ್ನು ವಂಚಿಸಿದವನು ಎಂದಿದೆ. ಮುಂದಾಲೋಚನೆ ಇಲ್ಲದ ಬಿಜೆಪಿಯ ಹಿಂದು ನಾಯಕರು ಅದನ್ನೇ ಅರಚಿದರು, ಹಂಚಿದರು. ಅಲ್ಲಿಗೆ ಚಂದ್ರಬಾಬು ನಾಯ್ಡು ಆಂಧ್ರದ ಮಟ್ಟಿಗೆ ಹಿಂದೂ ರಕ್ಷಕನಾದ, ತನ್ನ ರಾಜಕೀಯ ವಿರೋಧಿ ಜಗನ್‌ನನ್ನೂ ಮಣಿಸಿದ, ಹಿಂದೂಗಳನ್ನೂ ಮೆಚ್ಚಿಸಿದ, ದೆಹಲಿ ನಾಯಕರ ವಿಶ್ವಾಸಕ್ಕೂ ಪಾತ್ರನಾದ. ಹಾಗೆಯೇ ತನ್ನ ಹೆರಿಟೇಜ್ ಡೈರಿ ಉದ್ಯಮ ತಿರುಪತಿ ವ್ಯವಹಾರದಲ್ಲಿ ಪಾಲ್ಗೊಳ್ಳಲು ಹಾದಿ ಸುಗಮಗೊಳಿಸಿಕೊಂಡರು.
ನಾಯ್ಡುವಿನ ಸ್ವಾರ್ಥ ಮತ್ತು ರಾಜಕಾರಣ ಇದಾದರೆ, ಈಗ ಲಡ್ಡು ವಿವಾದದಿಂದಾಗಿ ಹಿನ್ನೆಲೆಯಲ್ಲಿದ್ದ ಆಧುನಿಕ ಆಧ್ಯಾತ್ಮಿಕ ವಕ್ತಾರರಾದ ‘ಹಿಂದೂ’ಗಳು ಮುನ್ನೆಲೆಗೆ ಬಂದಿದ್ದಾರೆ. ಹಸು, ಮೀನು, ಕೊಬ್ಬನ್ನು ಅಸ್ತ್ರ ಮಾಡಿಕೊಂಡಿದ್ದಾರೆ. ಆ ಮೂಲಕ ತಮ್ಮ ಮಾತು ಕೇಳುವ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ.
ಬೆಲ್ಲಕ್ಕೆ ಇರುವೆ ಮುತ್ತುವಂತೆ, ಲಡ್ಡುವಿನಲ್ಲಿ ಕಲಬೆರಕೆ ತುಪ್ಪ ಬಳಸಿದ ಸಂಗತಿ ಬೆಳಕಿಗೆ ಬರುತ್ತಿದ್ದಂತೆ ಹಿಂದೂ ಸಂಘಟನೆಗಳು, ಸಂತರು, ಸ್ವಾಮೀಜಿಗಳು ತಿರುಪತಿಯತ್ತ ನೋಡುತ್ತಿದ್ದಾರೆ. ಹಿಂದೂ ದೇವಾಲಯಗಳ ನಿರ್ವಹಣೆ ಹೊಣೆ ಕುರಿತು ಅಧಿಕಾರಯುತವಾಗಿ ಮಾತನಾಡುತ್ತಿದ್ದಾರೆ.

ಮುಂದುವರೆದು, ಹಿಂದೂ ದೇವಾಲಯಗಳನ್ನು ಸರಕಾರಗಳ ಹಿಡಿತದಿಂದ ಬಿಡುಗಡೆ ಮಾಡಿ, ಅವುಗಳ ಆಡಳಿತ ನಿರ್ವಹಣೆಯನ್ನು ಭಕ್ತರಿಗೇ ನೀಡಬೇಕೆಂಬ ಬೇಡಿಕೆ ಇಡುತ್ತಿದ್ದಾರೆ. ಬೇಡಿಕೆ ಇಡುತ್ತಿರುವ ಸಾಧು, ಸಂತರು, ಸದ್ಗುರು, ಸ್ವಾಮೀಜಿಗಳು ಹಾಗೂ ಸಂಘಟನೆಗಳ ನಾಯಕರು ಎಂದಾದರು ತಿರುಪತಿಗೆ ಹೋಗಿದ್ದಾರ, ಬೆಟ್ಟ ಹತ್ತಿ ಪಾದ ಸವೆಸಿದ್ದಾರ, ತಿಮ್ಮಪ್ಪನಿಗೆ ನಮಸ್ಕರಿಸಿದ್ದಾರ, ತಲೆ ಬೋಳಿಸಿಕೊಂಡಿದ್ದಾರ, ಹುಂಡಿಗೆ ಹಣ ಹಾಕಿದ್ದಾರ, ಪ್ರಸಾದ ತಿಂದಿದ್ದಾರ?
ತಿರುಪತಿಗೆ ಹೋಗುವವರಲ್ಲಿ ಹೆಚ್ಚಿನವರು ಶೂದ್ರರು. ತಿರುಪತಿಗೆ ಆದಾಯದ ಮೂಲವೇ ಅವರು. ಅಂತಹ ಶೂದ್ರರು ಈಗ ಮಾತನಾಡಬೇಕಲ್ಲವೇ? ಆ ಅಧಿಕಾರ ಇರುವುದು ಬಹುಸಂಖ್ಯಾತ ಶೂದ್ರರಿಗಲ್ಲವೇ?
ಆದರೆ, ಮಾಧ್ವ ಮಠದ ಸ್ವಾಮೀಜಿ, ”ತಿರುಪತಿ ಲಡ್ಡು ಪ್ರಸಾದಕ್ಕೆ ಮೀನಿನ ಎಣ್ಣೆ, ಹಂದಿಯ ಕೊಬ್ಬು, ಹಸುವಿನ ಕೊಬ್ಬು ಬಳಸಿರುವುದು ಹಿಂದೂ ಸಮಾಜಕ್ಕೆ ಹಾಗೂ ದೇವರಿಗೆ ಬಗೆದಿರುವ ದೊಡ್ಡ ಅಪಚಾರ. ಸರಕಾರವೇ ಈ ಕೃತ್ಯ ನಡೆಸಿರುವುದು ಖಂಡನಾರ್ಹ. ಧಾರ್ಮಿಕ ಶ್ರದ್ಧಾ ಕೇಂದ್ರಗಳು ಸರಕಾರದ ಹಿಡಿತದಲ್ಲಿ ಇರಬಾರದು. ಹಿಂದೂ ಶ್ರದ್ಧಾ ಕೇಂದ್ರಗಳು ಹಿಂದೂ ಸಮಾಜದ ಕೈಯಲ್ಲಿರಬೇಕು. ತಡ ಮಾಡದೆ ದೇವಸ್ಥಾನಗಳನ್ನು ಸರಕಾರದ ಸ್ವಾಧೀನದಿಂದ ಮುಕ್ತಗೊಳಿಸಬೇಕು. ಹಿಂದೂಗಳ ಸಂಸ್ಥೆಗೆ ತಿರುಪತಿ ದೇವಾಲಯದ ಆಡಳಿತ ನೀಡಬೇಕು” ಎಂದು ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಅಯೋಧ್ಯೆಯಲ್ಲಿ ನಿಂತು ಕೇಂದ್ರ ಸರ್ಕಾರಕ್ಕೆ ಸಲಹೆ-ಸೂಚನೆ ಕೊಟ್ಟಿದ್ದಾರೆ.
ಮಾಧ್ವ ಮಠಗಳಲ್ಲಿಯೂ ಆಗಾಗ ಸಣ್ಣಪುಟ್ಟ ಸಂಗತಿಗಳು ಸಂಭವಿಸಿ ಸುದ್ದಿಯಾಗುತ್ತವೆ. ಆಗೆಲ್ಲ, ಮಠದ ಬಗ್ಗೆ ಬೇರೆಯವರು ಮಾತನಾಡುತ್ತಾರ? ಮಾತನಾಡಿದರೆ ಪೇಜಾವರ ಶ್ರೀಗಳು ಸುಮ್ಮನಿರುತ್ತಾರ?
ಇನ್ನು ತಮಿಳುನಾಡಿನ ಕೊಯಮತ್ತೂರಿನಲ್ಲಿ ಅರಣ್ಯಭೂಮಿ ಅಕ್ರಮ ಒತ್ತುವರಿ, ತೆರಿಗೆ ವಂಚನೆಗಳಿಂದ ಅಲ್ಲಿನ ಸರ್ಕಾರದಿಂದ ನೋಟಿಸ್ ಪಡೆದು, ಕರ್ನಾಟಕದ ನಂದಿ ಬೆಟ್ಟದ ಬುಡಕ್ಕೆ ಬಂದು ನೆಲೆಯಾಗಿರುವ ಇಶಾ ಫೌಂಡೇಷನ್‌ನ ಸದ್ಗುರು ಜಗ್ಗಿ ವಾಸುದೇವ್, ”ತಿರುಪತಿ ದೇವಸ್ಥಾನದ ಪಾವಿತ್ರ್ಯವನ್ನು ಕಾಪಾಡಲು ಸರಕಾರಿ ಆಡಳಿತದ ಬದಲು ಭಕ್ತರೇ ನಿರ್ವಹಿಸಬೇಕು. ಹಿಂದೂ ದೇವಾಲಯಗಳನ್ನು ಸರಕಾರಿ ಆಡಳಿತದ ಬದಲು ಹಿಂದೂ ಭಕ್ತರು ನಿರ್ವಹಿಸುವ ಸಮಯ ಬಂದಿದೆ” ಎಂದಿದ್ದಾರೆ.
ಇದನ್ನು ಓದಿದ್ದೀರಾ?: ಒಂದು ದೇಶ ಒಂದು ಚುನಾವಣೆ ; ಒಂದು ಉದ್ದೇಶ ಹಲವು ವೇಷ ಅಷ್ಟೇ…
ಈತನಿಗೆ ಪ್ರತಿಷ್ಠಿತ ನಂದಿ ಬೆಟ್ಟದ ಬುಡದಲ್ಲಿ ಜಾಗ ಕೊಟ್ಟವರಾರು? ಆ ಜಾಗದಲ್ಲಿ ಆತ ಶಿವನ ವಿಗ್ರಹವಿಟ್ಟು ವ್ಯಾಪಾರ ಮಾಡುತ್ತಿಲ್ಲವೇ? ಪ್ರಶಾಂತವಾಗಿದ್ದ ಸ್ಥಳವೀಗ ವ್ಯಾಪಾರಿ ಕೇಂದ್ರವಾಗಿಲ್ಲವೇ? ವಾಹನಗಳ ಸರಬರ ಓಡಾಟದಿಂದ ಪ್ರಕೃತಿ, ಪರಿಸರ ಕಲುಷಿತಗೊಳ್ಳುತ್ತಿಲ್ಲವೇ?
ಇನ್ನೊಂದು ಅಣಿಮುತ್ತು ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ್ ಗುರೂಜಿಯಿಂದ ಉದುರಿದೆ. ಬೆಂಗಳೂರಿನ ಕನಕಪುರ ರಸ್ತೆಗೆ ಅಂಟಿಕೊಂಡಿರುವ ಈತನ ಆಶ್ರಮ, ಸರ್ಕಾರಿ ಗೋಮಾಳ, ಕೆರೆ-ಕುಂಟೆ, ದಲಿತರ ಜಮೀನುಗಳನ್ನು ನುಂಗಿ ಬೃಹತ್ ಸಾಮ್ರಾಜ್ಯವಾಗಿದೆ. ಯೋಗ ಹೇಳಿಕೊಡುತ್ತ, ಬದುಕಲು ಕಲಿಯಿರಿ ಎಂದು ಪಾಠ ಮಾಡುತ್ತ ಪ್ರಪಂಚದ ನಾನಾ ಭಾಗಗಳಲ್ಲಿ ಬ್ರಾಂಚ್‌ಗಳನ್ನು ತೆರೆದು ಕೋಟ್ಯಂತರ ರೂಪಾಯಿಗಳ ಆಸ್ತಿ ಮಾಡಿರುವ ರವಿಶಂಕರ್, “ದೇವರ ಪ್ರಸಾದದ ತುಪ್ಪದಲ್ಲಿ ಕಲಬೆರಕೆ ಮೂಲಕ ಮನುಷ್ಯನ ಅಧಿಕಾರ, ಹಣದ ಆಮಿಷ ಮಿತಿ ಮೀರಿದೆ. ಅಪರಾಧಿಗಳ ಸ್ವತ್ತು ವಶಕ್ಕೆ ಪಡೆದು ಅವರನ್ನು ಜೈಲಿಗೆ ತಳ್ಳಬೇಕು” ಎಂದು ಹೇಳಿದ್ದಾರೆ.
ಮಿತಿ ಮೀರಿರುವುದು ಯಾರದ್ದು, ಯಾರನ್ನು ಜೈಲಿಗೆ ತಳ್ಳಬೇಕು?
ಖಾವಿ ತೊಟ್ಟ, ಅಧ್ಯಾತ್ಮದ ವ್ಯಾಪಾರದಲ್ಲಿ ತೊಡಗಿರುವ ಇವರ ಜೊತೆಗೆ, ಹಿಂದೂಗಳನ್ನು ಗುತ್ತಿಗೆ ಪಡೆದ ವಿಶ್ವ ಹಿಂದೂ ಪರಿಷದ್ ಕೂಡ ಕೈ ಜೋಡಿಸಿದೆ. ಹಿಂದೂ ದೇವಾಲಯಗಳನ್ನು ಸರಕಾರದ ಹಿಡಿತದಿಂದ ತಪ್ಪಿಸುವ ಬಗ್ಗೆ ಇಂದು ತಿರುಪತಿಯಲ್ಲಿ ಮಹತ್ವದ ಸಭೆ ನಡೆಸಿದ ವಿಶ್ವ ಹಿಂದೂ ಪರಿಷದ್ ನಾಯಕರು ಮತ್ತು ಸ್ವಾಮೀಜಿಗಳು ಹಿಂದೂ ದೇವಾಲಯಗಳನ್ನು ಹಿಂದೂಗಳ ಸುಪರ್ದಿಗೇ ಬಿಟ್ಟುಕೊಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ ಧರ್ಮ-ದೇವರನ್ನು ಮುಂದಿಟ್ಟು ಓಟು ಗಿಟ್ಟಿಸಿ ಅಧಿಕಾರಕ್ಕೇರಿರುವ ಬಿಜೆಪಿ ಅಧಿಕಾರಾವಧಿಯಲ್ಲಿಯೇ, ತಿರುಪತಿ ತಿಮ್ಮಪ್ಪನನ್ನು ಇಟ್ಟು ವ್ಯಾಪಾರ ಮಾಡುತ್ತಿರುವ ಟಿಟಿಡಿ; ಸ್ವಾರ್ಥ ರಾಜಕಾರಣದ ಬೇಳೆ ಬೇಯಿಸಿಕೊಳ್ಳುತ್ತಿರುವ ಚಂದ್ರಬಾಬು ನಾಯ್ದು; ಖಾವಿ ತೊಟ್ಟವರ ಆಧ್ಯಾತ್ಮಿಕ ಅಟಾಟೋಪವೂ ನಡೆಯುತ್ತಿದೆ.
ತಿರುಪತಿ ತಿಮ್ಮಪ್ಪ ಎಂದಾಕ್ಷಣ ಉದ್ದ ನಾಮ ನೆನಪಾಗುತ್ತದೆ. ಅಂತಹ ತಿಮ್ಮಪ್ಪನಿಗೇ ನಾಮ ಹಾಕುವ ದುಷ್ಟರ ದಂಡು ಈತ ತಿರುಪತಿಯತ್ತ ನೋಡುತ್ತಿದೆ. ಹಿಡಿತಕ್ಕೆ ತೆಗೆದುಕೊಳ್ಳುವ ದಾರ್ಷ್ಟ್ಯವೂ ಕಾಣುತ್ತಿದೆ. ಇಲ್ಲಿ ದೇವರಿದ್ದಾನೆಯೇ?

ಲೇಖಕ, ಪತ್ರಕರ್ತ
ನಿಮ್ಮದು ವರದಿಯೇ ಇಲ್ಲ ವಿಮರ್ಷೆಯೇ? ತಿರುಪತಿಯ ಭಕ್ರರು, ಅವರ ಜಾತಿ, ಮಠಾಧೀಶರ ಹೇಳಿಕೆ, ಜಗ್ಗಿ, ರವಿಶಂಕರ್
ಮೇಲೆ ಒಂದಿಷ್ಟು ಕಮೆಂಟ್ಸ್, ದೇವರು ಇದ್ದಾರೆಯೇ …ಉದ್ದದ ನಾಮ… ರಾಜಕೀಯ, ಹೆರಿಟೇಜ್ ಹಾಲು… ಲಡ್ಡು…. ಇವೆಲ್ಲ ನೋಡಿದರೆ ನಿಮ್ಮ ಉದ್ದೇಷ ಗೊಂದಲ ಉಂಟುಮಾಡೋದು ಹೊರತು ಸತ್ಯನಿಷ್ಠೆ ಅಲ್ಲ. ನಿಷ್ಪಕ್ಷ ಬರಹ, ವರದಿ ಬೇಕಾದ ಸಂಧರ್ಭಲ್ಲಿ ನೀವು ಗೊಂದಲ ನಿರಮಿಸುತ್ತಿದ್ದೀರಿ. ಲೆಫ್ಟಿಸ್ಟ್ ಧೋರಣೆ ಎದ್ದು ಕಾಣುತ್ತಿದೆ. ಸಮಾಜಮುಖಿ ಪತ್ರಕರ್ತರುಇಲ್ಲ..ಎಲ್ಲಾ ಪೇಯ್ಡ್ ಮೀಡಿಯ ಅನ್ನೋದು ತೋರಿಸಿಕೊಡುತ್ತೆ ನಿಮ್ಮ ಬರಹ!
ಕೋಟ್ಯಂತರ ಶೂದ್ರ,ದಲಿತರ , ಅಬ್ರಾಹ್ಮಣ ಭಕ್ತರ ಹಿತಾಸಕ್ತಿ, ಕಳವಳ, ಆತಂಕ ಇವುಗಳನ್ನು ಬಸವರಾಜುರವರು ಅತ್ಯಂತ ಪರಿಣಾಮಕಾರಿಯಾಗಿ ಅಭಿವ್ಯಕ್ತಿ ಸಿದ್ದಾರೆ. ಯಾಕೆಂದರೆ, ತಥಾಕಥಿತ ಮುಖ್ಯವಾಹಿನಿಯ ಕೂಗುಮಾರಿ ಮಾಧ್ಯಮಗಳು, ಅಂಧ ವೈದಿಕ ಸಂಪಾದಕ ಮಂಡಳಿ ಹೊಂದಿರುವ ಬಹುತೇಕ ಪತ್ರಿಕೆಗಳು ಮೇಲ್ಕಾಣಿಸಿದ ಜನ ಸಮೂಹವನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ.ಪ್ರಸಾದ ತಯಾರಾಗುವ ಅಡುಗೆ ಕೋಣೆಗೆ ನಿರ್ದಿಷ್ಟ ಸುಮುದಾಯದ ಬ್ರಾಹ್ಮಣರ ಹೊರತು ಬೇರಾರಿಗೂ ಪ್ರವೇಶವಿಲ್ಲವೆಂದು, ಅದಕ್ಕೆ ವಿರುದ್ಧವಾಗಿ ನಡೆದುಕೊಂಡಲ್ಲಿ ಆ ಭಕ್ತರ ಮನಸ್ಸಿಗೆ ನೋವಾಗುತ್ತದೆ ಎಂದೇ ಸಬೂಬು ಹೇಳ್ಕೊಂಡು ಕೊನೆಗೂ 2017 ರಲ್ಲಿ FSSAI ಲೈಸೆನ್ಸ್ ಪಡೆದುಕೊಂಡು ತಿಮ್ಮಪ್ಪನ ಪ್ರಸಾದ ವಿನಿಯೋಗ,ಮಾರಾಟ ನಡೀತಿದೆ, ಅದೂ ಕೂಡ ಬೆಂಗಳೂರಿನ ಶ್ರೀ. ಟಿ. ನರಸಿಂಹಮೂರ್ತಿ ಎಂಬ ಆರ್.ಟಿ.ಐ. ಕಾರ್ಯಕರ್ತರ ಹೋರಾಟದ ಫಲವಾಗಿ.