ಬಗರ್ ಹುಕುಂ ಯೋಜನೆ ಅಡಿ ಕೆಂಗೇರಿಯ ಬಿಎಂ ಕಾವಲ್‌ನಲ್ಲಿ 2,500 ಎಕರೆ ‘ಗೋಮಾಳ’ ಜಮೀನನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡುವಾಗ ಅವ್ಯವಹಾರ ನಡೆದಿದೆ. ಆರ್ ಅಶೋಕ್ ಕಂದಾಯ ಸಚಿವರಾಗಿದ್ದಾಗ ಈ ಅವ್ಯವಹಾರ ನಡೆದಿದೆ. ಅವರ ವಿರುದ್ಧ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ಮುಖ್ಯಸ್ಥ, ಮಾಜಿ ಎಂಎಲ್‌ಸಿ ರಮೇಶ್ ಬಾಬು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ರಮೇಶ್ ಬಾಬು, “ವಿಪಕ್ಷ ನಾಯಕರಾಗಿ ಕೆಲಸ ಮಾಡುವವರು ಆರೋಪಗಳಿಂದ ಮುಕ್ತರಾಗಿರಬೇಕು. ಆದರೆ ಅವರು (ಅಶೋಕ) ಸಚಿವರಾಗಿದ್ದಾಗ ಬಗರ್ ಹುಕುಂ ಸಮಿತಿ ಅಧ್ಯಕ್ಷರಾಗಿದ್ದರು. ಆಗ, 2,500 ಎಕರೆ ಜಮೀನು ಹಂಚಿಕೆಯಲ್ಲಿ ಹಲವು ಅವ್ಯವಹಾರ ನಡೆದಿದೆ. ಅವರ ವಿರುದ್ಧ ಬಿಎಂಟಿಎಫ್‌ನಲ್ಲಿ ಪ್ರಕರಣ ದಾಖಲಿಸಲಾಗಿದೆ” ಎಂದು ಆರೋಪಿಸಿದ್ದಾರೆ.
“ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸಬೇಕೆಂದು ಕೋರಿ ಅಶೋಕ್ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಆದರೆ, ಹೈಕೋರ್ಟ್ ಅದನ್ನು ತಿರಸ್ಕರಿಸಿ, ಪ್ರಕರಣದ ತನಿಖೆಗೆ ಸೂಚಿಸಿದೆ. ಕಾಂಗ್ರೆಸ್ ಸರ್ಕಾರ ಬಗರ್ ಹುಕುಂ ಭೂ ಮಂಜೂರಾತಿ ಹಗರಣದ ಸಮಗ್ರ ತನಿಖೆ ನಡೆಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
“ಬಿ.ಎಂ.ಕಾವಲ್ ಭೂ ಮಂಜೂರಾತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ಮಾಧ್ಯಮಗಳು ವರದಿ ಮಾಡಬಾರದು ಎಂದು ಅಶೋಕ್ ತಡೆಯಾಜ್ಞೆ ತಂದಿದ್ದಾರೆ. ತಡೆಯಜ್ಞೆ ಅಡಿಯಲ್ಲಿ ರಕ್ಷಣೆ ಪಡೆದಿರುವ ಅವರಿಗೆ ಸರ್ಕಾರವನ್ನು ಟೀಕೆ ಮಾಡುವ ನೈತಿಕ ಹಕ್ಕಿಲ್ಲ” ಎಂದು ರಮೇಶ್ ಬಾಬು ಹೇಳಿದ್ದಾರೆ.
“ಅಶೋಕ್ ಅವರು ಸಾರಿಗೆ ಸಚಿವರಾಗಿದ್ದಾಗ ರಾಷ್ಟ್ರೀಯ ನಗರ ನವೀಕರಣ ಮಿಷನ್ ಅಡಿಯಲ್ಲಿ 143 ಮಾರ್ಕೊಪೋಲೊ ಬಸ್‌ಗಳ ಖರೀದಿಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆಯೂ ಸರ್ಕಾರ ತನಿಖೆಗೆ ಆದೇಶಿಸಬೇಕು. ಅಶೋಕ್ ಅವರು ತಮ್ಮ ವಿರುದ್ಧದ ಈ ಆರೋಪ ಸಂಬಂಧ ಈವರೆಗೆ ಪ್ರತಿಕ್ರಿಯಿಸಿಲ್ಲ. ಜಮೀನು ಡಿನೋಟಿಫಿಕೇಷನ್‌ಗೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಅವರು ಸಿಲುಕಿಕೊಂಡಿದ್ದರು. ಆಗ, ಕಾಂಗ್ರೆಸ್ ಪ್ರತಿಭಟನೆಯಿಂದಾಗಿ ಭೂಮಿಯನ್ನು ಡಿನೋಟಿಫಿಕೇಷನ್ ಮಾಡದೆ, ಉಳಿಸಲಾಯಿತು” ಎಂದು ರಮೇಶ್ ಬಾಬು ವಿವರಿಸಿದ್ದಾರೆ.