ಸಿಎಂ ಸಿದ್ದರಾಮಯ್ಯ ನನ್ನ ಮುಂದೆ ಬರಲಿ. ಆಗ ಸಂಸ್ಕೃತಿ, ನಡವಳಿಕೆ ಬಗ್ಗೆ ಚರ್ಚೆ ಮಾಡೋಣ. ಸಭ್ಯತೆ ಅಂದರೆ ಏನು ಎಂದು ಸಾರ್ವಜನಿಕವಾಗಿ ಮಾತನಾಡೋಣ ಎಂದು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಸಂಸ್ಕೃತಿ ಬಗ್ಗೆ ಸಿದ್ದರಾಮಯ್ಯ ನನ್ನ ಎದುರು ಬಂದು ಮಾತನಾಡಲಿ. ಏನು ಮಾತನಾಡಬೇಕು ಅಂತ ನಾನು ಹೇಳುತ್ತೇನೆ. ಯಾರಿಗೆ ಯಾವ ಭಾಷೆಯಲ್ಲಿ ಹೇಗೆ ಮಾತಾಡಬೇಕು ಹಾಗೆ ಮಾತಾಡಬೇಕು” ಎಂದರು.
“ಸಿದ್ದರಾಮಯ್ಯ ಕಳೆದ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರಿಗೆ ಏಕವಚನದಲ್ಲಿ ಮಾಸ್ ಮರ್ಡರ್ ಎಂದು ಕರೆದರು. ಅವರಿಗೊಂದು ನ್ಯಾಯ ನಮಗೊಂದು ನ್ಯಾಯನಾ? ಅದೆಲ್ಲ ನಮಗೆ ಗೊತ್ತಿಲ್ಲವಾ? ಯಾರಿಗೆ ಹೇಗೆ ಮಾತಾಡಬೇಕು ನಮಗೆ ಗೊತ್ತು. ಇದರ ಎಲ್ಲದರ ಬಗ್ಗೆ ಜನರ ಮುಂದೆ ಚರ್ಚೆ ಮಾಡೋಣ. ಎಲ್ಲೊ ಕೂತುಕೊಂಡು ಸಭೆಯಲ್ಲಿ ಮಾತನಾಡುವುದು ಸರಿ ಅಲ್ಲ” ಎಂದು ಹೇಳಿದರು.
ಸಿದ್ದರಾಮಯ್ಯ ಅವರ ವಿರುದ್ಧ ತಾವು ಏಕವಚನ ಪ್ರಯೋಗ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿ, “ನನ್ನ ಹೇಳಿಕೆಯನ್ನ ಖಂಡಿಸುವುದು ಸಹಜ. ಇದು ನನ್ನ ಹೇಳಿಕೆ, ಪಕ್ಷದ ಹೇಳಿಕೆ ಅಲ್ಲ. ಇದು ನನ್ನ ವೈಯಕ್ತಿಕ ಹೇಳಿಕೆ. ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿರುವ ಮಾತು ಸರಿ ಇದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅನಂತಕುಮಾರ್ ಎಂಬ ಬೆಂಕಿ ಬಾಲಕನೂ, ಜನಿವಾರದಾಟವೂ
ಅನಂತಕುಮಾರ್ ನಾಲ್ಕುವರೆ ವರ್ಷ ಎಲ್ಲಿದ್ದರು? ಕುಂಭಕರ್ಣ ಎಂಬ ಕಾಂಗ್ರೆಸ್ ಟೀಕೆ ಮಾಡಿರುವ ವಿಚಾರವಾಗಿ ಮಾತನಾಡಿ, “ಅದಕ್ಕೆಲ್ಲ ನಾನು ಮುಂದಿನ ದಿನಗಳಲ್ಲಿ ಉತ್ತರ ಕೊಡುತ್ತೇನೆ. ಎಲ್ಲದಕ್ಕೂ ಉತ್ತರ ಕೊಡುತ್ತೇನೆ. ಯಾವುದಕ್ಕೂ ಬಡ್ಡಿ ಇಟ್ಟಿಕೊಳ್ಳುವ ಪ್ರಶ್ನೆ ಇಲ್ಲ” ಎಂದರು.
ಆರೋಗ್ಯ ಸರಿ ನೋಡಿಕೊಳ್ಳಿ ಎಂಬ ಡಿಕೆ ಶಿವಕುಮಾರ ಹೇಳಿಕೆಗೆ ಪ್ರತಿಕ್ರಿಯಿಸಿ, “ನನ್ನ ಆರೋಗ್ಯ ಅತ್ಯಂತ ಚೆನ್ನಾಗಿದೆ. ಆರೋಗ್ಯದಲ್ಲಿ ಯಾವುದೇ ಸಂಶಯ ಇಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತೆ. ಗೆಲ್ಲಿಸುತ್ತೇನೆ. ನನ್ನ ಟಿಕೆಟ್ ಬಗ್ಗೆ ಬೇರೇಯವರಿಗೆ ಯಾಕೆ ಚಿಂತೆ. ನನ್ನ ಟಿಕೆಟ್ ಬಗ್ಗೆ ನನಗೆ ಚಿಂತೆ ಆಗಬೇಕು” ಎಂದು ತಿರುಗೇಟು ನೀಡಿದರು.