ಕರ್ನಾಟಕದಲ್ಲಿ ಬಿಜೆಪಿ ಆಟ ನಡೆಯಲ್ಲ. ನಮ್ಮ ಸರ್ಕಾರ ಸ್ಥಿರವಾಗಿದೆ. ಇನ್ನು ಆರು ತಿಂಗಳಲ್ಲೇ ಬಿಜೆಪಿ ಹೋಳಾಗಲಿದೆ. ಈ ಅವಧಿಯಲ್ಲಿ ಎಷ್ಟು ನಾಯಕರು ಉಳಿಯುತ್ತಾರೆ ಎಂಬುದರ ಬಗ್ಗೆ ಯತ್ನಾಳ್ ಯೋಚಿಸಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು.
“ಆರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಿ, ಬಿಜೆಪಿ ಸರ್ಕಾರ ರಚನೆಯಾಗಲಿದೆ” ಎಂದ ಯತ್ನಾಳ್ ಹೇಳಿಕೆಗೆ ಸೋಮವಾರ ಕಲಬುರಗಿಯಲ್ಲಿ ಪ್ರತಿಕ್ರಿಯಿಸಿದ ಅವರು, “ಬೊಮ್ಮಾಯಿ ಅವರು ದೆಹಲಿಗೆ ಹೋಗಿ ಬಂದು ಸುಸ್ತಾಗಿದ್ದಾರೆ. ನಮ್ಮ ಪಕ್ಷದ ಬಗ್ಗೆ ತೋರುವ ಕಾಳಜಿಯಲ್ಲಿ ಅರ್ಧಭಾಗ ಅವರ ಪಕ್ಷಕ್ಕೆ ತೋರಿಸಲಿ” ಎಂದು ಕುಟುಕಿದರು.
“ಬಿಜೆಪಿಯವರು ಯಾವಾಗಲು ಬಹುಮತದಿಂದ ಅಧಿಕಾರಕ್ಕೆ ಏರಲು ಪ್ರಯತ್ನಿಸಿಲ್ಲ. ಕಳೆದ ಬಾರಿ ಅನೈತಿಕವಾಗಿ ಸರ್ಕಾರ ರಚನೆ ಮಾಡಿ, ಈ ಭಾರಿ ಜನರಿಂದ ತಿರಸ್ಕಾರಕ್ಕೆ ಒಳಗಾದರು. ಅವರಿಂದ ನಮ್ಮ ಸರ್ಕಾರಕ್ಕೆ ಯಾವ ತೊಂದರೆ ಆಗಲ್ಲ. ರಾಜ್ಯದ ಜನತೆ ಆ ಪ್ರಕಾರವೇ ನಮಗೆ ಆಶೀರ್ವಾದ ಮಾಡಿದ್ದಾರೆ” ಎಂದರು.