ಮದ್ಯ ದರ ಏರಿಕೆ ಮಾಡಿಲ್ಲ, ಅಂತಹ ಯಾವುದೇ ಪ್ರಸ್ತಾವ ಅಬಕಾರಿ ಇಲಾಖೆ ಮುಂದಿಲ್ಲ ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ಗುರುವಾರ ಸುದ್ದಿಗಾರರ ಜೊತೆ ಮಾತನಾಡುತ್ತ, “ಪ್ರತಿ ಕ್ವಾಟರ್ ಮದ್ಯಕ್ಕೂ 20 ರೂಪಾಯಿ ಹೆಚ್ಚಿಸಲಾಗಿದೆ” ಎಂದು ಕಳವಳ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಶುಕ್ರವಾರ ವಿಧಾನಸೌಧದಲ್ಲಿ ಸಚಿವ ಆರ್ ಬಿ ತಿಮ್ಮಾಪುರ ಅವರು ಪ್ರತಿಕ್ರಿಯಿಸಿದ್ದಾರೆ.
“ಅಬಕಾರಿ ಇಲಾಖೆಯಿಂದ ಯಾವುದೇ ದರ ಏರಿಕೆಯ ಆದೇಶ ಮಾಡಿಲ್ಲ. ಹಣಕಾಸು ಇಲಾಖೆ ಇರಬಹುದು ಅಥವಾ ಕೆಎಸ್ ಬಿಎಸ್ ಎನ್ ನಲ್ಲಿ ಇರಬಹುದು ಯಾವುದೇ ಪ್ರಸ್ತಾವನೆ ಬಂದಿಲ್ಲ” ಎಂದು ಸಚಿವರು ಹೇಳಿದ್ದಾರೆ.
ಕಾಂಗ್ರೆಸ್‌ನ ಐದು ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಕ್ರೋಡೀಕರಣ ಮಾಡುವ ನಿಟ್ಟಿನಲ್ಲಿ ಮದ್ಯ ಮಾರಾಟ ದರ ಏರಿಕೆ ಮಾಡಲಾಗಿದೆ ಎಂಬ ಮಾಹಿತಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಹಾಗೆಯೇ ಬಿಜೆಪಿ ನಾಯಕರು ಈ ಬಗ್ಗೆ ಆಕ್ಷೇಪ ಎತ್ತಿದ್ದರು. ಈ ಎಲ್ಲ ವಿಚಾರವಾಗಿ ಮದ್ಯದ ದರ ಏರಿಕೆಯನ್ನು ಸಚಿವರು ನಿರಾಕರಿಸಿದ್ದಾರೆ.