ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ 400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂಬ ಪ್ರತಿಪಾದನೆಯನ್ನು ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ಭಾರೀ ಬಿರುಸಾಗಿ ಪ್ರಚಾರ ಮಾಡುತ್ತಿದೆ. ನಂಬರ್ ಗೇಮಿಂಗ್ ಮೂಲಕ ಮತದಾರರನ್ನು ಯಾಮಾರಿಸಿ, ಬಿಜೆಪಿಗೆ ಮತ ಹಾಕುವಂತೆ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ. ಆದರೆ, ಎನ್ಡಿಎ 300 ದಾಟುವುದು ಸುಲಭವಿಲ್ಲ ಎಂದು ಹಲವಾರು ತಜ್ಷರು ಹೇಳುತ್ತಿದ್ದಾರೆ. ಈ ನಡುವೆ, ಬಿಜೆಪಿ-ಎನ್ಡಿಎ ಗೆಲುವಿಗೆ 13 ರಾಜ್ಯಗಳು ಸವಾಲುವೊಡ್ಡಲಿವೆ. ಆ ರಾಜ್ಯಗಳಲ್ಲಿ ಎನ್ಡಿಎ ಮೈತ್ರಿ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳಲು ಅವಕಾಶವೇ ಇಲ್ಲ ಎಂದು ‘ಆಕ್ಸಿಸ್ ಮೈ ಇಂಡಿಯಾ’ದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಗುಪ್ತಾ ಹೇಳಿದ್ದಾರೆ.
ಕಳೆದ ಐದು ವರ್ಷಗಳಲ್ಲಾದ ರಾಜಕೀಯ ಬದಲಾವಣೆಗಳಿಂದಾಗಿ ಮಹಾರಾಷ್ಟ್ರ, ಬಿಹಾರ, ಕರ್ನಾಟಕ ಮತ್ತು ದೆಹಲಿಯಲ್ಲಿ ಎನ್ಡಿಎಗೆ ಭಾರೀ ಹಿನ್ನಡೆಯಾಗಲಿದೆ. ಅಲ್ಲದೆ, 9 ರಾಜ್ಯಗಳಲ್ಲಿ ಎನ್ಡಿಎಗೆ ತನ್ನ ಸ್ಥಾನಗಳನ್ನು ಸುಧಾರಿಸಿಕೊಳ್ಳುವ ಸಾಧ್ಯತೆಗಳು ತೀರಾ ಕಡಿಮೆ ಇವೆ. ಅದಾಗ್ಯೂ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಒಡಿಶಾ, ತೆಲಂಗಾಣ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ತನ್ನ ಸ್ಥಾನಗಳನ್ನು ಕೊಂಚ ಹೆಚ್ಚಿಕೊಳ್ಳಬಹುದು ಎಂದು ಗುಪ್ತಾ ಹೇಳಿದ್ದಾರೆ.
“2019ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಮೇಲೆ ಹೆಸರಿನಲಾಗಿರುವ ರಾಜ್ಯಗಳಲ್ಲಿ ಎನ್ಡಿಎ 93% ‘ಸ್ಟ್ರೈಕ್ ರೇಟ್’ ಹೊಂದಿತ್ತು. ಆದಾಗ್ಯೂ, 2024ರ ಚುನಾವಣೆಯಲ್ಲಿ ಎನ್ಡಿಎ ಹೆಚ್ಚಿನ ಸ್ಥಾನಗಳನ್ನು ಪಡೆಯುವ ಸಾಧ್ಯತೆ ಶೂನ್ಯವಾಗಿದೆ. ಮಾತ್ರವಲ್ಲದೆ, ಅದರ ಸಂಖ್ಯೆ ಕಳೆದ ಚುನಾವಣೆಗಿಂತ ಕುಸಿತ ಕಾಣಬಹುದು. ಎನ್ಡಿಎ 400 ಸ್ಥಾನಗಳನ್ನು ತಲುಪುವುದಿರಲಿ, ಕನಿಷ್ಠ ತನ್ನ ಅಸ್ತಿತ್ವದಲ್ಲಿರುವ ಸ್ಥಾನವನ್ನು ಉಳಿಸಿಕೊಳ್ಳವುದು ಕಷ್ಟಸಾಧ್ಯವಾಗಿದೆ” ಎಂದು ಗುಪ್ತಾ ಹೇಳಿರುವುದಾಗಿ ‘ಮನಿ ಕಂಟ್ರೋಲ್’ ವರದಿ ಮಾಡಿದೆ.
ಆಕ್ಸಿಸ್ ನಡೆಸಿದ ಸಮೀಕ್ಷೆ ಪ್ರಕಾರ, ಈ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟವು 243-254 ಸ್ಥಾನಗಳನ್ನು ಗೆಲ್ಲಬಹುದು. ‘ಇಂಡಿಯಾ’ ಒಕ್ಕೂಟವು 232-242 ಸ್ಥಾನಗಳನ್ನು ಹಾಗೂ ಇತರರು 40-55 ಸ್ಥಾನಗಳನ್ನು ಗೆಲ್ಲಬಹುದು. ಅಲ್ಲದೆ, ಕ್ರಮವಾಗಿ 44%, 43% ಹಾಗೂ 13% ಮತ ಹಂಚಿಕೆಯನ್ನೂ ಪಡೆಯುವ ಸಾಧ್ಯತೆ ಇದೆ.
ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯಗಳಲ್ಲಿ 2019ರ ಚುನಾವಣೆಯ ನಂತರ ನಡೆದ ಅನೇಕ ರಾಜಕೀಯ ಬದಲಾವಣೆಗಳನ್ನು ಗಮಿಸಿರುವ ಗುಪ್ತಾ, “ಇಂಡಿಯಾ ಒಕ್ಕೂಟವು ಸ್ವಲ್ಪಮಟ್ಟಿಗೆ ಮುರಿದುಹೋಗಿದ್ದರೂ, ವಿರೋಧ ಪಕ್ಷಗಳು ಬಲವಾಗಿ ಮುನ್ನುಗ್ಗಲು ತಮ್ಮದೇ ಆದ ಮಾರ್ಗಗಳನ್ನು ಕಂಡುಕೊಂಡಿವೆ” ಎಂದು ಗುಪ್ತಾ ಹೇಳಿದ್ದಾರೆ.
“ಮಹಾರಾಷ್ಟ್ರವು ಹೊಸ ಮೈತ್ರಿಗಳನ್ನು ಹೊಂದಿದ್ದು, ಎರಡು ಪ್ರಮುಖ ಪಕ್ಷಗಳಾದ ಶಿವಸೇನೆ ಮತ್ತು ಎನ್ಸಿಪಿಯಲ್ಲಿ ಒಡಕು ಉಂಟಾಗಿದೆ. ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ರಾಜಕೀಯ ಸಮೀಕರಣವೂ ಬದಲಾಗಿದೆ. ಅದೇ ರೀತಿ ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಜಯಗಳಿಸಿ ಸರ್ಕಾರ ರಚಿಸಿದ್ದು, ಈ ಬಾರಿ ಹೆಚ್ಚು ಸೀಟುಗಳನ್ನೂ ಗೆಲ್ಲುವ ಸಾಮರ್ಥ್ಯ ಹೊಂದಿದೆ. ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಈಗಾಗಲೇ ಮೈತ್ರಿ ಮಾಡಿಕೊಂಡಿವೆ. ಇದೆಲ್ಲವೂ ‘ಇಂಡಿಯಾ’ ಒಕ್ಕೂಟದ ಗೆಲುವಿಗೆ ಪ್ರಮುಖ ಪಾತ್ರ ವಹಿಸುತ್ತವೆ” ಎಂದು ಗುಪ್ತಾ ತಿಳಿಸಿದ್ದಾರೆ.