“ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಮತ್ತೊಂದು ಸುತ್ತಿನ ಸಮೀಕ್ಷೆ ನಡೆಸಿ, ದೆಹಲಿಯಲ್ಲಿ ಸಭೆ ಮಾಡಲಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಚುನಾವಣೆ ಸಮಿತಿ ಸಭೆ ನಂತರ ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಇಂದಿನ ಸಭೆಯಲ್ಲಿ ಪಕ್ಷದ ವೀಕ್ಷಕರು, ಜಿಲ್ಲಾ ಮಂತ್ರಿಗಳು, ಕೆಲವು ಕಾರ್ಯಕರ್ತರು ಸಲ್ಲಿಸಿದ್ದ ವರದಿ ಹಾಗೂ ನಮ್ಮ ಸಮೀಕ್ಷೆ ವರದಿಗಳನ್ನು ಪರಾಮರ್ಶಿಸಿದ್ದೇವೆ. ಮತ್ತೊಂದು ಸುತ್ತಿನ ಸಮೀಕ್ಷೆ ಮೂಲಕ ಅಭಿಪ್ರಾಯ ಸಂಗ್ರಹಕ್ಕೆ ಸೂಚಿಸಿದ್ದೇವೆ. ಪಕ್ಷದ ಅಭ್ಯರ್ಥಿಗಳ ಪಟ್ಟಿ ಇನ್ನೂ ಅಂತಿಮವಾಗಿಲ್ಲ. ಮುಂದಿನ ಸುತ್ತಿನ ಸಭೆಯನ್ನು ದೆಹಲಿಯಲ್ಲಿ ನಡೆಸಲಾಗುವುದು. ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಈ ಬಾರಿ ಬೆಂಗಳೂರಿನಲ್ಲೇ ಸಭೆ ಮಾಡಲಾಗಿದೆ” ಎಂದು ತಿಳಿಸಿದರು.
ಈ ತಿಂಗಳೊಳಗಾಗಿ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗುತ್ತದೆಯೇ ಎಂದು ಕೇಳಿದಾಗ, “ಆದಷ್ಟು ಬೇಗ ಅಂತಿಮಗೊಳಿಸಬೇಕು. ಶೇ. 50ರಷ್ಟು ಅಭ್ಯರ್ಥಿಗಳಿಗಾದರೂ ಕೆಲಸ ಆರಂಭಿಸಲು ನಾವು ಸೂಚನೆ ನೀಡಬೇಕಿದೆ” ಎಂದರು.
ಎಷ್ಟು ಕ್ಷೇತ್ರಗಳಲ್ಲಿ ಓರ್ವ ಆಕಾಂಕ್ಷಿಗಳಿದ್ದಾರೆ ಎಂದು ಪತ್ರಕರ್ತರು ಕೇಳಿದಾಗ, “ನಾವು ಇನ್ನು ಆ ವಿಚಾರವಾಗಿ ಚರ್ಚೆ ಮಾಡಿಲ್ಲ. ನಾವು ಕೇವಲ ನಮಗೆ ಬಂದಿರುವ ವರದಿಗಳು, ಅಭಿಪ್ರಾಯದ ಬಗ್ಗೆ ಚರ್ಚೆ ಮಾಡಿದ್ದೇವೆ” ಎಂದು ತಿಳಿಸಿದರು.
ಎಐಸಿಸಿಗೆ ಕಳಿಸಲಾಗಿರುವ ಪಟ್ಟಿ ಬಗ್ಗೆ ಗೊಂದಲವಿದೆಯೇ ಎಂದು ಕೇಳಿದಾಗ, “ಇದೆಲ್ಲವೂ ಸುಳ್ಳು. ನಾವು ಎಐಸಿಸಿಗೆ ಯಾವುದೇ ಪಟ್ಟಿ ನೀಡಿಲ್ಲ. ಮುಖ್ಯಮಂತ್ರಿಗಳಿಗೆ ವಿವಿಧ ವರದಿಗಳು, ಅಭಿಪ್ರಾಯಗಳ ಕುರಿತ ಅಧಿಕೃತ ಪಟ್ಟಿಯನ್ನು ಇವತ್ತಷ್ಟೇ ನೀಡಿದ್ದೇನೆ. ನಾವು ನಮ್ಮ ಪಟ್ಟಿಯನ್ನು ಗೌಪ್ಯವಾಗಿಡಬೇಕು, ಆ ಕೆಲಸ ಮಾಡುತ್ತೇವೆ” ಎಂದರು.
ಇದನ್ನು ಓದಿದ್ದೀರಾ? ‘ಒಂದು ದೇಶ, ಒಂದು ಚುನಾವಣೆ’ ನೀತಿಗೆ ವಿರೋಧ: ನಿರ್ಣಯ ಅಂಗೀಕರಿಸಿದ ತಮಿಳುನಾಡು ಸರ್ಕಾರ
ಸಚಿವರ ಸ್ಪರ್ಧೆ ಬಗ್ಗೆ ಕೇಳಿದಾಗ, “ರಾಜಕೀಯದಲ್ಲಿ ಯಾರು ಬೇಕಾದರೂ ಸ್ಪರ್ಧಿಸಬಹುದು. ಎಲ್ಲರಿಗೂ ಅವಕಾಶವಿರುತ್ತದೆ. ಪಕ್ಷ ಗೆಲ್ಲುವುದು ಮುಖ್ಯ” ಎಂದು ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.