ಲೋಕಸಭಾ ಚುನಾವಣೆಗೆ ಬಿಜೆಪಿಯು ಇಂದು ಎರಡನೇ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ಹೊಸ ಬಂಡಾಯ ಆರಂಭವಾಗುವ ಲಕ್ಷಣಗಳು ಕಾಣುತ್ತಿವೆ. ಪ್ರತಾಪ್ ಸಿಂಹ, ನಳಿನ್ ಕುಮಾರ್ ಕಟೀಲ್, ಡಿ ವಿ ಸದಾನಂದ ಗೌಡ ಸಹಿತ ಹಾಲಿ ಸಂಸದರಿಗೆ ಟಿಕೆಟ್ ಮಿಸ್ ಆಗಿರುವುದು ಒಂದು ಕಡೆಯಾದರೆ, ಮತ್ತೊಂದೆಡೆ ಟಿಕೆಟ್‌ಗಾಗಿ ಲಾಬಿ ನಡೆಸಿದವರು ಬಂಡಾಯದ ಮುನ್ಸೂಚನೆ ನೀಡಿದ್ದಾರೆ.
ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಈ ಬಾರಿ ತಮ್ಮ ಮಗ ಕಾಂತೇಶ್ ಅವರಿಗೆ ಟಿಕೆಟ್ ಕೊಡಿಸಲು ಭಾರೀ ಕಸರತ್ತು ನಡೆಸಿದ್ದರು. ಹಾವೇರಿ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರ ಕಾಂತೇಶ್ ಅವರಿಗೆ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಈಗ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಕಾಂತೇಶ್ ಅವರಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿದೆ.
ಅಚ್ಚರಿಯ ಆಯ್ಕೆ ಎಂಬಂತೆ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಿಎಂ, ಹಾಲಿ ಶಾಸಕ ಬಸವರಾಜ ಬೊಮ್ಮಾಯಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಈ ಕ್ಷೇತ್ರಕ್ಕೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರ ಪುತ್ರ ಕಾಂತೇಶ್ ಅವರು ಟಿಕೆಟ್ ನಿರೀಕ್ಷೆಯಲ್ಲಿದ್ದರು. ಹಾಗೆಯೇ, ಜಗದೀಶ್ ಶೆಟ್ಟರ್ ಹೆಸರು ಕೂಡ ಕೇಳಿಬಂದಿತ್ತು. ಅಲ್ಲದೇ, ಮಾಜಿ ಸಚಿವ, ಆಪರೇಷನ್ ಕಮಲದಲ್ಲಿ ಒಳಗಾಗಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಜಿಗಿದಿದ್ದ ಮಾಜಿ ಸಚಿವ ಬಿ ಸಿ ಪಾಟೀಲ್, ತನಗೆ ಟಿಕೆಟ್ ಕೊಡಿ ಎಂದು ಪಕ್ಷದ ಬೆನ್ನು ಬಿದ್ದಿದ್ದರು.
ಬೊಮ್ಮಾಯಿಯವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದರಿಂದ ಇಲ್ಲಿ ಬಂಡಾಯ ಬಿಸಿ ಬಿಜೆಪಿಗೆ ತಟ್ಟುವ ಸಾಧ್ಯತೆ ಇದೆ. ಕೆ ಎಸ್ ಈಶ್ವರಪ್ಪ ಅವಶ್ಯಕತೆ ಬಿದ್ದರೆ, ತಾವೇ ಬಂಡಾಯ ಅಭ್ಯರ್ಥಿಯಾಗಿ ಯಡಿಯೂರಪ್ಪ ಪುತ್ರನ ವಿರುದ್ಧ ಶಿವಮೊಗ್ಗದಲ್ಲಿ ಸ್ಪರ್ಧಿಸುವ ಸುಳಿವನ್ನು ನೀಡಿರುವುದು ಕುತೂಹಲ ಹೆಚ್ಚಿಸಿದೆ.
ಹಾವೇರಿಯಲ್ಲಿ ಮಗನಿಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ಶಿವಮೊಗ್ಗದ ಕೆ.ಎಸ್.ಈಶ್ವರಪ್ಪ ನಿವಾಸದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿದೆ. ಬಿಜೆಪಿ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಈಶ್ವರಪ್ಪನವರಿಗೆ ಹಲವಾರು ಮಂದಿ ಕರೆ ಮಾಡುತ್ತಿದ್ದಾರೆ. ಬೆಂಬಲಿಗರು, ಕುಟುಂಬ ಸದಸ್ಯರ ಜೊತೆ ಚರ್ಚೆ ನಡೆಸುತ್ತಿರುವ ಈಶ್ವರಪ್ಪನವರು, ಮುಂದಿನ ತಮ್ಮ ರಾಜಕೀಯ ನಡೆ ಕುರಿತು ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
ರಾಜ್ಯ ರಾಜಕೀಯದ ಶಕ್ತಿ ಕೇಂದ್ರವಾದ ಶಿವಮೊಗ್ಗದ ಬಿಜೆಪಿಯಲ್ಲಿ ಈಗ ಕಂಪನಗಳು ಕಂಡುಬರುತ್ತಿವೆ. ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ತಮ್ಮ ಪುತ್ರ ಕಾಂತೇಶ್ ಹೆಸರು ಇಲ್ಲದ ಕಾರಣ ಕೆರಳಿ ಕೆಂಡವಾಗಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಪಕ್ಷದ ನಾಯಕತ್ವದ ವಿರುದ್ಧವೇ ತೊಡೆ ತಟ್ಟಲು ಮುಂದಾಗಿದ್ದಾರೆ.
ಇದನ್ನು ಓದಿದ್ದೀರಾ? ಲೋಕಸಭಾ ಚುನಾವಣೆ | ಲೋಕಸಭಾ ಚುನಾವಣೆ | ಬಿಜೆಪಿಯ 2ನೇ ಪಟ್ಟಿ ಪ್ರಕಟ: ಕರ್ನಾಟಕದಲ್ಲಿ ಯಾರಿಗೆಲ್ಲ ಸಿಕ್ಕಿದೆ ಟಿಕೆಟ್?
ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಬಂಜಾರ ಸಮುದಾಯ ಭವನದಲ್ಲಿ ಮಾರ್ಚ್ 15 ರಂದು ಸಭೆ ಕರೆದಿರುವುದಾಗಿ ಈಶ್ವರಪ್ಪ ತಿಳಿಸಿದ್ದಾರೆ. ಈ ಸಭೆಯ ಬಳಿಕ ತಮ್ಮ ಮುಂದಿನ ನಡೆಯನ್ನು ತಿಳಿಸಲಿದ್ದಾರೆ ಎಂದು ತಿಳಿದುಬಂದಿದೆ.
