ಬಿಜೆಪಿ ಟಿಕೆಟ್ ಸಿಗದಿದ್ದರೂ ಸುಮಲತಾ ಮಂಡ್ಯದಲ್ಲೇ ಸ್ಪರ್ಧಿಸಬಹುದು. ಆದರೆ, ಮಂಡ್ಯದ ಜನರು ಸಂಸದೆ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಜೋಡೆತ್ತುಗಳ ಕಸರತ್ತು, ಸ್ವಾಭಿಮಾನದ ಕಾರ್ಡ್ ಸುಮಲತಾ ಕೈಹಿಡಿಯುವುದು ಕಷ್ಟಕರವಾಗಿದೆ.
ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಚುನಾವಣೆ ಎದುರಿಸಲು ಸಜ್ಜಾಗಿವೆ. ಕ್ಷೇತ್ರ ಹಂಚಿಕೆಯ ಜಟಾಪಟಿ ಒಳಗೊಳಗೇ ನಡೆಯುತ್ತಿದೆ. ಅದರಲ್ಲೂ ಹಳೇ ಮೈಸೂರು ಭಾಗದ ಹಾಸನ, ಮಂಡ್ಯ, ತುಮಕೂರು ಹಾಗೂ ಮೈಸೂರು ಕ್ಷೇತ್ರಗಳಿಗೆ ಜೆಡಿಎಸ್ ಬೇಡಿಕೆ ಇಟ್ಟಿದೆ ಎಂದು ಹೇಳಲಾಗುತ್ತಿದೆ. ಸದ್ಯ, ಮಂಡ್ಯಕ್ಕಾಗಿ ಜೆಡಿಎಸ್ ನಾಯಕರು ಪಟ್ಟು ಹಿಡಿದಿದ್ದಾರೆ ಎಂಬುದು ತೆರೆಮರೆಯಲ್ಲಿ ಚರ್ಚೆಯಾಗುತ್ತಿರುವ ವಿಷಯ.
ಒಂದು ವೇಳೆ, ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾದರೆ ಸಂಸದೆ ಸುಮಲತಾ ಅವರ ಕತೆ ಏನು ಎಂಬುದು ಮತ್ತೆ-ಮತ್ತೆ ಚರ್ಚೆಗೆ ಬರುತ್ತಲೇ ಇದೆ. ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಬಿಜೆಪಿಗೆ ಬೆಂಬಲ ಘೋಷಿಸಿರುವ ಸುಮಲತಾ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಲು ಬಯಸಿದ್ದರು. ಒಂದು ವೇಳೆ, ಮಂಡ್ಯ ಜೆಡಿಎಸ್ ಪಾಲಾದರೆ, ಸುಮಲತಾ ಅವರ ನಿರ್ಧಾರ ಏನಾಗಲಿದೆ. ಅವರ ಸ್ಪರ್ಧೆ ಏನಾಗುತ್ತದೆ ಎಂಬ ಪ್ರಶ್ನೆಗಳು ಮುನ್ನೆಲೆಯಲ್ಲಿವೆ. ಅಲ್ಲದೆ, ಸುಮಲತಾಗೆ ಟಿಕೆಟ್ ಕೊಟ್ಟರೂ ಅವರು ಮತ್ತೆ ಗೆಲ್ಲಲು ಸಾಧ್ಯವೇ ಎಂಬ ಪ್ರಶ್ನೆಯೂ ಇದೆ.
ಅಂದಹಾಗೆ, 2019ರ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಸ್ವಾಭಿಮಾನದ ಕಾರ್ಡ್ ಬಳಸಿ ಗೆಲುವು ಸಾಧಿಸಿದ್ದರು. ನಟ ಅಂಬರೀಶ್ ಅವರನ್ನು ಕಳೆದುಕೊಂಡಿದ್ದ ಸಂದರ್ಭದಲ್ಲಿ ನಡೆದ ಚುನಾವಣೆಯಾದ್ದರಿಂದ ಅನುಕಂಪದ ಅಲೆಯೂ ಸುಮಲತಾ ಅವರ ಪರವಾಗಿ ಬೀಸಿತ್ತು. ನಟ ಯಶ್ ಮತ್ತು ದರ್ಶನ್ – ಜೋಡೆತ್ತುಗಳು ಸಾಥ್ ನೀಡಿದ್ದರು. ಅದಲ್ಲದೆ, ಹರುಕು ಬಾಯಿ ಜೆಡಿಎಸ್ ಮುಖಂಡರ ವಿವಾದಾತ್ಮಕ ಹೇಳಿಕೆಗಳಿಂದ ಜನರು ಮತ್ತಷ್ಟು ಸುಮಲತಾ ಎಡೆಗೆ ವಾಲಿದ್ದರು. ಜೆಡಿಎಸ್‌ನಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡದೆ, ಮಗನನ್ನು ಕರೆತಂದಿದ್ದಾರೆಂದು ಕುಮಾರಸ್ವಾಮಿ ವಿರುದ್ಧದ ಕೋಪವೂ ಜೆಡಿಎಸ್‌ನ ಕಾರ್ಯಕರ್ತರಲ್ಲಿ ಹೆಚ್ಚಾಗಿತ್ತು. ಇನ್ನು, ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ ಕೂಡ ಹಿಂಬಾಗಿಲಿನಲ್ಲಿ ಸುಮಲತಾ ಪರವಾಗಿತ್ತು. ಈ ಎಲ್ಲ ಕಾರಣಗಳಿಂದ ಸುಮಲತಾ ಗೆದ್ದು ಬೀಗಿದ್ದರು.
ಆದರೆ, ಈಗ ರಾಜಕೀಯ ಸನ್ನಿವೇಶವೇ ಬದಲಾಗಿದೆ. ಹಾಲಿ ಸಂಸದೆಯಾಗಿರುವ ಸುಮಲತಾ ಮೇಲೆ ಜನರು ಅಸಹನೆಗೊಂಡಿದ್ದಾರೆ. ಸಂಸದೆಯಾಗಿ ಸುಮಲತಾ ಜಿಲ್ಲೆಯಲ್ಲಿ ಯಾವ ಕೆಲಸವನ್ನೂ ಮಾಡಿಲ್ಲವೆಂಬ ಆರೋಪಗಳಿವೆ. ಇವರಿಗಿಂತ ನಟ ಅಂಬರೀಷೇ ಎಷ್ಟೋ ವಾಸಿ ಎಂಬ ಮಾತು ಜಿಲ್ಲೆಯಾದ್ಯಂತ ಕೇಳಿಬರುತ್ತಿದೆ. ಹೀಗಾಗಿ, ಈ ಬಾರಿ ಸ್ವಾಭಿಮಾನದ ಕಾರ್ಡ್ ಕೂಡ ಕೆಲಸಕ್ಕೆ ಬರುವುದಿಲ್ಲ ಎಂಬುದು ಮೇಲ್ನೋಟಕ್ಕೇ ಗೋಚರಿಸತೊಡಗಿದೆ.
ಹಾಗೆಯೇ ಸುಮಲತಾಗಾಗಿ, ತನಗೆ ನೆಲೆಯೇ ಇಲ್ಲದ ಮಂಡ್ಯಕ್ಕಾಗಿ ಜೆಡಿಎಸ್ ಜೊತೆ ಸಂಘರ್ಷಕ್ಕಿಳಿಯಲು ಬಿಜೆಪಿಗೂ ಒಲವಿಲ್ಲ. ಅಷ್ಟೇ ಅಲ್ಲ, ಸುಮಲತಾ ಅವರಿಂದ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಬೆಳೆಯುತ್ತದೆಂಬ ನಂಬಿಕೆಯೂ ಬಿಜೆಪಿಗರಿಗಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ, ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಸಾಧ್ಯತೆಗಳು ಹೆಚ್ಚಾಗಿವೆ.
ಹಾಗೊಂದು ವೇಳೆ, ಮಂಡ್ಯ ಜೆಡಿಎಸ್ ಪಾಲಾದರೆ, ಸಮಲತಾಗೆ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಟಿಕೆಟ್ ನೀಡುವುದಾಗಿ ಬಿಜೆಪಿ ಭರವಸೆ ನೀಡಿದೆ ಎಂದು ತಿಳಿದುಬಂದಿದೆ. ಅದಕ್ಕೆ ಪೂರಕವೆಂಬಂತೆ ಬೆಂಗಳೂರು ಉತ್ತರದ ಹಾಲಿ ಸಂಸದ ಸದಾನಂದಗೌಡ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದ ಹೇಳಿಕೆ, ಸುಮಲತಾ ಸ್ಪರ್ಧೆಗೆ ಚಾಲನೆ ಸಿಕ್ಕಿದೆ.
ಆದರೆ, ಬೆಂಗಳೂರು ನಗರದ ಮೇಲಿನ ತಮ್ಮ ಹಿಡಿತವನ್ನು ಬಿಟ್ಟುಕೊಡಲು ಇಚ್ಛಿಸದ, ಮತ್ತೊಬ್ಬರ ಅನಗತ್ಯ ಆಗಮನವನ್ನು ಸಹಿಸದ ವಿಪಕ್ಷ ನಾಯಕ ಆರ್ ಅಶೋಕ್ ಮತ್ತು ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ ಬೆಂಗಳೂರಿಗೆ ಬೇರಾರು ಬರದಂತೆ ತಡೆಯುವ ಕಸರತ್ತು ನಡೆಸುತ್ತಿದ್ದಾರೆ. ಸುಮಲತಾ ಬೆಂಗಳೂರಿಗೆ ಬಂದರೆ, ಅವರ ಮೂಲಕ ವಿಜಯೇಂದ್ರ ಅಥವಾ ಬೇರಾವುದೇ ಬಿಜೆಪಿಗರು ಬೆಂಗಳೂರಿನ ಮೇಲೆ ಹಿಡಿತ ಸಾಧಿಸಬಹುದೆಂಬ ಲೆಕ್ಕಾಚಾರ ಅವರಲ್ಲಿದೆ. ಹೀಗಾಗಿ, ಮತ್ತೆ ಚುನಾವಣೆಗೆ ಸ್ಪರ್ಧಿಸುವಂತೆ ಸದಾನಂದಗೌಡರ ಮೇಲೆ ಆರ್ ಅಶೋಕ್ ಒತ್ತಡ ಹೇರುತ್ತಿದ್ದಾರೆ. ಈ ಒತ್ತಡದ ಪರಿಣಾಮವಾಗಿ ಸದಾನಂದಗೌಡ ಕೂಡ, ಮತ್ತೆ ಸ್ಪರ್ಧಿಸುವ ಉತ್ಸಾಹ ತೋರುತ್ತಿದ್ದಾರೆ.
ಇದೆಲ್ಲದರ ನಡುವೆ, ಏನೇ ಆಗಲಿ ನಾವು ಮಂಡ್ಯ ಬಿಡುವುದಿಲ್ಲ. ಮಂಡ್ಯದಲ್ಲಿಯೇ ನಾನು ಸ್ಪರ್ಧಿಸುತ್ತೇನೆ. ಮಂಡ್ಯ ಜನರು ನನ್ನೊಂದಿಗಿದ್ದಾರೆ ಎಂದು ಸುಮಲತಾ ಹೇಳುತ್ತಲೇ ಇದ್ದಾರೆ. ಬಿಜೆಪಿ ಏನಾದರೂ ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ, ಸುಮಲತಾ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲಕಾರಿ.
ಸುಮಲತಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಬಹುದು ಅಥವಾ ಬಿಜೆಪಿ ಸಹವಾಸ ಬೇಡವೆಂದು ಕಾಂಗ್ರೆಸ್ ಬಾಗಿಲು ತಟ್ಟಬಹುದು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಆರು ಕ್ಷೇತ್ರಗಳನ್ನು ಗೆದ್ದಿರುವ ಕಾಂಗ್ರೆಸ್‌ಗೆ ಲೋಕಸಭಾ ಚುನಾವಣೆಗೆ ಮಂಡ್ಯದಲ್ಲಿ ಸಮರ್ಥ ಅಭ್ಯರ್ಥಿಯೂ ಇಲ್ಲ. ಸಚಿವ ಚಲುವರಾಯಸ್ವಾಮಿ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಯತ್ನಿಸುತ್ತಿದೆ. ಆದರೆ, ಚಲುವರಾಯಸ್ವಾಮಿ ಸ್ಪರ್ಧೆಗೆ ನಿರಾಕರಿಸಿದ್ದಾರೆ. ಕಾಂಗ್ರೆಸ್‌ನ ಯಾವುದೇ ಮುಖಂಡರು ಅಥವಾ ಕಾರ್ಯಕರ್ತರನ್ನು ಕಣಕ್ಕಿಳಿಸಿದರೆ, ಅವರನ್ನು ಗೆಲ್ಲಿಸಿಕೊಂಡು ಬರಲು ಶ್ರಮಿಸುತ್ತೇನೆಂದು ಅವರು ಹೇಳುತ್ತಿದ್ದಾರೆ.
ಇತ್ತ, ಚಲುವರಾಯಸ್ವಾಮಿ ಅವರ ಪತ್ನಿ ಧನಲಕ್ಷ್ಮಿ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಬೇಕೆಂದು ಮದ್ದೂರು ಶಾಸಕ ಕೆ.ಎಂ ಉದಯ್ ಮತ್ತು ಮಂಡ್ಯ ಶಾಸಕ ಗಣಿಗ ರವಿ ಒತ್ತಡ ಹಾಕುತ್ತಿದ್ದಾರೆ. ಇಲ್ಲವೆ, ನಾನೇ ಸ್ಪರ್ಧೆಗೆ ಸಿದ್ದನಿದ್ದೇನೆಂದು ಶಾಸಕ ಉದಯ್ ಹೇಳುತ್ತಿದ್ದಾರೆ. ಹೀಗಾಗಿ, ಸುಮಲತಾ ಅವರನ್ನು ಕರೆದು ಟಿಕೆಟ್ ಕೊಡಲು ಕಾಂಗ್ರೆಸ್ ಕೂಡ ತಯಾರಿಲ್ಲ. ಆಕೆಗೆ ಟಿಕೆಟ್ ಕೊಟ್ಟರೆ, ತಮ್ಮ ಸೋಲನ್ನು ತಾವೇ ಅಪ್ಪಿಕೊಂಡಂತೆ ಎಂಬ ಲೆಕ್ಕಾಚಾರವೂ ಇದೆ ಎಂಬುದು ಕಾಂಗ್ರೆಸ್ ವಲಯದ ಮಾತಾಗಿದೆ.
ಈ ವರದಿ ಓದಿದ್ದೀರಾ?: ಪಂಜಾಬ್ ಹುತಾತ್ಮರಿಗೆ ಬಿಜೆಪಿ ‘ಎನ್‌ಒಸಿ’ ಬೇಕಿಲ್ಲ; ಪಂಜಾಬ್ ಸಿಎಂ ಹೀಗೆ ಹೇಳಿದ್ಯಾಕೆ?
ಮಂಡ್ಯದಲ್ಲಿ ಬಿಜೆಪಿ ಟಿಕೆಟ್ ಸಿಗಲಿಲ್ಲವೆಂದರೆ ಸುಮಲತಾ ಮತ್ತೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕಾಗುತ್ತದೆ. ಆದರೆ, ಈ ಬಾರಿ, ಜೋಡೆತ್ತುಗಳ ಕಸರತ್ತು, ಸ್ವಾಭಿಮಾನ ಇದಾವುದೂ ಸುಮಲತಾ ಕೈಹಿಡಿಯಲಾರದು ಎಂಬುದು ಸ್ಪಷ್ಟವಾಗಿದೆ. ಅಲ್ಲದೆ, ಈ ಬಾರಿ, ಜೆಡಿಎಸ್‌ನಿಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಸ್ಪರ್ಧಿಸಬಹುದು ಎನ್ನುವ ಅನುಮಾನವೂ ಇದೆ.
ಜೆಡಿಎಸ್-ಬಿಜೆಪಿ ಮೈತ್ರಿಯ ವೇಳೆ, ಟಿಕೆಟ್ ಹಂಚಿಕೆಯ ಜೊತೆಗೆ ಇನ್ನೂ ಕೆಲವು ಮಾತುಕತೆಗಳು ನಡೆದಿವೆ. ಕೇಂದ್ರದಲ್ಲಿ ಮತ್ತೆ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ, ಕೇಂದ್ರ ಸರ್ಕಾರದಲ್ಲಿ ಕುಮಾರಸ್ವಾಮಿಗೆ ಮಂತ್ರಿಗಿರಿ ನೀಡುವುದಾಗಿ ಬಿಜೆಪಿ ಭರವಸೆ ನೀಡಿದೆ ಎನ್ನಲಾಗಿದೆ. ಹೀಗಾಗಿ, ಎಚ್.ಡಿ ಕುಮಾರಸ್ವಾಮಿ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಗಳಿವೆ.
ಒಂದು ವೇಳೆ, ಕುಮಾರಸ್ವಾಮಿ ಸ್ಪರ್ಧಿಸದಿದ್ದರೂ ಸದ್ಯ ನಿರುದ್ಯೋಗಿ ಆಗಿರುವ ಪುಟ್ಟರಾಜು ಜೆಡಿಎಸ್‌ನಿಂದ ಸ್ಪರ್ಧಿಸಬಹುದು. ಈ ಇಬ್ಬರಲ್ಲಿ ಯಾರೇ ಸ್ಪರ್ಧಿಸಿದರೂ ಸುಮಲತಾಗೆ ಮತ್ತಷ್ಟು ಕಠಿಣ ಸವಾಲಾಗಲಿದೆ.
ಈ ಎಲ್ಲ ಕಾರಣಗಳಿಂದಾಗಿ ಸುಮಲತಾ ಅವರ ರಾಜಕೀಯ ಭವಿಷ್ಯ ಪ್ರಶ್ನೆಗಳ ಮೇಲೆ ನಿಂತಿದೆ. ಮಂಡ್ಯವೋ-ಬೆಂಗಳೂರೋ, ಸ್ವತಂತ್ರವೋ, ಅಂತಂತ್ರವೋ ಎಂಬ ಪರಿಸ್ಥಿತಿಯಲ್ಲಿ ಸುಮಲತಾ ಸಿಕ್ಕಿಕೊಳ್ಳಲಿದ್ದಾರೆ. ರಾಜಕೀಯ ಹಾವು-ಏಣಿ ಆಟದಲ್ಲಿ ಸುಮಲತಾ ಏನಾಗಲಿದ್ದಾರೆ ಎಂಬುದಕ್ಕೆ ಚುನಾವಣಾ ಕಣ ಉತ್ತರಿಸಲಿದೆ.