ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿನ ಕದನವೆಂದೇ ಬಣ್ಣಿಸಲಾಗಿರುವ 2024ರ ಲೋಕಸಭಾ ಚುನಾವಣೆ ನಡೆಯುತ್ತಿದೆ. ಈಗಾಗಲೇ 3 ಹಂತದ ಮತದಾನ ಮುಗಿದಿದೆ. ಈ ನಡುವೆ ಪ್ರಧಾನಿ ಮೋದಿ ಅವರು ತಮ್ಮ ಅಭಿವೃದ್ಧಿ ಕೆಲಸಗಳ ಪ್ರಚಾರದ ಗೇರ್ ಬದಲಿಸಿ, ಮುಸ್ಲಿಮರು ಮತ್ತು ಕಾಂಗ್ರೆಸ್ ವಿರುದ್ಧ ದ್ವೇಷ ಭಾಷಣ ಮಾಡುತ್ತಿದ್ದಾರೆ. ಮುಸ್ಲಿಮರನ್ನು ನುಸುಳುಕೋರರು ಎಂದು ಬಿಂಬಿಸುತ್ತಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ನುಸುಳುಕೋರರು ಮತ್ತು ಹೆಚ್ಚು ಮಕ್ಕಳು ಇರುವವರಿಗೆ ದೇಶದ ಸಂಪತ್ತನ್ನು ಹಂಚುತ್ತದೆ. ಹಿಂದು ಮಹಿಳೆಯರ ಮಾಂಗಲ್ಯವನ್ನು ಕಸಿಕೊಂಡು ಮುಸ್ಲಿಮರಿಗೆ ನೀಡುತ್ತದೆ. ಎಸ್ಸಿ, ಎಸ್ಟಿ, ಓಬಿಸಿಗಳ ಮೀಸಲಾತಿಯನ್ನು ಕಸಿದುಕೊಂಡು ಮುಸ್ಲಿಮರಿಗೆ ಕೊಡುತ್ತದೆ. ಅಯೋಧ್ಯೆಯ ರಾಮಮಂದಿರಕ್ಕೆ ಬೀಗ ಹಾಕುತ್ತದೆ. ಭಾರತದ ಕ್ರಿಕೆಟ್ ತಂಡದಲ್ಲಿ ಮುಸ್ಲಿಮರೇ ತುಂಬಿಹೋಗುತ್ತಾರೆ ಎಂಬ ನಾನಾ ರೀತಿಯ ದ್ವೇಷಪೂರಿತ ಸುಳ್ಳುಗಳನ್ನು ಮೋದಿ ಅವರು ಹೇಳುತ್ತಿದ್ದಾರೆ.
ಮೋದಿ ಅರೋಪಗಳಿಗೆ ಪ್ರತಿಕ್ರಿಯೆ ನೀಡುತ್ತಿರುವ ಕಾಂಗ್ರೆಸ್ ನಾಯಕರು, ‘ಆರೋಪಗಳು ಸಂಪೂರ್ಣ ಸುಳ್ಳು’ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆಯನ್ನು ಸರಿಯಾಗಿ ಓದಿಕೊಳ್ಳಿ ಮೋದಿ ಅವರೇ ಎಂದು ಹೇಳುತ್ತಿದ್ದಾರೆ. ಮಾತ್ರವಲ್ಲದೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಅವರು, ‘ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ನಿಮಗೆ ತಿಳಿಸಿ ಹೇಳುತ್ತೇವೆ. ಸಮಯ (ಅಪಾಯಿಂಟ್ಮೆಂಟ್) ಕೊಡಿ ಎಂದು ಪ್ರಧಾನಿ ಮೋದಿಗೆ ಎರಡು ಬಾರಿ ಪತ್ರವನ್ನೂ ಬರೆದಿದ್ದಾರೆ.
ಮೀಸಲಾತಿ, 370ನೇ ವಿಧಿ ಮತ್ತು ಸಂಪತ್ತಿನ ಮರುಹಂಚಿಕೆ ಕುರಿತು ಪ್ರಧಾನಿ ಮೋದಿ ಅವರು ಕಾಂಗ್ರೆಸ್ಗೆ ಸಾರ್ವಜನಿಕವಾಗಿ ಸವಾಲು ಹಾಕಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಂವಿಧಾನ, ಚುನಾವಣಾ ಬಾಂಡ್ ಮತ್ತು ಚೀನಾ ಆಕ್ರಮಣದ ಬಗ್ಗೆ ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ್ದಾರೆ. ಅಲ್ಲದೆ, ಮೋದಿ ಅವರನ್ನು ಸಾರ್ವಜನಿಕ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದಾರೆ. ಎರಡೂ ಪಕ್ಷದ ನಾಯಕರು ತಮ್ಮ ತಮ್ಮ ಪ್ರಣಾಳಿಕೆಗಳ ಬಗ್ಗೆ ಹಾಗೂ ಸಾಂವಿಧಾನಿಕ ಸಾಮಾಜಿಕ ನ್ಯಾಯದ ವಿಚಾರದಲ್ಲಿ ತಮ್ಮ ನಿಲುವಿನ ಬಗ್ಗೆ ಪರಸ್ಪರ ಪ್ರಶ್ನೆಗಳನ್ನು ಎತ್ತಿದ್ದಾರೆ.
ಹೀಗಾಗಿ, ಪ್ರತಿಪಕ್ಷಗಳ ವಿರುದ್ಧ ದಾಖಲೆರಹಿತ ಪುಂಕಾನುಪುಂಕ ಸುಳ್ಳುಗಳು ಸುರಿಮಳೆ ಸುರಿಸುತ್ತಿರುವ ಮೋದಿ ಅವರನ್ನೂ, ಹಾಗೂ ಮೋದಿ ಅವರನ್ನು ಚರ್ಚೆಗೆ ಕರೆಯುತ್ತಿರುವ ಮತ್ತು ಬಿಜೆಪಿ ಆಡಳಿತದ ವಿರುದ್ಧ ನಾನಾ ಪ್ರಶ್ನೆಗಳನ್ನು ಎತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಅವರನ್ನೂ ‘ದಿ ಹಿಂದು’ ಪತ್ರಿಕೆಯ ಮಾಜಿ ಮುಖ್ಯಸ್ಥ ಎನ್ ರಾಮ್ ಅವರು ‘ಬಹಿರಂಗ ಸಾರ್ವಜನಿಕ ಚರ್ಚೆ’ಗೆ ಆಹ್ವಾನಿಸಿದ್ದಾರೆ. ಚರ್ಚೆಗೆ ಆಹ್ವಾನಿಸಿ ಇಬ್ಬರಿಗೂ ಪತ್ರವನ್ನೂ ಬರೆದಿದ್ದಾರೆ.
Don’t miss this invitation to a civil and meaningful debate on issues that matter in this election and beyond — an invitation from three of us that has been just delivered to the PMO and to Mr Rahul Gandhi’s Office. pic.twitter.com/vXnJQKAcug
— N. Ram (@nramind) May 9, 2024
“ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ – ಎರಡೂ ಪಕ್ಷಗಳ ನಾಯಕರು ಸಾಂವಿಧಾನಿಕ ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ, ಸಾರ್ವಜನಿಕರಾಗಿ ನಾವು ಎರಡೂ ಪಕ್ಷಗಳ ಆರೋಪ ಮತ್ತು ಸವಾಲುಗಳನ್ನು ಮಾತ್ರ ಕೇಳಿದ್ದೇವೆ. ಅದರೆ, ಅರ್ಥಪೂರ್ಣ ಪ್ರತಿಕ್ರಿಯೆಗಳು ಮಾತ್ರ ಬಂದಿಲ್ಲ”ವೆಂದು ರಾಮ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
“ಇಂದಿನ ಡಿಜಿಟಲ್ ಯುಗದಲ್ಲಿ ತಪ್ಪು ಮಾಹಿತಿ, ತಪ್ಪು ನಿರೂಪಣೆ ಮತ್ತು ವಿಭಿನ್ನ ಪ್ರವೃತ್ತಿಗಳು ಎದ್ದು ಕಾಣುತ್ತಿವೆ. ಈ ಸಂದರ್ಭಗಳಲ್ಲಿ, ಸಾರ್ವಜನಿಕರು ಚುನಾವಣಾ ಸಮಯದಲ್ಲಿ ಚರ್ಚೆಯಾಗುತ್ತಿರುವ ಎಲ್ಲ ವಿಚಾರಗಳ ಬಗ್ಗೆ ಅರಿವು ಹೊಂದಿದ್ದಾರೆ. ಹೀಗಾಗಿ, ಮತದಾನದಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂಬುದನ್ನು ಆಲೋಚಿಸುತ್ತಿದ್ದಾರೆ. ಇಂತಹ ಸಮಯದಲ್ಲಿ, ಪಕ್ಷಾತೀತ ವೇದಿಕೆಯಲ್ಲಿ ಸಾರ್ವಜನಿಕ ಚರ್ಚೆಯ ಮೂಲಕ ನಮ್ಮ ರಾಜಕೀಯ ನಾಯಕರಿಂದ ನೇರವಾಗಿ ಉತ್ತರ ಕೇಳುವ ಅಗತ್ಯವಿದೆ ಎಂದು ನಾವು ಭಾವಿಸುತ್ತೇವೆ” ಎಂದು ರಾಮ್ ಹೇಳಿದ್ದಾರೆ.
“ಸಾರ್ವಜನಿಕರು ಎರಡೂ ಬದಿಯ ಪ್ರಶ್ನೆಗಳನ್ನು ಮಾತ್ರವಲ್ಲದೆ, ಪ್ರತಿಕ್ರಿಯೆಗಳನ್ನೂ ಕೇಳಿದರೆ ಉಪಯುಕ್ತವಾಗುತ್ತದೆ. ಇದು ನಮ್ಮ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಮತ್ತಷ್ಟು ಬಲಪಡಿಸಲು ಸಹಾಯ ಮಾಡುತ್ತದೆ. ಇಂತಹ, ಸಾರ್ವಜನಿಕ ಚರ್ಚೆಯು ಸಾರ್ವಜನಿಕರಿಗೆ ಮಾಹಿತಿ ನೀಡುತ್ತದೆ. ಮಾತ್ರವಲ್ಲದೆ, ಆರೋಗ್ಯಕರ ಮತ್ತು ರೋಮಾಂಚಕ ಪ್ರಜಾಪ್ರಭುತ್ವದ ನೈಜ ಚಿತ್ರಣವನ್ನು ಪ್ರದರ್ಶಿಸಲು ಸಾಧ್ಯವಾಗುತ್ತದೆ. ಹೀಗಾಗಿ, ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ಚರ್ಚೆಗೆ ಬರಬೇಕು. ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸದರೆ, ಸಮಯ ಮತ್ತು ಸ್ಥಳವನ್ನು ನಿರ್ಧರಿಸಬಹುದು” ಎಂದು ರಾಮ್ ಹೇಳಿದ್ದಾರೆ.
ಅಂದಹಾಗೆ, ಒಂದು ದೇಶ – ಒಂದು ಚುನಾವಣೆ ಎನ್ನುವ ಮೋದಿ ಅವರು ಅಮೆರಿಕಾ ಮಾದರಿಯಲ್ಲಿ ಆಡಳಿತ ಪಕ್ಷ – ವಿರೋಧ ಪಕ್ಷವಷ್ಟೇ ಅಸ್ವಿತ್ವದಲ್ಲಿರಬೇಕೆಂಬ ಬಯಸ್ಸಿದ್ದಾರೆ. ಅಮೆರಿಕಾ ಚುನಾವಣೆ ನಡೆಯುವ ರೀತಿಯಲ್ಲಿಯೇ ಭಾರತದಲ್ಲೂ ಚುನಾವಣೆ ನಡೆಸಬೇಕೆಂಬುದು ಬಿಜೆಪಿಯ ಉದ್ದೇಶವಾಗಿದೆ. ಆದರೆ, ಅದೇ ಅಮೆರಿಕಾದಲ್ಲಿ ಹಾಲಿ ಅಧ್ಯಕ್ಷರು ಮತ್ತು ಅಧ್ಯಕ್ಷ ಸ್ಥಾನದ ಎದುರಾಳಿ ಸ್ಪರ್ಧಿ ಒಂದೇ ವೇದಿಕೆಯಲ್ಲಿ ಚರ್ಚೆಗೆ ಪಾಲ್ಗೊಳ್ಳುತ್ತಾರೆ. ಸಾರ್ವಜನಿಕರ ಪ್ರಶ್ನೆಗಳಿಗೂ ಉತ್ತರಿಸುತ್ತಾರೆ. ಪರಸ್ಪರ ಎದುರಾಳಿಗಳ ಪ್ರಶ್ನೆಗಳಿಗೂ ಪ್ರತಿಕ್ರಿಯಿಸುತ್ತಾರೆ. ಅದೇ ರೀತಿಯಲ್ಲಿ ಮೋದಿ ಅವರು ಸಾರ್ವಜನಿಕ ವೇದಿಕೆಯಲ್ಲಿ ಚರ್ಚೆಗೆ ಬರಬೇಕು. ಚರ್ಚೆಗೆ ಸವಾಲು ಹಾಕುತ್ತಿರುವ ಕಾಂಗ್ರೆಸ್ನ ರಾಹುಲ್ ಗಾಂಧಿ ಕೂಡ ಈ ವೇದಿಕೆಯಲ್ಲಿ ನಡೆಯುವ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು. ಪ್ರಜಾಪ್ರಭುತ್ವದ ನಿಜ ಅರ್ಥವನ್ನು ಎತ್ತಿ ಹಿಡಿಯಬೇಕು.