ಅಸ್ಸಾಂನ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು ಮಣಿಪುರ ಹಿಂಸಾಚಾರ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಉತ್ತರಿಸಲು ಪ್ರಧಾನಿ ಮೋದಿಯನ್ನು ಒತ್ತಾಯಿಸುವ ಇಂಡಿಯಾ ಒಕ್ಕೂಟದ ಪ್ರಯತ್ನದ ಭಾಗವಾಗಿ ಬೆಳಿಗ್ಗೆ 9.20 ಕ್ಕೆ ಅವಿಶ್ವಾಸ ನಿರ್ಣಯ ನೋಟಿಸ್ ಅನ್ನು ಸಲ್ಲಿಸಿದರು.
ನಿರ್ಣಯದ ನೋಟಿಸ್ ಸ್ವೀಕರಿಸಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ “ಎಲ್ಲ ಪಕ್ಷಗಳೊಂದಿಗೆ ಮತ್ತು ನಿಯಮಗಳ ಪ್ರಕಾರ ಈ ವಿಷಯವನ್ನು ಚರ್ಚಿಸಿ, ಚರ್ಚೆಯ ವೇಳಾಪಟ್ಟಿಯ ಬಗ್ಗೆ ನಾನು ನಿಮಗೆ ತಿಳಿಸುತ್ತೇನೆ” ಎಂದು ತಿಳಿಸಿದ್ದಾರೆ.
ಇದೇ ವೇಳೆ, ನಿರ್ಣಯದ ಅಂಗೀಕಾರವನ್ನು ಬೆಂಬಲಿಸುವ ಸದಸ್ಯರನ್ನು ಎದ್ದು ನಿಲ್ಲುವಂತೆ ಬಿರ್ಲಾ ಕೋರಿದರು. ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಸದಸ್ಯರು ತಲೆ ಎಣಿಕೆಗಾಗಿ ಎದ್ದು ನಿಂತರು. ಸಂಸದರ ಸಂಖ್ಯೆಯನ್ನು ಎಣಿಕೆ
ಮಾಡಿದ ಸ್ಪೀಕರ್ ನಿರ್ಣಯವನ್ನು ಒಪ್ಪಿಕೊಂಡರು.
ನಿಯಮಗಳ ಪ್ರಕಾರ, ಬೆಳಿಗ್ಗೆ 10 ಗಂಟೆಗೆ ಮೊದಲು ಸಲ್ಲಿಸಿದ ಯಾವುದೇ ಅವಿಶ್ವಾಸ ನಿರ್ಯಣಯವನ್ನು ಅದೇ ದಿನ ತೆಗೆದುಕೊಳ್ಳಬೇಕು.
ಮಣಿಪುರ ವಿಷಯದ ಬಗ್ಗೆ ಮೋದಿ ಮಾತನಾಡಬೇಕೆಂಬ ಪ್ರತಿಪಕ್ಷಗಳ ಬೇಡಿಕೆಯನ್ನು ಸ್ವೀಕರಿಸಲು ಬಿಜೆಪಿ ನಿರಾಕರಿಸಿದ ನಂತರ ಈ ನೋಟಿಸ್ ಅನ್ನು ನೀಡಲಾಯಿತು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ನಾಯಕರಿಗೆ ಪತ್ರ ಬರೆದು ಈಶಾನ್ಯ ರಾಜ್ಯದ ಪರಿಸ್ಥಿತಿಯ ಕುರಿತು ಚರ್ಚೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು. ಆದರೆ ಪ್ರತಿಪಕ್ಷಗಳು ಪ್ರಧಾನಿ ಮೊದಲು ಮಾತನಾಡಬೇಕೆಂದು ಪಟ್ಟು ಹಿಡಿದಿವೆ.
ಈ ಸುದ್ದಿ ಓದಿದ್ದೀರಾ? ಪಂಜಾಬ್ ಪ್ರವಾಹ: 41 ಸಾವು, 1600 ಕ್ಕೂ ಹೆಚ್ಚು ಮಂದಿ ಪರಿಹಾರ ಶಿಬಿರಗಳಲ್ಲಿ ವಾಸ
“ಐದು ದಿನಗಳಿಂದ ಕಾಯುತ್ತಿದ್ದೇವೆ. ನಿಯಮ 267 ರ ಅಡಿಯಲ್ಲಿ ಸಲ್ಲಿಸಿದ ವಿಷಯವನ್ನು ಚರ್ಚಿಸುವವರೆಗೆ ರಾಜ್ಯಸಭೆಯಲ್ಲಿ ಬೇರೆ ಯಾವುದೇ ವಿಷಯಗಳನ್ನು ಚರ್ಚಿಸುವುದಿಲ್ಲ. ನಮಗೆ ಮಣಿಪುರ ಕುರಿತು ಚರ್ಚೆ ನಡೆಸಬೇಕು. ಈ ಬಗ್ಗೆ ಪ್ರಧಾನಿ ಮೊದಲು ಮಾತನಾಡಬೇಕು” ಎಂದು ಟಿಎಂಸಿ ಸಂಸದ ಡೇರೆಕ್ ಓಬ್ರಿಯಾನ್ ಆಗ್ರಹಿಸಿದ್ದಾರೆ.
ಮಂಗಳವಾರ ಸಂಜೆ ಕಾಂಗ್ರೆಸ್ ತನ್ನ ಸಂಸದರಿಗೆ ಬುಧವಾರ ಹಾಜರಾಗುವಂತೆ ಮೂರು ಸಾಲಿನ ವಿಪ್ ಜಾರಿ ಮಾಡಲಾಗಿತ್ತು. ಅವಿಶ್ವಾಸ ನಿರ್ಣಯ ಮಂಡಿಸಬೇಕಾದರೆ ಲೋಕಸಭೆಯ ನಿಯಮಗಳಡಿ ಕನಿಷ್ಠ 50 ಸಂಸದರ ಸಹಿಗಳು ಇರುವ ಪ್ರಸ್ತಾವನೆಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ಮಣಿಪುರ ಹಿಂಸಾಚಾರದ ಬಗ್ಗೆ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡುವಂತೆ ಒತ್ತಾಯಿಸಲು 26 ವಿರೋಧ ಪಕ್ಷಗಳ ಒಕ್ಕೂಟವು ಅವಿಶ್ವಾಸ ನಿರ್ಣಯವನ್ನು ಮಂಡಿಸಲು ನಿರ್ಧರಿಸಿದ್ದವು ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.