ಲೋಕಸಭಾ ಚುನಾವಣೆ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಚುನಾವಣಾ ಆಯೋಗ ಅಧಿಕೃತ ಚುನಾವಣಾ ದಿನಾಂಕಗಳನ್ನು ಘೋಷಿಸಲು ಸಿದ್ದತೆಯಲ್ಲಿ ತೊಡಗಿದೆ. ಎಲ್ಲ ಪಕ್ಷಗಳು ಚುನಾವಣೆ ಎದುರಿಸಲು ಮತ್ತು ಗೆಲ್ಲಲು ಭಾರೀ ಕಸರತ್ತು ನಡೆಸುತ್ತಿವೆ. ರಾಜ್ಯದಲ್ಲಿ ನಾಲ್ಕುವರೆ ವರ್ಷಗಳಿಂದ ಕಾಣೆಯಲ್ಲಿದ್ದ ಕೆಲ ಸಂಸದರು ಈಗ ತಮ್ಮ ಕ್ಷೇತ್ರಗಳಲ್ಲಿ ಪ್ರತ್ಯಕ್ಷರಾಗಿದ್ದಾರೆ. ಇದೇ ಹೊತ್ತಿನಲ್ಲಿ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಆಕಾಂಕ್ಷಿಗಳು ನಾಯಕರ ಬೆನ್ನತ್ತುತ್ತಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಆದರೆ, ಆಂತರಿಕ ಅಸಮಾಧಾನ, ತೆರೆಮರೆಯ ವೈಷಮ್ಯಗಳಿಂದ ಹೀನಾಯ ಸೋಲು ಕಂಡಿದ್ದವು. ಇದೀಗ, ಮುಂದಿನ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ಅನ್ನು ಕಟ್ಟಿಹಾಕಲು ಯತ್ನಿಸುತ್ತಿವೆ. ಕಳೆದ ಚುನಾವಣೆಯಲ್ಲಿ ತನ್ನ ಭದ್ರಕೋಟೆಯನ್ನು ಬೇಧಿಸಿ ಗೆದ್ದಿದ್ದ ಬಿಜೆಪಿಯ ರಾಜಾ ಅಮರೇಶ್ವರ ನಾಯಕ ಅವರನ್ನು ಮಣಿಸಿ, ಮತ್ತೆ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಶತಪ್ರಯತ್ನ ಮಾಡುತ್ತಿದೆ.
ರಾಯಚೂರು ಕ್ಷೇತ್ರವು ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಎಸ್‌ಟಿ ಮೀಸಲು ಕ್ಷೇತ್ರವಾಗಿದೆ. ರಾಯಚೂರಿನ ಬಿಜೆಪಿ ಟಿಕೆಟ್‌ಗಾಗಿ ಮಾಜಿ ಸಂಸದ ಬಿ.ವಿ ನಾಯಕ ಪ್ರಯತ್ನಿಸುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಅವರು ಮಾನ್ವಿಯಲ್ಲಿ ಸ್ಪರ್ಧಿಸಿ ಸೋಲುಂಡಿದ್ದರು. ಇದೀಗ ಲೋಕಸಭೆಗೆ ಹೋಗಲು ಯತ್ನಿಸುತ್ತಿದ್ದಾರೆ. ಒಂದು ವೇಳೆ, ತಮಗೆ ಬಿಜೆಪಿ ಟಿಕೆಟ್ ಸಿಗದಿದ್ದರೆ, ಅವರು ಕಾಂಗ್ರೆಸ್ ಸೇರುವ ಎಲ್ಲ ಸಾಧ್ಯತೆಗಳೂ ಇವೆ ಎನ್ನಲಾಗಿದೆ. ಅವರಲ್ಲದೆ, ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಕೂಡ ಟಿಕೆಟ್‌ಗಾಗಿ ಬಿಜೆಪಿ ಮುಂದೆ ಬೇಡಿಕೆ ಇಟ್ಟಿದ್ದಾರೆ.
ಇನ್ನು, ಕಾಂಗ್ರೆಸ್‌ನಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಕುಮಾರ್ ನಾಯಕ ಸ್ಪರ್ಧಾಕಾಂಕ್ಷಿಯಾಗಿದ್ದಾರೆ. ರಾಯಚೂರಿನಲ್ಲಿ ನಾನಾ ದೇವಾಲಯಗಳಿಗೆ ಭೇಟಿ ನೀಡಿ, ಹಳ್ಳಿಗಳನ್ನು ಸುತ್ತುತ್ತಾ, ತಮ್ಮ ಸ್ಪರ್ಧೆಯ ಇಂಗಿತವನ್ನು ತೋರ್ಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ರಾಜ್ಯಸಭಾ ಚುನಾವಣೆ: ಬಿಜೆಪಿ-ಜೆಡಿಎಸ್ ಅಭ್ಯರ್ಥಿಗೆ 45 ಮತ ಗಳಿಸುವುದೇ ಸವಾಲು
ಅಲ್ಲದೆ, ಸತೀಶ್ ಜಾರಕಿಹೊಳಿ ಅವರ ಸಂಬಂಧಿ ರವಿ ಪಾಟೀಲ್ ಅವರೂ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅವರನ್ನ ಕ್ಷೇತ್ರದಲ್ಲಿ ಕಣಕ್ಕಿಳಿಸಲು ಸತೀಶ್ ಕೂಡ ಉತ್ಸಾಹ ತೋರಿದ್ದಾರೆ ಎನ್ನಲಾಗುತ್ತಿದೆ. ರವಿ ಪಾಟೀಲ್ ಯಾದಗಿರಿ-ರಾಯಚೂರು ಜಿಲ್ಲೆಯ ತಾಲೂಕುಗಳಿಗೆ ಭೇಟಿ ನೀಡಿ, ಕಾರ್ಯಕರ್ತರ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಸಾರ್ವಜನಿಕರು ಹಾಗೂ ಕೆಲವು ರಾಜಕಾರಣಿ ಮುಖಂಡರು ಇವರೇ ಅಭ್ಯರ್ಥಿ ಎಂದೂ ಹೇಳುತ್ತಿದ್ದಾರೆ. ಅವರಿಗೆ ಟಿಕೆಟ್ ಸಿಕ್ಕರೆ, ಗೆಲುವು ನಿಶ್ಚಿತವೆಂಬ ಅಭಿಪ್ರಾಯಗಳೂ ಇವೆ.