ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 45 ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು, ದಾಳಿ ನಡೆಸಿದ್ದಾರೆ.
ಸಂಜೆ 4ರಿಂದ ಏಕಕಾಲಕ್ಕೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು, ಬಿಬಿಎಂಪಿಯ ಕಚೇರಿಗಳ ಎಲ್ಲ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಬಿಬಿಎಂಪಿಯ 28 ವಲಯ ಕಚೇರಿಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಐಜಿ ಸುಬ್ರಹ್ಮಣ್ಯೇಶ್ವರ ರಾವ್ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ.
13 ನ್ಯಾಯಾಂಗ ಅಧಿಕಾರಿಗಳು, ಏಳು ಪೊಲೀಸ್ ವರಿಷ್ಠಾಧಿಕಾರಿಗಳು, 19 ಡಿವೈಎಸ್‌ಪಿ, 26 ಪೊಲೀಸ್ ಇನ್ಸ್‌ಪೆಕ್ಟರ್‌ಗಳ ಸಹಿತ ಹಲವು ಸಿಬ್ಬಂದಿಗಳು ಈ ದಾಳಿಯಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಜಯನಗರ, ಪದ್ಮನಾಭನಗರ, ವಿಜಯನಗರ, ಬಸವನಗುಡಿ, ಬ್ಯಾಟರಾಯನಪುರ, ಯಲಹಂಕ, ವಿದ್ಯಾರಣ್ಯಪುರ, ಮಹದೇವಪುರ ಕೆ.ಆರ್.ಪುರಂ, ಮಲ್ಲೇಶ್ವರಂ ಸೇರಿದಂತೆ ಒಟ್ಟು 45 ಕಚೇರಿಗಳ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ, ತಪಾಸಣೆ ನಡೆಸಿದರು.

ರಾಜಾಜಿನಗರದ ಕಂದಾಯ ಕಚೇರಿಯಲ್ಲಿ ಖುದ್ದಾಗಿ ಪರಿಶೀಲನೆ ನಡೆಸಿದ ಲೋಕಾಯುಕ್ತ ನ್ಯಾ. ಬಿ.ಎಸ್.ಪಾಟೀಲ್, ಮೇ ತಿಂಗಳಲ್ಲಿ ಸಹಿ ಎಲ್ಲ ಮುಗಿದಿದ್ದರೂ ಕಡತ ಯಾಕೆ ಇನ್ನೂ ಅರ್ಜಿದಾರರಿಗೆ ತಲುಪಿಲ್ಲ ಎಂದು ಕಂದಾಯ ಅಧಿಕಾರಿ ಭಾರತಿಯವರನ್ನು ಪ್ರಶ್ನಿಸಿದರು. ಸಹಿ ಆದ ಕೂಡಲೇ ಸಂಬಂಧಪಟ್ಟವರಿಗೆ ನೀಡುವಂತೆಯೂ ಸೂಚಿಸಿದರು.
ಆ ಬಳಿಕ ಅರ್ಜಿದಾರರೋರ್ವರಿಗೆ ಕರೆ ಮಾಡಿ, ಅಧಿಕಾರಿಗಳು ಲಂಚ ಕೇಳಿದ್ರಾ ಎಂದು ವಿಚಾರಣೆ ನಡೆಸಿದರು. ಒಂದು ವೇಳೆ ಲಂಚ ಕೇಳಿದ್ರೆ ಇಲಾಖೆಗೆ ಮಾಹಿತಿ ನೀಡಬೇಕು. ನಾವು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.