- ನಿಮ್ಮ 19 ಎಂಎಲ್ಎಗಳನ್ನು ಮೊದಲು ಉಳಿಸಿಕೊಳ್ಳಿ: ಲಕ್ಷ್ಮಣ್
- ‘ಯಡಿಯೂರಪ್ಪಗೆ ಬೆದರಿಕೆ ಹಾಕಿ ಬಾಯಿ ಮುಚ್ಚಿಸಲಾಗುತ್ತಿದೆ’
ಯಡಿಯೂರಪ್ಪ ಅವರೇ, ನಿಮಗೆ ಮೋಸ ಮಾಡಿದ ಕುಮಾರಸ್ವಾಮಿ ಅವರನ್ನು ಮತ್ತೆ ಹೇಗೆ ಸೇರಿಸಿಕೊಳ್ಳುತ್ತಿದ್ದೀರಿ. ನಿಮಗೆ ಸ್ವಾಭಿಮಾನ ಎಂಬುದು ಇಲ್ಲವೇ ಎಂದು ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ಪ್ರಶ್ನಿಸಿದರು.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಒಕ್ಕಲಿಗ ನಾಯಕರಾಗಿ ಬೆಳೆಯುತ್ತಿರುವ ಡಿ ಕೆ ಶಿವಕುಮಾರ್ ಅವರ ಏಳಿಗೆ ಸಹಿಸದೆ ಕುಮಾರಸ್ವಾಮಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಳ್ಳಿ. ನಿಮ್ಮ 19 ಎಂಎಲ್ಎಗಳನ್ನು ಮೊದಲು ಉಳಿಸಿಕೊಳ್ಳಿ” ಎಂದಿದ್ದಾರೆ.
“ಬಿಜೆಪಿಯಲ್ಲಿ ಅಶೋಕ, ಅಶ್ವತ್ಥನಾರಾಯಣ ಅವರು ಮೂಲೆಗುಂಪಾಗಿ ಕಾಂಗ್ರೆಸ್‌ಗೆ ಬೈಯುತ್ತಿದ್ದಾರೆ. ಕುಮಾರಸ್ವಾಮಿ ಅವರೇ ನೈಸ್ ಹಗರಣದಲ್ಲಿ ಡಿ.ಕೆ.ಶಿವಕುಮಾರ್ ಅವರು 3 ಲಕ್ಷ ಕೋಟಿ ಹಣ ಮಾಡಿದ್ದಾರೆ ಎಂದು ಹೇಳುತ್ತಾರೆ. ಮಾಜಿ ಮುಖ್ಯಮಂತ್ರಿಗಳಿಗೆ 3 ಲಕ್ಷ ಕೋಟಿ ಎಂದರೆ ಎಷ್ಟು ಎಂಬುದೇ ಗೊತ್ತಿಲ್ಲ. ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಎಸೆಯುವ ಕೆಲಸ ಮಾಡುತ್ತಿದ್ದಾರೆ” ಎಂದು ಕುಟುಕಿದರು.
“ಕಾವೇರಿ ನೀರಿನ ವಿಚಾರಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಮೋಸ ಮಾಡುತ್ತಿದೆ. ಕರ್ನಾಟಕದ ಬಿಜೆಪಿ ನಾಯಕರ ಹೇಡಿತನದಿಂದ ನಮಗೆ ಹಿನ್ನಡೆಯಾಗುತ್ತಿದೆ. ಕೇಂದ್ರ ಜಲ ನಿಯಂತ್ರಣ ಆಯೋಗ (CWRC) ಅಡಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕೆಲಸ ಮಾಡುತ್ತದೆ. 16.06.2018 ರಂದು ಸುಪ್ರೀಂ ಕೋರ್ಟ್ ತನ್ನ ಅಂತಿಮ ತೀರ್ಪನ್ನು ಕಾವೇರಿ ನೀರಿನ ವಿಚಾರವಾಗಿ ನೀಡಿತು. 18.05.2018 ರಲ್ಲಿ ನರೇಂದ್ರ ಮೋದಿ ಸರ್ಕಾರ ಕ್ಯಾಬಿನೆಟ್ ಸಭೆಯಲ್ಲಿ ಕಾವೇರಿ ನೀರಿನ ವಿಚಾರವಾಗಿ ಗೆಜೆಟ್ ನೋಟಿಫಿಕೇಶನ್ ಮಾಡಿ, ಕರ್ನಾಟಕಕ್ಕೆ ಯಾವುದೇ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡದೆ 01.06.2018 ರಲ್ಲಿ ಕಾವೇರಿ ನೀರು ನಿಯಂತ್ರಣಾ ಪ್ರಾಧಿಕಾರದ ರಚನೆ ಮಾಡುತ್ತದೆ. ಲೋಕಸಭೆಯಲ್ಲಿ ಯಾವುದೇ ಚರ್ಚೆಗೆ ಅವಕಾಶ ನೀಡದೆ ಕರ್ನಾಟಕದ ಕೈ ಕಟ್ಟಿ ಹಾಕಲಾಗಿದೆ” ಎಂದರು.
“ಇಂತಹ ಸಂಕಷ್ಟದ ಸಂದರ್ಭದಲ್ಲಿ ಕರ್ನಾಟಕದ ಪರವಾಗಿ ನಿಲ್ಲಬೇಕಿರುವುದು ಬಿಜೆಪಿಯವರು. ಕುಮಾರಸ್ವಾಮಿ, ಯಡಿಯೂರಪ್ಪ, ಬೊಮ್ಮಾಯಿ ಇವರುಗಳು ತುರ್ತು ಸಭೆಗೆ ಬರದೆ ತಪ್ಪಿಸಿಕೊಂಡರು. ಸಭೆ ನಡೆಸದೆ ಇದ್ದರೆ ತುರ್ತು ಸಭೆ ಮಾಡಿ ಎನ್ನುತ್ತೀರಾ. ಸಭೆ ನಡೆಸಿದರೆ ತುರ್ತು ಸಬೆ ಮಾಡಿದಿರಿ ಅದಕ್ಕೆ ಬರಲು ಆಗುವುದಿಲ್ಲ ಎನ್ನುತ್ತೀರ. ನಿಮ್ಮ ನಿಲುವುಗಳನ್ನು ಸರಿಯಾಗಿ ತಿಳಿಸಿ” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರೈತರ ಆತ್ಮಹತ್ಯೆ ತೀವ್ರ ಹೆಚ್ಚಳ; ಅನ್ನದಾತರ ಬದುಕಿಗೆ ಬೇಕಿದೆ ಭರವಸೆ
ರಾಜಕೀಯ ಮಾಡಲು ನಾಚಿಕೆಯಾಗಬೇಕು
“ಲೋಕಸಭಾ ಚುನಾವಣೆಗೆ ಕಾವೇರಿ ನೀರಿನ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುವ ನಿಮಗೆ ನಾಚಿಕೆಯಾಗಬೇಕು. ಸಿದ್ದರಾಮಯ್ಯ ಅವರು ಕೇಂದ್ರ ನೀರಾವರಿ ಸಚಿವರು ಹಾಗೂ ನಿಯಂತ್ರಣ ಸಮಿತಿಗೆ ಪತ್ರ ಬರೆದು ತಮಿಳುನಾಡಿನ ಮೋಸವನ್ನು ಬಯಲಿಗೆ ಎಳೆದಿದ್ದಾರೆ. ಕುಮಾರಸ್ವಾಮಿ ಅವರೇ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ. ಬೊಮ್ಮಾಯಿ ಅವರೇ ನೀವು ನೀರಾವರಿ ಸಚಿವರಾಗಿದ್ದವರು. ಬಹಿರಂಗ ಚರ್ಚೆಗೆ ಬಂದು ಕಾವೇರಿ ನೀರಿನ ವಿಚಾರವಾಗಿ ತಮ್ಮ, ಸಲಹೆ ಸೂಚನೆಗಳನ್ನು ನೀಡಿ. ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಕೆಲಸವನ್ನು ಹೀಗೆ ನೀರಿನ ವಿಚಾರದ ಮೂಲಕ ಮಾಡಬಾರದು” ಎಂದು ಹೇಳಿದ್ದಾರೆ.
ಯಡಿಯೂರಪ್ಪರಿಗೆ ಬೆದರಿಕೆ
“ಕರ್ನಾಟಕ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಬಿಜೆಪಿಯ 26 ಶಾಸಕರು ಹೈಕಮಾಂಡಿಗೆ ಪತ್ರ ಬರೆದು ಬೊಮ್ಮಾಯಿ ಅವರಿಗೆ ಸರ್ಕಾರ ನಡೆಸಲು ಶಕ್ತಿ ಇಲ್ಲ ಎಂದಿದ್ದರು. ಅವರನ್ನು ಕೆಳಗೆ ಇಳಿಸಿ ಎಂದು ಆಗ್ರಹ ಮಾಡಿದ್ದರು. ರಾಜ್ಯ ರಾಜಕಾರಣದಲ್ಲಿ ಯಡಿಯೂರಪ್ಪ ಅವರನ್ನು ಮೂಲೆಗೆ ತಳ್ಳಲು ಹುನ್ನಾರ ಮಾಡಿದವರೇ ಇಂದು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಗೆ ಮುದ್ರೆ ಒತ್ತಿದ್ದಾರೆ” ಎಂದು ಮಾಜಿ ಎಂಎಲ್‌ಸಿ ರಮೇಶ್ ಬಾಬು ಹೇಳಿದರು.
“ವಿಧಾನಸಭಾ ಚುನಾವಣೆಯ ನಂತರ ಬಿಜೆಪಿ ಮತ್ತೆ ಯಡಿಯೂರಪ್ಪ ಅವರ ಚುಕ್ಕಾಣಿಗೆ ಹೋಗಿತ್ತು. ಅದನ್ನು ತಪ್ಪಿಸಲು ಈ ಮೈತ್ರಿಯ ಹುನ್ನಾರ. ವ್ಯವಸ್ಥಿತವಾಗಿ ಯಡಿಯೂರಪ್ಪ ಅವರ ಕುಟುಂಬವನ್ನು ಮುಗಿಸುವ ಕೆಲಸ ಇದಾಗಿದ್ದು, ಅವರಿಗೆ ಬೆದರಿಕೆ ಹಾಕಿ ಬಾಯಿ ಮುಚ್ಚಿಸಲಾಗುತ್ತಿದೆ” ಎಂದು ಆರೋಪಿಸಿದರು.
“ಬಿಜೆಪಿಯ ಕೇಂದ್ರ ಸಮಿತಿಯಲ್ಲಿ ಯಡಿಯೂರಪ್ಪ ಅವರಿಗೆ ನಾಮಕಾವಸ್ಥೆಗೆ ಸ್ಥಾನ ಕೊಟ್ಟು, ಕರ್ನಾಟಕದ ರಾಜಕೀಯ ಬೆಳವಣಿಗೆ ಬಗ್ಗೆ ಮಾಹಿತಿ ನೀಡದೆ, ಅವರ ಅಭಿಪ್ರಾಯಗಳನ್ನು ಮೂಲೆಗುಂಪು ಮಾಡಲಾಗಿದೆ. ಮಕ್ಕಳ ಭವಿಷ್ಯಕ್ಕಾಗಿ ಮೌನವಾಗಿ ಇದ್ದಾರೆ” ಎಂದರು.